ನಗರಸಭೆ 'ದಿನಗೂಲಿ' ಹೋರಾಟಕ್ಕೆ ತೆರೆ
ಕನ್ನಡಪ್ರಭ ವಾರ್ತೆ ರಾಯಚೂರು ಜೂ.8
ಕಳೆದ ಐದು ದಿನಗಳಿಂದ ನಗರಸಭೆಯ ದಿನಗೂಲಿ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿದ್ದ ಧರಣಿಯನ್ನು ಶಾಸಕ ಡಾ. ಶಿವರಾಜ್ ಪಾಟೀಲ್ ಅವರ ಸಂಧಾನದಿಂದ ಹಿಂಪಡೆದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ನಗರಸಭೆಯ ದಿನಗೂಲಿ ನೌಕರರ ಸಂಘದಿಂದ ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಶಾಸಕ ಡಾ. ಶಿವರಾಜ್ ಪಾಟೀಲ್ ಶನಿವಾರ ಭೇಟಿ ನೀಡಿ ಹೋರಾಟಗಾರರೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ಹೋರಾಟ ನಿರತರು ನಗರಸಭೆಯ ದಿನಗೂಲಿ ನೌಕರರ ವೇತನ ಅನಗತ್ಯವಾಗಿ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
9 ತಿಂಗಳಿಂದ ವೇತನ ಬಾಕಿ: ಸಂಘದ ಪ್ರಮುಖ ಅಂಬಣ್ಣ ಅರೋಲಿಕರ್ ಮತ್ತಿತರರು ಮಾತನಾಡಿ, ನಗರಸಭೆಯ ಆಡಳಿತವು ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವತ್ತ ನಿರಾಸಕ್ತಿ ತೋರುತ್ತಿದೆ. ಕಳೆದ 9 ತಿಂಗಳಿನಿಂದ ದಿನಗೂಲಿ ನೌಕರರ ವೇತನ ಬಾಕಿ ಉಳಿಸಿಕೊಳ್ಳಲಾಗಿದ್ದು, ಅದರಿಂದ ನಗರಸಭೆಯ ದಿನಗೂಲಿ ಕಾರ್ಮಿಕರ ಕುಟುಂಬ ವರ್ಗದವರು ಆರ್ಥಿಕ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆಂದು ಆರೋಪಿಸಿದರು.
ಅದೇ ರೀತಿ ದಿನಗೂಲಿ ನೌಕರರ ವೆಂಕಟೇಶ್ ಈಚೆಗೆ ನೀರಿನ ನಿರ್ವಹಣೆಯ ಕೆಲಸಕ್ಕಾಗಿ ನಿಯೋಜನೆಗೊಂಡಿದ್ದು ಕರ್ತವ್ಯದಲ್ಲಿದ್ದಾಗಲೇ ಮೃತರಾಗಿದ್ದಾರೆ. ಅವರಿಗೆ ಪರಿಹಾರ ನೀಡುವಂತೆ ಕೋರಿ ಒಂದು ತಿಂಗಳ ಹಿಂದೆಯೇ ಹೋರಾಟ ನಡೆಸಲಾಗಿತ್ತು. ಆದರೆ ಆಗ ಜಿಲ್ಲಾಡಳಿತ ಕಾಲಾವಕಾಶ ಕೇಳಿತ್ತು. ಆದರೆ ಆ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟಕ್ಕಿಳಿದಿರುವುದಾಗಿ ಶಾಸಕರಿಗೆ ತಿಳಿಸಿದರು.
ವೇತನ ಪಾವತಿಗೆ ಯತ್ನ ಆರಂಭ: ಈ ವೇಳೆ ಮಾತನಾಡಿದ ಶಾಸಕ ಡಾ. ಶಿವರಾಜ್ ಪಾಟೀಲ್, ನಗರದಲ್ಲಿ ಸ್ವಚ್ಛತೆ ಕಾಪಾಡುವ ತುರ್ತು ಅಗತ್ಯ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯುವಂತೆ ಮನವಿ ಮಾಡಿ, ನಗರಸಭೆಯ ದಿನಗೂಲಿ ನೌಕರರಿಗೆ ಬಾಕಿ ವೇತನ ಪಾವತಿಗೆ ಈಗಾಗಲೇ ಪ್ರಯತ್ನ ಆರಂಭಿಸಲಾಗಿದೆ ಎಂದು ಹೇಳಿದರು.
ಬಾಕಿಯಿರುವ 9 ತಿಂಗಳ ವೇತನವನ್ನು ಪಾವತಿಸಲು ಜಿಲ್ಲಾಡಳಿತ ಹಾಗೂ ಪೌರಾಯುಕ್ತರ ಜತೆ ಚರ್ಚಿಸಿದ್ದು ಆಡಳಿತ ಅದಕ್ಕೆ ಸಮ್ಮತಿಸಿದೆ ಎಂದು ತಿಳಿಸಿದ ಅವರು, ನಗರಸಭೆಯ ದಿನಗೂಲಿ ನೌಕರ ದಿ. ವೆಂಕಟೇಶ್ ಅವರ ಕುಟುಂಬದವರಿಗೆ ಪರಿಹಾರ ನೀಡಿಕೆಗೆ ಸಂಬಂಧಿಸಿ ಜೂ. 4ರಂದು ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
ಪರಿಹಾರ- ಪೌರಾಡಳಿತ ನಿರ್ದೇಶನಾಲಯಕ್ಕೆ ಸೂಚನೆ: ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳನ್ನು ಜೂ.7ರಂದು ತಾವೂ ಭೇಟಿ ಮಾಡಿ ಮೃತನ ಕುಟುಂಬದವರಿಗೆ 5 ಲಕ್ಷ ಪರಿಹಾರ ನೀಡಿಕೆಗೆ ಸಂಬಂಧಿಸಿ ಚರ್ಚಿಸಿದ್ದು, ಪೌರಾಡಳಿತ ನಿರ್ದೇಶನಾಲಯಕ್ಕೆ ಈ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರ ಪರಿಹಾರ ದೊರಕಿಸಿಕೊಡುವ ಭರವಸೆಯನ್ನು ಶಾಸಕರು ನೀಡಿದರು.
ಧರಣಿ ಹಿಂದಕ್ಕೆ: ಈ ವೇಳೆ ಶಾಸಕ ಡಾ. ಶಿವರಾಜ್ ಪಾಟೀಲ್ ಅವರು, ನಗರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದಿನಗೂಲಿ ನೌಕರರು ಹೋರಾಟ ಕೈಬಿಡುವಂತೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಹೋರಾಟಗಾರರು ಧರಣಿ ಹಿಂಪಡೆದರು.
ಈ ಸಂದರ್ಭದಲ್ಲಿ ನಗರಸಭೆಯ ದಿನಗೂಲಿ ನೌಕರರ ಸಂಘದ ಪ್ರಮುಖರಾದ ಜೆ.ಬಿ. ರಾಜು, ರವೀಂದ್ರ ಜಲ್ದಾರ್, ಅಮರೇಶ್, ಜರ್ನಾದನ ಹಳ್ಳಿಹೆಂಚಿ, ಕೆ.ಪಿ. ಅನಿಲ್ ಕುಮಾರ್ ಸೇರಿದಂತೆ ಅನೇಕ ದಿನಗೂಲಿ ನೌಕರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

