ವೇತನ ತಾರತಮ್ಯ ನಿವಾರಣೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.16
ರಾಜ್ಯ ಸರ್ಕಾರ ಪ್ರೌಢಶಾಲಾ ಸಹ ಶಿಕ್ಷಕರ ವೇತನ ತಾರತಮ್ಯ ನಿವಾರಿಸುವಂತೆ ಆಗ್ರಹಿಸಿ ಇತ್ತೀಚೆಗೆ ಶಿಕ್ಷಣ ಸಚಿವರಿಗೆ ಒತ್ತಾಯಿಸಿರುವ ಸಂಘದ ಅಧ್ಯಕ್ಷ ಮಂಜುನಾಥ್ ಅವರು ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ವಿದ್ಯಾರ್ಥಿಗಳ ಬೋಧನೆ ಜತೆಗೆ ಮೌಲ್ಯಮಾಪನ ಮತ್ತಿತರೆ ಕಾರ್ಯಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಪ್ರೌಢ ಶಾಲಾ ಶಿಕ್ಷಕರಿಗೆ ವೇತನ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು.
ತಾರತಮ್ಯ ನಿವಾರಣೆ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಈಚೆಗೆ ಸಂಘದವರು ಭೇಟಿ ಮಾಡಿದ ವೇಳೆ ಶೀಘ್ರದಲ್ಲಿಯೇ ಅಧಿಕಾರಿಗಳ ಹಾಗೂ ಸಂಘದ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದು, ಕಾರಣ ಕೂಡಲೇ ಸಭೆ ಕರೆಯುವಂತೆ ಒತ್ತಾಯಿಸಿದರು.
ಮನವಿ ಸಲ್ಲಿಸಿದ್ದೇ ಬಂತು..: ಸದ್ಯ ಪ್ರೌಢಶಾಲಾ ಸಹ ಶಿಕ್ಷಕರು ಪ್ರತಿ ತಿಂಗಳು 17 ಸಾವಿರ ವೇತನ ಪಡೆಯುತ್ತಿದ್ದು, ತಮ್ಮ ಹುದ್ದೆಗೆ ಸರಿಸಮಾನರಾದ ಪೊಲೀಸ್ ಇಲಾಖೆ ಮತ್ತಿತರೆ ಇಲಾಖೆಗಳ ಸಿಬ್ಬಂದಿಯು 22 ಸಾವಿರ ವೇತನ ಪಡೆಯುತ್ತಿದ್ದಾರೆ. ಇದುವರೆಗೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಎಲ್ಲ ಪಕ್ಷಗಳ ಸರ್ಕಾರಗಳಿಗೆ ಮನವಿ ಸಲ್ಲಿಸಿದರೂ ಬೇಡಿಕೆಗಳ ಈಡೇರಿಕೆಯಾಗಿಲ್ಲ ಎಂದು ಟೀಕಿಸಿದರು.
ಪ್ರೌಢಶಾಲಾ ಸಹ ಶಿಕ್ಷಕರು ಎರಡು ಪದವಿಗಳನ್ನು ಪಡೆದವರಾಗಿರುತ್ತಾರೆ. ಆದರೆ ಅವರಿಗೆ ನೀಡುತ್ತಿರುವ ವೇತನ ಮಾತ್ರ ತೀರಾ ಕಡಿಮೆ. ಸದ್ಯ ಅನೇಕರು ಸ್ನಾತಕೋತ್ತರ ಪದವೀಧರ ಪ್ರೌಢಶಾಲಾ ಸಹಶಿಕ್ಷಕರಿಗೆ ನೀಡುತ್ತಿರುವ ಉಪನ್ಯಾಸಕರ ಮುಂಬಡ್ತಿ ಪ್ರಮಾಣವನ್ನು ಹಿಂದಿನಂತೆಯೇ ಶೇ. 50-50ರ ಅನುಪಾತದಲ್ಲಿಯೇ ಮುಂದುವರಿಸುವಂತೆ ಆಗ್ರಹಿಸಿದರು.
40 ವಿದ್ಯಾರ್ಥಿಗಳ ಮಿತಿಯಿರಲಿ: ರಾಜ್ಯದ ಎಲ್ಲ ಸಂಯುಕ್ತ ಪಪೂ ಕಾಲೇಜುಗಳಲ್ಲಿ ಉಪ ಪ್ರಾಚಾರ್ಯರ ಹುದ್ದೆ ಸೃಷ್ಟಿಸಬೇಕು. ಅನುದಾನಿತ ಪ್ರೌಢಶಾಲಾ ಶಿಕ್ಷಕರಿಗೆ ಆರೋಗ್ಯ ವಿಮೆ ನೀಡಿಕೆ, ಕನ್ನಡ ವಿಶೇಷ ಬಡ್ತಿ ಕಲ್ಪಿಸುವತ್ತ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ದೃಷ್ಟಿಯಿಂದ ಒಂದು ತರಗತಿಯಲ್ಲಿ 40 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಸರ್ಕಾರಿ ಮತ್ತು ಅನುದಾನಿತ ಶಾಲೆಯ ಎಲ್ಲ ಮಕ್ಕಳಿಂದ ಸಂಗ್ರಹಿಸುತ್ತಿರುವ ದಾಖಲಾತಿ ಮತ್ತು ಪರೀಕ್ಷೆ ಶುಲ್ಕದಿಂದ ವಿನಾಯಿತಿ ನೀಡಬೇಕು. ಶಿಕ್ಷಕರ ವರ್ಗಾವಣೆಯ ನೀತಿಯಲ್ಲಿ ಸಾಕಷ್ಟು ಲೋಪದೋಷಗಳಿದ್ದು ಅವುಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಕಾಲ್ಪನಿಕ ಬಡ್ತಿ ನೀಡಿ: ಪ್ರತಿ ತಿಂಗಳು 1ನೇ ತಾರೀಕಿಗೆ ವೇತನ ದೊರೆಯುವಂತೆ ಮಾಡಬೇಕು. 2006ರ ನಂತರದಲ್ಲಿ ನೇಮಕಗೊಂಡ ಶಿಕ್ಷಕರಿಗೆ 400 ವಿಶೇಷ ಭತ್ಯೆ ಮುಂದುವರಿಸಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಕಾಲ್ಪನಿಕ ಬಡ್ತಿ ನೀಡಬೇಕೆಂದು ಒತ್ತಾಯಿಸಿದರು.
ಪ್ರೌಢಶಾಲಾ ಸಹ ಶಿಕ್ಷಕರಿಗೆ ವಿವಿಧ ತರಬೇತಿಗಳಿಗೆ ನಿಯೋಜಿಸಬಾರದು. ಅನಗತ್ಯ ತರಬೇತಿಗಳಿಗೆ ನೇಮಿಸುವುದರಿಂದ ಅವರ ಕಾರ್ಯನಿರ್ವಹಣೆಗೆ ತೊಡಕಾಗುತ್ತಿದೆ. ಪ್ರೌಢಶಾಲಾ ಸಹಶಿಕ್ಷಕರಿಗೆ ಮುಖ್ಯಗುರು ಮತ್ತು ಕಚೇರಿ ಸಿಬ್ಬಂದಿಗೆ ನೀಡುವಂತೆ ರಜೆ ರಹಿತ ಸೇವೆಗೆ ನೀಡುವ ಸೌಲಭ್ಯಗಳನ್ನು ಒದಗಿಸಲು ಸಚಿವರಿಗೆ ಒತ್ತಾಯಿಸಿದ್ದು, ಸಚಿವರು ಕೂಡಲೇ ಈ ಬೇಡಿಕೆಗಳ ಈಡೇರಿಕೆಗೆ ಗಮನ ಹರಿಸದಿದ್ದರೆ ಸಂಘ ಹೋರಾಟಕ್ಕೆ ಮುಂದಾಗಲಿದೆ ಎಂದು ಎಚ್ಚರಿಸಿದರು.
ಸಂಘದ ಪ್ರಮುಖರಾದ ಮಲ್ಲನಗೌಡ ಗೌಡರ್, ನಾಗರಾಜು, ಮಲ್ಲಯ್ಯ, ರಾಜಶೇಖರ್ ದಿನ್ನಿ, ನಾಗಭೂಷಣ, ಬಾಬುಭಂಡಾರಿಗಲ್, ಸಿದ್ರಾಮರೆಡ್ಡಿ, ನಬಿಚಾಂದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

