ರಾಯಚೂರು

30ರಿಂದ ಕಾರ್ಮಿಕರ ಪ್ರಚಾರಾಂದೋಲನ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 6
ಕೇಂದ್ರ ಕಾರ್ಮಿಕ ಖಾತೆಯ ಸಚಿವರು ದೇಶದ ವಿವಿಧ ಕಾರ್ಮಿಕ ಸಂಘಟನೆಗಳ ಬೇಡಿಕೆ ಕುರಿತು ಚರ್ಚಿಸಲು ಮೇ 14ರಂದು ದೆಹಲಿಯಲ್ಲಿ ಸಭೆ ಕರೆದಿದ್ದು, ಸಭೆಯಲ್ಲಿ ಕಾರ್ಮಿಕರ ಬೇಡಿಕೆಗಳು ಈಡೇರದಿದ್ದಲ್ಲಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಗೊಳಿಸಲು ಮೇ 30ರಿಂದ ಜೂ.14ರ ವರೆಗೆ ಪ್ರಚಾರಾಂದೋಲನ ಆಯೋಜಿಸಲಾಗುತ್ತದೆ ಎಂದು ಸಿಐಟಿಯು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶೇಕ್ಷಾಖಾದ್ರಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 14ರಂದು ನವದೆಹಲಿಯಲ್ಲಿ ಕೇಂದ್ರ ಕಾರ್ಮಿಕ ಸಚಿವರೊಂದಿಗೆ ಕಾರ್ಮಿಕ ಸಂಘಟನೆಗಳ ಪ್ರಮುಖರ ಸಭೆ ನಡೆಯಲಿದೆ. ಆ ಸಭೆಯಲ್ಲಿ ಕಾರ್ಮಿಕರಿಗೆ ಕನಿಷ್ಠ 10 ಸಾವಿರ ವೇತನ ನಿಗದಿ, ಗುತ್ತಿಗೆ ಮತ್ತು ಗೌರವಧನದ ಆಧಾರದಲ್ಲಿ ನೇಮಕಾತಿ ತಡೆಯಬೇಕು ಮತ್ತು ಅವಶ್ಯ ವಸ್ತುಗಳ ಬೆಲೆಯೇರಿಕೆಗೆ ಕಡಿವಾಣ ಹಾಕುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಮಿಕರ ಮುಷ್ಕರದ ಫಲ: ಸಭೆಯ ವೇಳೆ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳಿಂದ ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆಯದಂತೆ ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದ ಅವರು, ಫೆ. 20, 21ರಂದು ಅಖಿಲ ಭಾರತ ಮಟ್ಟದಲ್ಲಿ ಕಾರ್ಮಿಕರು ಮುಷ್ಕರ ನಡೆಸಿದ್ದರ ಫಲವಾಗಿ ಈ ಸಭೆ ಕರೆಯಲಾಗಿದ್ದು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುವುದಾಗಿ ತಿಳಿಸಿದರು.
ಈ ಸಭೆಯಲ್ಲಿ ಕಾರ್ಮಿಕರ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ನಡೆಸಬೇಕಾದ ಹೋರಾಟಗಳ ಬಗ್ಗೆ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೇ 30ರಿಂದ ಜೂ.14 ರವರೆಗೆ ಪ್ರಚಾರಾಂದೋಲನ ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.
17, 18ರಂದು ಸಮಾವೇಶ: ಅದೇ ರೀತಿ ಮೇ 17 ಮತ್ತು 18ರಂದು ನವದೆಹಲಿಯಲ್ಲಿ ಇಂಡಿಯನ್ ಲೇಬರ್ ಕಾನ್ಫರೆನ್ಸ್ ಆಯೋಜಿಸಿದ್ದು, ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕೇಂದ್ರ ಹಾಗೂ ರಾಜ್ಯ ಕಾರ್ಮಿಕ ಖಾತೆಯ ಮಂತ್ರಿಗಳು ಭಾಗವಹಿಸಲಿದ್ದಾರೆ.
ಹಾಗೆಯೇ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಸಿಐಟಿಯು ಸಂಘಟನೆಯ ಪ್ರಮುಖರು ಸಮಾವೇಶದಲ್ಲಿ ಸಣ್ಣ ಮತ್ತು ಮಧ್ಯಮ ಕಾರಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾನೂನು ರೂಪಿಸುವುದು, ಕನಿಷ್ಠ ಕೂಲಿ, ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ನಗರದ ಸಮೀಪದ ಕೈಗಾರಿಕೆ ಅಭಿವೃದ್ಧಿ ಕೇಂದ್ರದಲ್ಲಿರುವ ಸುರಾನ ಕಂಪನಿಯ ಕಾರ್ಮಿಕರು ಕಳೆದ ಅನೇಕ ತಿಂಗಳಿಂದ ನಡೆಸುತ್ತಿದ್ದ ಹೋರಾಟ ಕೈಬಿಟ್ಟಿದ್ದಾರೆ. ಈಚೆಗೆ ಗುಲ್ಬರ್ಗದ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರ ಸಮ್ಮುಖದಲ್ಲಿ ಕಂಪನಿಯ ಆಡಳಿತ ಮಂಡಳಿ, ಕಾರ್ಮಿಕರು ಮಧ್ಯೆ ಸಂಧಾನ ಸಭೆ ನಡೆದಿದ್ದರಿಂದ ಹೋರಾಟ ಹಿಂಪಡೆಯಲಾಗಿದೆ ಎಂದು ತಿಳಿಸಿದರು.
ಭರವಸೆ ನೀಡಲಾಗಿತ್ತು: ಕಂಪನಿಯ ಆಡಳಿತವು ಮುಂದಿನ ಮೂರು ತಿಂಗಳಲ್ಲಿ ವಜಾಗೊಂಡ 173 ಕಾರ್ಮಿಕರ ಪುನಾ ನಿಯೋಜನೆ ಮತ್ತಿತರೆ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದು, ಕಾರ್ಮಿಕರ ಕಾನೂನುಬದ್ಧ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಂಪನಿಯು ಸೂಕ್ತ ಭರವಸೆ ನೀಡಿದ್ದರಿಂದ ಹೋರಾಟ ಕೊನೆಗೊಳಿಸಲಾಯಿತು ಎಂದು ತಿಳಿಸಿದರು.
ಗುಲ್ಬರ್ಗದ ಕಾರ್ಮಿಕ ಇಲಾಖೆಯ ಉಪ ಆಯುಕ್ತ ಚಿದಾನಂದಪ್ಪ ಅವರು ವಿಭಾಗ ಇನ್ನಿತರೆ ಜಿಲ್ಲೆಗಳಿಗೆ ಭೇಟಿ ನೀಡದೇ ಅವರ ಕಚೇರಿಯಿಂದಲೇ ಆದೇಶ ಹೊರಡಿಸುತ್ತಿದ್ದಾರೆ. ಕಾರ್ಮಿಕರ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಅವರು ವಿಫಲರಾಗಿದ್ದು, ಅವರ ವರ್ತನೆ ಖಂಡಿಸಿ ಜುಲೈ ತಿಂಗಳಿನಲ್ಲಿ ಗುಲ್ಬರ್ಗಾ ಚಲೋ ಹೋರಾಟ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಎಚ್.ಪದ್ಮಾ, ಪ್ರವೀಣ್ ರೆಡ್ಡಿ, ವೀರಭದ್ರ ವಕೀಲರು, ಶರಣಗೌಡ, ಸೂಗನಗೌಡ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.