ಸುವರ್ಣ ಗ್ರಾಮೋದಯದಲ್ಲಿ ಅಕ್ರಮ: ದೂರು
ಕ.ಪ್ರ. ವಾರ್ತೆ ರಾಯಚೂರು ಮಾ.22
ತಾಲೂಕಿನ ಮರ್ಚೆಡ್ ಗ್ರಾಮದಲ್ಲಿ ಕೈಗೊಂಡ ಸುವರ್ಣ ಗ್ರಾಮೋದಯ ಯೋಜನೆಯ 3ನೇ ಹಂತದ ಕಾಮಗಾರಿಯಲ್ಲಿ ಅನುದಾನ ದುರುಪಯೋಗವಾಗಿದೆ. ಈ ಬಗ್ಗೆ ಸಲ್ಲಿಕೆಯಾಗಿರುವ ಬಿಲ್ಗಳನ್ನು ಪಾವತಿಸದಂತೆ ಜೈ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಕುರಿತು ಭೂಸೇನಾ ನಿಗಮದ ಸಹಾಯಕ ನಿರ್ದೇಶಕರಿಗೆ ಈಚೆಗೆ ಮನವಿ ಸಲ್ಲಿಸಿ, ಮರ್ಚೆಡ್ ಗ್ರಾಮದಲ್ಲಿ ಕೈಗೊಂಡ ಕಾಮಗಾರಿಯ ನೆಪದಲ್ಲಿ ಅನುದಾನ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಮುಂದಿನ ಕಾಮಗಾರಿ ಕೈಗೊಳ್ಳಲು ಅವಕಾಶ ಮಾಡಿಕೊಡಬೇಕು. ಅಕ್ರಮ ನಡೆದಿರುವ ಬಿಲ್ಗಳನ್ನು ಪಾವತಿಸದಂತೆ ಆಗ್ರಹಿಸಿದ್ದಾರೆ.
ಅನುದಾನ ದುರ್ಬಳಕೆ: ಮರ್ಚೆಡ್ ಗ್ರಾಮಕ್ಕೆ ಒಟ್ಟು ರು. 82.41 ಲಕ್ಷ ಸುವರ್ಣ ಗ್ರಾಮೋದಯ ಯೋಜನೆಯ ಮೂರನೇ ಹಂತದ ಕಾಮಗಾರಿಗಳಿಗೆ ನಿಗದಿ ಮಾಡಿತ್ತು. ಆ ಪೈಕಿ ಈಗಾಗಲೇ ರು. 49.45 ಲಕ್ಷ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿ ಬಿಲ್ ಸಲ್ಲಿಸಲಾಗಿದೆ. ಆದರೆ ಕಾಮಗಾರಿಗಳನ್ನು ಅಲ್ಪಸ್ವಲ್ಪ ನಿರ್ವಹಿಸಿರುವ ಎಂಜಿನಿಯರ್ ಜತೆ ಗ್ರಾಪಂ ಸದಸ್ಯರು ಸೇರಿಕೊಂಡು ಅನಗತ್ಯ ಸ್ಥಳಗಳಲ್ಲಿ ಕಾಮಗಾರಿ ಕೈಗೊಂಡು ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆಂದು ದೂರಿದ್ದಾರೆ.
ಕಠಿಣ ಕ್ರಮ ಕೈಗೊಳ್ಳಿ: ಕಾಮಗಾರಿ ಸದ್ಯ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಈ ಬಗ್ಗೆ ಗ್ರಾಪಂ ಪ್ರತಿನಿಧಿಗಳು ಅನುದಾನ ಮುಗಿದಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದ್ದಾಗಿ ತಿಳಿಸಿದ್ದಾರೆ. ತಾಂತ್ರಿಕ ಸಿಬ್ಬಂದಿಯ ಸೂಚನೆ, ಸಲಹೆಯಿಲ್ಲದೇ ಕಾಮಗಾರಿ ಕೈಗೊಳ್ಳಲಾಗಿದೆ. ಮೂರನೇ ತಂಡದ ಪರಿಶೀಲನೆಗೆ ಅವಕಾಶ ನೀಡದೇ ಬಿಲ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ತೀಕ್ಷ್ಣವಾಗಿ ಪರಿಗಣಿಸಿ ಬಿಲ್ ತಡೆಹಿಡಿಯಬೇಕು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ವೇಳೆ ಜೈಕರವೇ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಾರೆಪ್ಪ, ಕಾರ್ಯದರ್ಶಿ ನರಸಪ್ಪ, ಕಲ್ಮಲಾ ಹೋಬಳಿ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ, ಕಾರ್ಯದರ್ಶಿ ಕಾಶಪ್ಪ ಮಡಿವಾಳ, ಜೈಕರವೇ ಮರ್ಚೆಡ್ ಗ್ರಾಮ ಘಟಕದ ಅಧ್ಯಕ್ಷ ಎಂ. ಪ್ರಕಾಶ್ ಕುಮಾರ್ ಸೇರಿದಂತೆ ಅನೇಕರಿದ್ದರು.
'ಸುವರ್ಣ'ದಲ್ಲಿ ಅಕ್ರಮ; ಕ್ರಮಕ್ಕೆ ಆಗ್ರಹ
ರಾಯಚೂರು: ತಾಲೂಕಿನ ಮನ್ಸಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಚೆಡ್ ಗ್ರಾಮದಲ್ಲಿ ಕರ್ನಾಟಕ ಮೂಲ ಸೌಲಭ್ಯ ಇಲಾಖೆಯ ಸುವರ್ಣ ಗ್ರಾಮ ಯೋಜನೆ ಅಡಿಯ ಕಾಮಗಾರಿ ಅವೈಜ್ಞಾನಿಕವಾಗಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಕುರಿತು ಗ್ರಾಮದ ಮಹೆಬೂಬ್, ಸೋಮನಾಥ್ ಮತ್ತಿತರರು ಜಿಪಂ ಸಿಇಒ ಗೆ ದೂರು ಸಲ್ಲಿಸಿ, ಜಿಪಂ ಕ್ರಿಯಾ ಯೋಜನೆಗೂ ಕೈಗೊಳ್ಳುತ್ತಿರುವ ಕಾಮಗಾರಿಗಳಿಗೆ ತಾಳೆಯಾಗುತ್ತಿಲ್ಲ.ಅಧಿಕಾರಿಗಳು ತಮ್ಮ ಇಚ್ಛೆಗೆ ತಕ್ಕಂತೆ ಅಕ್ರಮ ಎಸಗಲು ಅನುಕೂಲಕರ ರೀತಿಯಲ್ಲಿ ಕಾಮಗಾರಿ ಕೈಗೊಳ್ಳುವ ಕಾರ್ಯಕ್ಕೆ ಮುಂದಾಗಿದ್ದಾರೆಂದು ದೂರಿದ್ದಾರೆ.
ಕ್ರಿಯಾ ಯೋಜನೆಯಂತೆ ಕಾಮಗಾರಿಗಳನ್ನು ನಡೆಸಿಲ್ಲ. ಆದರೂ ಕಾಮಗಾರಿಯ ಮೊತ್ತಕ್ಕೆ ಬಿಲ್ ಮಾಡಲಾಗಿದೆ. ಒಟ್ಟು 49.55 ಲಕ್ಷ ಮೊತ್ತದ ಕಾಮಗಾರಿಯನ್ನು ಸಂಪೂರ್ಣವಾಗಿ ಸಂಬಂಧಿಸಿದ ಇಲಾಖೆಯ ಎಂಜಿನಿಯರರು ಲೂಟಿ ಮಾಡುವ ಹುನ್ನಾರ ನಡೆಸಿದ್ದಾರೆಂದು ಆರೋಪಿಸಿದ್ದಾರೆ.
ಈ ನಿಟ್ಟಿನಲ್ಲಿ ಕೂಡಲೇ ಎಂಜಿನಿಯರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮದ ವಿವಿಧ ಪ್ರಗತಿ ಪರ ಸಂಘಟನೆಗಳೊಂದಿಗೆ ಸೇರಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

