ರಾಯಚೂರು

ನೀರಾವರಿ ಯೋಜನೆಗಳ ಜಾರಿಗೆ ರೈತರ ಆಗ್ರಹ

Published On :

ಕನ್ನಡಪ್ರಭ ವಾರ್ತೆ   ಮಸ್ಕಿ   ಮಾ.28
ಮಸ್ಕಿ ಭಾಗದ ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ  ಆಹಾರ ಉತ್ಪಾದನೆ ಹೆಚ್ಚಳಕ್ಕೆ ಅವಕಾಶ ಕಲ್ಪಿಸುವಂತೆ ಕನಕನಾಲಾ ಯೋಜನೆಯ ಹೋರಾಟ ಸಮಿತಿ ಅಧ್ಯಕ್ಷ ಬಾಬುಗೌಡ ಇಲಾಲಪುರ ಆಗ್ರಹಿಸಿದರು.
ಅವರು ಪಟ್ಟಣದ ಕವಿತಾಳ ರಸ್ತೆಯ ಹತ್ತಿರದ ಪಿಲ್ಲಿ ರಾಮರಾವ್ ಅವರ ರೈಸ್ ಮಿಲ್ ಆವರಣದಲ್ಲಿ ಗುರುವಾರ ನಡೆದ ಕನಕನಾಲಾ ಯೋಜನೆಯ ಅಭಿವೃದ್ಧಿ ಮತ್ತು 5ಎ ಕಾಲುವೆಯ ನೀರಾವರಿ ಯೋಜನೆಯ ಹೋರಾಟದ ರೂಪುರೇಷೆ ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಮಾತನಾಡಿದರು.
ಕನಕನಾಲಾ ಯೋಜನೆಯು 10 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಕಳೆದೆರಡು ವರ್ಷಗಳಿಂದ ಗದ್ರಟಗಿಯಿಂದ ಕನಕನಾಲಾ ವ್ಯಾಪ್ತಿಯ ಕೆರೆಯವರೆಗೆ 18 ಕಿಮೀ ಪಾದಯಾತ್ರೆಯ ಮೂಲಕ ರೈತರು ಹೋರಾಟ ಹಮ್ಮಿಕೊಂಡಿದ್ದು, ಯೋಜನೆಯ ಅನುಷ್ಠಾನ ಸರ್ಕಾರದ ಮಟ್ಟದಲ್ಲಿ ಜಾರಿಗೊಳ್ಳುವುದಕ್ಕೆ ಕಾರಣವಾಗಿದೆ ಎಂದರು.
ಬೇಡಿಕೆಗಳು: 62.54 ಕೋಟಿ ಯೋಜನೆಯ ಕಾಮಗಾರಿಗೆ ಈಗಾಗಲೇ ಚಾಲನೆ ದೊರೆತಿದೆ. ನಾಲಾದಲ್ಲಿನ ಹೂಳು ತೆಗೆಯುವುದು, ಅದರಲ್ಲಿನ ಬೆಟ್ಟ ತೆಗೆಸುವುದು, ರೈತರ ಪ್ರಮುಖ ಬೇಡಿಕೆಗಳಾಗಿವೆ. ಉದ್ದೇಶಿತ ನಾರಾಯಣಪುರ ಬಲದಂಡೆ ವಿತರಣಾ ಕಾಲುವೆಯ ಸಂಖ್ಯೆ 5ಎ ಅನುಷ್ಠಾನಗೊಂಡಲ್ಲಿ ಆಗುವ ಪ್ರಯೋಜನಗಳನ್ನು ವಿವರಿಸಿದ ರು. ಲಿಂಗಸ್ಗೂರು ತಾಲೂಕಿನ ಸುಮಾರು 15ಹಳ್ಳಿಗಳ 7 ಸಾವಿರ ಹೆಕ್ಟೇರ್ ಮತ್ತು ಸಿಂಧನೂರು ತಾಲೂಕಿನ 8 ಹಳ್ಳಿಗಳ 6500ಹೆಕ್ಟೇರ್ ಪ್ರದೇಶಕ್ಕೆ ಹಾಗೂ ಮಾನವಿ ತಾಲೂಕಿನ 21 ಹಳ್ಳಿಗಳ 17500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದರು. 20 ವರ್ಷಗಳ ಹಿಂದೆಯೇ ಈ ಯೋಜನೆ ರೂಪುರೇಷೆ ನೀರಾವರಿ ಇಲಾಖೆಯಿಂದ ಸಿದ್ಧಗೊಂಡಿತ್ತು. ಈ ಭಾಗದ ರೈತರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ಉಂಟಾಗದ್ದರಿಂದ ಯೋಜನೆ ಕತ್ತಲಿನಲ್ಲಿಯೇ ಉಳಿಯುವಂತಾಗಿತ್ತು.
ಮನವರಿಕೆ: ಈ ಯೋಜನೆಯ ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಹಾಗೂ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರಿಗೂ ನೀಡಿದ್ದಲ್ಲದೇ ಬೊಮ್ಮಾಯಿಯವರ ನಿವಾಸಕ್ಕೆ ರೈತರ ನಿಯೊಗವೊಂದನ್ನು ಕೊಂಡೊಯ್ದು, ಈ ಯೋಜನೆಯ ಜಾರಿಯಿಂದಾಗುವ ಅನುಕೂಲತೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಸಚಿವರೂ ಸಹ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ ಇಲ್ಲಿನ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಯೋಜನೆ ಇದುವರೆಗೆ ನನೆಗುದಿಗೆ ಬಿದ್ದಿದೆ. ರೈತರೆಲ್ಲರೂ ಒಗ್ಗಟ್ಟಾಗಿ 5ಎ ಯೋಜನೆಯ ಜಾರಿಗಾಗಿ ನಿರಂತರವಾಗಿ ಹೋರಾಟಕ್ಕೆ ಸಜ್ಜಾಗುವಂತೆ ರೈತರಿಗೆ ಮನವಿ ಮಾಡಿದರು.
ರೈತ ಹೋರಾಟಗಾರ ಹನುಮಂತಪ್ಪ ಸಂಕನಾಳ, ಪರ್ವತರಡ್ಡಿ ಹತ್ತಿಗೂಡೂರು, ಶರಬಣ್ಣ ಮೇಟಿ, ಬಸವರಾಜ ಬುಂಕಲದೊಡ್ಡಿ ವಟಗಲ್ ಮತ್ತಿತರರು ಮಾತನಾಡಿದರು. ಮಲ್ಲನಗೌಡ ಗುಂಡಾ, ಪಂಪಣ್ಣ ಪರಡ್ಡಿ, ಶಿವರಡ್ಡಿ ಗುಂಡಾ, ಅಮರೇಶ ಡಬಗಾಳಿ, ಶಂಕ್ರಪ್ಪ ಸಾನಬಾಳ, ಶೇಖರಪ್ಪ ಸಾಹುಕಾರ ಗುಡಿಹಾಳ, ಮುತ್ತಣ್ಣ ಹಸಮಕಲ್, ಬುಡ್ಡಣ ಪಾಮನಕಲ್ಲೂರು ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.