ರಾಯಚೂರು

ಕಿಲಾರಹಟ್ಟಿಯಲ್ಲಿ ತೀವ್ರ ನೀರಿನ ಸಮಸ್ಯೆ

Published On :

ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಮುದಗಲ್, ಮಾ.30
ಪಟ್ಟಣ ಸಮೀಪದ ಕಿಲಾರಹಟ್ಟಿಯಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿದೆ. ಆದರೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
 ಉಪ್ಪರನಂದಿಹಾಳ ಗ್ರಾಪಂ ವ್ಯಾಪ್ತಿಯ ಕಿಲಾರಹಟ್ಟಿಯಲ್ಲಿ ಸರಬರಾಜು ಮಾಡಲಾಗುತ್ತಿದ್ದ  ಕಿರುನೀರು ಸರಬರಾಜು ಯೋಜನೆಯ ಕೊಳವೆ ಬಾವಿಯಲ್ಲಿ ಅಂತರ್ಜಲ ಕುಸಿತವಾಗಿದ್ದು, ಕುಡಿವ ನೀರಿಗಾಗಿ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಆರಂಭವಾಗದ ಯೋಜನೆ: ಗ್ರಾಮದಲ್ಲಿ 2011-12ನೇ ಸಾಲೀನ ಎನ್ಆರ್ಡಿಡಬ್ಲೂಪಿ ಯೋಜನೆ ಅಡಿಯಲ್ಲಿ ಕೊಳವೆ ನೀರು ಸರಬರಾಜು ವ್ಯವಸ್ಥೆಗಾಗಿ ಮೀಸಲಿಡಲಾಗಿದ್ದ ರು. 22 ಲಕ್ಷಗಳಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ.
 ಅಲ್ಲದೆ ನೀರು ಸಂಗ್ರಹಕ್ಕೆ ಮೇಲೆತ್ತರದ ನೀರಿನ ತೊಟ್ಟಿಯನ್ನು ನಿರ್ಮಿಸಿ ನಳಗಳಿಗೆ ಪೈಪ್ಗಳನ್ನ ಅಳವಡಿಸಲಾಗಿದೆ. ಆದರೆ ಕಾಮಗಾರಿ ಪೂರ್ಣವಾಗಿ ವರ್ಷವಾಗುತ್ತಾ ಬಂದರೂ, ಇದುವರೆಗೆ ಒಂದು ಹನಿ ನೀರು ಗ್ರಾಮಸ್ಥರಿಗೆ ಸಿಕ್ಕಿಲ್ಲ.
ಕೊಳವೆ ಬಾವಿಗೆ ಪಂಪ್ಸೆಟ್ ಜೋಡಿಸಲಾಗಿದೆ. ಅದಕ್ಕೆ ವಿದ್ಯುತ್ ವ್ಯವಸ್ಥೆ ಇಲ್ಲ. ಲಕ್ಷಾಂತರ ರು. ಖರ್ಚುಮಾಡಿ ನಿರ್ಮಿಸಲಾದ ಕುಡಿವ ನೀರಿನ ಕಾಮಗಾರಿ ಉಪಯೋಗಕ್ಕೆ ಬಾರದಂತಾಗಿದೆ.
ವಿದ್ಯುತ್ ಪರಿವರ್ತಕದಿಂದ ವಿದ್ಯುತ್ ಪಡೆಯಬೇಕು ಎಂದು ಗುತ್ತಿಗೆದಾರರ ಪ್ರಯತ್ನಕ್ಕೆ ಗ್ರಾಮದ ಕೆಲವರು ತಡೆಯೊಡ್ಡಿದ್ದಾರೆ. ಅಲ್ಲದೆ ಅತ್ತ ಹೊಸದಾಗಿ ವಿದ್ಯುತ್ ಪರಿವರ್ತಕ ನೀಡಲು ಜೆಸ್ಕಾಂ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಹರಸಾಹಸ: ಗ್ರಾಮಕ್ಕೆ ವಿದ್ಯುತ್ ಇದ್ದಾಗ ಮಾತ್ರ ನೀರು ಬಿಡಲಾಗುತ್ತಿದೆ. ಗುಮ್ಮಿಗಳಿಗೆ ಬಿಡಲಾಗುವ ನೀರು ಪಡೆಯಲು ಹರಸಾಹಸ ಪಡುವಂತಾಗುತ್ತದೆ ಎಂದು ಮಹಿಳೆಯರು ಹೇಳುತ್ತಾರೆ.
ಗ್ರಾಮಕ್ಕೆ ಸರಬರಾಜಾಗುವ ಕೊಳವೆ ಬಾವಿಯಲ್ಲಿ ಅಂತರ್ಜಲ ಕುಸಿತದಿಂದಾಗಿ ಸರಿಯಾಗಿ ನೀರು ಸಿಗುತ್ತಿಲ್ಲ.
ಅಲ್ಲದೆ ಕರೆಂಟ್ ಇದ್ದಾಗ ಮಾತ್ರ ನೀರು, ಇಲ್ಲದಿದ್ದಾಗ ನೀರು ಪಡೆಯಲು ಸುತ್ತಲಿನ ತೋಟಗಳಿಗೆ ಅಲೆಯಬೇಕು. ತುರ್ತು ಸಂದರ್ಭಕ್ಕೆ ಇರಬೇಕಾದ ಕೈಪಂಪ್ಗಳು ಕೆಟ್ಟು ಹೋಗಿದೆ. ಆದರೆ ದುರಸ್ತಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
ಬೇಸಿಗೆ ಆರಂಭವಾಗಿದ್ದು, ಕೂಡಲೇ ಅಧಿಕಾರಿಗಳು ಗಮನ ಹರಿಸಿ ಕೊಳವೆ ನೀರು ಸರಬರಾಜು ಯೋಜನೆ ಆರಂಭಿಸಿ ಕುಡಿವ ನೀರಿನ ಸಮಸ್ಯೆ ಬಗೆ ಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.