ರಾಯಚೂರು

ಉತ್ತಮ ಭವಿಷ್ಯಕ್ಕೆ ಜೀವನ ಕೌಶಲ್ಯ ಅಗತ್ಯ: ಹಳೆಮನೆ

Published On :

ಕನ್ನಡಪ್ರಭ ವಾರ್ತೆ   ರಾಯಚೂರು   ಮಾ.25
ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಜೀವನ ಕೌಶಲ್ಯಗಳ ಬಗ್ಗೆ ಮಾಹಿತಿ ಹೊಂದುವುದು ಅವಶ್ಯ ಎಂದು ತುಮಕೂರಿನ ಲೇಖಕ ಹಾಗೂ ಜೀವನ ಕೌಶಲ್ಯ ತರಬೇತುದಾರ ಡಾ. ನವೀನ್ ಹಳೆಮನೆ ಸಲಹೆ ನೀಡಿದರು.
ಅವರು ನಗರದ ನಂದಿನಿ ಬಿ.ಇಡಿ ಕಾಲೇಜಿನಲ್ಲಿ ಸೋಮವಾರ ತಾಲೂಕು ಕಸಾಪದಿಂದ ಏರ್ಪಡಿಸಿದ್ದ ಅಮರಚಿಂತ ಲಕ್ಷ್ಮಯ್ಯ ಹಾಗೂ ಏಗನೂರು ಪ್ರಮೀಳಾಬಾಯಿ ಶ್ರೀನಿವಾಸಶೆಟ್ಟಿ ಸ್ಮಾರಕ ದತ್ತಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಆಡದ ಮಾತಿಗೆ ಅವೆಷ್ಟು ಅರ್ಥಗಳು ಎಂಬ ವಿಷಯದ ಕುರಿತು ಮಾತನಾಡಿದರು.
ಮಕ್ಕಳಿಗೆ ಮುಕ್ತ ಪರಿಸರ ಕಲ್ಪಿಸಿ: ಉತ್ತಮ ವ್ಯಕ್ತಿತ್ವವನ್ನು ಸಾಬೀತುಪಡಿಸುವಲ್ಲಿ ಅನೇಕ ಸಂದರ್ಭಗಳಲ್ಲಿ ಮಾನವನ ಹಾವಭಾವಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಂವಹನ ಕ್ರಿಯೆಯಲ್ಲಿ ತೊಡಗಿದ ಎಲ್ಲರೂ ಪ್ರದರ್ಶಿಸುವ ಚಲನೆಗಳಿಗೆ ಅದರದ್ದೇ ಆದ ವಿಶೇಷ ಅರ್ಥವಿದೆ. ಅದರಲ್ಲೂ ಶಿಕ್ಷಕ ವೃತ್ತಿಯಲ್ಲಿರುವವರು ವಿದ್ಯಾರ್ಥಿಗಳ ಮನಸ್ಸು ಅರ್ಥೈಸಿಕೊಳ್ಳುವಲ್ಲಿ ಜೀವನ ಕೌಶಲ್ಯಗಳು ನೆರವಾಗಲಿವೆ ಎಂದು ಹೇಳಿದರು.
ಶಾಲೆಗಳಲ್ಲಿ ಮಕ್ಕಳಿಗೆ ಶಿಸ್ತು ಕಲಿಸುವ ನೆಪದಲ್ಲಿ ಅವರನ್ನು ಮೌನವಾಗಿರುವಂತೆ ಸೂಚಿಸುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಮಕ್ಕಳ ಮನಸ್ಸಿನಲ್ಲಿನ ಅರ್ಥವಾಗದ ವಿಚಾರಗಳಿಗೆ ಪರಿಹಾರ ದೊರೆಯುವುದಿಲ್ಲ. ಅದರ ಬದಲಿಗೆ ಮುಕ್ತ ಪರಿಸರದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಮೂಲಕ ಉತ್ತಮ ಸಾಧನೆಗೆ ಮಾರ್ಗದರ್ಶನ ಮಾಡುವಂತೆ ಮನವಿ ಮಾಡಿದರು.
ಮನುಷ್ಯ ತನ್ನ ದೈನಂದಿನ ಜೀವನದಲ್ಲಿ ಬಹಳಷ್ಟು ವಿಚಾರಗಳನ್ನು ಸಂಜ್ಞೆಗಳ ಮೂಲಕವೇ ಅರ್ಥೈಸಿಕೊಳ್ಳಬಹುದಾಗಿದೆ. ಇಂಥ ಪರಿಸ್ಥಿತಿಯಲ್ಲಿ ಭಾಷೆಯ ಅಗತ್ಯತೆಯಿಲ್ಲ ಎಂಬುದು ಸಂಶೋಧನೆಗಳಿಂದ ಸ್ಪಷ್ಟವಾಗಿದೆ. ಮಗು ಹುಟ್ಟಿನಿಂದಲೇ ತನ್ನ ತಾಯಿಯ ಜತೆಗೆ ಸಂಜ್ಞೆ ಮೂಲಕವೇ ಸಂವಹನ ನಡೆಸುತ್ತದೆ ಎಂದು ಅವರು ಉದಾಹರಣೆಗಳ ಮೂಲಕ ವಿವರಿಸಿದರು.
ಸಾಹಿತ್ಯ ಜ್ಞಾನ ಅವಶ್ಯ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿದಾನಂದ ಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಸಾಹಿತ್ಯ ಜ್ಞಾನ ಹೊಂದುವುದು ಅವಶ್ಯ. ಸಾಹಿತ್ಯದ ಸ್ಪರ್ಶದ ಮೂಲಕ ಪಾಠ ಹೇಳಿಕೊಡುವುದಕ್ಕೆ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯದ ಅಧ್ಯಯನ ಮತ್ತು ಬಳಕೆಯಿಂದ ಮಾತ್ರ ಮುಂದಿನ ಪೀಳಿಗೆಗೆ ಸಾಹಿತ್ಯದ ಮಹತ್ವವನ್ನು ಕೊಂಡೊಯ್ಯಲು ಸಾಧ್ಯ. ಹಾಗೆಯೇ ಮುಂದಿನ ಪೀಳಿಗೆಯ ಜನರಿಗೆ ಸಾಹಿತ್ಯದ ಮಹತ್ವವನ್ನು ತಿಳಿಸಿಕೊಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಸಾಹಿತ್ಯದ ಅಧ್ಯಯನದತ್ತ ಹೆಚ್ಚಿನ ಆಸಕ್ತಿ ತೋರುವಂತೆ ಮನವಿ ಮಾಡಿದರು.
ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಮುಂದಿನ ಪೀಳಿಗೆಗೆ ಹಣಕ್ಕಿಂತ ಹಿರಿದಾದುದು ಮತ್ತೊಂದಿಲ್ಲ ಎಂದೇ ಬದುಕು ಸಾಗಿಸುವಂಥ ಸ್ಥಿತಿ ನಿರ್ಮಾಣವಾಗುತ್ತದೆ. ಅದರಿಂದ ಸಮಾಜಕ್ಕೆ ಕಂಟಕ ನಿಶ್ಚಿತ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷ ಭೀಮನಗೌಡ ಇಟಗಿ, ಆಂಜನೇಯ ಜಾಲಿಬೆಂಚಿ, ಕಾಲೇಜಿನ ಪ್ರಾಚಾರ್ಯ ರಾಮುಲು, ಡಾ. ಜಗದೀಶ್ ಸೇರಿದಂತೆ ಅನೇಕರಿದ್ದರು. ನಂದಿನಿ ಬಿ.ಇಡಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.