ರಾಯಚೂರು

ಶಾಂತಿ, ನೆಮ್ಮದಿಯಿಂದ ಪ್ರಗತಿ ಸಾಧಿಸಲು ಸಾಧ್ಯ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಜು.24
ಶಾಂತಿ, ನೆಮ್ಮದಿಯ ಬದುಕಿನಿಂದ ಪ್ರಗತಿ ಸಾಧಿಸಲು ಸಾಧ್ಯ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಸದಲಗಿ ಹೇಳಿದರು.
ನಗರದ ಗೀತಾ ಮಂದಿರದಲ್ಲಿ ಇತ್ತೀಚೆಗೆ ಜೀವನಕಲೆ ಸಂಸ್ಥೆಯಿಂದ ಗುರುಪೂರ್ಣಿಮಾ ಸಂದರ್ಭ ಆಯೋಜಿಸಿದ್ದ ಮಹಾ ಸತ್ಸಂಗ ಹಾಗೂ ತಾಲೂಕು ಸಮಿತಿ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಜೀವನದಲ್ಲಿ ಶಾಂತಿ, ಮಾನಸಿಕ ನೆಮ್ಮದಿ ಅಗತ್ಯ. ಈ ನಿಟ್ಟಿನಲ್ಲಿ ಜೀವನ ಕಲೆ ಸಂಸ್ಥೆಯ ಕೊಡುಗೆ ಅಪಾರ ಎಂದರು.
ಗುರುವಿನ ಮೇಲೆ ಶ್ರದ್ಧೆಯಿರಲಿ: ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯರು, ಅಜ್ಞಾನವೆಂಬ ಕತ್ತಲು ತೊಲಗಲು ಜ್ಞಾನವೆಂಬ ಬೆಳಕು ಮೂಡಲು ಗುರುವಿನ ಮೇಲೆ ಭಕ್ತಿ, ಶ್ರದ್ಧೆ ಇಡುವುದು ಅವಶ್ಯಕ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜ ಕಳಸ ಮಾತನಾಡಿ, ದೇಹವನ್ನು ನಿಯಂತ್ರಣ ಮಾಡಲು ಕಾನೂನಿಂದ ಸಾಧ್ಯ. ಆದರೆ ಮನಸ್ಸಿನ ನಿಯಂತ್ರಣ ಯೋಗ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಗುರಿವಿಗೆ ವಂದನೆ: ಬೆಂಗಳೂರಿನ ಸತ್ಸಂಗ ಸಾಧಕ ಪ್ರತಾಪ ಮಾತನಾಡಿ, ಗುರುವಿಗೆ ವಂದನೆ ಅರ್ಪಿಸುವ ದಿನವನ್ನಾಗಿ ಗುರು ಪೂರ್ಣಿಮಾ ಆಚರಿಸಲಾಗುತ್ತಿದ್ದು ಈ ದಿನ ಗುರುವಿಗೆ ವಂದನೆ ಸಲ್ಲಿಸಿದರೆ ಸಂಪೂರ್ಣ ಆಶೀರ್ವಾದ ದೊರೆಯಲಿದೆ ಎಂದು ಹೇಳಿದರು. ಇನ್ನೊಬ್ಬ ಸಾಧಕ ಬಿ.ಎಂ. ಪಾಟೀಲ್, ಮುಖ್ಯ ಅತಿಥಿಗಳಾದ ಗೀತಾ ಮಂದಿರ ಅಧ್ಯಕ್ಷ ಮಂಚಾಲ ಶ್ರೀನಿವಾಸ ಮಾತನಾಡಿದರು.
ಭ್ರಮರಾಂಭ ಪತ್ತಿನ ಸೌಹಾರ್ದ ಸಹಕಾರಿ ನಿ. ಅಧ್ಯಕ್ಷ ಡಾ. ಶಿವಶರಣಪ್ಪ ಇತ್ಲಿ, ತಾಲೂಕು ಸಮಿತಿ ಮೇಲ್ವಿಚಾರಕ ಭಾನುಪ್ರಕಾಶ ಖೇಣೆದ್, ಜೀವನ ಕಲೆ ಶಿಕ್ಷಕ ಮಲ್ಲಿಕಾರ್ಜುನಸ್ವಾಮಿ ಪಾಲ್ಗೊಂಡಿದ್ದರು.
ಮಹಾಸತ್ಸಂಗ: ಈ ವೇಳೆ ತಾಲೂಕು ಸಮಿತಿ ಸದಸ್ಯರಿಗೆ ಪದಗ್ರಹಣ ಹಾಗೂ ಮಹಾಸತ್ಸಂಗ ಅದ್ಭುತವಾಗಿ ನೆರವೇರಿತು. ತಾಲೂಕು ಸಮಿತಿ ಪದಾಧಿಕಾರಿಗಳಾಗಿ ರಾಘವೇಂದ್ರ ಮೂಲಿಮನಿ, ದೇವಿಸಿಂಗ್ ಠಾಕೂರ್, ಸುರೇಖಾ ಪಾಗುಂಟಪ್ಪ, ಶೇಖರ್ ರಾಂಪೂರೆ ಮತ್ತು ಅಶೋಕ ಕುಮಾರ್ ಜೈನ್ ಪದಗ್ರಹಣ ಮಾಡಿದರು.

ಪೂರ್ಣಿಮೆ; ಮಕ್ಕಳಿಂದ ಗುರುವಂದನೆ
ರಾಯಚೂರು: ನಗರದ ಜೆಸಿ ಭವನದಲ್ಲಿ ಇತ್ತೀಚೆಗೆ ಗುರು ಪೂರ್ಣಿಮೆ ಅಂಗವಾಗಿ ಸಪ್ತಸುರಾಂಗನ್ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
   ಕಾರ್ಯಕ್ರಮದಲ್ಲಿ ಸಪ್ತಸುರಾಂಗನ್ ಸಂಸ್ಥೆಯ ನಿರ್ದೇಶಕ, ಹಿರಿಯ ರಂಗಕರ್ಮಿ ಬಿಹಾರದ ಹರ್ಷವರ್ಧನ್ ವರ್ಮಾ, ಸಂಗೀತ ಗುರುಗಳಾದ ವಿ.ಎಂ. ಜೋಷಿ, ಪಂ. ರಾಮಚಂದ್ರ ಜೋಷಿ, ವಿದ್ಯಾಸಾಗರ್ ಮತ್ತಿತರರು ಪಾಲ್ಗೊಂಡಿದ್ದರು.
ಈ ವೇಳೆ ವಿದ್ಯಾರ್ಥಿಗಳು ಗುರುಗಳಿಗೆ ವಂದನೆ ಸಲ್ಲಿಸಿ ಆಶೀರ್ವಾದ ಪಡೆದರು. ನಗರದ ಜನತೆ ಮತ್ತು ಸಂಗೀತಾಸಕ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.