ರಾಯಚೂರು

ಐದು ದಿನಕ್ಕೊಮ್ಮೆ ಕುಡಿವ ನೀರು

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.16
ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಲಿದೆ. ಐದು ದಿನಕ್ಕೊಮ್ಮೆ ನೀರು ಬರುತ್ತಿರುವುದರಿಂದ ನಾಗರಿಕರು ರೋಸಿ ಹೋಗಿದ್ದಾರೆ. ಕೆಲ ವಾರ್ಡ್ಗಳಲ್ಲಿ ಬಹಿರ್ದೆಸೆಗೆ ಹೋಗಲು ನೀರಿಲ್ಲದೆ ಮಹಿಳೆಯರು ಪರದಾಡುತ್ತಿದ್ದಾರೆ. ಕೂಡಲೇ ಶಾಸಕ ಹಂಪನಗೌಡ ಬಾದರ್ಲಿ ನಗರಸಭೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಕೆ. ಜಿಲಾನಿಪಾಷಾ ಜಾಗೀರದಾರ ಆಗ್ರಹಿಸಿದ್ದಾರೆ.
ಸಮಸ್ಯೆ ಫೆಬ್ರುವರಿಯಿಂದಲೇ ಜೀವಂತ: ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದೆ. ತಾಲೂಕಿನಲ್ಲಿ ಕಾಂಗ್ರೆಸ್ ಶಾಸಕರು ಅಧಿಕಾರದಲ್ಲಿದ್ದಾರೆ. ನಗರಸಭೆ ಕಾಂಗ್ರೆಸ್ ಪಕ್ಷದ ಆಡಳಿತದ ತೆಕ್ಕೆಯಲ್ಲಿದೆ. ಆದರೂ ಕುಡಿಯುವ ನೀರಿನ ಸಮಸ್ಯೆ ಫೆಬ್ರುವರಿ ತಿಂಗಳಿನಿಂದ ಜೀವಂತವಿದೆ. ಕಳೆದ ಎರಡು ತಿಂಗಳಿಂದ 5 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿದ್ದಾರೆ. ಮಾಜಿ ಶಾಸಕ ವೆಂಕಟರಾವ್ ನಾಡಗೌಡರ ಅವಧಿಯಲ್ಲಿ ಅವರು ವಿರೋಧ ಪಕ್ಷದಲ್ಲಿದ್ದರೂ ತಾಲೂಕಿನ ಇತಿಹಾಸದಲ್ಲಿ ಮೊದಲ ಬಾರಿಗೆ ಕುಡಿಯುವ ನೀರನ್ನು ಮುನಿರಾಬಾದ್ ಡ್ಯಾಂನಿಂದ ಬಿಡಿಸಿಕೊಂಡು ಬಂದಿದ್ದರು. ಆಗ ಜನರು ನಾಡಗೌಡರ ಸಾಧನೆಯನ್ನು ಮೆಚ್ಚಿದ್ದರು. ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿರಲಿಲ್ಲ. ಈಗ ನೀರಿನ ಕ್ಯಾನ್ಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ. ಶ್ರೀಮಂತರು ಕ್ಯಾನ್ಗಳನ್ನು ಖರೀದಿ ಮಾಡಿ ಕುಡಿಯಬಹುದು. ಆದರೆ ಬಡವರ ಸ್ಥಿತಿ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಬಾದರ್ಲಿಯವರು ವಾರ್ಡ್ಗಳಿಗೆ ಭೇಟಿ ಕೊಡುವುದಕ್ಕಿಂತ ಪೂರ್ವದಲ್ಲಿ ಅವರು ಹೋಗುವ ವಾರ್ಡ್ಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಹೋದರೆ ಒಳಿತು. ಇಲ್ಲದಿದ್ದರೆ ನಾಗರಿಕರು ಅವರು ಹೋದಲೆಲ್ಲಾ ಕುಡಿಯುವ ನೀರಿನ ಕುರಿತೆ ಹೆಚ್ಚು ಹೇಳುತ್ತಾರೆ. ಈ ಬಗ್ಗೆ ನೂತನ ಶಾಸಕರು ಆಲೋಚಿಸಿ ಕ್ರಮಕ್ಕೆ ಮುಂದಾಗಲಿ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.