ರಾಯಚೂರು

ವಿದ್ಯಾರ್ಥಿನಿಯರಿಗೆ ಎಸ್‌ಡಿಎಂಟಿ ಪಾಲಿಟೆಕ್ನಿಕ್ ಕೊಡುಗೆ

Published On :

ಕನ್ನಡಪ್ರಭ ವಾರ್ತೆ,ಸಿಂಧನೂರು,ಮಾ.15
ಅಂತಾರಾಷ್ಟ್ರೀಯ ಮಹಿಳಾ ವರ್ಷಕ್ಕೆ ಉಡುಗೊರೆಯಾಗಿ ನಗರದ ಎಸ್‌ಡಿಎಂಟಿ ಪಾಲಿಟಿಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಎಂಜನಿಯರಿಂಗ್ ವಿಭಾಗದಲ್ಲಿ ತಲಾ 6ರಂತೆ 12 ಸೀಟುಗಳನ್ನು ಹೆಣ್ಣು ಮಕ್ಕಳಿಗೆ ಉಚಿತವಾಗಿ ನೀಡಲಾಗುವುದೆಂದು ಕಾಲೇಜಿನ ಆಡಳಿತಾಧಿಕಾರಿ ಶರಣು ಪಾ. ಹಿರೇಮಠ ಘೋಷಿಸಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವಿಶ್ವದ ಪ್ರತಿಷ್ಠಿತ ಟಾಟಾ ಸಂಸ್ಥೆಗೆ ವಿಜ್ಞಾನಿಯ ಹುದ್ದೆಗೆ ಎಸ್‌ಡಿಎಂಟಿ ಪಾಲಿಟಿಕ್ನಿಕ್ ಕಾಲೇಜಿನ ಉಪನ್ಯಾಸಕಿ ರಾಜೇಶ್ವರಿ ಅವರು ಆಯ್ಕೆಯಾದ ಪ್ರಯಕ್ತ ಅವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ನೂತನ ಯೋಜನೆ ಘೋಷಣೆ ಮಾಡಿ ಅವರು ಮಾತನಾಡಿದರು.
ಈ ವಿಭಾಗಕ್ಕೆ ದೇಶದಲ್ಲಿ ತುಂಬಾ ಬೇಡಿಕೆಯಿದೆ. ಈಗಾಗಲೇ ವಿದೇಶಗಳಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಎಂಜನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಕೆಲಸ ಮಾಡುತ್ತಿದ್ದಾರೆ. ನಮ್ಮ ಸಂಸ್ಥೆಯಿಂದ 12 ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸೀಟು ಕೊಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಮಹಿಳಾ ಸಬಲೀಕರಣಕ್ಕೆ ಯೋಜನೆ: ತಾಲೂಕಿನ ಚಿಕ್ಕ ಗ್ರಾಮ ಮಲ್ಕಾಪುರದ ಯುವತಿ ವಿಶ್ವದ ಪ್ರತಿಷ್ಠಿತ ಟಾಟಾ ಸಂಸ್ಥೆಗೆ ವಿಜ್ಞಾನಿಯ ಹುದ್ದೆಗೆ ಆಯ್ಕೆಯಾಗುತ್ತಿದ್ದಾರೆ ಎಂದರೆ ನಮ್ಮ ತಾಲೂಕಿನಲ್ಲಿ ಪ್ರತಿಭಾವಂತರಿಗೆ ಬರವಿಲ್ಲ. ಇದನ್ನು ಮನಗಂಡ ಎಸ್‌ಡಿಎಂಟಿ ಸಮೂಹ ಶಿಕ್ಷಣ ಸಂಸ್ಥೆ ಈ ಭಾಗದ ಹೆಣ್ಣುಮಕ್ಕಳ ಶಿಕ್ಷಣದ ಸಬಲೀಕರಣಕ್ಕೆ ನೆರವಾಗಲು ಈ ಯೋಜನೆ ಮಾಡಿದೆ ಎಂದರು.
ಪತ್ರಕರ್ತರಾದ ಕೆ. ಶರಣಪ್ಪ ಗೋನಾಳ ಮತ್ತು ಅಮರೇಶ ಅಲಬನೂರು ಮಾತನಾಡಿ, ಈ ಯೋಜನೆ ಹೈದ್ರಾಬಾದ್ ಕರ್ನಾಟಕದ ಹೆಣ್ಣು ಮಕ್ಕಳಿಗೆ ವರದಾನವಾಗುತ್ತದೆ. ಈ ಸಂಸ್ಥೆಯಿಂದ ನೂರಾರು ವಿದ್ಯಾರ್ಥಿನಿಯರು, ರಾಜೇಶ್ವರಿ ಅವರಂತೆ ವಿಶ್ವದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿಜ್ಞಾನಿಗಳಾಗಲಿ ಎಂದು ಹಾರೈಸಿದರು.
ಅತೀವ ಸಂತಸ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಟಿ ಪಾಲಿಟೆಕ್ನಿಕ್ ಕಾಲೇಜು ಅಧ್ಯಕ್ಷ ರಾಜೇಂದ್ರ ಶೇಠ ಮಾತನಾಡಿ, ವಿಶ್ವದ ಪ್ರತಿಷ್ಠಿತ ಟಾಟಾ ಸಂಸ್ಥೆಗೆ ತಮ್ಮ ಕಾಲೇಜಿನ ಉಪನ್ಯಾಸಕಿ ರಾಜೇಶ್ವರಿ ವಿಜ್ಞಾನಿ ಹುದ್ದೆಗೆ ಆಯ್ಕೆಯಾಗುತ್ತಿರುವುದು ಅತೀವ ಸಂತಸ ತಂದಿದೆ. ಇದಲ್ಲದೆ ಈ ಭಾಗಕ್ಕೆ 371 ಕಲಂ ಜಾರಿಗೆ ಬಂದಿದ್ದು ಅದರ ಸದುಪಯೋಗವನ್ನು ಪಡೆದುಕೊಳ್ಳಲು ಸಂಸ್ಥೆ ಬದ್ಧವಾಗಿದೆ ಎಂದರು.
ಸನ್ಮಾನ: ಪ್ರತಿಷ್ಠಿತ ಟಾಟಾ ಸಂಸ್ಥೆಯ ವಿಜ್ಞಾನಿ ಹುದ್ದೆಗೆ ಆಯ್ಕೆಯಾದ ಎಸ್‌ಡಿಎಂಟಿ ಪಾಲಿಟಿಕ್ನಿಕ್ ಕಾಲೇಜಿನ ಉಪನ್ಯಾಸಕಿ ರಾಜೇಶ್ವರಿ ಅವರನ್ನು ಪ್ರಾಚಾರ್ಯರಾದ ಜೆ.ಜಿ. ನಾಗರಾಜ, ಹಿರಿಯ ಉಪನ್ಯಾಸಕರಾದ ಪಂಪಾಪತಿ, ವಿಜಯ ಕುಮಾರ, ಕೆ.ಕರಿಯಪ್ಪ ಸಾಹುಕಾರ, ಲಕ್ಷ್ಮಿಪುತ್ರ ಮತ್ತಿತರರು ಸನ್ಮಾನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.