22ರಿಂದ ಮುಂಗಾರು ಸಾಂಸ್ಕೃತಿಕ ಹಬ್ಬ
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.11
ರಾಯಚೂರು ನಗರ ಪ್ರತಿ ವರ್ಷದಂತೆ ಬಹುದೊಡ್ಡ ಸಂಭ್ರಮಾಚರಣೆಗೆ ಸಜ್ಜಾಗುತ್ತಿದೆ. ಮುಂಗಾರು ಮಳೆ ಹಾಗೂ ಕಾರಹುಣ್ಣಿಮೆ ಆಗಮನದೊಂದಿಗೆ ಮುನ್ನೂರು ಕಾಪು ಸಮಾಜದಿಂದ ಆಯೋಜಿಸುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಎಲ್ಲ ಅಗತ್ಯ ಸಿದ್ಧತೆಗಳು ಜಾರಿಯಲ್ಲಿದ್ದು ಜೂ.22, 23 ಮತ್ತು 24ರಂದು ನಗರದಲ್ಲಿ ಸಂಭ್ರಮಾಚರಣೆ ನಡೆಯಲಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ರೂವಾರಿ ಹಾಗೂ ಮಾಜಿ ಶಾಸಕ ಪಾಪಾರೆಡ್ಡಿ ಈ ವಿಷಯ ತಿಳಿಸಿದರು.
ಸಚಿವೆ ಉಮಾಶ್ರೀ ಚಾಲನೆ: ಪ್ರತಿ ವರ್ಷದಂತೆ ಈ ವರ್ಷವೂ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮುನ್ನೂರು ಕಾಪು ಸಮಾಜದ ಪ್ರಮುಖರು ನಿರ್ಧರಿಸಿದ್ದಾರೆ. ಹಬ್ಬದ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಸಚಿವರಾದ ಕೃಷ್ಣ ಭೈರೇಗೌಡ, ಸತೀಶ್ ಜಾರಕಿಹೊಳಿ, ಡಾ. ಶರಣಪ್ರಕಾಶ್ ಪಾಟೀಲ್, ಆಂಧ್ರದ ಸಚಿವೆ ಡಿ.ಕೆ. ಅರುಣಾ ಅವರು ಈ ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜೂ. 22ರಂದು ಕರ್ನಾಟಕದ ಎತ್ತುಗಳಿಗೆ ಒಂದೂವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.
ಎತ್ತುಗಳ ಕಲ್ಲು ಎಳೆಯುವ ಸ್ಪರ್ಧೆ: ಜೂ.23ರಂದು ಅಖಿಲ ಭಾರತ ಮಟ್ಟದ ಎತ್ತುಗಳಿಗೆ 2 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ಮತ್ತು ಜೂ. 24ರಂದು ಎರಡೂವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ಅಖಿಲ ಭಾರತ ಮಟ್ಟದ ಎತ್ತುಗಳಿಗೆ ಆಯೋಜಿಸಲಾಗಿದೆ ಎಂದು ತಿಳಿಸಿದ ಅವರು, ಒಂದೂವರೆ ಟನ್ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನವಾಗಿ 45 ಸಾವಿರ, ದ್ವಿತೀಯ ಬಹುಮಾನ 35 ಸಾವಿರ, ತೃತೀಯ ಬಹುಮಾನ 25 ಸಾವಿರ ನೀಡಲಾಗುತ್ತದೆ ಎಂದು ತಿಳಿಸಿದರು.
ಅದೇ ರೀತಿ ಎರಡು ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ 60 ಸಾವಿರ, ದ್ವಿತೀಯ ಬಹುಮಾನ 45 ಸಾವಿರ, ತೃತೀಯ ಬಹುಮಾನ 35 ಸಾವಿರ, ಹಾಗೂ ಎರಡೂವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ 70 ಸಾವಿರ, ದ್ವಿತೀಯ ಬಹುಮಾನ 55 ಸಾವಿರ, ತೃತೀಯ ಬಹುಮಾನ 45 ಸಾವಿರ ನೀಡಲಾಗುತ್ತದೆ ಎಂದು ತಿಳಿಸಿದರು.
ಪ್ರೋತ್ಸಾಹಧನ: ರಾಯಚೂರು ನಗರ ಹೊರತುಪಡಿಸಿ ಇನ್ನುಳಿದ ಪ್ರದೇಶದಿಂದ ಆಗಮಿಸುವ ಎತ್ತಿನ ಜೋಡಿಗೆ ತಲಾ 4 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ. ಜೂ. 23ರಂದು ಮುನ್ನೂರು ಕಾಪು ಸಮಾಜದ ಮಾತೆ ಶ್ರೀಲಕ್ಷ್ಮಮ್ಮ ದೇವಿಯ ಅದ್ಧೂರಿ ಬೆಳ್ಳಿರಥದಲ್ಲಿ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಹೊರರಾಜ್ಯದ 8 ಕಲಾ ತಂಡಗಳು ಹಾಗೂ ಸ್ಥಳೀಯ ಕಲಾವಿದರ ತಂಡಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಜೂ.24ರಂದು ನಗರದ ರಾಜೇಂದ್ರ ಗಂಜ್ನಲ್ಲಿ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಿದ್ದು, ದೆಹಲಿ, ಪಂಜಾಬ್, ಆಂಧ್ರ ಮತ್ತು ರಾಜ್ಯದ ವಿವಿಧೆಡೆಯ ಪುರುಷ ಹಾಗೂ ಮಹಿಳಾ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಶ್ರೀಲಕ್ಷ್ಮಮ್ಮ ದೇವಸ್ಥಾನದ ಆವರಣದಲ್ಲಿ ಕಲ್ಲು ಗುಂಡು, ಉಸುಕಿನ ಚೀಲ ಎತ್ತುವ ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮ: ನಗರದ ರಾಜೇಂದ್ರ ಗಂಜ್ನಲ್ಲಿ ಕಲ್ಲು ಎಳೆಯುವ ಸ್ಪರ್ಧೆಗಳು ನಡೆಯಲಿದ್ದು, ಮಹಿಳಾ ಸಮಾಜದಲ್ಲಿ ದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಣಿಪುರ, ರಾಜಸ್ಥಾನ್, ಮಹಾರಾಷ್ಟ್ರ, ಪಂಜಾಬ್, ಗುಜರಾತ್ ಹಾಗೂ ಕರ್ನಾಟಕದ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆಂದು ಹೇಳಿದರು.
ಮುಂದಿನ ಪೀಳಿಗೆಗೆ ಗ್ರಾಮೀಣ ಭಾಗದ ಕಲೆ, ಸಂಸ್ಕೃತಿ, ಬದುಕಿನ ಪರಿಚಯ ಮಾಡಿಕೊಡುವ ಕಾರ್ಯವನ್ನು ಮುನ್ನೂರು ಕಾಪು ಸಮಾಜ ಮಾಡುತ್ತಿದೆ. ರಾಯಚೂರು ಹಬ್ಬಕ್ಕಾಗಿ ಸ್ಥಳೀಯ ನಗರಸಭೆ 3 ಲಕ್ಷ, ಎಪಿಎಂಸಿ 5 ಲಕ್ಷ, ಹಟ್ಟಿಚಿನ್ನದ ಗಣಿ 2 ಲಕ್ಷ, ಕೆಪಿಸಿ 1 ಲಕ್ಷ ನೀಡಲು ಮುಂದಾಗಿವೆ ಎಂದು ಹೇಳಿದರು.
ಈ ವೇಳೆ ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಪ್ರಮುಖರಾದ ಬಸವರಾಜ ರೆಡ್ಡಿ, ರಾಳ್ಳ ತಿಮ್ಮಾರೆಡ್ಡಿ, ಲಾಲಪ್ಪ, ಪುಂಡ್ಲ ನರಸರೆಡ್ಡಿ, ದೊಡ್ಡಮಲ್ಲೇಶ, ಶೇಖರರೆಡ್ಡಿ, ವೆಂಕಟರೆಡ್ಡಿ, ಬಂಗಿ ನರಸರೆಡ್ಡಿ, ಶ್ರೀನಿವಾಸರೆಡ್ಡಿ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

