5ರಂದು ನೀಲಗಲ್ ಮಠದ ಶ್ರೀಗುರು ಪಟ್ಟಾಧಿಕಾರ
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.2
ದೇವದುರ್ಗ ತಾಲೂಕಿನ ನೀಲಗಲ್ ಬೃಹನ್ಮಠದ ಹಿರಿಯ ಶ್ರೀಗಳ ಗುರುವಂದನಾ ಸಮಾರಂಭ, ತುಲಾಭಾರ ಕಾರ್ಯಕ್ರಮ ಹಾಗೂ ಶ್ರೀಗುರು ಪಟ್ಟಾಧಿಕಾರ ಮಹೋತ್ಸವ ಮತ್ತು ಧರ್ಮ ಜಾಗೃತಿ ಸಮ್ಮೇಳನವನ್ನು ಜೂ. 4 ಮತ್ತು 5ರಂದು ಆಯೋಜಿಸಲಾಗಿದೆ ಎಂದು ನೀಲಗಲ್ ಬೃಹನ್ಮಠದ ಡಾ. ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀಮಠದ ಗುರು ಪಟ್ಟಾಧಿಕಾರವನ್ನು ಶ್ರೀರೇಣುಕಾ ಶಾಂತಮಲ್ಲ ಶಿವಾಚಾರ್ಯರಿಗೆ ನೀಡುವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿರುವ ಈ ಸಮಾರಂಭದಲ್ಲಿ ಜೂ. 5ರಂದು ಬೆ.8ಕ್ಕೆ ಶ್ರೀರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ನಡೆಯಲಿದೆ ಎಂದು ಹೇಳಿದರು.
ಶ್ರೀಮಠದ ಉದ್ಘಾಟನೆ: ಅದೇ ರೀತಿ ನೂತನ ಶ್ರೀಗಳ ಮೆರವಣಿಗೆ ಬೆಳಗ್ಗೆ 10.30ಕ್ಕೆ ನೆರವೇರಲಿದೆ. ನೂತನ ಶ್ರೀಮಠದ ಉದ್ಘಾಟನೆಯ ಕಾರ್ಯಕ್ರಮ ಬೆ.11ಕ್ಕೆ ನಡೆಯಲಿದ್ದು, ಶ್ರೀರಂಭಾಪುರಿ ಜಗದ್ಗುರುಗಳು ಉದ್ಘಾಟನೆ ನೆರವೇರಿಸಲಿದ್ದಾರೆ. ಶ್ರೀಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಶಾಂತಮಲ್ಲೇಶ್ವರ ಕಲ್ಯಾಣ ಮಂಟಪವನ್ನು ಮಾಜಿ ಸಚಿವ ಕೆ.ಶಿವನಗೌಡ ನಾಯಕ ನೆರವೇರಿಸುವರು ಎಂದು ತಿಳಿಸಿದರು.
ನೂತನ ಅಭಿದಾನ: ಅದೇ ದಿನ ಬೆಳಗ್ಗೆ 11.30ಕ್ಕೆ 25 ಜೋಡಿ ಸಾಮೂಹಿಕ ವಿವಾಹ ಆಯೋಜಿಸಿದ್ದು, ಮಧ್ಯಾಹ್ನ 1ಕ್ಕೆ ಧರ್ಮಜಾಗೃತಿ ಸಮಾರಂಭ ನಡೆಯಲಿದೆ. ಶ್ರೀರಂಭಾಪುರಿ ಜಗದ್ಗುರುಗಳು ಶ್ರೀಸಿದ್ದರಾಮ ದೇವರಿಗೆ ಶ್ರೀರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳೆಂಬ ನೂತನ ಅಭಿದಾನದೊಂದಿಗೆ ಆಶೀರ್ವದಿಸಲಿದ್ದಾರೆಂದು ತಿಳಿಸಿದರು.
ರಾಯಚೂರಿನ ಕಿಲ್ಲೆಬ್ರಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯರು ನೇತೃತ್ವ ವಹಿಸುವರು. ಜಾಲಹಳ್ಳಿ, ನಂದವಾಡಗಿ, ಮಾನವಿಯ ಕಲ್ಮಠ, ಗಬ್ಬೂರು ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಉಪದೇಶಾಮೃತ ನೀಡಲಿದ್ದಾರೆ. ನಂತರ ನೂತನ ಶ್ರೀಗಳು ಧರ್ಮ ಸಂದೇಶ ನೀಡುವರು ಎಂದು ಹೇಳಿದರು.
ಶಾಸಕರಾದ ವೆಂಕಟೇಶ ನಾಯಕ, ಡಾ. ಶಿವರಾಜ್ ಪಾಟೀಲ್, ತಿಪ್ಪರಾಜ ಹವಾಲ್ದಾರ್, ಹಂಪಯ್ಯ ನಾಯಕ, ಮಾನಪ್ಪ ವಜ್ಜಲ್, ಪ್ರತಾಪಗೌಡ ಪಾಟೀಲ್ ಮಸ್ಕಿ, ಸಂಸದ ಎಸ್.ಫಕೀರಪ್ಪ, ಮಂತ್ರಾಲಯಂ ಶಾಸಕ ಬಾಲನಾಗಿರೆಡ್ಡಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ಅಡ್ಡಪಲ್ಲಕ್ಕಿ ಆಚರಣೆ ತಪ್ಪಲ್ಲ: ಅಡ್ಡಪಲ್ಲಕ್ಕಿ ಮಹೋತ್ಸವದ ಆಚರಣೆ ತಪ್ಪಲ್ಲ. ದೇವರ ಪ್ರತ್ಯಕ್ಷ ರೂಪದಂತಿರುವ ಗುರುಗಳನ್ನು ಆರಾಧಿಸುವುದು ಭಕ್ತರು ದೇವರಿಗೆ ಸಲ್ಲಿಸುವ ಪೂಜೆಯಷ್ಟೇ ಪವಿತ್ರವಾದದ್ದಾಗಿದೆ. ಭಕ್ತರು ದೇವರೆಡೆಗೆ ತಮ್ಮ ವಿಶ್ವಾಸ, ನಂಬಿಕೆಯನ್ನು ಪ್ರದರ್ಶಿಸುವ ಭಾವನೆಯೇ ಅಡ್ಡಪಲ್ಲಕ್ಕಿ ಮಹೋತ್ಸವ ಆಗಿದೆ ಎಂದು ಹೇಳಿದರು.
ಮಾನವನ ಕಲ್ಯಾಣವೇ ವೀರಶೈವ ಧರ್ಮದ ಮೂಲ ಆಶಯವಾಗಿದೆ. ಸಂಸ್ಕಾರದ ಮೂಲಕ ಮಾನವನ ಬದುಕಿನಲ್ಲಿ ಶಾಂತಿ, ಸಮೃದ್ಧಿ ತುಂಬಲು ಸಾಧ್ಯ. ಜನತೆ ನಿಜವಾದ ಮಠ, ಗುರುಗಳನ್ನು ಮಾತ್ರ ನಂಬಬೇಕು. ಎಲ್ಲ ಭಕ್ತರ ನಂಬಿಕೆಗೆ ದ್ರೋಹ ಬಗೆಯುವವರನ್ನು ದೂರವಿಡುವಂತೆ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಲಿಂಗನಗೌಡ ಬಂಡಿ, ಜಂಬಣ್ಣ, ಬಸನಗೌಡ ಪೊಲೀಸ್ ಪಾಟೀಲ್, ಉಮೇಶಗೌಡ, ಡಾ. ವಿರೂಪಾಕ್ಷಿ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

