ರಾಯಚೂರು

ಕೊಡ ನೀರಿಗಿ ಮೈಲು ದೂರ ಹೋಗ್ಬೇಕ್ರಿ...

Published On :

ಕ.ಪ್ರ. ವಾರ್ತೆ, ಮುದಗಲ್, ಮೇ 10
ಮೊದಲು ಹಳ್ಳದಾಗ ನೀರು ಹರಿತಿದ್ವು, ಎಲ್ಲೆಂದರಲ್ಲಿ ಅಡ್ಡಗಟ್ಟಿದ್ದರಿಂದ ಮತ್ತು ಹಳ್ಳದಾಗಿನ ಉಸುಕು (ಮರಳು) ಅಕ್ರಮವಾಗಿ ಸಾಗಿಸುತ್ತಿದ್ದರಿಂದ, ತಲಿಮಟ ತೋಡಿದರೂ ಹನಿ ನೀರು ಸಿಗವಲ್ದಾಗೈತಿ. ನಮ್ಮ ಗೋಳು ಕೇಳೋರ್ಯಾರು ಇಲ್ಲ ಎಂದು ಬ್ಯಾಲಿಹಾಳ, ರಾಮತ್ನಾಳ ಗ್ರಾಮಸ್ಥರು ಹೇಳಿದ ಮಾತಿದು.
ಅಶುದ್ಧ ನೀರು: ಗ್ರಾಮದಲ್ಲಿ ಎಷ್ಟೇ ಬೊರ್‌ವೇಲ್ ಕೊರೆಸಿದರೂ ಉಪ್ಪು ನೀರು, ಕುಡಿಯಲು ಯೋಗ್ಯವಿಲ್ಲದಂತ ನೀರು ಸಿಗುತ್ತವೆ. ಫ್ಲೋರೈಡ್‌ಯುಕ್ತ ನೀರು ಸೇವಿಸಿ ಮೊಣಕಾಲು ನೋವು, ಹಲ್ಲುಗಳು ಕಂದಾಗಿ ಹರೆಯದವರು ಮುದುಕರಂತೆ ಜೀವನ ಸಾಗಿಸುವಂತಾಗಿದೆ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲ, ಚುನಾಯಿತ ಜನಪ್ರತಿನಿಧಿಗಳು ನಮ್ಮ ಗ್ರಾಮಗಳಿಗೆ ಚುನಾವಣೆ ಬಂದಾಗ ಮಾತ್ರ ಓಟು ಕೇಳಲು ಬರುತ್ತಾರೆ. ನಂತರ ತಿರುಗಿ ನೋಡುವುದಿಲ್ಲ. ಅದೇ ರೀತಿ ಶಾಸಕ ಮಾನಪ್ಪ ವಜ್ಜಲ್ ಕೂಡ ಕಳೆದ ಚುನಾವಣೆಯಲ್ಲಿ ಓಟು ಕೇಳಲು ಬಂದಿದ್ದರು ಮತ್ತೆ ಮನ್ನೆ ನಡೆದ ಚುನಾವಣೆಯಲ್ಲಿ ಪುನಾ ಓಟು ಕೇಳಲು ಬಂದಿದ್ದರು.
ಆರಿಸಿ ಬಂದ ಮೇಲೆ ತಾಲೂಕಿನ ಕೋನೆಯ ಹಳ್ಳಿಗಳನ್ನೋ ತಿರುಗಿ ನೋಡುವುದಿಲ್ಲ ಎಂದು ಗ್ರಾಮಸ್ಥರಾದ ಶಿವನಗೌಡ, ಮಲ್ಲಾರಡ್ಡಿ ಆರೋಪಿಸಿದರು. ಎರಡು ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆ ಅವಶ್ಯಕತೆ ಇದ್ದು ಪಕ್ಕದ ಕುಷ್ಠಗಿ ತಾಲೂಕಿನ ಮುದ್ದಲಗುಂದಿ ಸಿವಾರದಲ್ಲಿ ಬೋರವೆಲಲ್ಕೋರೆಸಿ ಈಗಾಗಲೇ ಪೈಪ ಲೈನ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿಯಿಂದ ಮಾಡಲಾಗಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದರಿಂದ ಬೆಸಿಗೆ ಸಮಯದಲ್ಲಿ ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಿದೆ ಎಂದರು.
ಮಾನಪ್ಪ ವಜ್ಜಲ್‌ಗೆ ಸವಾಲು:  ಹಳ್ಳದ ತೀರದ ಗ್ರಾಮಗಳಾದ ವಂದಾಲಿ, ಆರ್ಯಭೋಗಾಪೂರ, ಬ್ಯಾಲಿಹಾಳ, ರಾಮತ್ನಾಳ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಕ್ಷೇತ್ರದಲ್ಲಿ ಪುನಾ ಆಯ್ಕೆಯಾಗಿರುವ ಶಾಸಕ ಮಾನಪ್ಪ ವಜ್ಜಲಗೆ ಈ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಸವಾಲಾಗಿದೆ. ಗ್ರಾಮ ಪಂಚಾಯಿತಿ ಇದ್ದರು ಇಲ್ಲದಂತಿದೆ. ಬ್ಯಾಲಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುದಗಲ್ ರಾಮತ್ನಾಳ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದು ಸಂಚಾರಕ್ಕೆ ಸಂಚಕಾರ ತಂದಿದೆ.
ಮೇಲ್ದರ್ಜೆಗೆ: ದೋಟಿಹಾಳ ರಾಜ್ಯ ಹೆದ್ದಾರಿಯಿಂದ ಮುದೇನೂರು, ರಾಮತ್ನಾಳ ಮಾರ್ಗ  ಮುದಗಲ್ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಈ ರಸ್ತೆಯನ್ನು ರಾಜ್ಯ ಹೆದ್ದಾರಿ ಎಂದು ಲೋಕೋಪಯೋಗಿ ಇಲಾಖೆ ಘೋಷಣೆ ಮಾಡಿ ಸುಮಾರು 2 ವರ್ಷಗತಿಸಿದರು ಇದುವರಿಗೂ ದುರಸ್ತಿ ಭಾಗ್ಯ ಕಂಡಿಲ್ಲ, ರಸ್ತೆ ಮೇಲ್ದರ್ಜೆಗೆ ಏರಿಸಿದ್ದರಿಂದ ಜಿ.ಪಂ.ಯಿಂದಾಗಲಿ, ಲೋಕೋಪಯೋಗಿ ಇಲಾಖೆಯಿಂದಾಗಲಿ ಕನಿಷ್ಟ ಗುಂಡಿಗಳನ್ನಾದರೂ ಮುಚ್ಚುವ ಗೋಜಿಗೆ ಹೋಗಿಲ್ಲ.
ರಸ್ತೆ ಚರಂಡಿ: ಬ್ಯಾಲಿಹಾಳ ಗ್ರಾಮದ ಬೋರವೆಲಲ್ನೀರು ರಸ್ತೆಯಲ್ಲಿ ಹರಿಯುತ್ತಿದ್ದರಿಂದ ಚರಂಡಿಯಾಗಿ ಮಾರ್ಪಟ್ಟಿದೆ, ಇದೆ ಮಾರ್ಗವಾಗಿ ಗ್ರಾನೈಟ ಲಾರಿಗಳು ಸಾಗುತ್ತಿದ್ದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಹೇಳುವವರಿಲ್ಲ ಕೇಳುವವರಿಲ್ಲ ಎನ್ನುವಂತಾಗಿದೆ.  ಈ ಭಾಗದ ಮುಖಂಡರಾಗಲಿ, ಚುನಾಯಿತ ಜನಪ್ರತಿನಿಧಿಗಳಾಗಲಿ ಕಾಳಜಿ ವಹಿಸದೆ ಇದ್ದುದರಿಂದ ಪ್ರತಿ ದಿನಾಲು ಈ ಹಳ್ಳಿಗಳ ಜನರು ಜೀವ ಭಯದಲ್ಲಿ ಸಂಚರಿಸುವಂತಾಗಿದೆ.
 ಶಾಸಕ ಮಾನಪ್ಪ ವಜ್ಜಲ್ ಇನ್ನು ಮುಂದಾರೂ ಈ ಹಳ್ಳಿಗಳ ಬಗ್ಗೆ ಕಾಳಜಿ ವಹಿಸಿ ಶುದ್ಧ ಕುಡಿಯುವ ನೀರು, ಸುಗಮ ಸಂಚಾರಕ್ಕೆ ರಸ್ತೆ ದುರಸ್ತಿ ಮಾಡಿ ಜನರ ಸಂಕಷ್ಟಕ್ಕೆ ಪರಿಹರಿಸುವರೇ ಕಾದು ನೋಡಬೇಕಾಗಿದೆ.
- ಪಂಪಯ್ಯ ಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.