ರಾಯಚೂರು

ವಿದ್ಯುತ್ ಕಳವಿಗೆ ಮೂಗುದಾರ ಹಾಕಿ: ಶ್ರೀನಿವಾಸಮೂರ್ತಿ

Published On :

ಕ.ಪ್ರ. ವಾರ್ತೆ, ಗುಲ್ಬರ್ಗ, ಮಾ.12
ವಿದ್ಯುತ್ ಸರಬರಾಜಿನ ಗುಣಮಟ್ಟ ಹೆಚ್ಚಿಸಿ, ವಿದ್ಯುತ್ ಕಳವು ಹಾಗೂ ವಿದ್ಯುತ್ ಪರಿಕರಗಳ ಅಸುರಕ್ಷತೆಗಳನ್ನು ನಿವಾರಿಸಲು ಜೆಸ್ಕಾಂ ವ್ಯವಸ್ಥಿತವಾದ ಕ್ರಿಯಾ ಯೋಜನೆಯನ್ನು ರಚಿಸಿ ಕೂಡಲೇ ಕಾರ್ಯತತ್ಪರರಾಗಬೇಕು ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶ್ರೀನಿವಾಸಮೂರ್ತಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮನೋಜ್‌ಕುಮಾರ್ ಮೀನಾ ಅವರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಆರ್ಥಿಕ ವರ್ಷ 2014- 16ನೇ ಸಾಲಿನ ನಿರೀಕ್ಷಿತ ಕಂದಾಯದ ಆರ್ಥಿಕ ವರ್ಷ 2012ನೇ ಕಾರ್ಯನಿರ್ವಹಣೆ ಪರಿಶೀಲನೆ ಮತ್ತು ಆರ್ಥಿಕ ವರ್ಷ 2014ನೇ ಸಾಲಿಗೆ ದರ ಪರಿಷ್ಕರಣೆ ಕುರಿತು ಸಾರ್ವಜನಿಕ ಅಹವಾಲುಗಳ ವಿಚಾರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಸಮಾಧಾನ: ವಿದ್ಯುತ್ ಸಮಸ್ಯೆ ಬಗ್ಗೆ ಗುಲ್ಬರ್ಗದಲ್ಲಿ ಸಾಕಷ್ಟು ಗ್ರಾಹಕರು ಗುಣಮಟ್ಟ, ಕಳವು ಹಾಗೂ ಅಸುರಕ್ಷಿತ ವಿದ್ಯುತ್ ಪರಿಕರಗಳನ್ನು ನಿಭಾಯಿಸುವ ಜೆಸ್ಕಾಂ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಕಳ್ಳತನದ ಹಲವು ಪ್ರಕರಣಗಳನ್ನು ಗ್ರಾಹಕರು ಆಯೋಗದ ಗಮನಕ್ಕೆ ತಂದಿದ್ದಾರೆ. ಅವರ ನೆರವಿನೊಂದಿಗೆ ವಿದ್ಯುತ್ ಕಳ್ಳತನವಾಗುತ್ತಿರುವ ಪ್ರದೇಶಗಳಲ್ಲಿ ಅಕ್ರಮ ಹತ್ತಿಕ್ಕುವಂತೆ ಜೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪ್ರಸಕ್ತ ಸಾಲಿನಲ್ಲಿ ವಿವಿಧ ರೀತಿಯ ವಿದ್ಯುತ್ ಅಘಾತಗಳಿಗೆ 193 ಮಂದಿ ಪ್ರಾಣ ಕಳೆದುಕೊಂಡಿರುವುದು ಗಂಭೀರವಾದ ವಿಷಯ. ಇನ್ನುಮುಂದೆ ಅಂತಹ ವಿದ್ಯುತ್ ಅಘಾತಗಳಿಗೆ ಜಾನುವಾರುಗಳು ಸೇರಿದಂತೆ ಯಾರೂ ಕೂಡ ಬಲಿಯಾಗಬಾರದು.
ಸುರಕ್ಷತಾ ಕ್ರಮ: ಅದಕ್ಕೆ ಮುಂದಿನ ಒಂದು ವಾರದೊಳಗೆ ಜನಪದ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಹೆಚ್ಚು ಪ್ರಚಾರ ನೀಡಿ, ಪ್ರಾಣ ರಕ್ಷಣೆಮಾಡುವಂತೆ ಸೂಚಿಸಿದ ಅವರು, ಗುಲ್ಬರ್ಗದಲ್ಲಿ ವಿದ್ಯುತ್ ಅವಘಡಗಳನ್ನುಂಟು ಮಾಡುವ ನಾಲ್ಕು ಸಾವಿರಕ್ಕೂ ಹೆಚ್ಚಿನ ಅಪಾಯಕಾರಿ ಸ್ಥಳಗಳಿವೆ. ಅಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿ ಹಾಗೂ ಇದೇ ರೀತಿಯ ಅಪಾಯಕಾರಿ ಸ್ಥಳಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ತೆಗೆದುಕೊಂಡು ಸುರಕ್ಷತೆಗೆ ಆದ್ಯತೆ ನೀಡಿ ಎಂದು ಶ್ರೀನಿವಾಸ ಹೇಳಿದರು.
ಅಲ್ಲದೆ ಗ್ರಾಮೀಣ ಮಟ್ಟದಲ್ಲಿಂದ ಅಸುರಕ್ಷಿತ ವಿದ್ಯುತ್ ಕಂಬಗಳು, ತಂತಿಗಳು, ಟ್ರಾನ್ಸ್‌ಫಾರಂಗಳ ಬಗ್ಗೆ ಗ್ರಾಮ ಪಂಚಾಯತ್‌ನಿಂದ ಮಾಹಿತಿ ಪಡೆದು 3 ತಿಂಗಳೊಳಗೆ ಅವುಗಳನ್ನು ದುರಸ್ತಿ ಮಾಡುವಂತೆ, ವಿದ್ಯುತ್ ಕಳ್ಳತನದ ಬಗ್ಗೆ ಸಾರ್ವಜನಿಕ ಸಹಕಾರದೊಂದಿಗೆ ಅಕ್ರಮಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ವಹಿಸುವಂತೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ನಾಗರಿಕರು, ಗಣ್ಯರು, ಜಿಲ್ಲಾ ಕೈಗಾರಿಕಾ ಸಂಸ್ಥೆ, ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ರೀತಿಯ ವಿದ್ಯುತ್ ಸಮಸ್ಯೆಗಳನ್ನು ಹಾಗೂ ಪರಿಹಾರಗಳನ್ನು ಆಯೋಗದ ಮುಂದಿಟ್ಟರು. ಆಯೋಗದ ಸದಸ್ಯರಾದ ವಿಶ್ವನಾಥ ಹಿರೇಮಠ ಹಾಗೂ ಶ್ರೀನಿವಾಸರಾವ್ ವೇದಿಕೆಯಲ್ಲಿದ್ದರು. ಜೆಸ್ಕಾಂನ ತಾಂತ್ರಿಕ ನಿರ್ದೇಶಕ ಎಂ.ಎಸ್. ಗೋಪಾಲ, ಮುಖ್ಯ ಅಭಿಯಂತರ ಸದಾಶಿವ ಸೇರಿದಂತೆ ಜೆಸ್ಕಾಂದ ವಿವಿಧ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.