ಯುಜಿಡಿ ಯೋಜನೆ ಜಾರಿಗೆ ಆದ್ಯತೆ
ಕನ್ನಡಪ್ರಭ ವಾರ್ತೆ, ಸಿಂಧನೂರು, ಮಾ.11
ನಗರಸಭೆ ನಿಚ್ಚಳ ಬಹುಮತ ಪಡೆದಿದ್ದು, ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರನ್ನು ಮಂಗಳವಾರ ಅವರ ನಿವಾಸದಲ್ಲಿ ನೂರಾರು ಅಭಿಮಾನಿಗಳು ಕೆಂಪು ಗುಲಾಲು, ಹೂಮಾಲೆಗಳನ್ನು ಹಾಕುವ ಸಂಭ್ರಮದಲ್ಲಿದ್ದಾಗ ಅವರನ್ನು 'ಕನ್ನಡಪ್ರಭ' ಸಂದರ್ಶಿಸಿದಾಗ ಕೇಳಿಬಂದ ಮಾತುಗಳಿವು...
ತಮ್ಮ ಪಕ್ಷ ನಗರಸಭೆಯಲ್ಲಿ ಅಧಿಕಾರಕ್ಕೆ ಬಂದಿದೆ. ತಮಗೆ ಏನೆನಿಸುತ್ತಿದೆ?
ನಿಜವಾಗಿಯೂ ನನಗೆ ತುಂಬಾ ಖುಷಿಯಾಗಿದೆ. ಇದು ಜನತೆಯ ಆಶೀರ್ವಾದವೆಂದು ಭಾವಿಸಿದ್ದೇನೆ. 10 ವರ್ಷಗಳಿಂದ ಸಿಂಧನೂರು ಜನತೆ ಬೇರೆ ಬೇರೆ ಪಕ್ಷಗಳ ದುರಾಡಳಿತಕ್ಕೆ ಬೇಸತ್ತಿದ್ದಾರೆ. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹೊಸ ಪಕ್ಷಗಳ ಪೊಳ್ಳು ಭರವಸೆಗಳನ್ನು, ಮೊಸಳೆ ಕಣ್ಣಿರನ್ನು ತಿರಸ್ಕರಿಸಿದ್ದಾರೆ.
ನಗರಸಭೆಗೆ ಸಂಬಂಧಿಸಿದಂತೆ ನಿಮ್ಮ ಪಕ್ಷದ ಆದ್ಯತೆಗಳೇನು?
ನೆನೆಗುಂದಿಗೆ ಬಿದ್ದಿರುವ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. 2006 ರಲ್ಲಿ ವಿಶ್ವ ಬ್ಯಾಂಕಿನ ನೆರವಿನೊಂದಿಗೆ ಆರಂಭಗೊಂಡ ಯುಜಿಡಿ ಯೋಜನೆ(ಅಂಡರ್ಗ್ರೌಂಡ್ ಡ್ರೈನೇಜ್ ಸ್ಕೀಂ- ಒಳಚರಂಡಿ ಯೋಜನೆ)ಯನ್ನು ಕಳೆದ 5 ವರ್ಷಗಳ ಆಡಳಿತ ನಡೆಸಿದ ಜೆಡಿಎಸ್ ಉದ್ದೇಶಪೂರ್ವಕವಾಗಿ ನೆನಗುದಿಗೆ ಬಿಳುವಂತೆ ಮಾಡಿದೆ. ಮೂರು ಬಾರಿ ಟೆಂಡರ್ಗಳು ರದ್ದಾಗಲು ಜೆಡಿಎಸ್ನ ಆಡಳಿತದ ವೈಫಲ್ಯವೇ ಕಾರಣ. ಜನತೆ ಈ ಬಾರಿ ಕಾಂಗ್ರೆಸ್ಗೆ 18 ಸ್ಥಾನಗಳಲ್ಲಿ ಗೆಲವು ನೀಡುವ ಮೂಲಕ ನಿಚ್ಚಳ ಬಹುಮತ ನೀಡಿದ್ದಾರೆ. ಜನರ ನಿರೀಕ್ಷೆಗನುಗುಣವಾಗಿ ಎಲ್ಲಾ ವಾರ್ಡ್ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜೊತೆಗೆ ವಿಶ್ವ ಬ್ಯಾಂಕಿನ ಮಹತ್ವಾಕಾಂಕ್ಷಿ ಯೋಜನೆ ಯುಜಿಡಿಗೆ ಮೊದಲ ಆದ್ಯತೆ ನೀಡಲಾಗುವುದು.
ಈ ಚುನಾವಣೆ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆಯೇ?
ಈ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜ್ಯದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ವಿಜಯಿಯಾಗಿದ್ದಾರೆ. ಇಡೀ ರಾಜ್ಯದಲ್ಲಿ ಜನತೆ ಕಾಂಗ್ರೆಸ್ನ್ನು ಪುರಸ್ಕರಿಸಿ ಆಶೀರ್ವದಿಸಿದ್ದಾರೆ. ಇದನ್ನು ಗಮನಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮಾಜಿ ಸಂಸದ, ಬಿಎಸ್ಆರ್ ಪಕ್ಷದ ರಾಜ್ಯಮುಖಂಡ ಕೆ. ವಿರೂಪಾಕ್ಷಪ್ಪನವರ ಹಿಡಿತದಲ್ಲಿರುವ ಸುಕಾಲಪೇಟೆಯ ಮೂರು ವಾರ್ಡ್ಗಳನ್ನು ಬೇಧಿಸಲು ನಿಮ್ಮ ಪಕ್ಷ ಯಶಸ್ವಿಯಾಗಿದೆಯೇ?
ಮಾಜಿ ಸಂಸದ ವಿರೂಪಾಕ್ಷಪ್ಪನವರ ಹಿಡಿತದಲ್ಲಿದ್ದ ಸುಕಾಲಪೇಟೆಯ ವಾರ್ಡ್ ನಂ. 26ರಲ್ಲಿ ಕಾಂಗ್ರೆಸ್ ಗೆಲವು ಸಾಧಿಸುವ ಮೂಲಕ ಅಲ್ಲಿನ ಭದ್ರಕೋಟೆಯನ್ನು ಬೇಧಿಸಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ವಾರ್ಡ್ ನಂ.26 ಹಾಗೂ 27 ರಲ್ಲಿ ಬಹುಮತ ಸಾಧಿಸಲಿದೆ. ಅಲ್ಲದೆ ಕೆಜೆಪಿ ಹಿಡಿತದಲ್ಲಿರುವ ಕೋಟೆಯನ್ನು ಅಲುಗಾಡಿಸಲಿದೆ.
ಕೆಜೆಪಿಯ ನಿಯೋಜಿತ ಅಭ್ಯರ್ಥಿ, ನಿಮ್ಮ ಅಳಿಯ ರಾಜಶೇಖರ ಪಾಟೀಲರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಾ?
ಈ ಬಗ್ಗೆ ಎರಡು ಪಕ್ಷಗಳು ರಾಜ್ಯ ಮುಖಂಡರು ತೀರ್ಮಾನಿಸುತ್ತಾರೆ. ಸ್ಥಳೀಯವಾಗಿ ಸಂಬಂಧಗಳೇ ಬೇರೆ ರಾಜಕಾರಣವೇ ಬೇರೆ. ರಾಜಕೀಯಕ್ಕೂ ಸಂಬಂಧಗಳಿಗೂ ತಾಳೆ ಹಾಕಬಾರದು ಎಂದು ಚುಟುಕಾಗಿ ಉತ್ತರಿಸಿದರು.
ಪಿಎಸ್ಐ ಲಿಂಗಪ್ಪನವರ ಮೇಲೆ ಕಾಂಗ್ರೆಸ್ ದೂರು ನೀಡಿದ್ದೇಕೆ?
ಮತದಾನ ನಡೆದ ದಿನ ವಾರ್ಡ್ ನಂ. 7ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕಕುಮಾರ ಅವರ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರು ದಾಂಧಲೆ ಮಾಡುತ್ತಿದ್ದಾಗ ಪಿಎಸ್ಐ ಲಿಂಗಪ್ಪ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದರಿಂದ ಅನಿವಾರ್ಯವಾಗಿ ದೂರನ್ನು ಸಲ್ಲಿಸಲಾಗಿದೆ. ತಮ್ಮ ಅಭ್ಯರ್ಥಿ ಅಶೋಕಕುಮಾರ ಅವರ ಮೇಲೆ ಹಲ್ಲೆ ನಡೆದಿಲ್ಲ. ಇದೆಲ್ಲ ವಿರೋಧ ಪಕ್ಷದವರ ಪಿತೂರಿ.
ನಾಲ್ಕು ಬಾರಿ ಆಯ್ಕೆಯಾಗಿರುವ ಜಾಫರ್ ಜಾಗೀರದಾರ ಮುಂದಿನ ಅಧ್ಯಕ್ಷರಾಗುವರೇ?
ಮೀಸಲಾತಿ ಬರುವುದರ ಮೇಲೆ ಅಧ್ಯಕ್ಷ, ಉಪಾಧ್ಯಕ್ಷರ ತೀರ್ಮಾನವಾಗುತ್ತದೆ. ಆದರೆ ಜಾಗೀರದಾರ ಅನುಭವಿ. ಒಂದು ವೇಳೆ ಅದೇ ವರ್ಗಕ್ಕೆ ಮೀಸಲಾತಿ ಬಂದರೆ ಎಲ್ಲರ ಸಹಕಾರ, ಸಲಹೆಗಳನ್ವಯ ಅಧ್ಯಕ್ಷರನ್ನಾಗಿ ಮಾಡಲಾಗುವುದು.
ಜನತೆಗೆ ತಮ್ಮ ಭರವಸೆಗಳೇನು?
ನಗರದ ಎಲ್ಲಾ ವಾರ್ಡ್ಗಳಲ್ಲಿ ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಒಳಚರಂಡಿ, ಬೀದಿ ದೀಪ, ಮಹಿಳಾ ಶೌಚಾಲಯಗಳ ನಿರ್ಮಾಣ ಮಾಡಲಾಗುವುದು. ಮುಖ್ಯವಾಗಿ ಪಕ್ಷದ ಗೆಲವಿಗೆ ಕಾರಣರಾದ ಹಿರಿಯ ಮುಖಂಡರ ಮಾರ್ಗದರ್ಶನ, ಕಾರ್ಯಕರ್ತರ ಪರಿಶ್ರಮ, ಮತದಾರರ ಒಲವು ಕಾರಣ. ಪಕ್ಷದ ಗೆಲವಿಗೆ ಕಾರಣರಾದ ಮತದಾರ ಪ್ರಭುಗಳಿಗೆ ಅಭಿನಂದನೆಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

