ವಿಶೇಷ ಸ್ಥಾನಮಾನ ವಿಳಂಬ ಶಾಪವಾಗದಿರಲಿ
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.15
ಹೈದರಾಬಾದ್ ಕರ್ನಾಟಕ ಭಾಗಕ್ಕೆ 371(ಜೆ)ನೇ ಕಲಂ ಅಡಿ ವಿಶೇಷ ಸ್ಥಾನಮಾನ ನೀಡಿದ್ದರೂ ಅನುಷ್ಠಾನದ ವಿಳಂಬ ಜನತೆಗೆ ಶಾಪವಾಗದಿರಲಿ ಎಂಬ ಎಚ್ಚರಿಕೆ. ಬರಗಾಲದ ತವರು ರಾಯಚೂರಿಗೆ ಎರಡೂ ನದಿಗಳ ನೀರಿನ ಸಮರ್ಪಕ ಪೂರೈಕೆಗೆ ನೀರಿನ ನಿರ್ವಹಣೆ ಹೊಣೆ ನಿಭಾವಣೆಗೆ ಮನವಿ. ಪರಿಸರ ಸಂರಕ್ಷಣೆಯ ಬಗ್ಗೆಯ ಕಳಕಳಿಯ ಅವಶ್ಯಕತೆ. ಒಪೆಕ್ ಆಸ್ಪತ್ರೆ ಪುನಾರಂಭದೊಂದಿಗೆ ಜನಾರೋಗ್ಯ ಕಾಪಾಡಲು ಸರ್ಕಾರಕ್ಕೆ ಆಗ್ರಹ.
- ರಾಯಚೂರು ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಭಗತರಾಜ್ ನಿಜಾಮಕಾರಿ ಅವರ ನುಡಿಯ ಪ್ರಮುಖಾಂಶಗಳು.
ನಗರದಲ್ಲಿ ಶನಿವಾರ ನಡೆದ ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ನೀಡಿಕೆ ಮೂಲಕ ಅಸಮಾನತೆ ನಿವಾರಣೆಗೆ ಒಪ್ಪಿದೆ. ಆದರೆ ಸ್ಥಾನಮಾನ ಜಾರಿ ನಿಟ್ಟಿನಲ್ಲಿ ಕಾನೂನು ರೂಪಿಸುವಲ್ಲಿ ವಿಳಂಬವಾಗುತ್ತಿದೆ. ಅದರಿಂದ ಮೂಲ ಆಶಯಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸ್ಥಳೀಯರೆಂದರೆ ಯಾರು?- ಕಗ್ಗಂಟು: ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಕರಡು ಪ್ರತಿಯಲ್ಲಿನ ಅಂಶಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಉದ್ಯೋಗ, ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ವೇಳೆ ಸ್ಥಳೀಯರಿಗೆ ಆದ್ಯತೆಯ ಅವಕಾಶ ಕಲ್ಪಿಸಿದೆ. ಆದರೆ ಸ್ಥಳೀಯರು ಎಂದರೆ ಯಾರೆಂಬುದು ಸದ್ಯಕ್ಕೆ ಕಗ್ಗಂಟಾಗಿದೆ ಎಂದ ಅವರು, ಸ್ಥಳೀಯರೆಂದರೆ 19.9.1948ರ ಮೊದಲಿನಿಂದಲೂ ಈ ಪ್ರದೇಶದಲ್ಲಿ ವಾಸಿಸಿದವರನ್ನು ಪರಿಗಣಿಸಬಹುದೆಂದು ಹೇಳಿದರು.
ಸರ್ಕಾರಿ ಸೇವೆ ಮೇಲೆ ದೇಶದ ವಿವಿಧೆಡೆಯಿಂದ ಈ ಭಾಗದಲ್ಲಿ ಬಂದು 1980ಕ್ಕೂ ಪೂರ್ವದಲ್ಲಿ ನೆಲೆಸಿದವರನ್ನು ಹಾಗೂ 50 ವರ್ಷಗಳಿಂದ ಇಲ್ಲಿಯೇ ವಾಸವಾಗಿರುವವರನ್ನು ಸ್ಥಳೀಯರೆಂದು ಪರಿಗಣಿಸಬಹುದು ಎಂದು ಸಲಹೆ ನೀಡಿದ ಅವರು, 371(ಜೆ)ನೇ ಕಲಂ ಅನುಷ್ಠಾನದಲ್ಲಿ ಸರ್ಕಾರ ವೃಥಾ ಗೊಂದಲ ಸೃಷ್ಟಿಸದೆ ಹೈ-ಕ ಭಾಗವದರ ಅಭಿಪ್ರಾಯದಂತೆ ಮುನ್ನಡೆಯಬೇಕೆಂದು ಸಲಹೆ ನೀಡಿದರು.
ಹೈ-ಕ ಬೇರೆ ಕೆಲಸಕ್ಕೆ ಬಳಸಬೇಡಿ: ವಿಶೇಷ ಸ್ಥಾನಮಾನದಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬಿಡುಗಡೆಯಾಗುವ ಅನುದಾನ ಕೇವಲ ಹೈ-ಕ ಭಾಗಕ್ಕೆ ಮಾತ್ರ ಬಳಕೆಯಾಗಬೇಕು. ರಾಜ್ಯದ ಇನ್ನಿತರೆ ಪ್ರದೇಶಕ್ಕೆ ಬಳಕೆ ಮಾಡುವುದು ಸರಿಯಲ್ಲ. ಈ ಅನುದಾನದಡಿ ಕೈಗೊಳ್ಳುವ ಕಾಮಗಾರಿಗಳನ್ನು ಅವುಗಳಿಗೆ ನಿಗದಿಪಡಿಸಿದ ಕಾಲಮಿತಿಯಲ್ಲಿಯೇ ಪೂರ್ಣಗೊಳಿಸಬೇಕು ಎಂದೂ ಅವರು ಎಚ್ಚರಿಕೆ ನೀಡಿದರು.
ತುಂಗಭದ್ರಾ ಮತ್ತು ಕೃಷ್ಣಾ ನದಿಗಳ ನೀರಾವರಿ ಯೋಜನೆಗಳಿದ್ದರೂ ಕುಡಿವ ನೀರು, ಕೃಷಿಗೆ ನೀರಿನ ಅಭಾವ ನಿರಂತರ ಎಂಬಂತಾಗಿದೆ. ಹೋರಾಟಗಳ ಹೊರತಾಗಿಯೂ ಅಭಾವ ತಪ್ಪಿಲ್ಲ. ನೀರಿನ ಸಮರ್ಪಕ ನಿರ್ವಹಣೆಯ ಮೂಲಕ ಕಾಲುವೆಗಳ ಕಡೆಯ ರೈತರಿಗೂ ನೀರು ತಲುಪಿಸುವ ಕಾರ್ಯ ಆಗಬೇಕಿದೆ ಎಂದು ಒತ್ತಾಯಿಸಿದರು.
ಆರೋಗ್ಯ, ಉತ್ತಮ ಮಳೆಗೆ ಪರಿಸರ ರಕ್ಷಣೆ ಮದ್ದು: ಕೈಗಾರಿಕೀಕರಣ, ನಗರೀಕರಣದ ಅಬ್ಬರದಲ್ಲಿ ಪರಿಸರದ ಸಂರಕ್ಷಣೆಗೆ ಪ್ರಾಶಸ್ತ್ಯ ಮರೆಯಾಗುತ್ತಿದೆ. ಪರಿಸರ ಮಾಲಿನ್ಯದ ಭೀತಿ ಎದುರಾಗಿದೆ. ಮಳೆಯ ಪ್ರಮಾಣ ಕುಸಿತ ಕಂಡರೆ ತಾಪಮಾನ ಏರಿಕೆಯಾಗುತ್ತಿದೆ. ನಾಗರಿಕರ ಆರೋಗ್ಯ ಆತಂಕದಲ್ಲಿದೆ. ಸ್ಥಳೀಯರಿಗೆ ವಸತಿಗೂ ಅವಕಾಶವಿಲ್ಲದಂಥ ರೀತಿಯಲ್ಲಿ ನೆರೆ ಹೊರೆ ರಾಜ್ಯಗಳ ಸ್ಥಿತಿವಂತರು ಇಲ್ಲಿನ ಜಮೀನು ಖರೀದಿಸುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು.
ಕಾಂಕ್ರೀಟ್ ಕಟ್ಟಡಗಳ ಹೆಚ್ಚಳದಿಂದಾಗಿ ಬಡ ಮತ್ತು ಮಧ್ಯಮ ವರ್ಗಗದವರಿಗೆ ವಸತಿ ಸಮಸ್ಯೆ ಕಾಡುತ್ತಿದೆ. ಅಪಾರ್ಟ್ಮೆಂಟ್ಗಳು ತಲೆ ಎತ್ತುತ್ತಿದ್ದು, ವಸತಿ ಸಮಸ್ಯೆಯಾಗಿ ಬೆಳೆದಿದೆ. ಸ್ಥಳೀಯರು ಪರಕೀಯರಾಗುತ್ತಿದ್ದಾರೆ. ಸ್ವಚ್ಛತೆ ಕಾಯ್ದುಕೊಳ್ಳುವುದು ಸವಾಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಜನಾರೋಗ್ಯ ಕಾಳಜಿ ಮೆರೆಯಲಿ: ಒಪೆಕ್ ಆಸ್ಪತ್ರೆ ಈ ಭಾಗದ ಏಕೈಕ ದೊಡ್ಡ ಆಸ್ಪತ್ರೆ, ಆದರೆ ಈ ಆಸ್ಪತ್ರೆ ಮುಚ್ಚಿದೆ. ಈ ಭಾಗದ ಎಲ್ಲ ಜನರಿಗೆ ಆರೋಗ್ಯದ ಆಶಾಕಿರಣವಾಗಿದ್ದ ಆರೋಗ್ಯ ಕೇಂದ್ರ ಮುಚ್ಚಿದ್ದರಿಂದ ಜನತೆಗೆ ತೊಂದರೆ ಎದುರಾಗಿದೆ. ಆಸ್ಪತ್ರೆಯ ಪುನಾರಂಭ, ಸಿಬ್ಬಂದಿ ಪುನಾ ನೇಮಕದ ಮೂಲಕ ಸರ್ಕಾರ ಈ ಭಾಗದ ಜನಾರೋಗ್ಯದ ಕಾಳಜಿ ಮೆರೆಯಬೇಕಿದೆ ಎಂದು ಒತ್ತಾಯಿಸಿದರು.
ಇದಕ್ಕೂ ಮೊದಲು ಸಮ್ಮೇಳನಾಧ್ಯಕ್ಷ ಭಗತರಾಜ್ ನಿಜಾಮಕಾರಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.
ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ
ರಾಯಚೂರು: ನಗರದಲ್ಲಿ ಶನಿವಾರ ರಾಯಚೂರು ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.
ನಗರದ ರಂಗಮಂದಿರದಲ್ಲಿ ಬೆಳಗ್ಗೆ ರಾಷ್ಟ್ರಧ್ವಜಾರೋಹಣವನ್ನು ನಗರ ಕ್ಷೇತ್ರದ ಶಾಸಕ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಶಿವರಾಜ್ ಪಾಟೀಲ್ ನೆರವೇರಿಸಿದರು. ಪರಿಷತ್ ಧ್ವಜಾರೋಹಣವನ್ನು ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್ ನೆರವೇರಿಸಿದರು. ನಂತರ ನಗರದ ಅಂಬೇಡ್ಕರ್ ವೃತ್ತದಿಂದ ಕನ್ನಡ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರಾದ ಭಗತರಾಜ್ ನಿಜಾಮಕಾರಿ ಅವರ ಭವ್ಯ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು. ಸಾಹಿತ್ಯಾಭಿಮಾನಿಗಳು, ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾಹಿತಿಗಳು, ಕನ್ನಡ ಪರ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ನಗರದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯು ಸಮ್ಮೇಳನ ಸ್ಥಳ ರಂಗಮಂದಿರದವರೆಗೆ ಸಾಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

