ರಾಯಚೂರು

ಮಾಧ್ಯಮ ಪ್ರತಿನಿಧಿಗೆ ಬೆದರಿಕೆ; ಖಂಡನೆ

Published On :

ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದ ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿ ಸುವರ್ಣ ವಾಹಿನಿಯ ವರದಿಗಾರನಿಗೆ ದೂರವಾಣಿ ಮೂಲಕ ಬೆದರಿಕೆ ಕರೆ ಮಾಡಿದ ದೇವದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ವರ್ತನೆಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ. ಈ ಕುರಿತು ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಶನಿವಾರ ಮನವಿ ಸಲ್ಲಿಸಿ, ರಾಯಚೂರಿನ ಸುವರ್ಣ ವಾಹಿನಿಯ ವರದಿಗಾರ ಗುರುರಾಜ್ ಹೂಗಾರ್ ಅವರು ಗಬ್ಬೂರಿನಲ್ಲಿ ಇತ್ತೀಚೆಗೆ ನಡೆದ ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿ ವರದಿ ಮಾಡಿದ್ದಕ್ಕೆ ದೂರವಾಣಿ ಮೂಲಕ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಬೆದರಿಕೆಯೊಡ್ಡಿದ್ದಾರೆಂದು ದೂರಿದರು. ಈಗಾಗಲೇ ಹಲವು ಬಾರಿ ವರದಿಗಾರರ ಮೇಲೆ ಹಲ್ಲೆ, ಬೆದರಿಕೆಯಂಥ ವರ್ತನೆ ಪ್ರದರ್ಶಿಸಿರುವ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಹಾಗೂ ಇಂಥ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರಿಕೆ ನೀಡಬೇಕು. ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ ನೀಲಗಲ್, ಮಲ್ಲೇಶ್ ಮಹಾಶೆಟ್ಟಿ, ಬಸನಗೌಡ ದೇಸಾಯಿ, ನರಸಿಂಗರಾವ ಸರ್ಕೀಲ್, ಮೈನುದ್ದೀನ್ ಕಾಟಮಳ್ಳಿ, ನಾಗರಾಜ ಸುಟ್ಟಿ, ಗಿರಿಯಪ್ಪ ಪೂಜಾರಿ, ಮಹ್ಮದ ರಫೀಕ್, ಮಾರ್ಕಂಡಯ್ಯ ನಾಡದಾಳ, ಬಸನಗೌಡ, ಬಾಬು ಅಲಿ ಕರಿಗುಡ್ಡ, ರವಿಕುಮಾರ, ಬಸವರಾಜ್ ಮಸ್ಕಿ, ನಾಗರಾಜ, ಶಿವರಾಜ್ ಮೇದಿಕಿನಾಳ ಸೇರಿ ಪತ್ರಕರ್ತರ ಸಂಘದ ಸದಸ್ಯರು ಭಾಗವಹಿಸಿದ್ದರು.

ಚುನಾವಣೆಗೆ ಸಿದ್ಧ: ಮೋಮಿನ್
ಸಿಂಧನೂರು: ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಆಯಾ ಮತಗಟ್ಟೆಗಳಿಗೆ ಸಿಬ್ಬಂದಿಯನ್ನು ಮತದಾನ ಯಂತ್ರಗಳೊಂದಿಗೆ ಕಳುಹಿಸಿಕೊಡುವ ಪ್ರಕ್ರಿಯೆಯು ಶನಿವಾರ ಬೆಳಗಿನಿಂದ ಸಂಜೆವರೆಗೆ ನಡೆಯಿತು. ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಿಂದ ಪ್ರತಿ ಮತಗಟ್ಟೆವಾರು ಸಿಬ್ಬಂದಿ ಎಲ್ಲಾ ರೀತಿಯಲ್ಲಿ ಸಿದ್ಧತೆಯೊಂದಿಗೆ ಮತಯಂತ್ರಗಳನ್ನು ಪರಿಶೀಲಿಸಿಕೊಂಡು ತಮ್ಮ ಮತಗಟ್ಟೆಗಳಿಗೆ ತೆರಳಿದರು. ತಾಲೂಕಿನಲ್ಲಿ ಒಟ್ಟು 233 ಮತಗಟ್ಟೆಗಳಿದ್ದು, 49 ಅತಿ ಸೂಕ್ಷ್ಮ, 82 ಸೂಕ್ಷ್ಮ, 102 ಸಾಮಾನ್ಯ ಮತಗಟ್ಟೆಗಳು ಇವೆ. ಪ್ರತಿ ಮತಗಟ್ಟೆಗೆ ನಾಲ್ಕು ಜನ ಸಿಬ್ಬಂದಿ ನೇಮಿಸಲಾಗಿದೆ. 9 ಕಡೆ ವೀಡಿಯೋ ಕ್ಯಾಮೆರಾ, 5 ಕಡೆ ವೆಬ್ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ. 36 ಸಿಆರ್‌ಪಿಎಫ್ ತುಕಡಿ, 65 ಕಡೆ ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ. ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,99,964 ಮತದಾರರು ಇದ್ದಾರೆ ಎಂದು ಚುನಾವಣಾಧಿಕಾರಿ ಎಂ.ಡಿ. ಮೋಮಿನ್ ತಿಳಿಸಿದರು.

ಅವಧಿ ಹೆಚ್ಚಳ
ರಾಯಚೂರು: ಮತದಾನದ ಅವಧಿಯನ್ನು ಹೆಚ್ಚಳ ಮಾಡಿ ರಾಜ್ಯ ಚುನಾವಣೆ ಆಯೋಗ ಆದೇಶ ಹೊರಡಿಸಿದೆ. ಮತದಾನವು ಮೇ 5ರಂದು ಬೆಳಗ್ಗೆ 7ರಿಂದ ಸಂಜೆಯ 6ರವರೆಗೆ ನಡೆಯಲಿದೆ ಎಂದು ತಿಳಿಸಿರುವ ಆಯೋಗವು ಈ ಮೊದಲು ಮತದಾನದ ಸಮಯವು ಬೆಳಗ್ಗೆ 7 ರಿಂದ ಸಂಜೆಯ 5ರವರೆಗೆ ನಿಗದಿ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.