ವಿಧಾನಸಭೆಗೆ ಕೇಳದು ಹಸಿವಿನ ಕೂಗು
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.13
ಹಸಿದವರ, ಬಡವರ ಕೂಗು ವಿಧಾನಸಭೆವರೆಗೆ ಕೇಳುತ್ತಿಲ್ಲ. ಕೆಳವರ್ಗದವರ ಅಭಿಪ್ರಾಯ ಮುಂದೊಂದು ದಿನ ಅಧಿಕಾರ ಮೊಟಕುಗೊಳಿಸುವ ಭೀತಿ ರಾಜಕಾರಣಗಳಿಗಿಲ್ಲ. ಜಾತಿ- ಮತಗಳಿಂದ ಹರಿದು ಹಂಚಿ ಹೋಗಿರುವ ದೇಶ ಶಾಪಗ್ರಸ್ತವಾಗಿದೆ. ಶಾಪ ವಿಮೋಚನೆಯಾಗದೇ ಪ್ರಗತಿ ಅಸಾಧ್ಯ ಎಂದು ಸಾಹಿತಿ, ಪದ್ಮಶ್ರೀ ಪುರಸ್ಕೃತ ದೇವನೂರು ಮಹಾದೇವ ಅಭಿಪ್ರಾಯಪಟ್ಟರು.
ನಗರದ ರಂಗಮಂದಿರದಲ್ಲಿ ಗುರುವಾರ ಲಿಂ. ಚೆನ್ನಬಸವಪ್ಪ ಬೆಟ್ಟದೂರು ಅವರು ಐದನೇ ಪುಣ್ಯಸ್ಮರಣೆ, ಖ್ಯಾತ ಬರೆಹಗಾರರಿಗೆ ಪ್ರಶಸ್ತಿ ಪ್ರದಾನ ಮತ್ತು ನೂತನ ಶಾಸಕರಿಗೆ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ರಾಜಕೀಯ ವ್ಯವಸ್ಥೆ ಮಲೀನವಾಗಿದೆ. ನೈಸರ್ಗಿಕ ಸಂಪತ್ತು ಲೂಟಿ ಹೊಡೆದವರು ಮತದಾರರನ್ನು ಖರೀದಿಸುವ ಹುನ್ನಾರ ಮಾಡಿದ್ದಾರೆ. ಮತ ಗಳಿಕೆ ಭರದಲ್ಲಿ ಗಣತಂತ್ರ ವ್ಯವಸ್ಥೆಗೆ ಧಕ್ಕೆ ತರುವ ಕಾರ್ಯ ರಾಜಕೀಯ ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದ ಆಡಳಿತ ಪ್ರಧಾನಿ ಕೈಯಲ್ಲಿಲ್ಲ: ದೇಶದ ಆಡಳಿತ ಪ್ರಧಾನಿ ಕೈಯಲ್ಲಿಲ್ಲ. ದೇಶದ ಆರ್ಥಿಕ ನೀತಿಯನ್ನು ನಮಗೆ ಸಾಲ ನೀಡುವ ವಿಶ್ವ ಬ್ಯಾಂಕ್ ರೂಪಿಸುತ್ತಿದೆ. ವಿದೇಶಿಯರು ನಮ್ಮ ದೇಶವನ್ನು ನಿಯಂತ್ರಿಸುತ್ತಿದ್ದಾರೆ. ನಮ್ಮವರೇ ಸಚಿವರಾಗಿ ಆಯ್ಕೆಯಾದರೂ ವಿದೇಶಿ ಹಣಕಾಸು ಸಂಸ್ಥೆಗಳ ತಾಳಕ್ಕೆ ಅವರು ಕುಣಿಯುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಾಗತೀಕರಣದ ಸವಾಲುಗಳು ಹಳ್ಳಿಗರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಪ್ರಗತಿಯ ನೆಪದಲ್ಲಿ ಗ್ರಾಮೀಣರ ಬದುಕು ವಿನಾಶಗೊಳಿಸುವ ಕುತಂತ್ರ ನಡೆದಿದೆ. ವಂಚನೆ, ನಿರ್ಲಜ್ಜ ಆಡಳಿತ ವ್ಯವಸ್ಥೆಯಿಂದ ಸಮಾನತೆ, ಸದ್ಭಾವನೆಯ ಕನಸು ಜನರಿಂದಲೇ ದೂರವಾಗುವ ದಿನಗಳು ಎದುರಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಹಿತ್ಯ ನೊಂದ ಮನಗಳಿಗೆ ಚೈತನ್ಯ ತುಂಬಲಿ: ಬೆಟ್ಟದೂರು ಪ್ರತಿಷ್ಠಾನ ನೀಡಿದ ಬರಹಗಾರರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಮಲ್ಲಿಕಾ ಘಂಟಿ, ಬದುಕಿನ ಗತಿ ಬದಲಿಸುವ ಬರೆಹ ಇಂದು ಅವಶ್ಯ. ದುಡಿಯುವ ವರ್ಗದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಇಂದಾಗಬೇಕಿದೆ. ಸಂಕಟಮಯ ಬದುಕಿನೊಳಗೆ ಚೈತನ್ಯ ತುಂಬುವ ಕಾರ್ಯವನ್ನು ಸಾಹಿತ್ಯ ಮಾಡಬೇಕಿದೆ ಎಂದು ಸಲಹೆ ನೀಡಿದರು.
ರೈತ ಮುಖಂಡ ಹಾಗೂ ಮೇಲುಕೋಟೆ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿ, ಸರ್ಕಾರಿ ನೌಕರರಿಗೆ ವೇತನ ಆಯೋಗ ರಚಿಸಲಾಗುತ್ತದೆ. ಆದರೆ ದೇಶಕ್ಕೆ ಅನ್ನ ನೀಡುವ ರೈತರಿಗೆ ವೇತನ ನೀಡುವ ಕೃಷಿ ವೇತನ ಆಯೋಗ ರಚನೆ ಆಗುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ರೈತ ವಿರೋಧಿ ನೀತಿ: ದೇಶದಲ್ಲಿ ಆಳುವವರ ರೈತ ವಿರೋಧಿ ನೀತಿಗಳಿಂದಾಗಿ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದರೂ ಅದರ ಬಗ್ಗೆ ಸಂಸತ್ನಲ್ಲಿ ಚರ್ಚೆಯಾಗುತ್ತಿಲ್ಲ. 1857ರಿಂದ ಕಾವೇರಿ ವಿವಾದ ಜಾರಿಯಲ್ಲಿದೆ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕಾರ್ಯವನ್ನು ರಾಜಕೀಯ ನಾಯಕರು ಮಾಡಿಲ್ಲ. 77 ಟಿಎಂಸಿ ನೀರು ಕಾವೇರಿ ಯೋಜನೆ ಮತ್ತು ಕೃಷ್ಣ ಕೊಳ್ಳದಲ್ಲಿನ 147 ಟಿಎಂಸಿ ನೀರು ಬಳಕೆ ಮಾಡಿಕೊಳ್ಳುವಲ್ಲಿ ನಾವಿನ್ನೂ ಅಸಮರ್ಥರಾಗಿದ್ದೇವೆಂದು ಕಳವಳ ವ್ಯಕ್ತಪಡಿಸಿದರು.
ರೈತರ ಗೋಳು ಕೇಳೋರಿಲ್ಲ: ಪ್ರಕೃತಿ ಮುನಿಸಿನ ಮಧ್ಯೆಯೂ ಕಾನೂನು ನೆರವಿನ ಮೂಲಕ ನೆರೆ ಹೊರೆಯ ರಾಜ್ಯಗಳೊಂದಿಗೆ ಪರಸ್ಪರ ಕಚ್ಚಾಟದಲ್ಲಿ ತೊಡಗುವಂಥ ಪರಿಸ್ಥಿತಿ ನಿರ್ಮಾಣವಾಗಲು ರಾಜಕೀಯ ಅವ್ಯವಸ್ಥೆಯೇ ಕಾರಣ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿಯಿದೆ. ದುಡಿಯುವ ವರ್ಗ ಗುಳೆ ಹೊರಟರೂ ಆಡಳಿತಗಾರರ ಕಳಕಳಿ ಎದ್ದು ಕಾಣುತ್ತಿಲ್ಲ. ದೇಶದ ಆಹಾರ ಸಮಸ್ಯೆ ನಿವಾರಿಸುವಲ್ಲಿ ಸತತ ದುಡಿಯುವ ರೈತರ ಗೋಳು ಕೇಳುವವರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮ ಸ್ವರಾಜ್ ಬಗ್ಗೆ ಮಾತನಾಡುವ ಆಡಳಿತಗಾರರು ಪ್ರತಿ ಗ್ರಾಪಂ.ಗೆ 1.50 ಕೋಟಿ ಅನುದಾನ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಾರೆ. ಅದರಿಂದ ಗ್ರಾಮೀಣ ಭಾಗದ ಪ್ರಗತಿ ಸ್ಥಗಿತಗೊಂಡಿದೆ. ರೈತರ ಬದುಕಿನೊಂದಿಗೆ ರಾಜಕೀಯ ನಾಯಕರು ಚೆಲ್ಲಾಟವಾಡುತ್ತಿದ್ದಾರೆ. ಕೃಷಿ ನೀತಿ ಪ್ರಕಟಿಸುವ ಆಶ್ವಾಸನೆ ನೀಡಲಾಗುತ್ತದೆ. ಆದರೆ ಇದುವರೆಗೆ ಅದು ಸಾಧ್ಯವಾಗಿಲ್ಲ ಎಂದು ಅವರು ಆರೋಪಿಸಿದರು.
ಪ್ರಶಸ್ತಿ ಪ್ರದಾನ: ಈ ಸಂದರ್ಭ ಬೆಟ್ಟದೂರು ಪ್ರತಿಷ್ಠಾನದಿಂದ ಅಬ್ಬಾಸ್ ಅಲಿ ಮೇಲಿನಮನಿ ಅವರಿಗೆ ಬರಹಗಾರರ ಪ್ರಶಸ್ತಿ ಹಾಗೂ ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಮತ್ತು ಶಾಸಕ ಪುಟ್ಟಣ್ಣಯ್ಯ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಎಚ್.ಎಸ್. ಪಾಟೀಲ್ ವಹಿಸಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಬಿ.ನಾಗೇಂದ್ರ, ಅಮರಣ್ಣ ಗುಡಿಹಾಳ, ಲಕ್ಷ್ಮಣಗೌಡ ಕಡಗಂದೊಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ರಾಜ್ಯ ರೈತ ಸಂಘದ ನೂರಾರು ಕಾರ್ಯಕರ್ತರು ಸಮಾರಂಭದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

