ಶುದ್ಧ ಕುಡಿವ ನೀರಿಗಾಗಿ ರು. 20 ಲಕ್ಷ ವೆಚ್ಚದ ಕಾಮಗಾರಿ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.28
ನಗರಕ್ಕೆ ಶುದ್ಧ ಹಾಗೂ ಸಮರ್ಪಕ ನೀರು ಪೂರೈಕೆ ಕಾಮಗಾರಿಗೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಗೆ 20 ಲಕ್ಷ ರು. ವೆಚ್ಚದ ಟೆಂಡರ್ ಮಂಜೂರಾಗಿದೆ ಎಂದು ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದರು.
ಅವರು ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಕ್ಕೆ ಶಾಶ್ವತ ಕುಡಿವ ನೀರೊದಗಿಸಲು ನೀರಿನ ಮೂಲದ ಕೊರತೆಯಿಲ್ಲ. ಆದರೆ ನೀರು ಪೂರೈಕೆ ವ್ಯವಸ್ಥೆ ಸುಧಾರಣೆ ಅವಶ್ಯಕತೆಯಿದೆ. ಈಗಾಗಲೇ ಅಳವಡಿಸಿದ ಕೊಳವೆ ಮಾರ್ಗದ ಸಮಸ್ಯೆಯಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ನಗರ ನೀರು ಪೂರೈಕೆ ವ್ಯವಸ್ಥೆಯನ್ನು ಬಲಪಡಿಸಲು ರು. 20ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ನೀರೋದಗಿಸುವ ಬಗ್ಗೆ ಚಿಂತನೆ: ನಗರಕ್ಕೆ ದಿನದ 24 ಗಂಟೆಯೂ ನೀರೊದಗಿಸುವ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ಈಗಾಗಲೇ ಪೂರ್ವಭಾವಿ ಸಿದ್ಧತೆಗಳು ಜಾರಿಯಲ್ಲಿದ್ದು, ಅದಕ್ಕೆ ಪೂರಕವಾಗಿ ಕೃಷ್ಣಾ ನದಿಯಿಂದ ಆತ್ಕೂರು ಬಳಿಯಿಂದ ನೀರೆತ್ತಿ ನಗರಕ್ಕೆ ಒದಗಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ತಿಳಿಸಿದರು.
ತಾಲೂಕಿನ ಕೆಲ ಕೈಗಾರಿಕೆಗಳವರು ನದಿಗೆ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿರುವ ಬಗ್ಗೆ ದೂರು ಕೇಳಿಬಂದಿದೆ. ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದ್ದು, ಅವರು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಜುರಾಲಾ ಹಿನ್ನೀರಿನ್ನು ಬಳಸಿ ನಗರಕ್ಕೆ ನಿರಂತರ ನೀರೊದಗಿಸಬಹುದಾಗಿದೆ. ಆದರೆ ತ್ಯಾಜ್ಯ ವಿಲೇವಾರಿ ಬಗ್ಗೆ ವರದಿ ಪಡೆದು ಈ ಬಗ್ಗೆ ಮುಂದುವರಿಯಲಾಗುತ್ತದೆ ಎಂದು ತಿಳಿಸಿದರು.
ವೆಚ್ಚ: ನಗರದಲ್ಲಿ ಈಚೆಗೆ ಸುರಿದ ಮಳೆಯಿಂದ ರಸ್ತೆಗಳು ತೀರಾ ಹದಗೆಟ್ಟಿದ್ದು, ಅವುಗಳ ದುರಸ್ತಿ ಸದ್ಯಕ್ಕೆ ಕೈಗೊಳ್ಳದೇ ಮಳೆಗಾಲದ ನಂತರದಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ. ನಗರದ ರಸ್ತೆಗಳಲ್ಲಿನ ತಗ್ಗು ಮುಚ್ಚಲು ರು. 5ಲಕ್ಷ ವೆಚ್ಚ ಮಾಡಲಾಗುತ್ತಿದೆ. ಅದೇ ರೀತಿ ನಗರದ ರಸ್ತೆಯ ಸಮಗ್ರ ನಿರ್ಮಾಣಕ್ಕೆ ರು. 7.25ಕೋಟಿ ವೆಚ್ಚ ಮಾಡಲಾಗುತ್ತದೆ. ಅದಕ್ಕಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.
ನಗರದಲ್ಲಿ ನಿರ್ಮಿಸಿರುವ ಚತುಷ್ಪಥ ರಸ್ತೆಯ ಕಾಮಗಾರಿಯು ಕಳಪೆಯಾಗಿದೆ. ಆದರೆ ಆ ರಸ್ತೆಯ ನಿರ್ವಹಣೆಯ ಹೊಣೆ ಗುತ್ತಿಗೆದಾರರದ್ದಾಗಿದೆ. ಒಪ್ಪಂದದಂತೆ ನಿರ್ಮಾಣ ಮತ್ತು ನಿರ್ವಹಣೆಯು ಮುಂದಿನ ಐದು ವರ್ಷಗಳ ಅವಧಿಗಿದ್ದು, ಗುತ್ತಿಗೆದಾರರು ದುರಸ್ತಿ ಮಾಡಲಿದ್ದಾರೆಂದು ಹೇಳಿದರು.
ಸಂಚಾರ ಸಮಸ್ಯೆ ನಿವಾರಣೆ: ನಗರದ ಹೊರವಲಯದಲ್ಲಿ ನಿರ್ಮಿಸಿರುವ ಬೈಪಾಸ್ ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕೆ ರು. 20ಲಕ್ಷ ಅವಶ್ಯಕತೆಯಿದೆ. ಲೋಕೋಪಯೋಗಿ ಮತ್ತು ಕೆಶಿಪ್ ಅಧಿಕಾರಿಗಳ ಜತೆ ಈಗಾಗಲೇ ಮಾತುಕತೆ ನಡೆಸಿದ್ದು, ಶೀಘ್ರ ಹಣ ದೊರಕಿಸಲು ಪ್ರಯತ್ನಿಸಲಾಗುತ್ತದೆ. ಆ ಮೂಲಕ ಸೇತುವೆ ಪೂರ್ಣಗೊಂಡಲ್ಲಿ ನಗರದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ನಗರದ ಒಪೆಕ್ ಆಸ್ಪತ್ರೆ ಮುಂದಿನ ಎರಡು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ. ಆಸ್ಪತ್ರೆಯ ಪುನಾರಂಭ ನಿಟ್ಟಿನಲ್ಲಿ ಪ್ರಕ್ರಿಯೆ ಜಾರಿಯಲ್ಲಿದ್ದು, ಸ್ವಚ್ಛತೆ ಮತ್ತಿತರೆ ಕಾರ್ಯಗಳಿಗೆ ಎರಡು ತಿಂಗಳ ಬೇಕಾಗಲಿದೆ. ವೈದ್ಯರ ಹಾಗೂ ಸಿಬ್ಬಂದಿ ನೇಮಕಾತಿ ನಡೆಯುತ್ತಿದೆ ಎಂದು ಹೇಳಿದರು.
ಈಚೆಗೆ ಆರ್ಟಿಪಿಎಸ್ನಲ್ಲಿ ನಡೆದ ಅವಘಡದಲ್ಲಿ ಕಾರ್ಮಿಕ ಸಾವಿಗೀಡಾಗಿರುವ ಬಗ್ಗೆ ಸಿಎಂ ಗಮನ ಸೆಳೆಯಲಾಗಿದ್ದು, ಅವರು ಮೃತನ ಕುಟುಂಬದವರಿಗೆ ಉದ್ಯೋಗ ನೀಡುವ ಭರವಸೆ ಕೊಟ್ಟಿದ್ದಾರೆ.
ಅದೇ ರೀತಿ ಎಂಪಿಸಿಎಲ್ ಕಂಪನಿ ಮುಚ್ಚಿರುವ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಗಮನ ಸೆಳೆಯಲಾಗಿದೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಶಿವಶಂಕರ್, ಪವನಕುಮಾರ್, ಯಲ್ಲಪ್ಪ, ತಿಮ್ಮಾರೆಡ್ಡಿ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

