ಯಾದಗಿರಿಯಲ್ಲೀಗ ಅಂತೆಕಂತೆಗಳದ್ದೇ ಸಂತೆ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಯಾದಗಿರಿ ಮಾ.28
ಚುನಾವಣೆ ದಿನಾಂಕ ಘೋಷಣೆಯಾಗಿ ರಾಜಕೀಯ ಮುಖಂಡರು ಟಿಕೆಟ್ಗಾಗಿ ಕಸರತ್ತು ನಡೆಸುತ್ತಿದ್ದರೆ, ಇತ್ತ ಜಿಲ್ಲೆಯ ಶ್ರೀಸಾಮಾನ್ಯನ ಬಾಯಲ್ಲೂ ಅಂತೆಕಂತೆಗಳು ಹರಿದಾಡುತ್ತಿವೆ. ಸಾಮಾನ್ಯ ವ್ಯಕ್ತಿಯೂ ರಾಜಕೀಯ ವಿಶ್ಲೇಷಕನಾಗಿದ್ದು, ದಿನಕ್ಕೊಂದು ಮಾತು ತೇಲಿ ಬಿಡುತ್ತಿದ್ದಾನೆ. ಇದು ಕೆಲವರಿಗೆ ಪುಕ್ಕಟೆ ಮನರಂಜನೆಯನ್ನೂ ಒದಗಿಸುತ್ತಿದೆ.
ತಲೆಗೊಂದರಂತೆ ಮಾತು ಹೊರಬೀಳುತ್ತಿವೆ. ಇವುಗಳ ಮಧ್ಯೆ ಯಾರು ಹೇಳಿದ್ದು ಸತ್ಯ, ಯಾರದ್ದು ಸುಳ್ಳು ಎನ್ನುವುದನ್ನು ಅರಿಯಲು ಸಾಧ್ಯವಾಗದಂತಾಗಿದೆ. ಇಂಥ ಮಾತುಗಳಲ್ಲಿ ಕೆಲವು ಸ್ಯಾಂಪಲ್ ಇಲ್ಲಿದೆ.
ಅವರನ್ನು ಬಿಟ್ಟು ಇವರ್ಯಾರು?: ಯಾದಿಗರಿ ಕ್ಷೇತ್ರಕ್ಕೆ ಹಾಲಿ ಶಾಸಕ ಮಾಲಕರೆಡ್ಡಿ ಅವರಿಗೆ ಟಿಕೆಟ್ ಸಿಕ್ಕಿದೆಯಂತೆ ಎಂದು ಹೇಳಿದ ವ್ಯಕ್ತಿಯೇ ಮತ್ತೊಬ್ಬರ ಬಳಿ ಬೇರೊಂದು ಮಾತು ಹೇಳುತ್ತಾನೆ. ಚೆನ್ನಾರೆಡ್ಡಿ ತುನ್ನೂರ ದಿಲ್ಲಿಗೆ ಹೋಗಿದ್ದು, ಟಿಕೆಟ್ ತರುತ್ತಿದ್ದಾರಂತೆ ಎಂದು ಹೇಳುತ್ತಾನೆ. ಮಾಲಕರೆಡ್ಡಿ ಅವರಿಗೆ 70 ವರ್ಷ ದಾಟಿರುವುದರಿಂದ ಅವರಿಗೆ ಈ ಬಾರಿ ಟಿಕೆಟ್ ನೀಡುತ್ತಿಲ್ಲವಂತೆ ಎಂದೂ ಹೇಳುತ್ತಾನೆ. ಮಾಲಕರೆಡ್ಡಿ ಕಾಂಗ್ರೆಸ್ನಲ್ಲಿ ಹಿರಿಯರಾಗಿರುವುದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರೇ ಸಿಎಂ ಕ್ಯಾಂಡಿಡೇಟ್ ಎಂದೂ ಹೇಳುತ್ತಿದ್ದಾರೆ. ಆದ್ದರಿಂದ ಅವರನ್ನು ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ ಎಂಬ ಮಾತನ್ನು ಕಾಂಗ್ರೆಸ್ ಕಾರ್ಯಕರ್ತರೇ ಹರಿದು ಬಿಡುತ್ತಿದ್ದಾರೆ.
ಶಹಾಪುರ ಕ್ಷೇತ್ರದಲ್ಲೂ ಇಂಥ ಊಹಾಪೋಹದ ಮಾತುಗಳು ಹರಿದಾಡುತ್ತಿವೆ. ಹಾಲಿ ಶಾಸಕ ಶರಣಬಸವಪ್ಪಗೌಡ ದರ್ಶನಾಪುರ ಅವರಿಗೆ ಟಿಕೆಟ್ ನಿಶ್ಚಿತ ಎಂದು ಎಲ್ಲರೂ ಹೇಳುತ್ತಿದ್ದರೆ ಎರಡು ದಿನಗಳಿಂದ ಬೇರೊಂದು ಮಾತು ಕೇಳಿ ಬರುತ್ತಿದೆ. ಕೆಜೆಪಿ ಟಿಕೆಟ್ ಪಡೆದಿರುವ ಗುರು ಪಾಟೀಲ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗುತ್ತಿದೆಯಂತೆ. ಜೇವರ್ಗಿ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿರುವ ಡಾ. ಅಜಯ ಸಿಂಗ್ ಅವರೊಂದಿಗೆ ಗುರು ಪಾಟೀಲ ದಿಲ್ಲಿಗೆ ಹೋಗಿದ್ದು, ದರ್ಶನಾಪುರಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೈತಪ್ಪಲಿದೆ ಎಂಬ ಅಂತೆಕಂತೆಗಳು ಹರಿದಾಡುತ್ತಿವೆ. ಆದ್ದರಿಂದ ದರ್ಶನಾಪುರ ಮತ್ತೆ ಜೆಡಿಎಸ್ ಸೇರುತ್ತಾರೆ ಎಂಬ ಮಾತೂ ಕೇಳಿಬರುತ್ತಿದೆ.
ಗೊಂದಲಗಳಿಗಿಲ್ಲ ಕೊನೆ: ಇತ್ತ ಗುರುಮಠಕಲ್ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಬಾಬುರಾವ್ ಚಿಂಚನಸೂರ ಹೆಸರು ಅಂತಿಮಗೊಂಡಿದ್ದರೂ ಗೊಂದಲ ಸೃಷ್ಟಿಸುವ ಮಾತುಗಳಿಗೆ ಕಡಿಮೆಯಿಲ್ಲ. ಕಾಂಗ್ರೆಸ್ ಮುಖಂಡರಾದ ಸಾಯಬಣ್ಣ ಬೋರಬಂಡ, ಲಕ್ಷ್ಮರೆಡ್ಡಿ ಅನಪುರ ಇತರರು ಚಿಂಚನಸೂರಗೆ ಟಿಕೆಟ್ ನೀಡಬಾರದು ಎಂದು ದಿಲ್ಲಿಯಲ್ಲಿ ಹೈಕಮಾಂಡ್ ಎದುರು ಪರೇಡ್ ನಡೆಸಿದ್ದಾರಂತೆ. ಚಿಂಚನಸೂರಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಲಿದೆ ಎಂದು ಹೇಳಲಾಗುತ್ತಿದೆ.
ಸುರಪುರದಲ್ಲಂತೂ ದಿನಕ್ಕೊಂದು ಅಂತೆಕಂತೆ ಹರಿದಾಡುತ್ತಿದೆ. ಮಾಜಿ ಶಾಸಕ ರಾಜುಗೌಡ ಅವರು ಕಾಂಗ್ರೆಸ್ ಟಿಕೆಟ್ ಖಾತ್ರಿ ಮಾಡಿಕೊಂಡಿದ್ದಾರಂತೆ ಎಂದು ಒಬ್ಬರು ಹೇಳಿದರೆ, ಮತ್ತೆ ಕೆಲವರು ರಾಜಾ ವೆಂಕಟಪ್ಪ ನಾಯಕ ಅವರ ಹೆಸರೇ ಅಂತಿಮಗೊಂಡಿದೆ ಎಂದು ಹೇಳುತ್ತಿದ್ದಾರೆ. ರಾಜುಗೌಡ ಸ್ವತಂತ್ರವಾಗಿ ಸ್ಪರ್ಧಿಸುತ್ತಾರಂತೆ ಎಂದು ಹೇಳಿದವರೇ ಮರುದಿನ ಅವರು ಜೆಡಿಎಸ್ನಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

