ಮತ್ತೊಮ್ಮೆ ವಿಧಾನಸೌಧಕ್ಕೆ ಕಳುಹಿಸುತ್ತೇವೆ
ಕನ್ನಡಪ್ರಭ ವಾರ್ತೆ ಸಿಂಧನೂರು ಮಾ.24
ನೀವು ನಮ್ಮೆಲ್ಲರ ಜೊತೆಗೆ ಐದು ವರ್ಷ ಸಜ್ಜನಿಕೆಯಿಂದ ನಡೆದುಕೊಂಡಿದ್ದೀರಿ. ನಾವು ಸದಾ ನಿಮ್ಮೊಂದಿಗಿದ್ದೇವೆ. ನಿಮ್ಮನ್ನು ಮತ್ತೊಮ್ಮೆ ವಿಧಾನಸೌಧಕ್ಕೆ ಕಳುಹಿಸುತ್ತೇವೆ.
- ಇದು ನಗರದ ಪಿಡಬ್ಲೂಡಿ ಕ್ಯಾಂಪಿನಲ್ಲಿ ಭಾನುವಾರ ನಡೆದ ಜೆಡಿಎಸ್ ತಾಲೂಕು ಮಟ್ಟದ ಸಮಾವೇಶದಲ್ಲಿ ಕಾರ್ಯಕರ್ತರು ಶಾಸಕ ವೆಂಕಟರಾವ್ ನಾಡಗೌಡರಿಗೆ ನೀಡಿದ ಒಕ್ಕೋರಲ ನುಡಿ. ಇದನ್ನಾಲಿಸಿದ ಶಾಸಕರು ಕೈಗಳನ್ನು ಜೋಡಿಸಿ ಧನ್ಯವಾದಗಳು ಎಂದಷ್ಟೇ ಹೇಳಲು ಶಕ್ತರಾದರು. ನಂತರ ಈ ಕ್ಷೇತ್ರದ ಮತದಾರರು ನಿರೀಕ್ಷೆಗೂ ಮೀರಿ ಮತವನ್ನು ಕೊಟ್ಟು ನನ್ನನ್ನು ಜಯಶಾಲಿಯನ್ನಾಗಿ ಮಾಡಿ ವಿಧಾನಸೌಧಕ್ಕೆ ಕಳುಸಿದ್ದೀರಿ, ನಾನು ಸಹ ಚುನಾವಣೆಯಲ್ಲಿ ನಿಮಗೆ ಕೊಟ್ಟ ಮಾತಿನಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ನೆಮ್ಮದಿಯಿದೆ ಎಂದರು.
ಕ್ಷೇತ್ರದ ಎಲ್ಲ ಹಳ್ಳಿ ಮತ್ತು ಕ್ಯಾಂಪ್ಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಶ್ರಮಿಸಿದ್ದೇನೆ. ರಾಜ್ಯದಲ್ಲಿಯೇ ಹೆಚ್ಚು ಪ್ರೌಢಶಾಲೆಗಳನ್ನು ಸಿಂಧನೂರು ಕ್ಷೇತ್ರಕ್ಕೆ ತಂದಿದ್ದೇನೆ. ಪ್ರತಿ ಹಳ್ಳಿಗಳಲ್ಲಿ ಸಿಸಿ ರಸ್ತೆ ಮಾಡಿಸಿದ್ದೇನೆ. ನನಗೆ ಇಲ್ಲಿಯ ರಾಜಕಾರಣಿಗಳು ಸಹಕರಿಸಿದ್ದರೆ ನಗರದಲ್ಲಿಯೂ ಕಂಡರಿಯದಂತ ಕೆಲಸವನ್ನು ಮಾಡಿ ತೋರಿಸುತಿದ್ದೆ. ಯುಜಿಸಿ ಸ್ಕೀಂ ಕೆಲಸವಾಗುತ್ತೆ ಎಂದು ನಂಬಿ ನಗರಸಭೆಯ ಅನುದಾನವನ್ನು ವಂತಿಗೆ ಹಣವನ್ನಾಗಿ ಕಟ್ಟಿ ಅಭಿವೃದ್ಧಿ ಕೆಲಸಕ್ಕೆ ತೊಡಕಾಯಿತು.
ಪ್ರತಿ ಪಕ್ಷಗಳವರದ್ದು ಕಾಮಾಲೆ ಕಣ್ಣು: ಆದರೆ ನಾವು ತುರ್ವಿಹಾಳ ಹತ್ತಿರ ಭೂಮಿ ಖರೀದಿಸಿದ್ದು, ಇಲ್ಲಿ ಕುಡಿವ ನೀರಿನ ಕೆರೆ ನಿರ್ಮಿಸಿದರೆ ಮುಂದಿನ 100 ವರ್ಷದವರೆಗೆ ನಗರದ ಜನರು ನೆಮ್ಮದಿಯಿಂದ ನೀರು ಕುಡಿಯಬಹುದು. ಈ ಕೆಲಸವನ್ನು ಮಾಡಲು ಗುತ್ತೆದಾರರು ಮುಂದೆ ಬಾರದ ಕಾರಣ ಸ್ವಲ್ಪ ಅಡೆತಡೆಯಾಗಿದೆ, ಶೀಘ್ರವೇ ಆ ಕೆಲಸವೂ ನಡೆಯಲಿದೆ. ಕಾಮಾಲೆ ಕಣ್ಣಿಗೆ ಲೋಕವೇ ಹಳದಿಯಾಗಿ ಕಾಣುವಂತೆ ವಿರೋಧ ಪಕ್ಷದ ನಾಯಕರಿಗೆ ನಮ್ಮ ಕೆಲಸಗಳು ಕಾಣುತ್ತಿಲ್ಲ ಎಂದರು.
ಜವಳಗೇರಾದಲ್ಲಿ ಶಾಲೆಗಳಿಗೆ, ಆಸ್ಪತ್ರೆಗೆ ಮತ್ತು ಇನ್ನಿತರ ಧಾರ್ಮಿಕ ಕೆಲಸಗಳಿಗಾಗಿ ಕೋಟಿಗಟ್ಟಲೆ ಬೆಲೆ ಬಾಳುವ ಜಮೀನನ್ನು ಕೊಟ್ಟಿದ್ದು ಶಿಕ್ಷಕರು ಶಾಲೆಗೆ ಜಮೀನು ಕೊಟ್ಟವರ ಹೆಸರಿಡಲು ಅವಕಾಶವಿದೆ ಎಂದು ಕೇಳಿದಾಗ ನಮ್ಮ ತಂದೆಯವರು ನಿರಾಕರಿಸಿದರು. ಅಂತಹ ಸಂಸ್ಕೃತಿಯನ್ನು ನಮಗೆ ನಮ್ಮ ಹಿರಿಯರು ಕಲಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಚರ್ಚೆಗೆ ಸಿದ್ಧ: ನನ್ನ ಅಭಿವೃದ್ಧಿ ಕಾರ್ಯಗಳನ್ನ ಸಹಿಸದೆ ಸಲ್ಲದ ಮಾತು ಆಡುವುದನ್ನು ಬಿಟ್ಟು ನನ್ನ ಮತ್ತು ತಮ್ಮ ಅವಧಿಯಲ್ಲಿಯಾದ ಕೆಲಸಗಳ ಬಗ್ಗೆ ಚರ್ಚೆ ಮಾಡುವುದಾದರೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ಜೆಡಿಎಸ್ ತಾಲೂಕಾಧ್ಯಕ್ಷ ಲಿಂಗಪ್ಪ ದಢೆಸ್ಗೂರು, ವೀರಶೈವ ಸಂಘದ ತಾಲೂಕಾಧ್ಯಕ್ಷ ಅಶೋಕಗೌಡ ಗದ್ರಟಗಿ, ನಗರಸಭೆಯ ಮಾಜಿ ಅಧ್ಯಕ್ಷ ಸುಭಾಸ್ ಫ್ಲಾಂಕ್ಲಿನ್ ಮಾತನಾಡಿದರು.
ನಿವೃತ್ತ ಎಂಜಿನಿಯರ್ ಗೋವಿಂದ ರಡ್ಡಿ, ರೈತ ಮೋರ್ಚಾ ಅಧ್ಯಕ್ಷ ಶಶಿಗಿರಿರಾವ್, ಎಸ್ಟಿ ಘಟಕದ ಅಧ್ಯಕ್ಷ ಕುಪ್ಪಣ್ಣ, ಜಿಪಂ ಮಾಜಿ ಸದಸ್ಯ ಸಂಗಮೇಶ ನಾಡಗೌಡ, ಎಪಿಎಂಸಿ ನಿರ್ದೇಶಕರಾದ ಲಿಂಗರಾಜ ಪಾಟೀಲ್, ರಾಮರಾವ್, ಮುಖಂಡರಾದ ಸಂಗಯ್ಯಸ್ವಾಮಿ ಸರಗಣಮಠ, ನೀಲಕಂಠರಾವ್ ಧಣಿ, ಪಂಪಾರಡ್ಡಿ ಜಾಲಿಹಾಳ, ರಾಮನಗೌಡ ಮಲ್ಕಾಪುರ, ಧರ್ಮನಗೌಡ ಮಲ್ಕಾಪುರ, ವಕೀಲರ ಸಂಘದ ಅಧ್ಯಕ್ಷ ಭೀಮನಗೌಡ ಕೋಳಬಾಳ, ಅಯ್ಯನಗೌಡ ಆಯನೂರು, ಗುತ್ತೆದಾರ ಡಿ.ಸತ್ಯನಾರಾಯಣ, ನಾಗೇಶ್ ಹಂಚಿನಾಳ, ಗೊರೇಬಾಳ ಗ್ರಾಪಂ ಅಧ್ಯಕ್ಷ ಕೃಷ್ಣ ಮೂತರ್, ರಾಮಪ್ಪ ನಾಯ್ಕ, ಲೈಕ್ಸಾಬ್, ಸುಮಿತ್ ತಡಕಲ್ ಸೇರಿದಂತೆ ಕ್ಷೇತ್ರ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸೇರ್ಪಡೆ: ಈ ಸಂದರ್ಭದಲ್ಲಿ ಮಲ್ಲಾಪುರದ ಮಲ್ಲಿಕಾರ್ಜುನ ನಾಯಕ, ಬಸವರಾಜ ಕುಂಬಾರ, ನಿರುಪಾದಿ ಕುರಬರು, ಮದ್ಯಾನಯ್ಯಸ್ವಮಿ, ವೀರೇಶ ಕುಂಬಾರ, ಲಕ್ಷ್ಮಣ, ಮಲ್ಲಣ್ಣ ಕೆಂಗುಂಬಿ, ವೆಂಕೋಬ, ಮುಂತಾದವರು ಮತ್ತು ಕಲ್ಲೂರಿನ ಅಮರೇಶಪ್ಪ ಭಾವಿಕಟ್ಟಿ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

