ರಾಯಚೂರು

ಇಂದು ಮತದಾನ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಮಾ.6
ನಗರ ಮತ್ತು ಸ್ಥಳೀಯ ಸಂಸ್ಥೆಗಳ ಮತದಾನಕ್ಕಾಗಿ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ನಗರ ಸೇರಿದಂತೆ ಜಿಲ್ಲೆಯ ಎರಡು ನಗರಸಭೆ, ಮೂರು ಪುರಸಭೆ ಮತ್ತು ಒಂದು ಪ.ಪಂ.ಗೆ ಮಾ.7ರಂದು ಮತದಾನ ನಡೆಯಲಿದೆ. ನಿಯೋಜಿತ ಸಿಬ್ಬಂದಿ ಮತಯಂತ್ರಗಳೊಂದಿಗೆ ಸೂಚಿಸಿದ ಮತಗಟ್ಟೆಗಳಿಗೆ ತೆರಳಿದರು.
ಜಿಲ್ಲೆಯ ರಾಯಚೂರು ಮತ್ತು ಸಿಂಧನೂರು ನಗರಸಭೆಗಳು, ಮಾನವಿ, ಲಿಂಗಸ್ಗೂರು ಮತ್ತು ದೇವದುರ್ಗ ಪುರಸಭೆಗಳು ಹಾಗೂ ಮುದಗಲ್ ಪಟ್ಟಣ ಪಂಚಾಯಿತಿಗೆ ಮಾ.7 ರಂದು ಒಟ್ಟು 151 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದ್ದು, 757 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾರರು ಈ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸಲಿದ್ದಾರೆ.
ಮತಗಟ್ಟೆ: ಮತದಾನಕ್ಕಾಗಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ರಾಯಚೂರಿನಲ್ಲಿ 189 ಮತಗಟ್ಟೆಗಳು, ಸಿಂಧನೂರು-68, ಮಾನವಿ-34, ಲಿಂಗಸ್ಗೂರು- 27, ದೇವದುರ್ಗ-25 ಹಾಗೂ ಮುದಗಲ್ ನಲ್ಲಿ 23 ಮತಗಟ್ಟೆಗಳೂ ಸೇರಿದಂತೆ  ಜಿಲ್ಲಾದ್ಯಂತ ಒಟ್ಟು 366 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 366 ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ 39 ಮತ ಯಂತ್ರಗಳನ್ನು ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ತಿಳಿಸಿದ್ದಾರೆ.
ಅವಿರೋಧ ಆಯ್ಕೆ: ಈ ಮಧ್ಯೆ ಜಿಲ್ಲೆಯಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಒಟ್ಟು 3,20,887 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಅದರಲ್ಲಿ 163450 ಪುರುಷರು ಹಾಗೂ 157437 ಮಹಿಳಾ ಮತದಾರರಿದ್ದಾರೆ. ಅಕ್ರಮ ಮತದಾನ ತಡೆಗೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ತರಬೇತಿ ಪಡೆದ ಸಿಬ್ಬಂದಿ ಆಯಾ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಮತ ಎಣಿಕೆ ಕೇಂದ್ರದಿಂದ ಬುಧವಾರ ಬೆಳಗ್ಗೆ ಮತಯಂತ್ರಗಳೊಂದಿಗೆ ಸೂಚಿಸಿದ ಮತಗಟ್ಟೆಗಳಿಗೆ ತೆರಳಿದರು. ನಗರ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಈಗಾಗಲೇ ಮಾನವಿ, ದೇವದುರ್ಗ ಮತ್ತು ಲಿಂಗಸ್ಗೂರುಗಳಲ್ಲಿ ತಲಾ ಒಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ. ಸದ್ಯ 151 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ನ 148 ಅಭ್ಯರ್ಥಿಗಳು, ಬಿಜೆಪಿಯ 111, ಜೆಡಿಎಸ್‌ನ 138, ಬಿಎಸ್ಸಾರ್ ಕಾಂಗ್ರೆಸ್‌ನ 118, ಎಸ್‌ಡಿಪಿಐನ 02, ಸಿಪಿಎಂನ 3, ಕೆಜೆಪಿಯ 76, ಪಕ್ಷೇತರರಾಗಿ 149, ಜೆಡಿಯುನ 9, ಎನ್ ಸಿಪಿಯ 1, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ 2 ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ನೇಮಕ: ಚುನಾವಣೆ ಕಾರ್ಯದ ವೀಕ್ಷಕರಾಗಿ ಬೆಂಗಳೂರಿನ ಕೆಎಸ್‌ಟಿಡಿಸಿ ಪ್ರಧಾನ ವ್ಯವಸ್ಥಾಪಕ ವಿರೂಪಾಕ್ಷಿ ಹಾಗೂ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಎಂಡಿ ಜಿ.ಎನ್. ಶಿವಮೂರ್ತಿ ನೇಮಕಗೊಂಡಿದ್ದಾರೆ. ಜಿಲ್ಲಾದ್ಯಂತ ಈಗಾಗಲೇ ಚುನಾವಣೆಯ ಉಸ್ತುವಾರಿ ನಡೆಸಿದ್ದಾರೆ.
ಈ ಮಧ್ಯೆ ಚುನಾವಣೆಯ ಮತದಾನ ಕಾರ್ಯಕ್ಕಾಗಿ 366 ಜನರನ್ನು ಅಧ್ಯಕ್ಷಾಧಿಕಾರಿ, ಮೊದಲ ಮತದಾನಾಧಿಕಾರಿ ಹಾಗೂ ಮತದಾನಾಧಿಕಾರಿಗಳಾಗಿ ತಲಾ 366 ಜನರನ್ನು ನೇಮಿಸಲಾಗಿದೆ. 145 ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ನೌಕರರಿಗೆ ವೇತನ ಸಹಿತ ರಜೆ
ರಾಯಚೂರು: ಜಿಲ್ಲೆಯಲ್ಲಿ ಮಾ.7ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಿ ಕಚೇರಿಗಳು, ಬ್ಯಾಂಕುಗಳಿಗೆ ಈಗಾಗಲೇ ರಜೆ ಘೋಷಿಸಿದ್ದು, ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ದಿನಗೂಲಿ ನೌಕರರಿಗೆ ವೇತನ ಸಹಿತ ರಜೆ ನೀಡುವಂತೆ ಜಿಲ್ಲಾಡಳಿತ ಸೂಚಿಸಿದೆ. ಈ ಕುರಿತು ಅಪರ ಜಿಲ್ಲಾಧಿಕಾರಿ ತಿಮ್ಮಪ್ಪ ಆದೇಶ ಹೊರಡಿಸಿದ್ದು, ಬಿಸಿನೆಸ್ ಟ್ರೇಡ್ ಇಂಡಸ್ಟ್ರಿಯಲ್ ಅಂಡರಟೇಕಿಂಗ್ ಅಥವಾ ಇನ್ನಿತರ ಸಂಸ್ಥೆಗಳಲ್ಲಿ ದಿನಗೂಲಿ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಮಾ.7ರಂದು ವೇತನ ಸಹಿತ ರಜೆ ನೀಡುವಂತೆ ಆದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.