ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗೆ ಜಯ ಕರ್ನಾಟಕ ಖಂಡನೆ
ರಾಯಚೂರು: ಕಳೆದ ಅವಧಿಗೆ ಕಾಂಗ್ರೆಸ್ ಪಕ್ಷವು 20 ತಿಂಗಳಿನಲ್ಲಿ ನಗರಸಭೆಯಲ್ಲಿ ಕೋಟ್ಯಂತರ ರು. ಕೊಳ್ಳೆ ಹೊಡೆದಿದ್ದೇ ಬಹುದೊಡ್ಡ ಸಾಧನೆಯಾಗಿದೆ. ಇಂಥ ಭ್ರಷ್ಟ ಆಡಳಿತದ ವಿರುದ್ಧ ಹೋರಾಡಿದ 27 ಸಂಘಟನೆಗಳ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ಹೇಳಿಕೆ ನೀಡಿದ್ದನ್ನು ಜಯ ಕರ್ನಾಟಕ ಸಂಘಟನೆ ಖಂಡಿಸಿದೆ.
ಈ ಕುರಿತು ಸಂಘಟನೆಯ ಜಿಲ್ಲಾಧ್ಯಕ್ಷ ಶಿವುಕುಮಾರ್ ಯಾದವ್ ಪ್ರಕಟಣೆ ನೀಡಿ, ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತವಧಿಯಲ್ಲಿ ಸಿಎಂ ವಿಶೇಷ ಅನುದಾನ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಸರ್ಕಾರದಿಂದ ಮಂಜೂರಾದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಂದ ಕ್ಷುಲ್ಲಕ ಹೇಳಿಕೆ: ನಗರದ ಜನತೆಯ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡ ಕಾಂಗ್ರೆಸ್ ಪಕ್ಷದ ನಗರಸಭೆ ಆಡಳಿತವು ನಿಯಮ ಬಾಹಿರವಾಗಿ ಅನುದಾನ ಬಳಕೆ ಮಾಡಿದ್ದು ಸಾಧನೆಯಾಗಿದೆ. ಅದನ್ನು ಪತ್ತೆ ಮಾಡಿ ಹೋರಾಟ ನಡೆಸಿದ್ದ 27 ಪ್ರಗತಿಪರ ಸಂಘಟನೆಗಳ ವಿರುದ್ಧ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಸಂತಕುಮಾರ್ ಕ್ಷುಲ್ಲಕ ಹೇಳಿಕೆ ನೀಡಿದ್ದಾರೆಂದು ದೂರಿದ್ದಾರೆ.
ನಗರದ ವಿವಿಧ ಸಂಘಟನೆಗಳ ಹೋರಾಟದ ಫಲವಾಗಿಯೇ ಅನೇಕ ಅಕ್ರಮಗಳು ಬಯಲಿಗೆ ಬಂದಿದ್ದರಿಂದ ನಗರಸಭೆಯ ಆಡಳಿತವನ್ನು ಏಕೆ ಸೂಪರ್ಸೀಡ್ ಮಾಡಬಾರದು ಎಂದು ರಾಜ್ಯ ಸರ್ಕಾರ ಪ್ರಶ್ನಿಸುವ ಹಂತಕ್ಕೆ ಹೋಗಿದ್ದು ನಗರಸಭೆಯ ಕಾಂಗ್ರೆಸ್ ಪಕ್ಷದ ಸಾಧನೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಆಯ್ಕೆಗೆ ಅಕ್ರಮಗಳೇ ಕಾರಣ: ಇತ್ತೀಚೆಗೆ ನಡೆದ ನಗರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ವಾರ್ಡುಗಳಲ್ಲಿ ಆಯ್ಕೆಯಾಗಲು ಪಕ್ಷದವರು ಮಾಡಿದ ಅಕ್ರಮಗಳೇ ಕಾರಣ. ಮತದಾರರಿಗೆ ವಿವಿಧ ಆಮಿಷಮೊಡ್ಡಲಾಗಿದೆ. ಹಣ, ಹೆಂಡ ಸೇರಿದಂತೆ ನಾನಾ ರೀತಿಯ ಆಮಿಷಗಳನ್ನೊಡ್ಡಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಇಂಥ ಅಕ್ರಮ ನಡೆದಿರುವುದು ಎಲ್ಲರಿಗೂ ತಿಳಿದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸಂಘಟನೆಗಳ ವಿರುದ್ಧ ಹಗುರವಾಗಿ ಮಾತನಾಡುವುದನ್ನು ಬಿಡಬೇಕಿದೆ. ನಗರಸಭೆಯಲ್ಲಿ ನಡೆಯುವ ಅಕ್ರಮಗಳ ವಿರುದ್ಧ ಸಂಘಟನೆಗಳು ಉಗ್ರ ಸ್ವರೂಪದ ನಿರಂತರ ಹೋರಾಟ ಮುನ್ನಡೆಸಲಿವೆ ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

