ಕೃಷ್ಣಾ ಪ್ರವಾಹ ಇಳಿಮುಖ: ನದಿ ತೀರದಲ್ಲಿ ನಿರಾಳ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.28
ಜಿಲ್ಲೆಯ ಕೃಷ್ಣಾ ನದಿಯಲ್ಲಿನ ಪ್ರವಾಹ ಇಳಿಮುಖಗೊಂಡಿದ್ದು, ನಿರಾತಂಕ ಮನೆ ಮಾಡಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯ ಲಿಂಗಸ್ಗೂರು, ದೇವದುರ್ಗ ತಾಲೂಕುಗಳಲ್ಲಿ ಮೂಡಿದ್ದ ಪ್ರವಾಹ ಭೀತಿ ತಗ್ಗಿದೆ. ರಾಯಚೂರು ತಾಲೂಕಿನಲ್ಲಿ ಜುರಾಲಾ ಹಿನ್ನೀರಿನ ಆತಂಕ ಮುಂದುವರಿದಿದೆ.
ನಾರಾಯಣಪುರ ಜಲಾಶಯದಿಂದ ಹೊರಹರಿಸುತ್ತಿದ್ದ ನೀರಿನ ಪ್ರಮಾಣ ತಗ್ಗಿಸಿರುವುದು ನದಿ ತೀರದ ಜನತೆಗೆ ಕೊಂಚಮಟ್ಟಿಗಿನ ನಿರಾಳತೆ ತಂದಿದೆ. ಲಿಂಗಸ್ಗೂರು ತಾಲೂಕಿನ ಮ್ಯಾದರಗಡ್ಡಿ ಮತ್ತು ಕರಕಲಗಡ್ಡೆ ಗ್ರಾಮದಲ್ಲಿ ಸಿಲುಕಿದ್ದವರು ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದರಿಂದ ಸುರಕ್ಷಿತವಾಗಿದ್ದಾರೆ.
ರಕ್ಷಣೆ ಪ್ರಯತ್ನ ನಿಲುಗಡೆ: ಈ ಮಧ್ಯೆ ಕಳೆದ ಎರಡು ದಿನಗಳಿಂದ ಲಿಂಗಸ್ಗೂರು ತಾಲೂಕು ಆಡಳಿತ ಈ ಎರಡೂ ನಡುಗಡ್ಡೆಗಳಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಪ್ರಯತ್ನಿಸಿತ್ತು. ಆದರೆ ಭಾನುವಾರ ಪ್ರಹಾವ ತಗ್ಗಿದ್ದರಿಂದ ಅಂಥ ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ಬದಲಿಗೆ ಆಡಳಿತ ಕರೆತಂದಿದ್ದ ಮಲ್ಲಪ್ಪ ಮ್ಯಾದರ್, ಪರಶುರಾಮ್ ಮತ್ತು ಅಮರಪ್ಪ ಎಂಬುವವರ ಪೈಕಿ ಮಲ್ಲಪ್ಪನನ್ನು ಹೊರತುಪಡಿಸಿ ಇನ್ನಿಬ್ಬರು ತಮ್ಮ ಸಂಬಂಧಿಗಳು ವಾಸವಾಗಿದ್ದ ನಡುಗಡ್ಡೆಗಳಿಗೆ ಮತ್ತೆ ಮರಳಿದ್ದಾರೆ. ಲಿಂಗಸ್ಗೂರು ತಾಲೂಕು ಆಡಳಿತ ದುರಸ್ತಿಗೆ ಸಿಲುಕಿರುವ ಯಾಂತ್ರೀಕೃತ ಬೋಟ್ಗಳನ್ನು ದುರಸ್ತಿಗಾಗಿ ಹೈದರಾಬಾದ್ಗೆ ಕಳಿಸಿದ್ದು, ಇನ್ನೂ ಮರಳಿಲ್ಲ. ಪ್ರವಾಹವೂ ತಗ್ಗಿರುವುದು ಅಧಿಕಾರಿಗಳಲ್ಲಿ ನೆಮ್ಮದಿ ತಂದಿದೆ. ಈ ಮಧ್ಯೆ ದೇವದುರ್ಗ ತಾಲೂಕಿನಲ್ಲಿಯೂ ಪ್ರವಾಹ ಭೀತಿ ಕಡಿಮೆಯಾಗಿದೆ.
ಇನ್ನೂ ಸಾರಿಗೆ ಬಸ್ ಸಂಚಾರವಿಲ್ಲ: ದೇವದುರ್ಗ- ಶಹಾಪುರ ಮಧ್ಯೆ ಹೂವಿನಹೆಡಗಿ ಸೇತುವೆಯ ಮೇಲೆ ರಸ್ತೆ ಸಂಚಾರಕ್ಕೆ ಅವಕಾಶವಿದ್ದರೂ ಮುಂಜಾಗ್ರತೆ ಕ್ರಮವಾಗಿ ಸಾರಿಗೆ ಸಂಸ್ಥೆಯ ಬಸ್ಗಳ ಸಂಚಾರವಿನ್ನೂ ಆರಂಭವಾಗಿಲ್ಲ. ಆದರೆ ಸಣ್ಣ ವಾಹನಗಳು ಸಂಚರಿಸುತ್ತಿದ್ದು ಆಚೆಯ ಶಹಾಪುರ ತಾಲೂಕಿನ ನದಿ ದಡದಲ್ಲಿರುವ ಗ್ರಾಮಗಳಿಗೆ ತೆರಳಲು ಜನತೆಗೆ ಅನುಕೂಲವಾಗಿದೆ. ಇನ್ನು ಕೊಪ್ಪರದ ಲಕ್ಷ್ಮೀನರಸಿಂಹ ದೇವಸ್ಥಾನ ಸುತ್ತುವರಿದಿದ್ದ ನೀರು ಹಿಂದೆ ಸರಿದಿದ್ದು ಆತಂಕ ದೂರವಾಗಿದೆ. ಇನ್ನು ರಾಯಚೂರಿನ ಅರಷಿಣಗಿ, ಗುರ್ಜಾಪುರಗಳಲ್ಲಿ ಗದ್ದೆಗಳಿಗೆ ನುಗ್ಗಿದ್ದ ನೀರು ಇಳಿಮುಖವಾಗಿದೆ.
ಜುರಾಲಾ ಹಿನ್ನೀರು- ಆತಂಕ: ಆದರೆ ಜುರಾಲಾ ಅಣೆಕಟ್ಟೆಯ ಹಿನ್ನೀರಿನಿಂದ ಬಾಧಿತ ಆತ್ಕೂರು, ಬುರ್ದಿಪಾಡ ಗ್ರಾಮಗಳಲ್ಲಿ ಆತಂಕ ದೂರವಾಗಿಲ್ಲ. ಸದ್ಯ ಆಂಧ್ರವು ಜುರಾಲಾ ಅಣೆಕಟ್ಟೆಯ ಗೇಟುಗಳನ್ನು ತೆರೆದು ನೀರು ಹೊರಹರಿಸುತ್ತಿದ್ದು ಅದರಿಂದ ಸದ್ಯಕ್ಕೆ ತೊಂದರೆಯಿಲ್ಲ. ಆದರೆ ಮುಂದಿನ ದಿನಗಳಲ್ಲಿ ಆಂಧ್ರ ಅಣೆಕಟ್ಟೆ ಗೇಟು ಮುಚ್ಚಿದಲ್ಲಿ ಹಿನ್ನೀರು ಈ ಎರಡೂ ಗ್ರಾಮಗಳಿಗೆ ಆತಂಕ ತರಲಿದೆ.
ಪ್ರವಾಹ ಪ್ರದೇಶಕ್ಕೆ ಕಾಂಗ್ರೆಸ್ ಮುಖಂಡರ ಭೇಟಿ
ಕ.ಪ್ರ. ವಾರ್ತೆ, ದೇವದುರ್ಗ, ಜು.28
ಮಹಾರಾಷ್ಟ್ರದಲ್ಲಿನ ಅಧಿಕ ಮಳೆಯಿಂದ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿಬಿಟ್ಟ ಪರಿಣಾಮ ಉಂಟಾದ ಪರಿಸ್ಥಿತಿ ಅವಲೋಕಿಸಲು ಶನಿವಾರ ತಾಲೂಕಿನ ನದಿತೀರದ ಗ್ರಾಮಗಳಿಗೆ ಕಾಂಗ್ರೆಸ್ ಯುವ ಮುಖಂಡ ಬಿ.ವಿ. ನಾಯಕ ಭೇಟಿ ನೀಡಿದರು.
ತಾಲೂಕಿನ ಮ್ಯಾದರಗೋಳ, ಕೋಣಚಪ್ಪಳಿ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರು.
ನದಿಗೆ 2.50 ಲಕ್ಷ ಕ್ಯುಸೆಕ್ ನೀರು ಹರಿಸಲಾಗಿದೆ. ಸದ್ಯಕ್ಕೆ ಅಂಥ ತೊಂದರೆಯಿಲ್ಲ. ಆದರೂ ನದಿ ದಂಡೆಯ ಬಳಿಯಿರುವ ಜನತೆ ಮುಂಜಾಗ್ರತೆ ವಹಿಸುವಂತೆ ಮನವಿ ಮಾಡಿದರು.
ಅನೇಕ ಗ್ರಾಮಗಳಲ್ಲಿ ವಸತಿ ಸಮಸ್ಯೆ: ತಾಲೂಕಿಗೆ ವಸತಿ ಯೋಜನೆ ಅಡಿ 45 ಸಾವಿರ ಮನೆಗಳು ಮಂಜೂರಾಗಿವೆ ಎಂದು ಈ ಮೊದಲಿನ ಶಾಸಕ ಶಿವನಗೌಡ ನಾಯಕ ಘೋಷಿಸಿದ್ದರು.
ಆದರೆ ಈಗಲೂ ಅನೇಕ ಗ್ರಾಮಗಳಲ್ಲಿ ವಸತಿ ಸಮಸ್ಯೆಯಿದೆ ಎಂಬ ದೂರು ಕೇಳಿ ಬಂದಿದೆ ಎಂದು ಅವರು ಟೀಕಿಸಿದರು.
ಈಗಾಗಲೇ ತಾಲೂಕಿನಲ್ಲಿ ಬಾಕಿ ಉಳಿದ ಬಸವ ವಸತಿ ಯೋಜನೆಯಡಿ ಫಲಾನುಭವಿಗಳ ಚೆಕ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. 3 ಸಾವಿರ ಮನೆಗಳನ್ನು ಮಂಜೂರು ಮಾಡುವಂತೆ ಶಾಸಕ ಎ.ವೆಂಕಟೇಶ ನಾಯಕ ಅವರು ಕೋರಿದ್ದು, ವಸತಿ ಸಚಿವರು ಭರವಸೆ ನೀಡಿದ್ದಾರೆಂದು ತಿಳಿಸಿದರು.
ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಇರಬಗೇರಾ, ಪಕ್ಷದ ಹಿರಿಯ ಮುಖಂಡ ಎ.ಮಲ್ಲಿಕಾರ್ಜುನ ಪಾಟೀಲ್, ಚನ್ನಯ್ಯ ಸ್ವಾಮಿ ಹಿರೇಮಠ, ಲಿಂಗಪ್ಪ, ಭೀಮಯ್ಯ, ವಿಜಯಕುಮಾರ ಮಾಲಿಪಾಟೀಲ್, ವೆಂಕಟೇಶ ನಾಯಕ, ತಹಸೀಲ್ದಾರ್ ತುಕರಾಮ ಕಲ್ಯಾಣ್ಕರ್, ಜೆಸ್ಕಾಂ ಎಇಇ ಕಳಕಪ್ಪ, ಪಿಎಸ್ಐ ಆರ್.ಎಂ. ನದಾಫ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

