ಹವಾಮಾನ ವೈಪರೀತ್ಯ ಕೃಷಿಗೆ ಮಾರಕ: ಕಳವಳ
ಕ.ಪ್ರ. ವಾರ್ತೆ, ರಾಯಚೂರು, ಜೂ.20
ಹವಾಮಾನದಲ್ಲಿನ ಏರುಪೇರು ದೇಶದ ಕೃಷಿ ವ್ಯವಸ್ಥೆ ಮೇಲೆ ಮಾರಕ ಪರಿಣಾಮ ಉಂಟು ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳು ಸಂಶೋಧನೆಗಳ ಮೂಲಕ ಪರಿಹಾರ ಕಂಡುಕೊಳ್ಳುವುದು ಅವಶ್ಯಕ ಎಂದು ವಿಶ್ರಾಂತ ಕುಲಪತಿ ಪ್ರೊ.ಎಸ್.ಎಸ್. ಖನ್ನಾ ಸಲಹೆ ನೀಡಿದರು.
ಅವರು ನಗರದ ಕೃಷಿ ವಿವಿ ಯಲ್ಲಿ ಗುರುವಾರ ಆಯೋಜಿಸಿದ್ದ ಸವಳು ಮಣ್ಣಿನ ಮತ್ತು ಸವಳು ನೀರಿನ ನಿರ್ವಹಣೆ ಕುರಿತು ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಹವಾಮಾನದಲ್ಲಿನ ವೈಪರೀತ್ಯಗಳಿಂದ ರೈತರು ಕೃಷಿಯಲ್ಲಿ ಹಾನಿ ಅನುಭವಿಸುವಂಥ ಸ್ಥಿತಿಯಿದೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಪರಿಹಾರ ಕಾಣುವ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದರು.
ಸಂಶೋಧನೆ ಅಗತ್ಯ:ಆಧುನಿಕ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವುದು ಹಿಂದೆಂದಿಗಿಂತ ಇಂದು ಹೆಚ್ಚು ಅವಶ್ಯಕವಾಗಿದೆ. ಕೃಷಿ ವಿಜ್ಞಾನಿಗಳು ರೈತಾಪಿ ವರ್ಗದ ಬೇಕು ಬೇಡಗಳ ಈಡೇರಿಕೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಬದ್ಧತೆ, ವಿಷಯಾಧರಿತ ಮತ್ತು ವಿಶ್ವಾಸದಿಂದ ವಿಜ್ಞಾನಿಗಳು ಸಂಶೋಧನೆಗೆ ಮುಂದಾಗಬೇಕಿದೆ ಎಂದು ಹೇಳಿದರು.
ಮಣ್ಣಿನ ಸವಳು ಮತ್ತು ಸವಳು ನೀರಿನ ಸಮಸ್ಯೆಯಿರುವ ಪ್ರದೇಶದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ ಹೇಗೆ ಉತ್ತಮ ಇಳುವರಿ ಪಡೆಯಬಹುದು ಎಂಬುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿರುವವರು ಚಿಂತಿಸಬೇಕಿದೆ. ಮಣ್ಣಿನ ಫಲವತ್ತತೆ ವರ್ಷದಿಂದ ವರ್ಷಕ್ಕೆ ನಾಶವಾಗುತ್ತಿರುವ ಹಿನ್ನೆಲೆ ಎಲ್ಲರೂ ತುರ್ತಾಗಿ ಫಲವತ್ತತೆಯ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಮಾಹಿತಿ ವಿನಿಮಯ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಯಚೂರು ಕೃಷಿ ವಿವಿ ಕುಲಪತಿ ಡಾ.ಬಿ.ವಿ. ಪಾಟೀಲ್ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಮಾಹಿತಿಯ ವಿನಿಮಯ ಬಹಳ ಅವಶ್ಯಕ.
ಸಂಶೋಧನೆಗಳ ಲಾಭ ರೈತರಿಗೆ ತಲುಪಬೇಕು. ಅದರಿಂದ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವುದು ಖಚಿತ ಎಂದರು.
ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿ ನೀರಿನ ಮಿತ ಬಳಕೆಯ ಮೂಲಕವೂ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂಬ ಅಂಶವನ್ನು ರೈತಾಪಿ ವರ್ಗಕ್ಕೆ ತಿಳಿಸಿಕೊಡುವ ಕಾರ್ಯ ಆಗಬೇಕಿದೆ. ಮಣ್ಣಿನ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ರಾಯಚೂರು ಕೃಷಿ ವಿವಿ ಯು ತಾನು ರೈತ ಸ್ನೇಹಿ ಎಂದು ಕಳೆದ ಅನೇಕ ವರ್ಷಗಳಿಂದ ಸಾಬೀತು ಮಾಡುತ್ತಲೇ ಬಂದಿದೆ. ವಿವಿಧ ಕಾರ್ಯಕ್ರಮಗಳ ಮೂಲಕ ವಿವಿ ರೈತರಿಗೆ ಸಂಶೋಧನೆಯ ಮಾಹಿತಿಯನ್ನು ಹಸ್ತಾಂತರಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.ಸಮಾರಂಭದಲ್ಲಿ ಸವಳು ಮಣ್ಣಿನ ನಿರ್ವಹಣೆ ಮತ್ತು ಸವಳು ನೀರಿನ ಬಳಕೆಯ ಬಗ್ಗೆ ಮಾಹಿತಿಯಿರುವ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಸಮಾರಂಭದಲ್ಲಿ ಪ್ರಮುಖರಾದ ಡಾ.ಬಿ.ಎಸ್.ಜನಾಗೌಡರ್, ಡಾ.ಶಂಕರೇಗೌಡ, ಡಾ.ವಿಶ್ವನಾಥ್, ಡಾ.ಎಸ್. ಕೆ.ಅಂಬಾಸ್ತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೃಷಿ ವಿಜ್ಞಾನಿಗಳು ಹಾಗೂ ಬೋಧಕ ವರ್ಗದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

