ಮದ್ಯ ಮಾರಾಟ ಪರವಾನಗಿ ವಿರೋಧಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ , ರಾಯಚೂರು , ಜೂ.21
ಹೊಸದಾಗಿ ಮದ್ಯ ಮಾರಾಟ ಮಳಿಗೆಗಳಿಗೆ ಪರವಾನಗಿ ನೀಡದಂತೆ ಒತ್ತಾಯಿಸಿ ಎಐಡಿವೈಒ ಮತ್ತಿತರೆ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸೂಪರ್ ಮಾರ್ಕೆಟ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಐಡಿವೈಒ, ಎಐಎಂಎಸ್ಎಸ್ ಸಂಘಟನೆಯ ಕಾರ್ಯಕರ್ತರು, ಹೊಸದಾಗಿ ಮದ್ಯದ ಅಂಗಡಿಗಳಿಗೆ ಪರವಾನಗಿ ಸರ್ಕಾರ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಮದ್ಯ ವ್ಯಸನಿಗಳ ಸಂಖ್ಯೆ ಹೆಚ್ಚಲಿದೆ. ಅದರಿಂದ ಸಮಾಜದ ಪ್ರಗತಿಗೆ ಮಾರಕವಾಗಲಿದೆ ಎಂದು ಆರೋಪಿಸಿದರು.
ಮತ್ತಷ್ಟು ಸಮಸ್ಯೆ: ಹೊಸದಾಗಿ ಮದ್ಯ ಮಾರಾಟ ಪರವಾನಗಿ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ 1997ರಿಂದ ಮದ್ಯ ಮಾರಾಟದ ಹೊಸ ಪರವಾನಗಿ ನೀಡಿಲ್ಲ, ಆದಾಯದ ಮೂಲ ಹೆಚ್ಚಿಸಲು ಇದೊಂದೇ ದಾರಿ ಎಂದು ಹೇಳುತ್ತಲೇ ಸಮಾಜ ವಿರೋಧಿ ಕಾರ್ಯಕ್ಕೆ ಮುಂದಾಗಿದೆ ಎಂದು ದೂರಿದರು.
ಸಮಾಜದ ಕೆಳವರ್ಗದವರು, ಬಡವರು ಮತ್ತು ಹಿಂದುಳಿದವರನ್ನು ಬಲಿ ತೆಗೆದುಕೊಳ್ಳುವ ಕಾರ್ಯಕ್ಕೆ ಸರ್ಕಾರವೇ ಮುಂದಾಗಿದೆ. ಕುಡಿತದ ವ್ಯಸನದಿಂದ ಈಗಾಗಲೇ ಸಮಾಜದಲ್ಲಿ ಅನೇಕ ರೀತಿಯ ಸಮಸ್ಯೆಗಳು ಉದ್ಭವಿಸಿದ್ದು, ಅವುಗಳ ನಿವಾರಣೆಗೆ ಮುಂದಾಗದ ಸರ್ಕಾರ ಮತ್ತಷ್ಟು ಸಮಸ್ಯೆ ಹೆಚ್ಚಿಸುವ ನಿರ್ಧಾರ ಜಾರಿಗೆ ತರಲು ಹೊರಟಿದೆ ಎಂದು ಟೀಕಿಸಿದರು.
ಅಪಾಯಕಾರಿ ಬೆಳವಣಿಗೆ: ಆಳುವ ಸರ್ಕಾರಗಳು ಅಬಕಾರಿ ಇಲಾಖೆಯನ್ನೇ ಆದಾಯದ ಮೂಲವಾಗಿ ಗುರುತಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸಹ ಅಬಕಾರಿ ಇಲಾಖೆಯಿಂದಲೇ ಆದಾಯ ನಿರೀಕ್ಷಿಸುತ್ತಿರುವುದಾಗಿ ಹೇಳುತ್ತಲೇ ಮದ್ಯ ಮಾರಾಟಕ್ಕೆ ಹೆಚ್ಚಿನ ಅವಕಾಶ ನೀಡಿತ್ತು. ಅದರಂತೆಯೇ ಕಾಂಗ್ರೆಸ್ ಸರ್ಕಾರ ಸಹ ಕಾರ್ಯನಿರ್ವಹಿಸುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಆರೋಪಿಸಿದರು.
ಸಮಾಜದ ಹಿತದೃಷ್ಟಿಯಿಂದ ಕೂಡಲೇ ರಾಜ್ಯ ಸರ್ಕಾರ ತನ್ನ ನಿರ್ಧಾರ ಕೈಬಿಡಬೇಕು. ಹೊಸದಾಗಿ ಮದ್ಯ ಮಾರಾಟ ಮಳಿಗೆಗಳಿಗೆ ಪರವಾನಗಿ ನೀಡಬಾರದೆಂದು ಹೋರಾಟಗಾರರು ಒತ್ತಾಯಿಸಿದರು.
ಸಂಘಟನೆಗಳ ಪ್ರಮುಖರಾದ ಚೇತನಾ ಬನಾರೆ, ಚನ್ನಬಸವ ಜಾನೇಕಲ್ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

