ಹೆಸರು ಆದರ್ಶ ಕಾಲೋನಿ ರಸ್ತೆ ಅಧ್ವಾನ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.24
ನಗರದ ಪ್ರತಿಷ್ಠಿತ ಕಾಲೋನಿಯಾದ ಆದರ್ಶ ಕಾಲೋನಿ ಮಳೆಗಾಲ ಬಂತೆಂದರೆ ಸಂಪೂರ್ಣ ಹದಗೆಟ್ಟು ಅಧ್ವಾನವಾಗುತ್ತದೆ. ಇದರ ದುರಸ್ತಿಗೆ ನಗರಸಭೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎಂದು ನಾಗರಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಆದರ್ಶ ಕಾಲೋನಿಯಲ್ಲಿ ಜಾಗ ಖರೀದಿ ಮಾಡಿದರೆ, ಮನೆ ಕಟ್ಟಿಸಿದರೆ ಸಿಂಧನೂರಿನಲ್ಲಿ ಶ್ರೀಮಂತರು ಎಂಬ ಮಾತಿದೆ. ಅಲ್ಲಿನ ಪ್ಲಾಟುಗಳ ಕಿಮ್ಮತ್ತು ಪ್ರತಿ ಚದರ ಅಡಿಗೆ 1,500ರಿಂದ 2 ಸಾವಿರವರೆಗೆ ಮಾರುಕಟ್ಟೆ ಮೌಲ್ಯ ಹೊಂದಿದೆ. ಆದರೆ ಅಲ್ಲಿ ಮೂಲ ಸೌಕರ್ಯಗಳು ಇಲ್ಲದಿರುವುದು ದುರದೃಷ್ಟಕರ.
ಕೊಳಚೆ ಪ್ರದೇಶಕ್ಕಿಂತ ಕಡೆ: ಈ ಕಾಲೋನಿಯಲ್ಲಿ ಕೆಪಿಸಿಸಿ ಸದಸ್ಯ ಎನ್.ಶಿವನಾಗಪ್ಪ, ಡಾ. ರಾಧಾಕೃಷ್ಣ, ಡಾ. ಎಚ್.ಎಸ್. ತೋಟದ, ಡಾ. ಜಗದೀಶ, ಡಾ. ಆರ್.ವಿ. ಜೋಷಿ, ಡಾ. ಕೆ.ಶಿವರಾಜ, ಡಾ. ಬಸನಗೌಡ, ಹಿರಿಯ ವಕೀಲರಾದ ಎನ್.ಕೋಟೇಶ್ವರರಾವ್, ಎಸ್.ವಿ. ಪಾಟೀಲ್ ಸೇರಿದಂತೆ ಗಣ್ಯಾತಿಗಣ್ಯರು ವಾಸಿಸುತ್ತಿದ್ದಾರೆ. ನಗರಸಭೆ ಚುನಾವಣೆ ಸಂದರ್ಭದಲ್ಲಿ ಜಿದ್ದಾಜಿದ್ದಿಗೆ ಬಿದ್ದು ಅಭ್ಯರ್ಥಿಗಳು ಲಕ್ಷಾನುಗಟ್ಟಲೆ ಖರ್ಚು ಮಾಡಿ ಗೆಲ್ಲುತ್ತಾರೆ. ಆದರೆ ಚುನಾವಣೆಯ ನಂತರ ಈ ಕಾಲೋನಿಯ ಸ್ಥಿತಿ ಕೊಳಚೆ ಪ್ರದೇಶಕ್ಕಿಂತ ಕಡೆಯಾಗಿದೆ.
ಮಾರಕ ರೋಗಗಳ ಭೀತಿ: ನಿವೃತ್ತ ತಹಸೀಲ್ದಾರ್ ಬಂಗಾರಶೆಟ್ಟಿ ಅಮರಪ್ಪ ಅವರ ಮನೆಯ ಮುಂದೆ ಇರುವ ವಿಶಾಲವಾದ ಮೈದಾನದಲ್ಲಿ ನೀರು ನಿಂತು ವಾರ ಕಳೆದರೂ ರಸ್ತೆ ತಿರುಗಾಡಲು ಸಾಧ್ಯವಾಗುತ್ತಿಲ್ಲ. ಪಕ್ಕದಲ್ಲಿಯೇ ಬಸವೇಶ್ವರ ಶಿಕ್ಷಣ ಸಂಸ್ಥೆ ಇದೆ. ಇಲ್ಲಿನ ಶಾಲೆಗೆ ಬರುವ ಮಕ್ಕಳು ದಯನೀಯ ಸ್ಥಿತಿಯಲ್ಲಿ ಆಗಮಿಸುತ್ತಾರೆ. ನೀರು ಯಾವಾಗಲೂ ನಿಲ್ಲುವುದರಿಂದ ಡೆಂಘೀ, ಮಲೇರಿಯಾ ಸೇರಿದಂತೆ ಮತ್ತಿತರ ರೋಗಗಳು ಯಾವಾಗ ಬೇಕಾದರೂ ಬರಬಹುದಾಗಿದೆ.
ಆದರ್ಶ ಕಾಲೋನಿಯಲ್ಲಿ ಇರುವಷ್ಟು ಶಾಲಾ- ಕಾಲೇಜುಗಳು ನಗರದ ಬೇರೆ ಯಾವ ಕಾಲೋನಿಗಳಲ್ಲಿಯೂ ಇಲ್ಲ. ಸಂಕೇತ, ಕರ್ನಾಟಕ, ಶಾರದಾ ಮಹಿಳಾ, ಸೃಷ್ಟಿ ಕಾಲೇಜುಗಳು, ವೆಂಕಟೇಶ್ವರ, ಮೀನಾಕ್ಷಿ, ರೆಡ್ಡಿ ಪ್ರೌಢಶಾಲೆಗಳು, ಸಹನಾ ಎಬಿಸಿ ಮಾಂಟೆಸ್ಸರಿ ಶಾಲೆಗಳು ಸೇರಿದಂತೆ ಅನೇಕ ಸಣ್ಣಪುಟ್ಟ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಪ್ರಾಣಾಪಾಯ ಸಾಧ್ಯತೆ: ಈ ಕಾಲೋನಿಗೆ 4ರಿಂದ 5 ಅಡ್ಡರಸ್ತೆಗಳು ಬರುತ್ತವೆ. ರಸ್ತೆಗಳಲ್ಲಿ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು, ವಾಹನಗಳು ಸಂಚರಿಸುತ್ತಿವೆ. ಸಣ್ಣ ಮಕ್ಕಳು ಆಟೋಗಳಲ್ಲಿ ತಿರುಗಾಡುತ್ತವೆ. ಹಿಂದಿನ ಮಳೆಗಾಲದಲ್ಲಿ ಇಲ್ಲಿನ ಅಧ್ವಾನ ರಸ್ತೆ ಈಗಾಗಲೇ ಅನೇಕರ ಸೊಂಟ, ಕೈ- ಕಾಲುಗಳು ಮುರಿದ ಉದಾಹರಣೆಗಳಿವೆ.
ಕಳೆದ 15 ದಿನಗಳಿಂದ ನಿರಂತರವಾಗಿ ಜಡಿ ಮಳೆ ಬೀಳುತ್ತಿದೆ. ಅಲ್ಲಿನ ರಸ್ತೆಗಳಲ್ಲಿ ತಿರುಗಾಡಲು ಜನತೆ ಭಯಭೀತರಾಗಿದ್ದಾರೆ. ಬೈಕ್ ಸವಾರರು ಅಂಗೈಯಲ್ಲಿ ಜೀವ ಹಿಡಿದು ಸಂಚರಿಸುತ್ತಿದ್ದಾರೆ. ನಗರಸಭೆ ಅಧಿಕಾರಿಗಳು, ಶಾಸಕ ಹಂಪನಗೌಡ ಬಾದರ್ಲಿ ಈ ಕಡೆ ಗಮನಹರಿಸದಿದ್ದರೆ ಕಾಲೋನಿಯ ಸಾಮಾನ್ಯ ಜನತೆ ರೊಚ್ಚಿಗೇಳುವುದು ನಿಶ್ಚಿತ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

