ಅಂಕಲಿಮಠದಲ್ಲಿ ಯಾತ್ರಿ ನಿವಾಸ ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ, ಮುದಗಲ್, ಜೂ.3
ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಸುಕ್ಷೇತ್ರ ಅಡವೇಶ ನಿರುಪಾದೇಶ್ವರ ಅಂಕಲಿಮಠದಲ್ಲಿ 1 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಯಾತ್ರಿ ನಿವಾಸವನ್ನು ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ನಿರುಪಾಧೀಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಿಸುವ ಮೂಲಕ ನಾಡಿಗೆ ಸಮರ್ಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಅಂಕಲಿಮಠದ ನಿರುಪಾಧೀಶ್ವರರ ಭಕ್ತ. ಈ ಸುಕ್ಷೇತ್ರಕ್ಕೆ ನಾಡಿನ ಲಕ್ಷಾಂತರ ಭಕ್ತರು ಆಗಮಿಸಿ ಪುನೀತರಾಗುವುದು ನನ್ನ ಕ್ಷೇತ್ರದ ಸುದೈವವಾಗಿದೆ. ಜಾತ್ರೆಯಲ್ಲಿ ಆಗಾಗ್ಗೆ ನಡೆಯುವ ಪವಾಡಗಳನ್ನು ಭಕ್ತರು ಮೆಲಕು ಹಾಕಿರುವುದು ಸಂತಸ ತಂದಿದೆ ಎಂದರು.
ಮತ್ತೆ ಶಾಸಕನಾಗಿದ್ದು ಪವಾಡವೇ ಸರಿ: ಕಳೆದ ಜಾತ್ರೆಯಲ್ಲಿ ಶ್ರೀಮಠದ ಪೀಠಾಧಿಪತಿ ಒಡೆಯ ವೀರಭದ್ರ ಸ್ವಾಮೀಜಿ ನನಗೆ ಆಶೀರ್ವಾದ ಮಾಡಿದ್ದರು. ಈಗ ನಾನು ಮತ್ತೆ ಎರಡನೇ ಅವಧಿಗೆ ಶಾಸಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ, ಇದೊಂದು ಪವಾಡವೇ ಸರಿ ಎಂದು ಭಾವಿಸುತ್ತೇನೆಂದು ಹೇಳಿದರು.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಾಭಿವೃದ್ಧಿ ನಿಯಮಿತದಲ್ಲಿ ಪ್ರವಾಸೋದ್ಯಮ ಇಲಾಖೆಯ 2009- 10ನೇ ಸಾಲಿನ ಅನುದಾನದ ಯೋಜನೆಯಲ್ಲಿ 1 ಕೋಟಿ ವೆಚ್ಚದಲ್ಲಿ ನೆಲಮಹಡಿ 5 ಕೊಠಡಿ ಮತ್ತು ಸ್ನಾನದ ಕೋಣೆಗಳು ಮತ್ತು ಸಾಮೂಹಿಕ ಶೌಚಾಲಯ, ಮೊದಲನೇ ಮಹಡಿಯಲ್ಲಿ 12 ಕೊಠಡಿ ಸ್ನಾನ ಮತ್ತು ಶೌಚಾಲಯ ನಿರ್ಮಿಸಲಾಗಿದೆ. ಭಕ್ತರು ಶ್ರೀಮಠದಲ್ಲಿ ವಾಸ್ತವ್ಯ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಭಕ್ತರಿಗೆ ಮೂಲ ಸೌಕರ್ಯ: ಲಿಂಗಸ್ಗೂರು ಮತಕ್ಷೇತ್ರದಲ್ಲಿ ಅಂಕಲಿಮಠ ಸೇರಿದಂತೆ ಸಜ್ಜಲಗುಡ್ಡ, ಅಮರೇಶ್ವರ ಸುಕ್ಷೇತ್ರಗಳಿವೆ. ಇಲ್ಲಿಗೆ ಬಂದು ಲಕ್ಷಾಂತರ ಭಕ್ತರು ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಅವರಿಗೆ ಮೂಲ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಅಮರೇಶ್ವರದಲ್ಲಿ 65 ಲಕ್ಷ ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗುತ್ತಿದೆ. ಉಳಿದ ಸುಕ್ಷೇತ್ರಗಳ ಅಭಿವೃದ್ಧಿಗೆ ಈ ಬಾರಿ ಆದ್ಯತೆ ನೀಡಲಾಗುತ್ತದೆ ಎಂದರು.
ರಸ್ತೆ ಅಭಿವೃದ್ಧಿಗೆ ಆದ್ಯತೆ: ನಾಗಲಾಪೂರ ಕ್ರಾಸ್ದಿಂದ ಸುಕ್ಷೇತ್ರ ಅಂಕಲಿಮಠದವರೆಗೆ ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿಗೆ ಶ್ರೀಗಳು ಹೇಳಿದ್ದಾರೆ. ಈಗಾಗಲೇ ಹಿಂದಿನ ಸರ್ಕಾರದಲ್ಲೇ 2 ಕೋಟಿ ಮೊತ್ತದ ಅಂದಾಜು ಪತ್ರಿಕೆಯನ್ನು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈಗ ಸರ್ಕಾರ ಬದಲಾವಣೆಯಾಗಿದ್ದರೂ ಶಾಸಕನಾಗಿ ಮತ್ತೊಮ್ಮೆ ನಾನೇ ಆಯ್ಕೆಯಾಗಿದ್ದರಿಂದ ಸರ್ಕಾರದ ಮೇಲೆ ಒತ್ತಡ ತಂದು ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆಂದರು.
ವೇದಿಕೆ ಮೇಲೆ ಹುನಗುಂದ ಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಲೆಕ್ಕಿಹಾಳ, ತಾಪಂ ಸದಸ್ಯ ರುದ್ರಗೌಡ, ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲ, ಸದಸ್ಯ ಚೆನ್ನವೀರಪ್ಪಗೌಡ ಪಾಗದ, ನಾಗರಾಳ ವಿಎಸ್ಎಸ್ಎನ್ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮುಖಂಡರಾದ ಲಿಂಗರಾಜ, ಸುರೇಂದ್ರಗೌಡ ಆದಾಪೂರ, ಡಾ. ಅಯ್ಯಪ್ಪ ಬನ್ನಿಗೋಳ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

