ರಾಯಚೂರು

ಸಮ್ಮೇಳನಕ್ಕೆ ಐತಿಹಾಸಿಕ ಆಹ್ವಾನ!

Published On :

ಕ.ಪ್ರ. ವಾರ್ತೆ, ರಾಯಚೂರು, ಜೂ.14
'ಕನ್ನಡ ನುಡಿ ಜಾತ್ರೆ' ಕನ್ನಡ ಸಾಹಿತ್ಯ ಸಮ್ಮೇಳನಗಳೆಂದರೆ ಅಲ್ಲಿ ಕನ್ನಡದ್ದೇ ಮಾತು, ಚರ್ಚೆ. ಸಹಜವಾಗಿಯೇ ಅಲ್ಲಿ ಕನ್ನಡ ಪುಸ್ತಕಗಳ ಮಾರಾಟ, ಪ್ರದರ್ಶನ. ಜತೆಗೊಂದಿಷ್ಟು ಕನ್ನಡ ನಾಡಿನ ಇತಿಹಾಸ ಸಾರುವ ಕಲಾ ಪ್ರದರ್ಶನವೂ ಕಾಣಸಿಗುತ್ತದೆ. ಅದರಂತೆ ನಗರದಲ್ಲಿ ಶನಿವಾರದಿಂದ ನಡೆಯುವ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲವೂ ಇದೆ. ಅಷ್ಟೇ ಅಲ್ಲ, ಸಮ್ಮೇಳನದ ಆಹ್ವಾನ ಪತ್ರಿಕೆಯೇ ವಿಶಿಷ್ಟ ಹಾಗೂ ಜಿಲ್ಲೆಯ ಮಟ್ಟಿಗೆ ವಿನೂತನವೂ ಹೌದು.
ಸಾಹಿತ್ಯ ಸಮ್ಮೇಳನಗಳ ಆಹ್ವಾನ ಪತ್ರಿಕೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರಗಳು, ಸಮ್ಮೇಳನಾಧ್ಯಕ್ಷರ,ಅತಿಥಿವರೇಣ್ಯರ ವಿವರಗಳು ತೀರಾ ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ರಾಯಚೂರು ತಾಲೂಕು ಸಮ್ಮೇಳನದ ಆಹ್ವಾನ ಪತ್ರಿಕೆಯು ತಾಲೂಕಿನ ವೈಶಿಷ್ಟ್ಯಗಳನ್ನು ಪರಿಚಯಿಸುವ ಕಾರ್ಯ ಮಾಡಿದೆ.
ಐತಿಹಾಸಿಕ ತಾಣಗಳು: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹತ್ತಾರು ರೀತಿಯ ಅವಕಾಶಗಳಿವೆ. ಆದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಅದು ಸಾಧ್ಯವಾಗಿಲ್ಲ. ಇತಿಹಾಸದ ಅನೇಕ ಕುರುಹುಗಳು ಜಿಲ್ಲೆಯ ವಿವಿಧೆಡೆ ಮತ್ತು ರಾಯಚೂರು ನಗರ, ತಾಲೂಕಿನಲ್ಲಿ ಅಡಕವಾಗಿದ್ದರೂ ಹೊರ ಜಗತ್ತಿಗೆ ಅವುಗಳ ಪರಿಚಯ ಕಡಿಮೆ.
ರಾಯಚೂರು ಎಂದಾಕ್ಷಣ ಹೊರ ಜಗತ್ತಿಗೆ ಇಲ್ಲಿನ 'ಬಿಸಿಲು, ಬಿರುಬಿಸಿಲು, ಬರೀ ಬಿಸಿಲು ಮಾತ್ರ' ಎಂದಷ್ಟೇ ನೆನಪು. ಜಿಲ್ಲೆಗೆ ಆಗಮಿಸುವವರು ಈ ವಿಷಯ ತಿಳಿದೇ ಬೆವರುವುದೂ ಇದೆ. ಆದರೆ ಜಿಲ್ಲೆಗೆ ಅದರದ್ದೇ ಆದ ಸಾಂಸ್ಕೃತಿಕ ಪರಂಪರೆ, ಭವ್ಯ ಇತಿಹಾಸವಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲದಿರಬಹುದು. ಅಂಥವರೂ ಸೇರಿದಂತೆ ಎಲ್ಲರಿಗೂ ಅಚ್ಚುಮೆಚ್ಚು ಎನಿಸುವಂಥ ಐತಿಹಾಸಿಕ ತಾಣಗಳ ಭಾವಚಿತ್ರಗಳನ್ನೇ ಬಳಸಿಕೊಂಡು ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ರೂಪಿಸಲಾಗಿದೆ.
ತಾಲೂಕಿನ ಹೆಮ್ಮೆಯ ಐತಿಹಾಸಿಕ ಕುರುಹುಗಳಾದ ಮಲಿಯಾಬಾದ್‌ನ ಕಲ್ಲಾನೆಗಳು, ಐತಿಹಾಸಿಕ ಕೋಟೆ ಪ್ರದೇಶ, ಏಕ್ ಮಿನಾರ್, ಗುಬ್ಬೇರ ಬೆಟ್ಟ ಹಾಗೂ ರಾಜ್ಯಕ್ಕೆ ವಿದ್ಯುತ್ ಒದಗಿಸುವ ಶಕ್ತಿನಗರದ ಆರ್‌ಟಿಪಿಎಸ್ ವಿದ್ಯುತ್ ಘಟಕಗಳು ಸೇರಿದಂತೆ ಅನೇಕ ಪ್ರಮುಖ ತಾಣಗಳು ಗಮನ ಸೆಳೆಯುತ್ತವೆ.
ಗಮನ ಸೆಳೆಯುವ ಆಹ್ವಾನ ಪತ್ರಿಕೆ: ತಾಲೂಕಿನ ಇಂಥ ಪ್ರಮುಖ ಐತಿಹಾಸಿಕ ಸ್ಮಾರಕಗಳ ಭಾವಚಿತ್ರಗಳನ್ನು ಆಹ್ವಾನ ಪತ್ರಿಕೆಯಲ್ಲಿ ಬಳಸಲಾಗಿದೆ. ಆಹ್ವಾನ ಪತ್ರಿಕೆಯ ಮುಖಪುಟದಲ್ಲಿ ರಾಜ್ಯಕ್ಕೆ ವಿದ್ಯುತ್ ಒದಗಿಸುವ ಆರ್‌ಟಿಪಿಎಸ್, ಕಡೆಯ ಪುಟದಲ್ಲಿ ಮಲಿಯಾಬಾದ್‌ನ ಕಲ್ಲಾನೆಗಳ ಚಿತ್ರ ಗಮನ ಸೆಳೆಯುತ್ತವೆ.
ಒಳಪುಟಗಳಲ್ಲಿರುವ ನವರಂಗ್ ದರ್ವಾಜಾ, ರಾಯಚೂರು ಕೃಷಿ ವಿವಿ, ಏಕ್ ಮಿನಾರ್, ಗುಬ್ಬೇರ್ ಬೆಟ್ಟ, ರಿಮ್ಸ್ ವೈದ್ಯಕೀಯ ಕಾಲೇಜು, ಜಿಲ್ಲಾಧಿಕಾರಿ ಕಚೇರಿ ಪುರಾತನ ಕಟ್ಟಡಗಳ ಹಾಗೂ ಸ್ಮಾರಕಗಳ ಭಾವಚಿತ್ರ ಬಳಸಿದ್ದು ಆಕರ್ಷಕವಾಗಿ ಮೂಡಿಬಂದಿದೆ. ಸ್ಮಾರಕಗಳ ಭಾವಚಿತ್ರದ ಮೇಲ್ಭಾಗದಲ್ಲಿಯೇ ಸಮ್ಮೇಳನದಲ್ಲಿ ನಡೆಯುವ ಕಾರ್ಯಕ್ರಮಗಳ ಸಮಗ್ರ ಮಾಹಿತಿಯಿರುವ ಆಹ್ವಾನ ಪತ್ರಿಕೆಯು, ಸಮ್ಮೇಳನಕ್ಕೆ ಆಗಮಿಸುವವರಿಗೆ ಕಾರ್ಯಕ್ರಮಗಳ ಜತೆ ಜತೆಗೆ ನಗರ ಮತ್ತು ತಾಲೂಕಿನ ಐತಿಹಾಸಿಕ ತಾಣಗಳ ಪರಿಚಯ ಮಾಡಿಕೊಡುತ್ತದೆ.
ಸಲಹೆ, ಸಹಕಾರ: ಸಾಮಾನ್ಯವಾಗಿ ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಆಯಾ ಪ್ರದೇಶದ ಪ್ರಮುಖ ಕುರುಹುಗಳ ಭಾವಚಿತ್ರ ಬಳಸಿ ಆಹ್ವಾನ ಪತ್ರಿಕೆ ಸಿದ್ಧಪಡಿಸುವುದು ಕಾಣುತ್ತೇವೆ. ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಅದೇ ಮಾದರಿಯ ಆಹ್ವಾನ ಪತ್ರಿಕೆ ಸಿದ್ಧಗೊಂಡು ಎಲ್ಲರ ಗಮನ ಸೆಳೆದಿದೆ.
ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ತಾಲೂಕು ಕಸಾಪ ಅಧ್ಯಕ್ಷ ಚಿದಾನಂದ ಸಾಲಿ ಅವರು, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಎಲ್ಲರ ನೆರವು, ಸಹಾಯ, ಸಹಕಾರ ದೊರೆತಿದೆ. ಜತೆಗೆ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಸಾಹಿತಿಗಳೆಲ್ಲರೂ ಆಹ್ವಾನ ಪತ್ರಿಕೆ ತಯಾರಿಕೆಯಲ್ಲಿ ಸಲಹೆ, ಸಹಕಾರ ನೀಡಿದ್ದಾರೆ. ಅದರಿಂದಲೇ ಇಂಥ ಆಹ್ವಾನ ಪತ್ರಿಕೆ ಸಿದ್ಧಗೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ನಗರದ ರಂಗಮಂದಿರದಲ್ಲಿ ಜೂ.15ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಆಂಧ್ರದ ಜತೆ ಗಡಿ ಹಂಚಿಕೊಂಡಿರುವ ರಾಯಚೂರು ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ ಸಿದ್ಧವಾಗಿದೆ. ದಿನವಿಡೀ ಸಾಹಿತ್ಯಿಕ ಚಟುವಟಿಕೆಗಳು ನಡೆಯಲಿವೆ.
-ಜಗನ್ನಾಥ ಆರ್. ದೇಸಾಯಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.