ಪಡಿತರ ಚೀಟಿ ವಿತರಣೆಯಲ್ಲಿ ಗೋಲ್ಮಾಲ್
ಕನ್ನಡಪ್ರಭ ವಾರ್ತೆ ಮುದಗಲ್ ಮಾ.5-
ಬಡತನ ರೇಖೆಯಲ್ಲಿರುವ ಕುಟುಂಬಗಳಿಗೆ ಸರಕಾರ ನೀಡುವ ಬಿಪಿಎಲ್ ಪಡಿತರ ಕಾರ್ಡ್ ವಿತರಣೆಯಲ್ಲಿ ಭಾರಿ ಗೋಲ್ಮಾಲ್ ನಡೆದಿದ್ದು ಬಡವರಿಗೆ ಸೇರಬೇಕಾದ ಅಕ್ಕಿ ಶ್ರೀಮಂತರ ಮನೆ ಸೇರಿರುವುದು ಬೆಳಕಿಗೆ ಬಂದಿದೆ.
ಒಬ್ಬರಿಗೆ ಎರಡೆರಡು ಕಾರ್ಡು, ಶ್ರೀಮಂತರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಪಟ್ಟಣಕ್ಕಿಂತ ಗ್ರಾಮೀಣ ಭಾಗದಲ್ಲಿ ಇಂಥಹ ನೂರಾರು ಪ್ರಕರಣಗಳು ಬಯಲಿಗೆ ಬಂದಿವೆ. ಭ್ರಷ್ಟಾಚಾರ ನಡೆಯಬಾರದೆಂಬ ಉದ್ದೇಶದಿಂದ ಆಹಾರ ಇಲಾಖೆ ನೇರ ಹಾಗೂ ಪಾರದರ್ಶಕವಾದ ಬಯೋವುಟ್ರಿಕ್ ಸೆಂಟರ್ ಮೂಲಕ ಪಡಿತರಕಾರ್ಡ್ ನವೀಕರಣ ಹಾಗೂ ಭಾವಚಿತ್ರ ತೆಗೆಸಿಕೊಳ್ಳಲು ಅವಕಾಶ ನೀಡಿತ್ತು.
ಎರಡು ಕಾರ್ಡ್ಗಳು: ಆದರೆ ಕಾನೂನು ಚಾಪೆ ಕೆಳಗೆ ತೂರಿದರೆ, ಭ್ರಷ್ಟಾಚಾರ ರಂಗೋಲಿ ಕೆಳಗೆ ಎನ್ನುವಂತೆ ಇದರಲ್ಲಿ ಅಕ್ರಮ ನಡೆದಿರುವುದು ಸಾಬೀತಾಗುತ್ತಿದೆ. ಉಪ್ಪಾರನಂದಿಹಾಳ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸತ್ತವರ ಹೆಸರಿಗೂ, ಕಂಪ್ಯೂಟರ್ ಆಪರೇಟರ್, ಗ್ರಾ.ಪಂ. ಸಿಬ್ಬಂದಿ ಹಾಗೂ ಸದಸ್ಯರ ಸಂಬಂಧಿಕರಿಗೆ ಎರಡೆರಡು ಕಾರ್ಡ್ ಪಡೆದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಅಂಗನವಾಡಿ ಕಾರ್ಯಕರ್ತೆಗೆ ಎರಡು ಬಿಪಿಎಲ್, ಸರ್ಕಾರಿ ನೌಕರಸ್ಥರಿಗೆ ಬಿಪಿಎಲ್ ಕಾರ್ಡ್ ನೀಡಿದರೆ ಕೂಲಿ ಮಾಡಿ ಬದುಕುವ ದಲಿತರಿಗೆ ಎಪಿಎಲ್ ಕಾರ್ಡ್ ಸಿಕ್ಕಿದ್ದು ದುರದೃಷ್ಟ ಎನ್ನಬಹುದು. ಕನ್ನಾಪುರಹಟ್ಟಿಯ ಅಂಗನವಾಡಿ ಕಾರ್ಯಕರ್ತೆ ದೇವಮ್ಮನಿಗೆ ಎಲ್ಐಎನ್ಆರ್ 00122993 ಹಾಗೂ ಎಲ್ಐಎನ್ಆರ್ 00108248 ಎರಡು ಬಿಪಿಎಲ್ ಕಾರ್ಡ್ ದೊರೆತಿವೆ.
ಅಮರಯ್ಯನಿಗೆ ಎಲ್ಐಎನ್ಆರ್ 00123752 ಹಾಗೂ ಎಲ್ಐಎನ್ 14120572 ಎರಡು ಬಿಪಿಎಲ್ ಕಾರ್ಡ್, ಪದ್ಮಾವತಿಗೆ ಹಳೇ ಪಡಿತರ ಇಲ್ಲದೆ ನವೀಕರಿಸಲಾಗಿದೆ. ಅವರಿಂದ ಎಲ್ಐಎನ್ಆರ್ 00108262 ಹಾಗೂ ಎಲ್ಐಎನ್ 14120610, ಎಲ್ಎನ್ಆರ್ 00126412, ಎಲ್ಎನ್ಆರ್ 00124017 ಸೇರಿ ಒಟ್ಟು ಐದು ಕಾರ್ಡ್ ಪಡೆದುಕೊಳ್ಳಲಾಗಿದೆ.
ಮರಣ ಹೊಂದಿದವರ ಹೆಸರು: ಅದರಂತೆ ಇವರ ಅತ್ತೆ ಹೊಳೆಯಮ್ಮ ಎಲ್ಐಎನ್ಆರ್ 00108259 ಬಿಪಿಎಲ್ ಕಾರ್ಡ್ನ್ನು ನವೀಕರಿಸಲಾಗಿದೆ. ಶಿವಶಂಕರಯ್ಯ ಎನ್ನುವವರಿಗೆ ಎಲ್ಐಎನ್ಆರ್ 00123771 ಮತ್ತು ಎಲ್ಐಎನ್ 14120566 ಎರಡು ಪಡಿತರಗಳಿವೆ. ಇನ್ನೂ ಇದಕ್ಕೂ ಆಶ್ಚರ್ಯಕರ ವಿಷಯವೆಂದರೆ ಪರಮಯ್ಯ ಎನ್ನುವಾತ ತೀರಿದ್ದರೂ ಆತನ ಹೆಸರಲ್ಲಿ (ಎಲ್ಐಎನ್ 40474882) ಬಿಪಿಎಲ್ ಕಾರ್ಡ್ ನೀಡಲಾಗಿದ್ದು, ಸದ್ಯ ಅದು ಸಂಬಂಧಿಕರ ಕೈ ಸೇರಿದೆ.
ಆದರೆ ಕಾರ್ಡ್ ನವೀಕರಿಸುವಾಗ ಮತ್ತು ಪಡೆಯುವಾಗ ಕುಟುಂಬದವರ ಬೆರಳಿನ ಗುರುತು ಪಡೆದು ತಾಳೆ ನೋಡಬೇಕಾಗಿದ್ದರೂ, ಎಲ್ಲಾ ಸದಸ್ಯರಿಗೆ ಒಬ್ಬರೇ ಗುರುತು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾವಚಿತ್ರ ಹಾಕಿದ್ದು, ಹೇಗೆ ಆಹಾರ ಇಲಾಖೆಯ ನಿಯಮದ ಪ್ರಕಾರ ಬಯೋವುಟ್ರಿಕ್ ಸೆಂಟರ್ದಲ್ಲಿ ಜೀವಂತ ವ್ಯಕ್ತಿಗಳ ಭಾವಚಿತ್ರ ಮಾತ್ರ ಸೆರೆ ಹಿಡಿಯಬೇಕು. ಆದರೆ ಇಲ್ಲಿ ನಡೆದದ್ದೇ ಬೇರೆ. ಜೀವಂತ ವ್ಯಕ್ತಿಗಳು ಇಲ್ಲದಿದ್ದರೂ ಅವರ ಭಾವಚಿತ್ರಗಳನ್ನ ವೆಬ್ ಕ್ಯಾಮೆರಾದ ಮುಂದೆ ಹಿಡಿದು ಅವರ ಭಾವಚಿತ್ರವನ್ನು ಸೆರೆ ಹಿಡಿಯಲಾಗಿದೆ.
ಇದರಿಂದಾಗಿ ಹಣ ನೀಡಿದವರಿಗೆ ಬಿಪಿಎಲ್, ಹಣ ನೀಡದ ಬಡವರಿಗೆ ಮತ್ತು ದಲಿತರಿಗೆ ಎಪಿಎಲ್ ಕಾರ್ಡ್ ಸಿಗುವಂತಾಗಿದೆ ಎಂಬ ಆರೋಪ ಕೇಳಿಬರುತ್ತಿವೆ.
ದಾಖಲೆ ಇಲ್ಲ: ಹಳೆಯ ತಾತ್ಕಾಲಿಕ ಪಡಿತರ ಕಾರ್ಡ್ನ್ನು ನವೀಕರಿಸುವಾಗ ತಪ್ಪದೇ ಮನೆ ಕರ ಕಟ್ಟಿದ ಸಂಖ್ಯೆ, ವಿದ್ಯುತ್ ಮೀಟರ್ (ಆರ್ಆರ್)ಸಂಖ್ಯೆ ನಮೋದಿಸುವದು ಕಡ್ಡಾಯವಾಗಿತ್ತು. ಆದರೆ ನವೀಕರಿಸಲಾದ ಕೆಲ ಕಾರ್ಡ್ ಬಿಟ್ಟರೆ ಉಳಿದ ಯಾವುದಕ್ಕೂ ಈ ನಿಯಮ ಪಾಲನೆಯಾಗಿಲ್ಲ.
ಏನು ಹೇಳುತ್ತೆ ಕಾನೂನು?: ಎಲ್ಪಿಜಿ ಆದೇಶ 2000 ಕಂಡಿಕೆ ಮೂರು ಅಥವಾ ಕರ್ನಾಟಕ ಪ್ರಿವೆನ್ಷನ್ ಆಫ್ ಅನ್ ಅಥಾರೈಜ್ಡ್ ಪೊಸಿಷನ್ ಆಫ್ ರೇಷನ್ ಕಾರ್ಡ್ ಆದೇಶ 1977ರ ಕಂಡಿಕೆ ಮೂರರ (ಕೆಪಿಯುಪಿಆರ್ಸಿ) ಪ್ರಕಾರ ಇಎಂ,ಆರ್.ಆರ್.ಸಂಖ್ಯೆ ನೀಡದೆ ನಿಯಮ ಉಲ್ಲಂಘಿಸದರೆ ಅಂತಹ ಫಲಾನುಭವಿಗಳ ಸೌಲಭ್ಯಗಳನ್ನು ರದ್ದುಪಡಿಸಲಾಗುವುದು ಎಂದು ಸೂಚಿಸಲಾಗಿದೆ.
ಆದರೆ ರೇಷನ್ ಕಾರ್ಡ್ ನವೀಕರಿಸುವಾಗ ಬಯೋವುಟ್ರಿಕ್ನಲ್ಲಿ ಈ ಎಲ್ಲಾ ದಾಖಲೆ ಪಡೆದು ಬೆರಳಿನ ಗುರುತು ಮತ್ತು ಜೀವಂತ ವ್ಯಕ್ತಿಗಳ ಭಾವಚಿತ್ರ ಸೆರೆಹಿಡಿದು ದಾಖಲಿಸಬೇಕಾಗಿರುವುದು ಕಡ್ಡಾಯ. ಈ ನಿಯಮ ಪಾಲಿಸದೆ ಗೋಲ್ಮಾಲ್ ಮಾಡಿ ಬಡವರಿಗೆ ಸೇರಬೇಕಾದ ಬಿಪಿಎಲ್ ಪಡಿತರ ಕಾರ್ಡ್ ಶ್ರೀಮಂತರ ಹಾಗೂ ಮೃತ ವ್ಯಕ್ತಿಗಳ ಪಾಲಾಗಿರುವುದಕ್ಕೆ ಕಾರಣರಾದವರಿಗೆ ಯಾವ ಶಿಕ್ಷೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ಅಧಿಕಾರಿಗಳೇ ಉತ್ತರಿಸಬೇಕಾಗಿದೆ.
- ಪಂಪಯ್ಯ ಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

