ರಾಯಚೂರು

ಪ್ರಜಾಪ್ರಭುತ್ವ ರಕ್ಷಣೆಯಲ್ಲಿ ಮಾಧ್ಯಮ ಪಾತ್ರ ಹಿರಿದು: ವೈಜನಾಥ

Published On :

ರಾಯಚೂರು: ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಹಿರಿದಾದುದು. ಮಾಧ್ಯಮಗಳ ಸಕ್ರಿಯ ಕಾರ್ಯನಿರ್ವಹಣೆಯಿಂದಾಗಿ ರಾಜ್ಯದ ಹೈ.ಕ. ಭಾಗಕ್ಕೆ ವಿಶೇಷ ಸ್ಥಾನಮಾನ ದೊರೆತಿದೆ ಎಂದು ಹೈ.ಕ. ಹೋರಾಟ ಸಮಿತಿ ಮುಖಂಡ ಹಾಗೂ ಮಾಜಿ ಸಚಿವ ವೈಜನಾಥ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದಲ್ಲಿ ಜಿಪಂ ಸಭಾಂಗಣದಲ್ಲಿ ಮಂಗಳವಾರ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ 371ನೇ ಕಲಂ(ಜೆ) ಅನುಷ್ಠಾನ ವಿಚಾರ ಸಂಕಿರಣದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.
ಸಮ್ಮತಿ: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ತಂದುಕೊಡುವಲ್ಲಿ ಅನೇಕ ಸಂಘಟನೆಗಳು ನಿರಂತರ ಹೋರಾಟ ನಡೆಸಿದವು. ಅವುಗಳಿಗೆ ಬೆಂಬಲವಾಗಿ ಮಾಧ್ಯಮಗಳು ಸಹ ಬೆಂಬಲಿಸಿದ್ದರಿಂದ ಇಂದು ಕೇಂದ್ರ ಸರ್ಕಾರ ಮಣಿದು ವಿಶೇಷ ಸ್ಥಾನಮಾನ ನೀಡಿಕೆಗೆ ಸಮ್ಮತಿಸಿದೆ ಎಂದು ಹೇಳಿದರು.
371ನೇ ಕಲಂ (ಜೆ) ವಿಶಿಷ್ಟವಾಗಿದ್ದು, ಉದ್ಯೋಗ, ಶಿಕ್ಷಣ ಮತ್ತು ಮೂಲಸೌಕರ್ಯಾಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ದೊರೆಯಲಿದೆ. ಆ ಮೂಲಕ ಈ ಭಾಗದ ಸಮಗ್ರ ಪ್ರಗತಿ ಸಾಧ್ಯವಾಗಲಿದೆ. ಕೇಂದ್ರವು ಈಗಾಗಲೇ 371ನೇ ಕಲಂ(ಜೆ) ಗೆ ಒಪ್ಪಿಗೆ ಸೂಚಿಸಿದೆ. ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಮೇಲೆ ಬಹುದೊಡ್ಡ ಹೊಣೆಗಾರಿಕೆಯಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಕಾನೂನು ರೂಪಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. ಕಾನೂನು ರೂಪಿಸುವುದಕ್ಕೂ ಮುನ್ನ ಹೈ.ಕ. ಭಾಗದ ಹೋರಾಟಗಾರರು, ಪತ್ರಕರ್ತರು ಹಾಗೂ ರಾಜಕೀಯ ನಾಯಕರ ಸಭೆ ಕರೆದು ಚರ್ಚಿಸಿ ಕಾನೂನಿಗೆ ಅಂತಿಮ ರೂಪ ನೀಡಬೇಕು. ಆಗ ಮಾತ್ರ ಇದುವರೆಗೆ ಆಗಿರುವ ತಾರತಮ್ಯ ನಿವಾರಣೆಯಾಗಲು ಸಾಧ್ಯ ಎಂದು ಸಲಹೆ ನೀಡಿದರು.
ಈ ನಿಟ್ಟಿನಲ್ಲಿ ಮಾಧ್ಯಮಗಳು ರಾಜ್ಯ ಸರ್ಕಾರದ ಮೇಲೆ ನಿರಂತರ ನಿಗಾಯಿರಿಸಿ ಕಾನೂನು ರಚನೆ ವೇಳೆ ಲೋಪವಾಗದಂತೆ ಎಚ್ಚರಿಸುವುದು ಅವಶ್ಯಕ. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಮರೀಚಿಕೆಯಾಗಲಿದೆ ಎಂದು ವೈಜನಾಥ ಪಾಟೀಲ್ ಹೇಳಿದರು.
ಕಾನೂನು ಜಾರಿ ಅಗತ್ಯ: ಸಿಎಂ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹೈ.ಕ. ಭಾಗದಲ್ಲಿ ವೈಜನಾಥ ಪಾಟೀಲ್ ಮತ್ತಿತರರ ನಿರಂತರ ಹೋರಾಟದ ಫಲವಾಗಿ 371ನೇ ಕಲಂ ಅಡಿ ವಿಶೇಷ ಸ್ಥಾನಮಾನ ಲಭ್ಯವಾಗಿದೆ. ಆದರೆ ಈ ನಿಟ್ಟಿನಲ್ಲಿ ಕಾನೂನು ಜಾರಿಯಾಗುವ ಅವಶ್ಯಕತೆಯಿದೆ ಎಂದು ಹೇಳಿದರು.
ವಿಶೇಷ ಸ್ಥಾನಮಾನವನ್ನು ತಂದುಕೊಡುವಲ್ಲಿ ಮಾಧ್ಯಮ ಸೇರಿದಂತೆ ವಿವಿಧ ಸಂಘಟನೆಗಳ ಪಾತ್ರ ದೊಡ್ಡದು. ಆದರೆ ಕೇಂದ್ರ ಸರ್ಕಾರದ ನಾಯಕರು ಹಾಗೂ ಸಚಿವರು ಇದು ತಮ್ಮಿಂದಲೇ ಸಾಧ್ಯವಾಗಿದೆ ಎಂದು ಬಿಂಬಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿಶೇಷ ಸ್ಥಾನಮಾನ ತಂದುಕೊಟ್ಟಿದ್ದಾಗಿ ಕಾಂಗ್ರೆಸ್‌ನಿಂದ ಸನ್ಮಾನ ಸಮಾರಂಭ ಆಯೋಜಿಸುತ್ತಿರುವುದು ಸಮಂಜಸವಲ್ಲ. ಹೈ.ಕ. ಭಾಗದ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಮತ್ತು ಧರಂಸಿಂಗ್ ಅವರು ತಮ್ಮ ಕರ್ತವ್ಯ ಪ್ರಜ್ಞೆ ಮೆರೆದು ಸ್ಥಾನಮಾನ ನೀಡಿಕೆಯಲ್ಲಿ ಶ್ರಮಿಸಿದ್ದಾರಷ್ಟೇ ಎಂದು ಹೇಳಿದರು.
ಉಪಸ್ಥಿತಿ: ಸಮಾರಂಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶಂಕ್ರಪ್ಪ, ಡಾ.ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ತ್ರಿವಿಕ್ರಮ್ ಜೋಷಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಗಸ್ತಿ, ಎಪಿಎಂಸಿ ಅಧ್ಯಕ್ಷ ಆರ್.ತಿಮ್ಮಯ್ಯ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಮಾತನಾಡಿದರು. ಶಾಸಕ ಸೈಯದ್ ಯಾಸೀನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಜಿಪಂ ಅಧ್ಯಕ್ಷೆ ಲಲಿತಮ್ಮ, ಆರ್ ಡಿಎ ಅಧ್ಯಕ್ಷ ರಾಜಕುಮನಾರ್, ಜಿಲ್ಲಾ ವಾರ್ತಾಧಿಕಾರಿ ಟಿ. ಕನುಮಪ್ಪ ಸೇರಿದಂತೆ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲೆಡೆಯಿಂದ ಆಗಮಿಸಿದ್ದ ಪತ್ರಕರ್ತರು ಹಾಗೂ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನಾಯಕ ಟೀಕೆಗೆ ಜಯಣ್ಣ ಆಕ್ಷೇಪ
ರಾಯಚೂರು: 371ನೇ ಕಲಂ (ಜೆ) ಜಾರಿಗೆ ತಾವೇ ಕಾರಣರೆಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಧರಂಸಿಂಗ್ ಬೀಗುತ್ತಿದ್ದಾರೆ. ಆದರೆ ವಿಶೇಷ ಸ್ಥಾನಮಾನ ಹೋರಾಟಗಾರರಿಂದ ಸಾಧ್ಯವಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕರ ಟೀಕೆಗೆ ನಗರಸಭೆಯ ಹಿರಿಯ ಸದಸ್ಯ ಕಾಂಗ್ರೆಸ್‌ನ ಜಯಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ನಗರದಲ್ಲಿ ಮಂಗಳವಾರ ಮಾಧ್ಯಮ ಅಕಾಡೆಮಿಯಿಂದ ಆಯೋಜಿಸಿದ್ದ 371ನೇ ಕಲಂ (ಜೆ) ಕುರಿತ ವಿಚಾರ ಸಂಕಿರಣದ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕ ಅವರು ಭಾಷಣ ಮಾಡುವ ವೇಳೆ ಸಚಿವ ಖರ್ಗೆ ಮತ್ತು ಧರಂಸಿಂಗ್ ಅವರಿಂದಲೇ ವಿಶೇಷ ಸ್ಥಾನಮಾನ ದೊರತಿಲ್ಲ. ಅನೇಕ ಹೋರಾಟಗಳ ನಂತರ ಅದು ಸಾಧ್ಯವಾಗಿದೆ. ತಿದ್ದುಪಡಿ ಜಾರಿಗೆ ತರುವುದು ಈ ಇಬ್ಬರು ನಾಯಕರ ಕರ್ತವ್ಯವಷ್ಟೇ ಎಂದು ಹೇಳಿದರು.
ಈ ವೇಳೆ ಸಭೆಯಲ್ಲಿದ್ದ ನಗರಸಭೆಯ ಹಿರಿಯ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಜಯಣ್ಣ ಅವರು ಈ ರೀತಿಯ ಟೀಕೆ ಮಾಡುವುದು ಸರಿಯಲ್ಲ. ಹಾಗೆಯೇ ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸಲು ಇದು ಸೂಕ್ತ ವೇದಿಕೆಯಲ್ಲ. ವೇದಿಕೆಗೆ ಗೌರವ ನೀಡುವ ನಿಟ್ಟಿನಲ್ಲಿ ರಾಜಕೀಯೇತರ ವಿಚಾರಗಳನ್ನು ಮಂಡಿಸುವಂತೆ ಆಗ್ರಹಿಸಿದರು. ನಂತರ ಶಿವನಗೌಡ ನಾಯಕ ಅವರು ಈ ವಿಚಾರವನ್ನು ಕೈಬಿಡುವ ಮೂಲಕ ಪರಿಸ್ಥಿತಿ ತಿಳಿಯಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.