ಸುವರ್ಣ ಗ್ರಾಮ, ರಸ್ತೆ ಕಾಮಗಾರಿಗಳಿಗೆ ಶೀಘ್ರ ಚಾಲನೆ
ಸಿಂಧನೂರು: ವರ್ಷದೊಳಗೆ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿಯವರಿಂದ ರವುಡಕುಂದ ಏತ ನೀರಾವರಿ ಯೋಜನೆಗೆ ಕಾಯಕಲ್ಪ ನೀಡಲಾಗುವುದೆಂದು ಶಾಸಕ ಹಂಪನಗೌಡ ಬಾದರ್ಲಿ ಭರವಸೆ ನೀಡಿದರು.ಅವರು ತಾಲೂಕಿನ ಶನಿವಾರ ರವುಡಕುಂದ ಗ್ರಾಮದಲ್ಲಿ ಸುವರ್ಣ ಗ್ರಾಮ ಮತ್ತು ಲೋಕೊಪಯೋಗಿ ಇಲಾಖೆಯ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ, ನಂತರ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶೀಘ್ರವೇ ಸಮಸ್ಯೆ ಇತಿಶ್ರೀ: ಗ್ರಾಮಸ್ಥರು ರವುಡಕುಂದ ಗ್ರಾಮದಲ್ಲಿ 2ನೇ ಬೆಳೆಗೆ ನೀರಿನ ಸಮಸ್ಯೆ ಕುರಿತು ಮನವಿ ಪತ್ರ ನೀಡಿದ್ದಕ್ಕೆ ಪ್ರತಿಕ್ರಿಯಿಸಿ, ನೀರಾವರಿ ಸಮಸ್ಯೆ ಎಲ್ಲಾ ತಾಲೂಕುಗಳಲ್ಲಿದೆ. ಸಿಂಧನೂರು ತಾಲೂಕಿನಲ್ಲಿ 65 ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಡಲಿದೆ. ಗ್ರಾಮಸ್ಥರ ಬಹುದಿನದ ಕನಸಾದ ಮಲ್ಕಾಪುರ ಹಳ್ಳದಿಂದ ಏತ ನೀರಾವರಿ ಯೋಜನೆಗೆ ನೀರಾವರಿ ಸೌಕರ್ಯ ಕಲ್ಪಿಸಲು ಈಗಾಗಲೇ ಸಚಿವ ತಂಗಡಗಿಯವರೊಂದಿಗೆ ಮಾತನಾಡಿದ್ದೇನೆ. ವರ್ಷದೊಳಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.2000 ಇಸ್ವಿಯಲ್ಲಿ ರವುಡಕುಂದ ಗ್ರಾಮಕ್ಕೆ ಕುಡಿವ ನೀರಿನ ಕೆರೆ ನಿರ್ಮಿಸಲಾಗಿತ್ತು. 2003ರಲ್ಲಿ ವೆಂಕಟಗಿರಿ ಕ್ಯಾಂಪಿನ ರಸ್ತೆ ಡಾಂಬರೀಕರಣ ನಡೆಸಲಾಗಿತ್ತು. ಈಗ ಮತ್ತೇ ತಮ್ಮ ಅವಧಿಯಲ್ಲಿ ಕೆಆರ್ಐಡಿಎಲ್ ವತಿಯಿಂದ ಸುವರ್ಣ ಗ್ರಾಮ ಯೋಜನೆಯಲ್ಲಿ ರು. 1.61 ಕೋಟಿ ವೆಚ್ಚದಲ್ಲಿ ರವುಡಕುಂದ ಗ್ರಾಮದ 3 ಕಿ.ಮೀ. ಒಳ ಸಿ.ಸಿ. ರಸ್ತೆಗಳ ನಿರ್ಮಾಣ, ಸಮುದಾಯ ಭವನ, ಅಂಗನವಾಡಿ ಕಟ್ಟಡಗಳನ್ನು ಕಟ್ಟಲಾಗುವುದು.
ಕಳಪೆಯಾಗದಿರಲಿ: ಲೋಕೊಪಯೋಗಿ ಇಲಾಖೆಯಿಂದ 7 ಕೋಟಿ 75 ಲಕ್ಷ ರು. ವೆಚ್ಚದಲ್ಲಿ ಗೊರೇಬಾಳದಿಂದ ವಾಯಕೆಂಗಲ್ ಮಾರ್ಗವಾಗಿ ಸಾಲಗುಂದವರೆಗೆ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಇಂದು ಭೂಮಿ ಪೂಜೆ ಮಾಡುವ ಮೂಲಕ ಆರಂಭಿಸಲಾಗಿದೆ. ಗ್ರಾಮಸ್ಥರು ಕಳಪೆ ಕಾಮಗಾರಿಯಾಗದಂತೆ ನಿಗಾವಹಿಸಬೇಕು. ಅಧಿಕಾರಿಗಳು, ಗುತ್ತೇದಾರರು ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಜಿ.ಪಂ. ಅಧ್ಯಕ್ಷೆ ಲಲಿತಮ್ಮ ಮಾತನಾಡಿದರು.
ಪ್ರೌಢಶಾಲೆ ಬೇಕು: ಸಾನಿಧ್ಯ ವಹಿಸಿದ್ದ ರವುಡಕುಂದ ಸಂಸ್ಥಾನ ಹಿರೇಮಠದ ಮರಿಸಿದ್ಧಲಿಂಗ ಶಿವಾಚಾರ್ಯ ಮಾತನಾಡಿ, ಬಾದರ್ಲಿ ಹಂಪನಗೌಡ ರಾಜಕೀಯ ಜೀವನ ಆರಂಭವಾಗಿರುವುದೇ ರವುಡಕುಂದ ಕ್ಷೇತ್ರದಿಂದ. ಅವರು ಮೊದಲ ಬಾರಿಗೆ ರವುಡಕುಂದ ಜಿಪಂ ಸದಸ್ಯರಾಗಿ ಆಯ್ಕೆಯಾಗಿ ಜನಾನುರಾಗಿಯಾಗಿದ್ದರು. ಆದ್ದರಿಂದ ಈಗ ನಾಲ್ಕನೇ ಬಾರಿಗೆ ಶಾಸಕರಾಗಿ ನಮ್ಮ ಮುಂದೆ ನಿಂತಿದ್ದಾರೆ. ಗ್ರಾಮಕ್ಕೆ ಪ್ರೌಢಶಾಲೆಯೊಂದನ್ನು ಆರಂಭಿಸಿ ಶೈಕ್ಷಣಿಕ ಪ್ರಗತಿಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯರಾದ ಚಂದುಸಾಬ ಮುಳ್ಳೂರು, ಸರೋಜಮ್ಮ ಬಸವರಾಜ, ತಾಪಂ ಅಧ್ಯಕ್ಷೆ ಬಸಮ್ಮ ಕೊಟ್ರಮ್ಮ, ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ, ಎಪಿಎಂಸಿ ಅಧ್ಯಕ್ಷ ಸಣ್ಣ ಕರಿಯಪ್ಪ ಹರಟೆನೂರ, ನಿರ್ದೇಶಕ ಶರಣೇಗೌಡ ಗಿಣಿವಾರ, ತಾಪಂ ಸದಸ್ಯರಾದ ಪೂರ್ಣಿಮಾ ಬಸವರಾಜ, ಆದಿಲಕ್ಷ್ಮೀ ವೀರರಾಜು, ಗ್ರಾಪಂ ಅಧ್ಯಕ್ಷೆ ಗಂಗಮ್ಮ ಕನಕಪ್ಪ, ಕೆಪಿಸಿಸಿ ಸದಸ್ಯ ಎನ್.ಶಿವನಾಗಪ್ಪ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಂ. ಕಾಳಿಂಗಪ್ಪ, ಕೊಪ್ಪಳ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಬಲಸು ಸುಬ್ರಮಣ್ಯಂ, ಸತ್ಯನಗೌಡ ಒಳಬಳ್ಳಾರಿ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

