ಕೃಷ್ಣಾ - ತುಂಗಭದ್ರಾ ನದಿಯಲ್ಲಿ ಪ್ರವಾಹ
ಕನ್ನಡಪ್ರಭ ವಾರ್ತೆ ರಾಯಚೂರು ಜು.29
ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ತಗ್ಗಿದ್ದ ಪ್ರವಾಹ ಭೀತಿ ಮತ್ತೆ ಆರಂಭವಾಗಿದ್ದು, ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ಪ್ರವಾಹದಿಂದ ರೈತರು ಹಾನಿಯ ಆತಂಕ ಎದುರಿಸುತ್ತಿದ್ದಾರೆ. ಮಂತ್ರಾಲಯದಲ್ಲಿ ತುಂಗಭದ್ರಾ ನದಿಯಿಂದ ಪ್ರವಾಹದ ಭೀತಿ ಉಂಟಾಗಿದೆ.
ನಾರಾಯಣಪುರ ಮತ್ತು ತುಂಗಭದ್ರಾ ಜಲಾಶಯಗಳಿಂದ ಲಕ್ಷಾಂತರ ಕ್ಯುಸೆಕ್ ನೀರು ಹೊರಹರಿಸುತ್ತಿರುವುದು ಹಾಗೂ ಆಂಧ್ರದ ಜುರಾಲಾ ಅಣೆಕಟ್ಟೆಯಿಂದ ನೀರು ಹೊರಹರಿಸುವ ಪ್ರಮಾಣ ತಗ್ಗಿಸಿದ್ದರಿಂದ ಹಿನ್ನೀರಿನ ಬಾಧಿತ ಗ್ರಾಮಗಳ ಜನತೆ ಆತಂಕಕ್ಕೆ ಸಿಲುಕಿದ್ದಾರೆ.
ಲಿಂಗಸ್ಗೂರು ತಾಲೂಕಿನ ಯರಗೋಳ, ಯಳಗುಂದಿ, ಕಡದರಗಡ್ಡೆ, ಮ್ಯಾದರಗಡ್ಡೆ ಹಾಗೂ ಕರಕಲಗಡ್ಡೆ ನಡುಗಡ್ಡೆಗಳ ಸಂಪರ್ಕ ಕಡಿತಗೊಂಡಿದೆ. ಸಹಾಯಕ ಆಯುಕ್ತ ಯೋಗೀಶ್ ಮತ್ತಿತರರು ಸೋಮವಾರ ಮ್ಯಾದರಗಡ್ಡೆ ಗ್ರಾಮದ ಮಲ್ಲಪ್ಪ ಮ್ಯಾದರ್ ಎಂಬುವವರು ಸೇರಿ ಹಲವರೊಂದಿಗೆ ಸ್ಥಳಾಂತರ ಕುರಿತು ಚರ್ಚಿಸಿದರು.
ಮುಂಜಾಗ್ರತೆ ಕ್ರಮ: ಇನ್ನು ದೇವದುರ್ಗ ತಾಲೂಕಿನ ಹೂವಿನೆಹೆಡಗಿ ಸೇತುವೆ ಕೆಳಗೆ ಕೃಷ್ಣಾ ನದಿ ನೀರು ಹರಿಯುತ್ತಿದ್ದು, ಉಂಟಾಗಿದ್ದ ಆತಂಕ ದೂರವಾಗಿದೆ. ಹಾಗೆಯೇ ನದಿ ತೀರದ ಗ್ರಾಮಗಳಲ್ಲಿ ಕೃಷ್ಣಾ ನೀರಿನ ಪ್ರಮಾಣ ತಗ್ಗಿದೆ. ಮುಂಜಾಗ್ರತೆ ಕ್ರಮಗಳನ್ನು ದೇವದುರ್ಗ ತಾಲೂಕು ಆಡಳಿತ ಕೈಗೊಂಡಿದೆ.
ರಾಯಚೂರು ತಾಲೂಕಿನಲ್ಲಿ ಕೃಷ್ಣಾ ನದಿಯ ಪ್ರವಾಹಕ್ಕೆ ರೈತರು ನೂರಕ್ಕೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದ ಬತ್ತದ ಗದ್ದೆಗಳು ಸಿಲುಕಿವೆ. ತಾಲೂಕಿನ ಕೃಷ್ಣಾ ನದಿ ತೀರದ ಅರಷಿಣಗಿ, ಗುರ್ಜಾಪುರ, ಕಾಡ್ಲೂರು, ಕರೇಕಲ್, ಆತ್ಕೂರು, ಬುರ್ದಿಪಾಡ ಗ್ರಾಮಗಳಲ್ಲಿ ಬತ್ತದ ಗದ್ದೆಗಳಿಗೆ ನೀರು ನುಗ್ಗಿದ್ದು, ರೈತರು ಆತಂಕಕ್ಕೆ ಸಿಲುಕಿದ್ದಾರೆ.
ಬೆಳೆಹಾನಿಯ ಭೀತಿ ಒಂದೆಡೆಯಾದರೆ ಪ್ರವಾಹ ತಗ್ಗುವ ಲಕ್ಷಣ ಕ್ಷೀಣಿಸಿದ್ದು, ರೈತರು ಗೊಂದಲಕ್ಕೆ ಸಿಲುಕಿದ್ದಾರೆ. ಈಚೆಗೆ ನಾಟಿ ಮಾಡಿದ್ದ ಬತ್ತ ಕಳೆದ ಐದು ದಿನಗಳಿಂದ ಕೃಷ್ಣಾ ನದಿ ನೀರಿನಲ್ಲಿ ಮುಳುಗಿದ್ದು ಬೆಳೆ ಹಾನಿಯ ಭೀತಿಯಿದೆ ಎಂದು ಗುರ್ಜಾಪುರ ಗ್ರಾಮದ ಗೋಪಾಲರೆಡ್ಡಿ ಕನ್ನಡಪ್ರಭಕ್ಕೆ ಆತಂಕ ವ್ಯಕ್ತಪಡಿಸಿದರು.
ಸಂಪರ್ಕ ಕಡಿತ: ಈ ಮಧ್ಯೆ ಶಕ್ತಿನಗರ- ಗುರ್ಜಾಪುರ ಮಧ್ಯೆ ಕೃಷ್ಣಾ ನದಿ ಹಿನ್ನೀರಿನಿಂದಾಗಿ ಹಳ್ಳಕ್ಕೆ ನೀರು ನುಗ್ಗಿದ್ದು, ಅದರಿಂದ ಗುರ್ಜಾಪುರ-ಶಕ್ತಿನಗರದ ಮಧ್ಯೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸದ್ಯ ಗುರ್ಜಾಪುರ ಜನತೆ ಸುತ್ತು ಬಳಸಿ ರಾಯಚೂರು ನಗರಕ್ಕೆ ಆಗಮಿಸುವಂತಾಗಿದೆ.
ಆಂಧ್ರದ ಜುರಾಲಾ ಅಣೆಕಟ್ಟೆಯ ಹಿನ್ನೀರಿನಿಂದಾಗಿ ಬುರ್ದಿಪಾಡ, ಆತ್ಕೂರು ಗ್ರಾಮಗಳ ರೈತರಲ್ಲಿ ಆತಂಕ ಉಂಟಾಗಿದೆ.
ಅಣೆಕಟ್ಟೆಯಿಂದ ಹೊರಹರಿಸಲಾಗುತ್ತಿದ್ದ ನೀರಿನ ಪ್ರಮಾಣ ತಗ್ಗಿಸಿದ್ದು, ಹಿನ್ನೀರಿನಿಂದ ಬಾಧಿತ ಈ ಗ್ರಾಮಗಳು ಆತಂಕ ಎದುರಿಸುವಂತಾಗಿದೆ.
ಇನ್ನು ತುಂಗಭದ್ರಾ ನದಿ ಸಹ ಉಕ್ಕಿ ಹರಿಯತೊಡಗಿದ್ದು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯದಿಂದ 1,47,098 ಕ್ಯುಸೆಕ್ ನೀರು ಹೊರಹರಿಸುತ್ತಿದ್ದು, ಅದರಿಂದಾಗಿ ಸಿಂಧನೂರು ಹಾಗೂ ಮಾನವಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಬತ್ತದ ಗದ್ದೆಗೆ ನೀರು: ಸಿಂಧನೂರು ತಾಲೂಕಿನ ಮುಕ್ಕುಂದಾ ಗ್ರಾಮದ ಖಾದರಬಾಷಾ ನಡುಗಡ್ಡೆ ನದಿ ನೀರಿನಿಂದ ಜಲಾವೃತಗೊಂಡಿದೆ. ಕೆಂಗಲ್, ದಢೇಸೂಗೂರು, ಭೈರೇಶ್ವರಿ ಕ್ಯಾಂಪ್, ಉಪ್ಪಳ, ಹೆಡಗಿನಾಳ, ಒಳಬಳ್ಳಾರಿ, ಆಯನೂರು, ಚಿಂತಮಾನದೊಡ್ಡಿ, ಪುಲಮೇಶ್ವರದಿನ್ನಿ ಸೇರಿ ಅನೇಕ ಗ್ರಾಮಗಳಲ್ಲಿ ರೈತರು ಬೆಳೆದ ಬತ್ತದ ಗದ್ದೆಗೆ ನೀರು ನುಗ್ಗಿದೆ. ರೈತರ ಪಂಪ್ ಸೆಟ್ಗಳು ನೀರಿನಲ್ಲಿ ಮುಳುಗಿವೆ.
2009ರಲ್ಲಿ ಪುನಾವಸತಿ ಕಲ್ಪಿಸಿದ್ದರೂ ಸಿಂಧನೂರು ತಾಲೂಕಿನ ಪುಲಮೇಶ್ವರದಿನ್ನಿ, ಒಳಬಳ್ಳಾರಿ, ಹೆಡಗಿನಾಳ, ಚಿಂತಮಾನದೊಡ್ಡಿ ಸೇರಿ ಇತರೆ ಗ್ರಾಮಗಳಲ್ಲಿ ಅನೇಕ ಕುಟುಂಬಗಳು ವಾಸವಾಗಿವೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಮತ್ತಷ್ಟು ಆತಂಕದ ಛಾಯೆ ಮೂಡಿದೆ.
ಭೇಟಿ: ಸಿಂಧನೂರು ತಾಲೂಕಿನ ತುಂಗಭದ್ರಾ ನದಿ ತೀರದ ಗ್ರಾಮಗಳಿಗೆ ಸಹಾಯಕ ಆಯುಕ್ತ ಟಿ.ಯೋಗೀಶ್, ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಅಧಿಕಾರಿಗಳ ತಂಡ ಸೋಮವಾರ ಭೇಟಿ ನೀಡಿ ಪರಿಶೀಲಿಸಿತು.
ಈ ವೇಳೆ 'ಕನ್ನಡಪ್ರಭ' ಜೊತೆ ಮಾತನಾಡಿದ ತಹಸೀಲ್ದಾರ್ ಕುಮಾರಸ್ವಾಮಿ, ಜನತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ. ಹಾಗೆಯೇ ಯಾವುದೇ ಪರಿಸ್ಥಿತಿ ಎದುರಿಸಲು ತಾಲೂಕು ಆಡಳಿತ ಸಜ್ಜಾಗಿದೆ ಎಂದಿದ್ದಾರೆ.
ಇನ್ನು ಮಾನವಿ ತಾಲೂಕಿನಲ್ಲಿ ಸಹ ತುಂಗಭದ್ರಾ ಪ್ರವಾಹದಿಂದ ಆತಂಕ ಎದುರಾಗಿದೆ. ಆ ತಾಲೂಕಿನ ನದಿ ತೀರದ ಗ್ರಾಮಗಳಾದ ಕಾತರಕಿ, ಚೀಕಲಪರ್ವಿ, ಯಡಿವಾಳ, ಪನ್ನೂರು, ದದ್ದಲ ಸೇರಿ ವಿವಿಧೆಡೆ ನದಿ ಉಕ್ಕಿ ಹರಿಯುತ್ತಿದ್ದು, ಜನತೆ ಭೀತಿಗೆ ಸಿಲುಕಿದ್ದಾರೆ.
ಪ್ರಸಿದ್ಧ ಧಾರ್ಮಿಕ ಕೇಂದ್ರ ಮಂತ್ರಾಲಯದಲ್ಲಿಯೂ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಅದರಿಂದ ಭಕ್ತರು ಆತಂಕದಲ್ಲಿದ್ದಾರೆ.
ಸದ್ಯ ಶ್ರೀರಾಯರ ಮಠದ ಹಿಂಭಾಗದಲ್ಲಿ ನದಿ ತೀರದಲ್ಲಿ ನಿರ್ಮಿಸಿದ ಕಾಂಕ್ರೀಟ್ ಹಾಸಿನವರೆಗೆ ನದಿ ನೀರು ಬಂದು ಸೇರಿದ್ದು, ಮಂತ್ರಾಲಯ ನಿವಾಸಿಗಳು ಹಾಗೂ ಭಕ್ತರು ಭಯದಲ್ಲಿಯೇ ಜೀವನ ನಡೆಸುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

