ರಾಯಚೂರು

ಸಂಘಟನೆಯಿಂದ ಸರ್ಕಾರದ ಸವಲತ್ತು ಪಡೆಯಿರಿ

Published On :

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಮಾ.16ಯಾವುದೇ ಒಂದು ಸಮಾಜ ಸಂಘಟನೆಯಾಗಬೇಕಾದರೆ ಗುರು ಪೀಠಾಧಿಪತಿಗಳ ಮಾರ್ಗದರ್ಶನ ಅವಶ್ಯವಾಗಿದ್ದು, ಅದರಂತೆ ಸಂಘಟನೆಗೊಂಡ ಸಮಾಜದಿಂದ ಸರ್ಕಾರದ ವಿವಿಧ ಸವಲತ್ತು ಪಡೆಯಲು ಸಾಧ್ಯವಾಗುತ್ತದೆ ಎಂದು ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪಂಚಮಸಾಲಿ ಸಮಾಜದ ಸ್ವಾಭಿಮಾನಿ ಸಮಾವೇಶ ಮತ್ತು ವೀರರಾಣಿ ಕಿತ್ತೂರು ಚೆನ್ನಮ್ಮ ಅವರ 189ನೇ ವಿಜಯೋತ್ಸವ ಹಾಗೂ ಪಂಚಮಸಾಲಿ ಭವನದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸಮಾಜ ಆಡಳಿತರೂಢ ಸರ್ಕಾರದಿಂದ ನ್ಯಾಯಯುತ ಹಕ್ಕು ಪಡೆಯಲು ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದರು.
ಒಗ್ಗಟ್ಟಿದ್ದಲ್ಲಿ ಅಭಿವೃದ್ಧಿ: ರಾಜ್ಯದಲ್ಲಿ ಲಿಂಗಾಯತ ವೀರಶೈವ ಪಂಚಮಸಾಲಿ ಸಮಾಜ ಬಾಂಧವರು ಬಹುತೇಕರು ಕೃಷಿಯಲ್ಲಿ ತೊಡಗಿ, ಎಲ್ಲ ಸಮುದಾಯದೊಂದಿಗೆ ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆ.  ಒಂದು ಸಮಾಜದ ಹಿರಿಯ ನಾಯಕರು ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೂ ಸಮಾಜದ ವಿಷಯ ಬಂದಾಗ ಒಗ್ಗಟ್ಟಿನಿಂದ ಭಾಗವಹಿಸುವ ಜೊತೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು.  ಇದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಮುನ್ನಡೆಯಬೇಕೆಂದು ಕರೆ ನೀಡಿದರು.
ಜನಪ್ರತಿನಿಧಿಗಳ ನಿರ್ಲಕ್ಷ್ಯ- ವಿಷಾದನೀಯ: ಪಂಚಮಸಾಲಿ ಸಮಾಜದ ರಾಜ್ಯ ಉಪಾಧ್ಯಕ್ಷ ಜಿ.ಬಿ. ಪಾಟೀಲ ಇಲಕಲ್ ಮಾತನಾಡಿ, ರಾಜ್ಯದಲ್ಲಿ ಸುಮಾರು 85 ಲಕ್ಷ ಜನಸಂಖ್ಯೆಯುಳ್ಳ ಪಂಚಮಸಾಲಿ ಸಮಾಜ ವಿವಿಧ ಸಮಾಜದಂತೆ ಗುರುತಿಸಿಕೊಳ್ಳಲು ಕಳೆದ ಸುಮಾರು 18 ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿದ ಸಮಾಜದ ಗಣ್ಯರ ಹಾಗೂ ಮುಖಂಡರ ಶ್ರಮದಿಂದ ಫಲ ನೀಡಿದೆ.
 ಆದರೆ ಇತ್ತೀಚೆಗೆ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಅಧಿಕಾರ ಪಡೆದ ಕೆಲವರು ಸಮಾಜದ ಕಾರ್ಯಕ್ರಮ, ಸಮಾರಂಭದಲ್ಲಿ ಭಾಗವಹಿಸಿ ಅಭಿವೃದ್ಧಿಗೆ ಗಮನ ಹರಿಸದಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರು.
2ಎ ಗೆ ಸೇರ್ಪಡೆಗೊಳಿಸಲು ಒತ್ತಾಯ: ಸಮಾಜ ಬಾಂಧವರು ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲರಾಗುವುದು ಅಗತ್ಯವಾಗಿದ್ದು, ಸರ್ಕಾರದ ಜಾತಿವಾರು ಸಮೀಕ್ಷೆಯಲ್ಲಿ 2ಎ ಮತ್ತು ಕೇಂದ್ರ ಸರ್ಕಾರದ ಒಬಿಸಿ ಅಡಿಯಲ್ಲಿ ಸಮಾಜ ಸೇರ್ಪಡೆಗೊಳಿಸುವುದು ತಮ್ಮ ಬೇಡಿಕೆಯಾಗಿದೆ. ಸೇರ್ಪಡೆಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸಮಾವೇಶದಲ್ಲಿ ಪಂಚಮಸಾಲಿ ಸಮಾಜದ ಜಗದ್ಗುರು ಸಿದ್ಧಲಿಂದ ಸ್ವಾಮೀಜಿ, ಜಂಗಮರ ಹಳ್ಳಿಯ ಚಂದ್ರಮೌನೇಶ ತಾತನವರು, ಕವಿತಾಳ ಕಲ್ಮಠದ ಬಸವಲಿಂಗ ಸ್ವಾಮೀಜಿ, ಹುನಕುಂಟಿ ಶರಣಯ್ಯ ಸ್ವಾಮೀಜಿ, ಯರಡೋಣಿಯ ಮುರುಘೇಂದ್ರ ಸ್ವಾಮೀಜಿ, ಪಾಮನಕಲ್ಲೂರು ಮಹಾಲಿಂಗ ಸ್ವಾಮೀಜಿ, ಮಾಜಿ ಶಾಸಕ ಕೆ.ಶರಣಪ್ಪ ಕುಷ್ಟಗಿ, ಸಮಾಜದ ತಾಲೂಕಾಧ್ಯಕ್ಷ ವೀರೇಶ ಮುದ್ನೂರು, ಜಿಪಂ ಸದಸ್ಯರಾದ ಎಚ್.ಬಿ. ಮುರಾರಿ, ಮಹಾದೇವಪ್ಪ ಗೌಡ ಮಸ್ಕಿ, ಇಂಡಿ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಆರ್. ಪಾಟೀಲ, ಮುಖಂಡರಾದ ವಿಜಯಾನಂದ ಕಾಶಪ್ಪನವರ, ಸಿದ್ಧು ಬಂಡಿ, ಶಂಕರಗೌಡ ಅಮರಾವತಿ, ರಾಜಶೇಖರ ವಕೀಲರು, ಮಲ್ಲಣ್ಣ ಬೊಮ್ಮಸಾಗರ, ಅಮರಣ್ಣ ಗುಡದೂರ, ದೇವೇಂದ್ರಪ್ಪ ಇನ್ನಿತರರು ಇದ್ದರು.
ಸನ್ಮಾನ: ಇದೇ ವೇಳೆ ಪುರಸಭೆ ನೂತನ ಸರ್ವ ಸದಸ್ಯರಿಗೆ ಸಮಾಜದಿಂದ ಸನ್ಮಾನಿಸಲಾಯಿತು.   ಗುಲ್ಬರ್ಗ ವಿಭಾಗ ಮಟ್ಟದ ಉತ್ತಮ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರಶಸ್ತಿಗೆ ಭಾಜನರಾದ ಬಿಇಒ ಎಸ್.ಎನ್. ಪೊಲೀಸ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.