ರಾಯಚೂರು

ಮುಂಗಾರು ಹಬ್ಬಕ್ಕೆ ಸಂಭ್ರಮದ ತೆರೆ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.24
ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಭಾಗದಿಂದ ಮಾಯವಾಗುತ್ತಿರುವ ಕಲೆ, ಸಂಸ್ಕೃತಿಯನ್ನು ಜನತೆಗೆ ಪರಿಚಯಿಸುವಲ್ಲಿ ಮುನ್ನೂರು ಕಾಪು ಸಮಾಜದ ಪ್ರಯತ್ನ ಸಾರ್ಥಕತೆ ಕಂಡಿದೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ನಡೆದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಈ ನಿಟ್ಟಿನಲ್ಲಿ ಭರ್ಜರಿ ಯಶಸ್ಸು ಕಂಡಿದೆ.
ಕಳೆದ 13 ವರ್ಷಗಳಿಂದ ನಗರದಲ್ಲಿ ಮುನ್ನೂರು ಕಾಪು ಸಮಾಜ ಕಾರ ಹುಣ್ಣಿಮೆ ಸಂದರ್ಭ ಮುಂಗಾರು ಹಬ್ಬವನ್ನು ಆಚರಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಹಬ್ಬದ ಸಂಭ್ರಮ ಹೆಚ್ಚುತ್ತಲೇ ಸಾಗಿದೆ. ಕಳೆದ ವರ್ಷಗಳಿಗಿಂತ ಪ್ರಸಕ್ತ ವರ್ಷದ ಮುಂಗಾರು ಉತ್ಸವಕ್ಕೆ ಭಾರೀ ಜನ ಬೆಂಬಲ ವ್ಯಕ್ತವಾಗಿದ್ದು ವಿಶೇಷ.
ಕಲಾವಿದರ ನೃತ್ಯ ಮೋಡಿ: ನಗರದ ರಾಜೇಂದ್ರ ಗಂಜ್‌ನಲ್ಲಿ ಕಳೆದ ಮೂರು ದಿನಗಳ ಕಾಲ ನಡೆದ ಮುಂಗಾರು ಹಬ್ಬದಲ್ಲಿ ಕರ್ನಾಟಕವಷ್ಟೇ ಅಲ್ಲದೇ ನೆರೆಯ ಆಂಧ್ರ, ಮಹಾರಾಷ್ಟ್ರದ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಅದೇ ರೀತಿ ನಗರದ ಮಹಿಳಾ ಸಮಾಜದಲ್ಲಿ ಪ್ರತಿ ದಿನ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯು ಸ್ಥಳೀಯ ಪ್ರತಿಭಾವಂತರಿಗೆ ನೃತ್ಯ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿತು.
ಜತೆಗೆ ದೂರದ ರಾಜಸ್ತಾನ, ಗುಜರಾತ ರಾಜ್ಯಗಳ ಕಲಾವಿದರ ನೃತ್ಯ ಪ್ರದರ್ಶನದ ಮೋಡಿ ನಗರದ ಜನತೆಯ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಜತೆಗೆ ಜನಪದ ಸಂಗೀತ, ನೃತ್ಯ ರೂಪಕಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಮುಖ ಆಕರ್ಷಣೆಗಳಾಗಿದ್ದವು.
ಮುನ್ನೂರು ಕಾಪು ಸಮಾಜವು ಗ್ರಾಮೀಣರ ಬದುಕು, ಕಲೆ, ಸಂಸ್ಕೃತಿಯನ್ನು ನಾಗರಿಕರಿಗೆ ಪರಿಚಯಿಸುವ ಜತೆಗೆ ರೈತಾಪಿ ವರ್ಗದಲ್ಲಿ ಕೃಷಿ ಕಾರ್ಯಗಳಲ್ಲಿ ತೊಡಗಲು ಆಸಕ್ತಿ ಮೂಡಿಸುವಂಥ ರೀತಿಯಲ್ಲಿ ಮುಂಗಾರು ಹಬ್ಬ ಆಚರಿಸಿತು.
ಭಾರೀ ಜನಸ್ತೋಮ: ನಗರದ ರಾಜೇಂದ್ರ ಗಂಜ್‌ನಲ್ಲಿ ಏರ್ಪಡಿಸಿದ್ದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ಮುಂಗಾರು ಹಬ್ಬದ ಕೇಂದ್ರಬಿಂದು. ಕಾರ ಹುಣ್ಣಿಮೆಯ ಅಂಗವಾಗಿ ಆಯೋಜಿಸುವ ಈ ಸ್ಪರ್ಧೆಯಲ್ಲಿ ಗಜಗಾತ್ರದ ಎತ್ತುಗಳು ಪಾಲ್ಗೊಂಡಿದ್ದನ್ನು ವೀಕ್ಷಿಸಲು ಕರ್ನಾಟಕವಷ್ಟೇ ಅಲ್ಲದೇ ನೆರೆಯ ಆಂಧ್ರದ ದೂರದೂರುಗಳಿಂದ ಸಾವಿರಾರು ಸಂಖ್ಯೆಯ ಜನತೆ ಆಗಮಿಸಿದ್ದರು.
ಸ್ಪರ್ಧೆಯ ಅಂಗಳದಲ್ಲಿ ಎರಡೂ ಬದಿಗೆ ಮತ್ತು ಅಕ್ಕಪಕ್ಕದ ಕಟ್ಟಡಗಳ ಮೇಲೆ ನಿಂತು ಸ್ಪರ್ಧೆಯನ್ನು ವೀಕ್ಷಿಸಿದ ಜನತೆ ಭಾರೀ ಎತ್ತುಗಳ ಬಲ ಪ್ರದರ್ಶನವನ್ನು ಮೆಚ್ಚಿ ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗ್ರಾಮೀಣರ ಬದುಕಿನ ಸೊಗಡು ಪರಿಚಯಿಸುವಲ್ಲಿ ಮುನ್ನೂರು ಕಾಪು ಸಮಾಜ ಯಶಸ್ವಿಯಾಗಿದೆ.

ಕಲ್ಲು ಎಳೆವ ಸ್ಪರ್ಧೆ: ಆಂಧ್ರಕ್ಕೇ ಸಿಂಹಪಾಲು ಬಹುಮಾನ
ರಾಯಚೂರು:  ನಗರದ ರಾಜೇಂದ್ರ ಗಂಜ್‌ನಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಕಡೆಯ ದಿನ ಸೋಮವಾರ ನಡೆದ ಎರಡೂವರೆ ಟನ್ ಭಾರದ ಕಲ್ಲು ಎಳೆಯುವ ಅಖಿಲ ಭಾರತ ಮಟ್ಟದ ಸ್ಪರ್ಧೆಯಲ್ಲಿ ಆಂಧ್ರದ ಪಾತಲಿಂಗಂ ನ ಚೌಟಿಪಲ್ಲಿ ಗ್ರಾಮದ ಆರ್.ಎನ್. ರೆಡ್ಡಿ ಅವರ ಎತ್ತುಗಳು ಪ್ರಥಮ ಸ್ಥಾನ ಗಳಿಸಿದವು.
ಆರ್.ಎನ್. ರೆಡ್ಡಿ ಅವರ ಎತ್ತುಗಳು ನಿಗದಿತ 20 ನಿಮಿಷದಲ್ಲಿ ಎರಡೂವರೆ ಟನ್ ಭಾರದ ಕಲ್ಲನ್ನು 2,265 ಅಡಿ ದೂರ ಎಳೆದು 70 ಸಾವಿರ ಪ್ರಥಮ ಬಹುಮಾನ ಗಳಿಸಿದವು. ಅದೇ ರೀತಿ ಆಂಧ್ರದ ಪೆದ್ದಕಾಶಿನಿ ಗ್ರಾಮದ ಆಲ ರಾಮಕೃಷ್ಣರೆಡ್ಡಿ ಅವರ ಎತ್ತುಗಳು 2,243 ಅಡಿ ದೂರ ಎಳೆದು ದ್ವಿತೀಯ ಸ್ಥಾನಕ್ಕೆ ತಲುಪಿ 55 ಸಾವಿರ ಪಡೆದವು.
ಪಾಪಾರೆಡ್ಡಿ ಎತ್ತುಗಳಿಗೆ 3ನೇ ಬಹುಮಾನ: ರಾಯಚೂರಿನ ಮಾಜಿ ಶಾಸಕ ಪಾಪಾರೆಡ್ಡಿ ಅವರ ಎತ್ತುಗಳು 2,164.07 ಅಡಿಗಳ ದೂರ ಕಲ್ಲು ಎಳೆದು ತೃತೀಯ ಸ್ಥಾನದ ಬಹುಮಾನ 45 ಸಾವಿರ ಪಡೆದರೆ, ಆಂಧ್ರದ ಹೊಯ್ಯಳವಾಡ ಗ್ರಾಮದ ಬೂರೆಡ್ಡಿ ಓಬಳರೆಡ್ಡಿ ಅವರ ಎತ್ತುಗಳು 2,115.09 ದೂರ ಸಾಗಿ ನಾಲ್ಕನೇ ಬಹುಮಾನವಾಗಿ 35 ಸಾವಿರ ಗಳಿಸಿದವು.
ಆಂಧ್ರದ ವನಪರ್ತಿಯ ಜಂರಿರಾಜು ಅವರ ಎತ್ತುಗಳು 1,809.02 ದೂರ ಸಾಗಿ ಐದನೇ ಬಹುಮಾನದ ಮೊತ್ತ 25 ಸಾವಿರ ತಮ್ಮದಾಗಿಸಿಕೊಂಡರೆ, ದವಾಜಿಪಲ್ಲೆ ಗ್ರಾಮದ ನವೀನರೆಡ್ಡಿ ಅವರ ಎತ್ತುಗಳು 1,387 ಅಡಿ ದೂರ ಕ್ರಮಿಸಿ 6ನೇ ಸ್ಥಾನ ಪಡೆದು 15 ಸಾವಿರ ಗಳಿಸಿದವು. ಅಖಿಲ ಭಾರತ ಮಟ್ಟದ ಎರಡೂವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಒಟ್ಟು 8 ಜೋಡಿ ಎತ್ತುಗಳು ಪಾಲ್ಗೊಂಡಿದ್ದವು.
-ಜಗನ್ನಾಥ ಆರ್. ದೇಸಾಯಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.