ನೌಕರರ ಸಂಘದ ಚುನಾವಣೆ ಗೊಂದಲದ ಗೂಡು
ಕನ್ನಡಪ್ರಭ ವಾರ್ತೆ, ರಾಯಚೂರು, ಜು.18
ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಹಿನ್ನೆಲೆಯ ಚುನಾವಣೆ ಪ್ರಕ್ರಿಯೆ ದಿನಗಳೆದಂತೆ ಆರೋಪ ಪ್ರತ್ಯಾರೋಪಗಳಿಂದಾಗಿ ಗೊಂದಲದ ಗೂಡಾಗಿದ್ದು, ಜಿಲ್ಲಾಡಳಿತ ಗುರುವಾರ ಈ ಚುನಾವಣೆಯ ವೇಳಾಪಟ್ಟಿಯನ್ನು ಅಸಿಂಧು ಎಂದು ಘೋಷಿಸುವ ಮೂಲಕ ಮತ್ತಷ್ಟು ಬಿಕ್ಕಟ್ಟು ಉಲ್ಬಣಿಸುವಂತಾಗಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ಜು. 22ರಂದು ಚುನಾವಣೆ ನಡೆಯಬೇಕಿತ್ತು. ಅದಕ್ಕಾಗಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಜು. 16ಕ್ಕೆ ಪೂರ್ಣಗೊಂಡಿದ್ದು, ಈಗಾಗಲೇ 11 ಜನ ಕಣದಲ್ಲಿದ್ದರು. ಚುನಾವಣಾಧಿಕಾರಿಯಾಗಿದ್ದ ಹುಸೇನಪ್ಪ ಅವರು 49 ಜನರನ್ನು ಅವಿರೋಧ ಆಯ್ಕೆಯಾಗಿದ್ದಾರೆಂದೂ ಘೋಷಿಸಿದ್ದರು.
ಅಸಿಂಧು: ಆದರೆ ಮತದಾರರ ಪಟ್ಟಿಯಿಂದ ನೌಕರರ ಹೆಸರು ಬಿಟ್ಟು ಹೋಗಿರುವ ಆರೋಪ, ಕೇಂದ್ರ ಸಂಘಕ್ಕೂ ಹಾಗೂ ಜಿಲ್ಲಾ ಸಂಘದ ಮತದಾರರ ಪಟ್ಟಿಗೆ ತಾಳೆಯಾಗದಿರುವುದು, ನಾಮಪತ್ರ ಸಲ್ಲಿಕೆಗೆ ಅವಕಾಶ ದೊರೆಯಲಿಲ್ಲ ಎಂಬ ಕೂಗು ವ್ಯಾಪಕವಾಗಿ ಕೇಳಿಬಂದಿದ್ದರಿಂದ ಜಿಲ್ಲಾಡಳಿತ ಗುರುವಾರ ಆದೇಶ ಹೊರಡಿಸಿ ಒಟ್ಟಾರೆ ಚುನಾವಣೆ ಪ್ರಕ್ರಿಯೆಯನ್ನು ಅಸಿಂಧು ಎಂದು ಘೋಷಿಸಿದೆ. ಆ ಮೂಲಕ ಮತ್ತಷ್ಟು ಗೊಂದಲಕ್ಕೆ ದಾರಿ ಮಾಡಿದೆ.
ಪ್ರಕ್ರಿಯೆಯ ಆರಂಭದಲ್ಲಿ ಜಿಲ್ಲಾ ಸಂಘವು ಬಾಲಸ್ವಾಮಿ ಕೊಡ್ಲಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಿತ್ತು. ಅವರು ರಾಜಕೀಯ ಪಕ್ಷಕ್ಕೆ ಸೇರಿದವರು ಎಂಬ ಆರೋಪ ಕೇಳಿ ಬಂದಿದ್ದು, ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರ ಮಧ್ಯಪ್ರವೇಶಕ್ಕೆ ಸಂಘದ ಒಂದು ಬಣ ಆಗ್ರಹಿಸಿ ಮನವಿ ಸಲ್ಲಿಸಿತು.
ಚುನಾವಣಾಧಿಕಾರಿ ಬದಲಾವಣೆ: ಅದರಿಂದ ಜಿಲ್ಲಾಧಿಕಾರಿ ಚುನಾವಣಾಧಿಕಾರಿ ಬದಲಾವಣೆಗೆ ಜಿಲ್ಲಾ ಸಂಘಕ್ಕೆ ಸೂಚಿಸಿದರು. ಅದರಂತೆ ಇತ್ತೀಚೆಗೆ ಹುಸೇನಪ್ಪ ಅವರನ್ನು ಜಿಲ್ಲಾ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣಾಧಿಕಾರಿಯಾಗಿ ಹಾಲಿ ಜಿಲ್ಲಾಧ್ಯಕ್ಷ ಮಹೆಬೂಬ್ ಪಾಷಾ ಮೂಲಿಮನಿ ನೇಮಿಸಿದ್ದರು.
ಆದರೆ ಆನಂತರದಲ್ಲಿ ನಾಮಪತ್ರ ಸಲ್ಲಿಕೆಗೆ ತೆರಳಿದವರಿಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಿಲ್ಲ ಎಂಬ ಕೂಗೆದ್ದಿತು. ಹಾಗೆಯೇ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಅಕ್ರಮಗಳಿವೆ. ಅನೇಕರ ಹೆಸರು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಸಂಘದ ಕೇಂದ್ರ ಸಮಿತಿ ಸಿದ್ಧಗೊಳಿಸಿದ ಮತದಾರರ ಪಟ್ಟಿಗೆ ಹಾಗೂ ಜಿಲ್ಲಾ ಸಮಿತಿಯ ಪಟ್ಟಿಗೆ ಅಜಗಜಾಂತರ ವ್ಯತ್ಯಾಸವಿದೆ ಎಂಬ ಆರೋಪಗಳು ಕೇಳಿಬಂದವು.
ಸಂಘದಿಂದ ದೂರು: ಜಿಲ್ಲಾ ಸಂಘದ ಚುನಾವಣೆ ನಡೆಯಲು ಕೇವಲ 4 ದಿನ ಬಾಕಿಯಿರುವಾಗಲೇ ಶಿಕ್ಷಕರ ಸಂಘದ ಅಧ್ಯಕ್ಷ ತಿಮ್ಮಣ್ಣ ಅವರ ನೇತೃತ್ವದಲ್ಲಿ ಗುರುವಾರ ನೌಕರರ ಸಂಘದ ಅನೇಕರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚುನಾವಣೆಯಲ್ಲಿ ಅಕ್ರಮಗಳು ಹೆಚ್ಚಿವೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ಚುನಾವಣೆ ನಡೆಯುತ್ತಿವೆ ಎಂದು ದೂರಿತ್ತು. ಜಿಲ್ಲಾಡಳಿತದ ಕಣ್ಗಾವಲಿನಲ್ಲಿ ಚುನಾವಣೆ ನಡೆಯಬೇಕೆಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಆದೇಶ: ಪರಿಣಾಮ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಗುರುವಾರ ಆದೇಶ ಹೊರಡಿಸಿದ್ದು, ಅದರಂತೆ ಇದುವರೆಗೆ ನಡೆದ ಚುನಾವಣೆ ಪ್ರಕ್ರಿಯೆಯನ್ನು ಅಸಿಂಧು ಎಂದು ಪ್ರಕಟಿಸಿದ್ದಾರೆ. ಮುಕ್ತ ಹಾಗೂ ಪಾರದರ್ಶಕ ಚುನಾವಣೆಗೆ ಪೂರಕ ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ಸಹಾಯಕ ಆಯುಕ್ತೆ ಮಂಜುಶ್ರೀ ಅವರನ್ನು ಸರ್ಕಾರಿ ನೌಕರರ ಸಂಘದ ಚುನಾವಣಾಧಿಕಾರಿಯಾಗಿ ನೇಮಿಸಿದ್ದಾರೆ. ಅವರಿಗೆ ಸಹಾಯಕ ಚುನಾವಣಾಧಿಕಾರಿಯಾಗಿ ರಾಯಚೂರು ತಹಸೀಲ್ದಾರ್ ಅವರನ್ನು ನೇಮಿಸಿದ್ದಾರೆ. ಇದರಿಂದಾಗಿ ಸರ್ಕಾರಿ ನೌಕರರ ಜಿಲ್ಲಾ ಸಂಘದ ಚುನಾವಣೆ ಪ್ರಕ್ರಿಯೆ ಮತ್ತಷ್ಟು ಗೊಂದಲಕ್ಕೆ ಸಿಲುಕಿದ್ದು, ಸಂಘರ್ಷಕ್ಕೆ ನಾಂದಿ ಹಾಡಿದಂತಾಗಿದೆ.
ಪರಿಶೀಲನೆ ಬಳಿಕ ನಿರ್ಧಾರ: ಈ ಕುರಿತು ಜಿಲ್ಲಾ ಸರ್ಕಾರಿ ನೌಕರರ ಸಂಘದ ಹಾಲಿ ಅಧ್ಯಕ್ಷ ಮಹೆಬೂಬ್ ಪಾಷಾ ಮೂಲಿಮನಿ ಅವರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶವು ಸಂಘಕ್ಕೆ ತಲುಪುತ್ತಿದ್ದಂತೆಯೇ ಅದರ ಬಗ್ಗೆ ಪರಿಶೀಲಿಸಲಾಗುತ್ತದೆ. ಸಂಘದ ನೋಂದಣಿ ವೇಳೆ ರಚಿಸಿದ ನಿಯಮಗಳ ವ್ಯಾಪ್ತಿಗೆ ಅವರ ಆದೇಶ ಒಳಪಡುತ್ತಿದ್ದರೆ, ಆದೇಶ ಗೌರವಿಸಲಾಗುತ್ತದೆ. ಹಾಗೊಂದು ವೇಳೆ ನೀತಿ ನಿಯಮಗಳ ವ್ಯಾಪ್ತಿ ಮೀರಿದ ಆದೇಶ ಅದಾಗಿದ್ದರೆ ಚುನಾವಣೆ ಪೂರ್ವ ನಿಗದಿಯಂತೆ ಜು. 22ರಂದು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಗೊಂದಲದ ಗೂಡಾಗಿದ್ದು, ನೌಕರರ ಮಧ್ಯದ ಕಿತ್ತಾಟದಲ್ಲಿ ಜಿಲ್ಲಾಡಳಿತವೂ ಮಧ್ಯಪ್ರವೇಶಿಸುವಂಥ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಸಾರ್ವಜನಿಕವಾಗಿ ಸಂಘದ ಮಾನ ಹರಾಜಾಗುತ್ತಿರುವುದಂತೂ ವಾಸ್ತವ ಸಂಗತಿ.
ಸಂಘದ ಚುನಾವಣೆ ಅಸಿಂಧು
ಪ್ರಕ್ರಿಯೆ ರದ್ದು, ಹೊಸ ಪ್ರಕ್ರಿಯೆಗೆ ಶೀಘ್ರ ಚಾಲನೆ
ರಾಯಚೂರು: ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆಯನ್ನು ಮುಕ್ತ ಹಾಗೂ ಪಾರದರ್ಶಕವಾಗಿ ನಿರ್ವಹಿಸುವ ಉದ್ದೇಶದಿಂದ ಸಹಾಯಕ ಆಯುಕ್ತೆ ಮಂಜುಶ್ರೀ ಅವರನ್ನು ಚುನಾವಣಾಧಿಕಾರಿಯಾಗಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ನಾಗರಾಜು ಅವರು, ಈಗಾಗಲೇ ಸಂಘದಿಂದ ಹೊರಡಿಸಿರುವ ಚುನಾವಣೆ ವೇಳಾಪಟ್ಟಿಯು ಅಸಿಂಧು ಎಂದು ಘೋಷಿಸಿದ್ದು, ಲಭ್ಯವಿರುವ ಮತದಾರರ ಯಾದಿ ಪ್ರಕಾರ ಹೊಸದಾಗಿ ಚುನಾವಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲೇ ಹೊಸದಾಗಿ ಚುನಾವಣೆ ವೇಳಾಪಟ್ಟಿ ಪ್ರಕಟಿಸಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ರಾಯಚೂರು ತಹಸೀಲ್ದಾರ್ ಅವರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಿದ್ದು, ಚುನಾವಣಾ ಪ್ರಕ್ರಿಯೆ ಮುಕ್ತ ಹಾಗೂ ಪಾರದರ್ಶಕವಾಗಿರುವಂತೆ ಗಮನಹರಿಸಲು ಸಹಾಯಕ ಆಯುಕ್ತೆ ಮಂಜುಶ್ರೀ ಅವರಿಗೆ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

