ರಾಯಚೂರು

ಲಿಂಗಸ್ಗೂರು; ಅದೃಷ್ಟ ಪರೀಕ್ಷೆಗಾಗಿ ಪಕ್ಷಾಂತರ ಪರ್ವ

Published On :

ಪಂಪಯ್ಯ ಮಠ
ಕನ್ನಡಪ್ರಭ ವಾರ್ತೆ   ಮುದಗಲ್   ಮಾ.27
ರಾಯಚೂರು ಜಿಲ್ಲೆಯಲ್ಲಿಯೇ ರಾಜಕೀಯ ಶಕ್ತಿಕೇಂದ್ರವೆಂದು ಗುರುತಿಸಿಕೊಂಡಿರುವ ಲಿಂಗಸ್ಗೂರು(ಮೀ) ಕ್ಷೇತ್ರದಲ್ಲಿ ರಾಜಕಾರಣಿಗಳ ಪಕ್ಷಾಂತರ ಪರ್ವ ಮತ್ತೆ ಶುರುವಾಗಿದೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಗಳು ವೇದಿಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ಇತ್ತ ಆಕಾಂಕ್ಷಿಗಳು ಯಾವ ಪಕ್ಷದಲ್ಲಿ ಉಳಿಯಬೇಕು. ಯಾವ ಪಕ್ಷದಿಂದ ಸ್ಪರ್ಧಿಸಬೇಕೆಂಬ ಗೊಂದಲದಲ್ಲೂ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಕೆಜೆಪಿ ಸಂಘಟನೆಯಲ್ಲಿ ಅನ್ವರಿ: ಮಾಜಿ ಮಂತ್ರಿ ಬಸವರಾಜ ಪಾಟೀಲ್ ಅನ್ವರಿ ಕಳೆದ ಚುನಾವಣೆಯಲ್ಲಿ ಕಲ್ಲಲ್ಲಿ ಕಮಲ ಅರಳಿಸಿ ಮಾನಪ್ಪ ವಜ್ಜಲ್ ಮತ್ತು ಪ್ರತಾಪಗೌಡ ಪಾಟೀಲರನ್ನು ವಿಧಾನಸಭೆಗೆ ಕಳುಹಿಸಿದ್ದರು. ನಂತರ ರಾಜಕೀಯದಲ್ಲಿ ಸ್ಥಾನಮಾನ ಸ್ವಾಭಿಮಾನ ಸಿಗದ ಗೌರವಕ್ಕೆ ಅಸಮಾಧಾನಗೊಂಡು ಜೆಡಿಎಸ್ ಸೇರಿದರು. ಈಗ ಮತ್ತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನ ಕೆಜೆಪಿ ಸೇರ್ಪಡೆಯಾಗಿ ಜಿಲ್ಲೆಯಲ್ಲಿ ಕೆಜೆಪಿ ಸಂಘಟನೆಗೆ ಮುಂದಾಗಿ ಲಿಂಗಸ್ಗೂರು, ಮಸ್ಕಿ, ಸಿಂಧನೂರು ಕ್ಷೇತ್ರಗಳ ಬಗ್ಗೆ ವಿಶೇಷ ಆಸಕ್ತಿ ತೋರಿದ್ದಾರೆ.
ಯಾರ ಒಲವು ಯಾವ ಕಡೆಗೆ?: ಇನ್ನೊಂದೆಡೆ ಕಾಂಗ್ರೆಸ್‌ನ ಅಮರೇಗೌಡ ಬಯ್ಯಾಪುರ ಲಿಂಗಸ್ಗೂರು, ಮಸ್ಕಿ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವ ಹೊಂದಿದ್ದು ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸಿದ್ದಾರೆ. ಬಿಜೆಪಿಯಿಂದ ಆಯ್ಕೆಯಾಗಿದ್ದ ಶಾಸಕ ಮಾನಪ್ಪ ವಜ್ಜಲ್, ಮಸ್ಕಿ ಕ್ಷೇತ್ರದ ಪ್ರತಾಪಗೌಡ ಪಾಟೀಲ್ ಬಿಜೆಪಿ ತೊರೆಯಲು ತುದಿಗಾಲಲ್ಲಿದ್ದಾರೆ. ಈಗಾಗಲೇ ಬಿಜೆಪಿಯಿಂದ ದೂರವಿರುವ ವಜ್ಜಲ್ ಜೆಡಿಎಸ್‌ನಿಂದ ಕಣಕ್ಕೆ ಇಳಿಯಲು ಪ್ರಯತ್ನಿಸುತ್ತಿದ್ದಾರೆ.
ಇತ್ತ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಕೈ ಹಿಡಿಯುವುದಕ್ಕೆ ರಾಜ್ಯ, ಜಿಲ್ಲಾ ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿ 'ಕೈ' ಹಿಡಿಯಲು ಸನ್ನ್ಟಜಕರಾಗಿದ್ದಾರೆ.
ಅಮರೇಶ್ವರ ಚಿತ್ತ ಜೆಡಿಎಸ್‌ನತ್ತ: ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತ ಅಮರೇಶ್ವರ ನಾಯಕಗೆ ಕಮಲ ಕೈ ಹಿಡಿಯದ ಕಾರಣ ಜೆಡಿಎಸ್ ಸೇರ್ಪಡೆಯಾಗಿ ಸಹೋದರನ ವಿರುದ್ಧ ರಾಯಚೂರು ಗ್ರಾಮಾಂತರ ಕ್ಷೇತ್ರಕ್ಕೆ ಸ್ಪರ್ಧಿಸುವ ಪ್ರಯತ್ನ ನಡೆಸಿದ್ದಾರೆ.
ತಾಲೂಕಿನಲ್ಲಿ ಜಿಪಂ ಸದಸ್ಯರಾದ ಎಚ್.ಬಿ. ಮುರಾರಿ ಬಿಜೆಪಿಯಿಂದ ಸದಸ್ಯರಾಗಿದ್ದರೂ ಪಕ್ಷಾಂತರ ಮಾಡಿ ಕೆಜೆಪಿಯಿಂದ ಲಿಂಗಸ್ಗೂರು ಮೀಸಲು ಕ್ಷೇತ್ರದಿಂದ ಅಭ್ಯರ್ಥಿ ಎಂದು ಘೋಷಣೆಯಾಗಿ ಮೊದಲ ಹಂತದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.
ಹಳೆಹುಲಿಗಳ ಇಂಗಿತ: ಹಳೆ ಹುಲಿಗಳಾಗಿರುವ ಬಸವರಾಜ ಪಾಟೀಲ್ ಅನ್ವರಿ, ಅಮರೇಗೌಡ ಬಯ್ಯಾಪುರ ಈ ಬಾರಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಅನ್ವರಿಗೆ ಹೈಕಮಾಂಡ್ ಸೂಚಿಸಿದರೆ ಕೊಪ್ಪಳ ಜಿಲ್ಲೆ ಗಂಗಾವತಿ ವಿಧಾನಸಭೆಯಿಂದ ಸ್ಪರ್ಧಿಸುವ ಇರಾದೆ ಇದ್ದಂತಿದೆ. ಇತ್ತ 4 ಬಾರಿ ವಿವಿಧ ಚಿಹ್ನೆಗಳಿಂದ ಗೆದ್ದಿರುವ ಅಮರೇಗೌಡ ಬಯ್ಯಾಪುರ ಕುಷ್ಟಗಿ ಕ್ಷೇತ್ರದಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ತಾಲೂಕಿನ ಇನ್ನಿಬ್ಬರು ಶಾಸಕರಾದ ರಾಜಾ ರಾಯಪ್ಪ ನಾಯಕ, ದೊಡ್ಡನಗೌಡ ಪಾಟೀಲ ನಡೆ ಮೂಲ ಪಕ್ಷದಲ್ಲಿದ್ದು ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಧುಮುಕಲಿದ್ದಾರೆ. ಒಟ್ಟಾರೆ ರಾಜಕೀಯ ಶಕ್ತಿಕೇಂದ್ರದಲ್ಲಿನ ರಾಜಕಾರಣಿಗಳಾದ ಮಾಜಿ ಕೇಂದ್ರ ಸಚಿವ ಅನ್ವರಿ, ಅಮರೇಗೌಡ ಬಯ್ಯಾಪುರ, ಅಮರೇಶ್ವರ ನಾಯಕ, ಶಾಸಕರಾದ ರಾಜಾ ರಾಯಪ್ಪನಾಯಕ, ದೊಡ್ಡನಗೌಡ ಲೆಕ್ಕಿಹಾಳ ಮತ್ತಮ್ಮೆ ವಿಧಾನಸೌಧ ಮೆಟ್ಟಿಲು ಹತ್ತುವರೇ ಕಾದುನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.