ರಾಯಚೂರು

ನೀತಿ ಸಂಹಿತೆ ಉಲ್ಲಂಘನೆ; 74 ದೂರು

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮೇ 3
ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ನಡೆಯುವ ಚುನಾವಣೆ ಪ್ರಯುಕ್ತ ಜಿಲ್ಲೆಯಲ್ಲಿ ಏ. 5ರಿಂದ ಮೇ. 2ರವರೆಗೆ ಚುನಾವಣಾ ಮಾದರಿ ನೀತಿಸಂಹಿತೆ ಉಲ್ಲಂಘನೆಯ ಒಟ್ಟು 74 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮೇ 2ರಂದು ಕೆಳಕಂಡ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ 3 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಜಿ.ಜಗದೀಶ ತಿಳಿಸಿದ್ದಾರೆ.
ಪ್ರಕರಣಗಳ ಸಂಖ್ಯೆ ವಿವರ: ಅಫಜಲಪುರ-6, ಜೇವರ್ಗಿ-13, ಚಿತ್ತಾಪುರ(ಎಸ್‌ಸಿ)-2, ಸೇಡಂ-10, ಚಿಂಚೋಳಿ(ಎಸ್‌ಸಿ)-7, ಗುಲ್ಬರ್ಗ ಗ್ರಾಮೀಣ(ಎಸ್‌ಸಿಇ)-8, ಗುಲ್ಬರ್ಗ ದಕ್ಷಿಣ-19, ಗುಲ್ಬರ್ಗ ಉತ್ತರ-6, ಆಳಂದ-3. ಮೇ 2ರಂದು ನೀತಿ ಸಂಹಿತೆ ಉಲ್ಲಂಘನೆಯ 3 ಪ್ರಕರಣಗಳನ್ನು ದಾಖಲಿಸಲಾಗಿದ್ದು, ವಿವರ ಇಂತಿದೆ.
ಅಫಜಲ್ಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೇ ಚುನಾವಣಾ ಪ್ರಚಾರಕ್ಕಾಗಿ ಬಳಸುತ್ತಿದ್ದ ಬಿಜೆಪಿ 250 ಕರಪತ್ರಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಪ್ರಕರಣ ದಾಖಲಿಸಲಾಗಿದೆ.
ಗುಲ್ಬರ್ಗ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯಲ್ಲಿ ಗಾಜಿಪುರ ಪ್ರದೇಶದ ಮೇಹತಾರ್ ಗಲ್ಲಿ ಹಾಗೂ ಅಂಬೇಡ್ಕರ್ ನಗರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್ ರೇವೂರ್ ಚುನಾವಣಾ ಆಯೋಗದ ಅನುಮತಿ ಪಡೆಯದೇ ಮತಯಾಚನೆ ಮಾಡುತ್ತಿದ್ದಕ್ಕಾಗಿ ಅಭ್ಯರ್ಥಿಯ ವಿರುದ್ಧ ಗುಲ್ಬರ್ಗ ಜೆಎಂಎಫ್‌ಸಿ ನ್ಯಾಯಾಲಯದ ಆಡಿಷನಲ್ ಸಿವಿಲ್ ಜಡ್ಜ್ (ಜೆಡಿ) ಅವರಿಗೆ ಎಫ್‌ಐಆರ್ ಸಲ್ಲಿಸಲಾಗಿದೆ.
ಆಳಂದ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗದ ಅನುಮತಿಯಿಲ್ಲದ ಕೆಜೆಪಿ ಪಕ್ಷದ ವಾಹನ ಸಂಖ್ಯೆ ಎಂಎಚ್ 15 ಕೆ 2880 ಬಳಸುತ್ತಿದ್ದು, ಮೂರು ಟವೆಲ್ ಮತ್ತು 95 ಕರಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ವಸ್ತುಗಳನ್ನು ಮುಂದಿನ ಕ್ರಮಕ್ಕಾಗಿ ಆಳಂದ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.

ಈಶಾನ್ಯಕ್ಕೆ 1000 ಹೋಮ್ ಗಾರ್ಡ್ಸ್
ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮೇ 3
ಚುನಾವಣೆ ಬಂದೋಬಸ್ತ್ ಕರ್ತವ್ಯಕ್ಕಾಗಿ ಈಶಾನ್ಯ ವಲಯಕ್ಕೆ ನೆರೆ ರಾಜ್ಯ ಆಂಧ್ರದಿಂದ 1000 ಹೋಮ್‌ಗಾರ್ಡ್ಸ್ ನಿಯೋಜಿಸಲಾಗಿದೆ ಎಂದು ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ ಮಹ್ಮದ್ ವಜೀರ್ ಅಹ್ಮದ್ ತಿಳಿಸಿದ್ದಾರೆ.
ಜಿಲ್ಲಾವಾರು ಹೋಮ್‌ಗಾರ್ಡ್ಸ್ ವಿವರ: ಗುಲ್ಬರ್ಗ- 150, ಬೀದರ್-100, ರಾಯಚೂರು- 250, ಕೊಪ್ಪಳ-250 ಮತ್ತು ಯಾದಗಿರಿ- 250.
ಇದಲ್ಲದೇ ಇತರೆ ಘಟಕಗಳಾದ ಡಿಸಿಆರ್‌ಇ, ಅಬ್ಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ, ಕೆಪಿಟಿಸಿಎಲ್, ಜಾಗೃತ ದಳ, ಆಂತರಿಕ ಭದ್ರತೆ ಘಟಕ, ನಾಗನಹಳ್ಳಿ ಪೊಲೀಸ್ ತರಬೇತಿ ಕಾಲೇಜಿನಿಂದ 2 ಎಸ್‌ಪಿ, 4 ಡಿಎಸ್‌ಪಿ, 29 ಪಿಐ, 10 ಪಿಎಸ್‌ಐ, 160 ಎಚ್‌ಸಿಪಿಸಿ ಅವರುಗಳನ್ನು ಸಹ ಚುನಾವಣೆ ಬಂದೋಬಸ್ತ್ ಕರ್ತವ್ಯದ ಮೇಲೆ ನಿಯೋಜಿಸಲಾಗಿದೆ.  ಈ ಎಲ್ಲ ಸಿಬ್ಬಂದಿಯನ್ನು ಈಶಾನ್ಯ ವಲಯದ 5 ಜಿಲ್ಲೆಗಳಿಗೆ ಚುನಾವಣೆ ಕರ್ತವ್ಯದ ಮೇಲೆ ನೇಮಿಸಲಾಗಿದೆ. ಈಶಾನ್ಯ ವಲಯದಲ್ಲಿ ಲಭ್ಯವಿರುವ ಒಟ್ಟು 8291 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಚುನಾವಣೆ ಕರ್ತವ್ಯದ ಮೇಲೆ ನೇಮಿಸಲಾಗಿದೆ ಎಂದು ಮಹಾನಿರೀಕ್ಷಕರು ತಿಳಿಸಿದ್ದಾರೆ.

ಮತದಾನ ಜಾಗೃತಿ ಅಭಿಯಾನ
ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮೇ 3
ಚಿತ್ತಾಪುರ ತಾಲೂಕಿನ ಟೆಂಗಳಿ ಗ್ರಾಮದ ಶರಣ ಬಸವೇಶ್ವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಗುಲ್ಬರ್ಗ ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ವತಿಯಿಂದ ಮತದಾನ ಜಾಗೃತಿ ಅಭಿಯಾನ ನಡೆಸಲಾಯಿತು.
ಶಾಂತೇಶ್ವರ ಮಠದ ಡಾ. ಶರಣಬಸವ ದೇವರು ಜಾತ್ರೆಗೆ ಬಂದ ಯಾತ್ರಿಕರಿಗೆ ಮತದಾನ ಮಾಡುವ ಕರಪತ್ರ ಹಂಚುವುದರ ಮೂಲಕ ಜಾಥಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ, ಸೋಮಶೇಖರ ಪಟ್ಟೇದ್, ವೀರಭದ್ರಯ್ಯ ಸಾಲಿ, ಬಸವರಾಜ ತುಪ್ಪದ್, ಶಿವಕುಮಾರ ಪಟ್ಟೇದ್, ನಾಗಣ್ಣ ಆಂದೇಲಿ, ಡಾ. ಓಂ ಪ್ರಕಾಶ ಹೆಬ್ಬಾಳ, ವಿಜಯಕುಮಾರ ತುಪ್ಪದ್, ಶೇಖಣ್ಣ ಮಂಗದ, ಬಸವರಾಜ ಕೋಣಿನ, ಭೀಮಾಶಂಕರ ತೆಲಗಾಣಿ, ಮಲ್ಲಿಕಾರ್ಜುನ ಪಟ್ಟೆದ ಇತರರು ಇದ್ದರು.

ವಿಡಿಯೋಗ್ರಾಫರ್‌ಗಳ ಕಾರ್ಯ ನಿರ್ವಹಣಾ ವಿವರ
ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮೇ 3
ಚುನಾವಣಾ ಆಯೋಗದ ನಿರ್ದೇಶನದಂತೆ ಮೇ 5ರಂದು ನಡೆಯುವ ವಿಧಾನಸಭಾ ಚುನಾವಣೆಯ ಮತದಾನದಂದು ಮತಗಟ್ಟೆಗಳಿಗೆ ನಿಯೋಜಿಸಲಾಗುವ ವಿಡಿಯೋಗ್ರಾಫರ್‌ಗಳು ಈ ಕೆಳಗೆ ತಿಳಿಸಿದ ಕಾರ್ಯಗಳನ್ನು ಕೈಗೊಳ್ಳಲು ಸೂಚಿಸವಂತೆ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗೆ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ಸೂಚಿಸಿದ್ದಾರೆ.
ಮತದಾನದ ದಿನದಂದು ಮತದಾನ ಪ್ರಾರಂಭವಾಗುವ ಮುನ್ನ ಬೆಳಗ್ಗೆ 6 ಗಂಟೆಯಿಂದ ಮತಗಟ್ಟೆಯಲ್ಲಿ ಹಾಜರಿರಬೇಕು ಹಾಗೂ ವೀಡಿಯೋ ಕ್ಯಾಮರಾದಲ್ಲಿ ಮತಗಟ್ಟೆಯ ಒಳಗಿನ ಹಾಗೂ ಹೊರಗಿನ ದೃಶ್ಯವನ್ನು ಸೆರೆ ಹಿಡಿಯಬೇಕು. ಮತಗಟ್ಟೆ ಅಧಿಕಾರಿ, ಅಭ್ಯರ್ಥಿಗಳ, ಏಜೆಂಟರು ಹಾಗೂ ಮೈಕ್ರೋ- ಅಬ್ಜರ್ ವರ್‌ಗಳ ಸಮ್ಮುಖದಲ್ಲಿ ಮಾಡುವ ಮಾಕ್- ಪೋಲ್ ದೃಶ್ಯ ಸೆರೆಹಿಡಿಯಬೇಕು.
ಯಾವುದೇ ಕಾರಣಕ್ಕೂ ವೀಡಿಯೋಗ್ರಾಫರ್‌ಗಳು ಮತಚಲಾಯಿಸುವ ಕಂಪಾರ್ಟಮೆಂಟ್ ಸಮೀಪ ಹೋಗಬಾರದು ಹಾಗೂ ಮತ ಚಲಾಯಿಸುವ ದೃಶ್ಯವನ್ನು ಸೆರೆ ಹಿಡಿಯಬಾರದು. ಮತದಾನದ ಗೌಪ್ಯತೆಯನ್ನು ಕಾಪಾಡತಕ್ಕದ್ದು.
ಯಾವುದೇ ಕಾರಣಕ್ಕೂ ವೀಡಿಯೋ ಕ್ಯಾಮರಾದಲ್ಲಿ ಸೆರೆಹಿಡಿದ ದೃಶ್ಯಾವಳಿಯನ್ನು ತಿರುಚುವುದಾಗಲಿ, ತೆಗೆದುಹಾಕುವುದಾಗಲಿ ಮಾಡಬಾರದು ಹಾಗೂ ಅದರ ಸಿಡಿಗಳನ್ನು ಪ್ರತಿಯನ್ನು ಅಂದೇ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಚುನಾವಣಾಧಿಕಾರಿ ಹೊರತುಪಡಿಸಿ ಬೇರೆ ಯಾರಿಗೂ ವೀಡಿಯೋ ಚಿತ್ರೀಕರಣವನ್ನು ಬಹಿರಂಗಪಡಿಸತಕ್ಕದ್ದಲ್ಲ.
ಮತದಾನ ಪ್ರಾರಂಭದಿಂದ ಮುಕ್ತಾಯದವರೆಗೂ ಮತ ಚಲಾಯಿಸುವ ಸಲುವಾಗಿ ಮತಗಟ್ಟೆಗೆ ಪ್ರವೇಶಿಸುವ ಪ್ರತಿಯೊಬ್ಬ ಮತದಾರರ ಮುಖ ಚಹರೆಯನ್ನು ನಮೂನೆ-17ಎ ರಲ್ಲಿನ ಸರತಿಯಂತೆ ಸೆರೆ ಹಿಡಿಯಬೇಕು. ಮತದಾನ ಕೇಂದ್ರದಲ್ಲಿ ಘಟಿಸುವ ಯಾವುದೇ ವಿಶೇಷ ಸಾಂದರ್ಭಿಕ ವಿದ್ಯಮಾನಗಳನ್ನು ಕಡ್ಡಾಯವಾಗಿ ಸೆರೆ ಹಿಡಿಯಬೇಕು. ಮತದಾನ ಪ್ರಾರಂಭದಿಂದ ಮುಕ್ತಾಯವಾಗುವವರೆಗೆ ಮತಗಟ್ಟೆ ಬಿಟ್ಟು ಆಚೆ ಹೋಗಬಾರದು. ಚುನಾವಣಾಧಿಕಾರಿಯ ಅನುಮತಿ ಪಡೆದ ನಂತರ ಕರ್ತವ್ಯದಿಂದ ಮುಕ್ತಗೊಳಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.