ರಾಯಚೂರು

ಟಿಎಚ್‌ಒ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ ,  ಲಿಂಗಸ್ಗೂರು ,  ಜೂ.21
ತಾಲೂಕಿನ ಹಾಲಭಾವಿ ಉಪ ಆರೋಗ್ಯ ಕೇಂದ್ರಕ್ಕೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯನ್ನು ನೇಮಕ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಶುಕ್ರವಾರ ತಾಲೂಕು ಆರೋಗ್ಯಾಧಿಕಾರಿ ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿ ಹಿರಿಯ ಆರೋಗ್ಯ ಸಹಾಯಕ ಪರಮೇಶ್ವರ ಅವಗೆ ಮನವಿ ಸಲ್ಲಿಸಿದರು.
ತಾಲೂಕು ಕೇಂದ್ರದಿಂದ ಸುಮಾರು 18 ಕಿಮೀ ದೂರವಿರುವ ಆನೆಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಡುವ ಗ್ರಾಮದ ಉಪ ಆರೋಗ್ಯ ಕೇಂದ್ರದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆ ಹಲವು ವರ್ಷದಿಂದ ಖಾಲಿಯಿದ್ದು, ಇದರಿಂದ ನದಿ ತೀರದ ಗ್ರಾಮಗಳ ಜನತೆ ಹಾಗೂ ಗರ್ಭಿಣಿಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಸಾಂಕ್ರಾಮಿಕ ರೋಗಗಳಿಂದ ಬಳಲುವವರು ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಲು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
10 ವರ್ಷಗಳಿಂದ ಹುದ್ದೆ ಖಾಲಿ: ಹಾಲಭಾವಿ ಉಪ ಆರೋಗ್ಯ ಕೇಂದ್ರಕ್ಕೆ ಸುಮಾರು 10 ವರ್ಷಗಳ ಹಿಂದೆ ಕಿರಿಯ ಆರೋಗ್ಯ ಸಹಾಯಕಿ ಚಂದ್ರಲೀಲಾ ಎಂಬವರನ್ನು ನೇಮಕ ಮಾಡಲಾಗಿತ್ತು. ಅವರನ್ನು ಕೇವಲ 3 ತಿಂಗಳಲ್ಲಿ ಗುರುಗುಂಟಾ ಪಿಎಚ್‌ಸಿ ವ್ಯಾಪ್ತಿಯ ಕೋಠಾ ಗ್ರಾಮಕ್ಕೆ ಎರವಲು ಸೇವೆಗೆ ನಿಯೋಜಿಸಲಾಯಿತು. ಅಂದಿನಿಂದ ಉಪ ಕೇಂದ್ರದಲ್ಲಿ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆ ಖಾಲಿ ಇರುತ್ತದೆ.
ಎರವಲು ಸೇವೆ ರದ್ದುಗೊಳಿಸಿ: ಆದರೆ ಪ್ರತಿ ತಿಂಗಳು ಚಂದ್ರಲೀಲಾ ಅವರಿಗೆ ಹಾಲಭಾವಿ ಕೇಂದ್ರದಿಂದ ವೇತನ ಪಾವತಿಸಲಾಗುತ್ತದೆ. ಕಾರಣ ಅವರ ಎರವಲು ಸೇವೆ ರದ್ದುಗೊಳಿಸಿ ಪುನಃ ಹಾಲಭಾವಿ ಉಪ ಕೇಂದ್ರಕ್ಕೆ ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ರಸ್ತೆ ತಡೆ ಎಚ್ಚರಿಕೆ: ಈ ಕುರಿತು ಆರೋಗ್ಯಾಧಿಕಾರಿ, ಜಿಪಂ, ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸತ್ತ ಗ್ರಾಮದ ಜನತೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿ ಒತ್ತಾಯಿಸುವ ಪರಿಸ್ಥಿತಿ ಬಂದೊದಗಿದೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಎಪಿಎಂಸಿ ನಿರ್ದೇಶಕ ಸಂಗಣ್ಣ ದೇಸಾಯಿ, ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ, ಸದಸ್ಯರಾದ ವೆಂಕನಗೌಡ ಪಾಟೀಲ್, ಸಂಗಣ್ಣ ಮೇಟಿ, ಮಾನಪ್ಪ ಗುರಿಕಾರ, ಹುಲಗಪ್ಪ, ಸೋಮಣ್ಣ, ಶರಣಪ್ಪ, ದ್ಯಾಮಪ್ಪ, ಆದಪ್ಪ, ಹನುಮಂತ ಪೂಜಾರಿ, ಸೋಮನಗೌಡ ಗೋರೆಬಾಳ, ಪ್ರೇಮಗೌಡ, ವಿರೇಶ ಸೇರಿದಂತೆ ಹಾಲಭಾವಿ, ಜಲದುರ್ಗ, ಹಂಚಿನಾಳ, ಯರಗುಂಟಿ ಗ್ರಾಮಗಳ ಜನತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.