ರಾಯಚೂರು

ಸಚಿವ ಸ್ಥಾನಕ್ಕೆ ಪೈಪೋಟಿ; ಜನರಲ್ಲಿ ಗರಿಗೆದರಿದ ನಿರೀಕ್ಷೆ

Published On :

 ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 11

ರಾಜ್ಯ ವಿಧಾನಸಭೆಯ ಶಾಸಕಾಂಗದ ನಾಯಕನಾಗಿ ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದು, ಸಚಿವ ಸಂಪುಟದ ರಚನೆ ಕಾರ್ಯ ಚುರುಕು ಪಡೆದಿದೆ. ಜಿಲ್ಲೆಯಿಂದ ನಾಲ್ವರು ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಸಚಿವ ಸ್ಥಾನ ಯಾರಿಗೆ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ.
ಕಳೆದ ಬಿಜೆಪಿ ಅಧಿಕಾರಾವಧಿಯಲ್ಲಿ ಹೊರ ಜಿಲ್ಲೆಯವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರಿಂದ ಜಿಲ್ಲೆಯ ಪ್ರಗತಿ ನಿಂತ ನೀರಾಗಿದೆ. ಕಾಟಾಚಾರಕ್ಕೆ ಬಂದು ಹೋಗುತ್ತಿದ್ದ ಉಸ್ತುವಾರಿ ಸಚಿವರ ಕಾರ್ಯವೈಖರಿಗೆ ಸ್ಥಳೀಯರಲ್ಲಿ ಬೇಸರವಿತ್ತು. ಈಗ ಸರ್ಕಾರ ಬದಲಾಗಿದೆ. ಕಾಂಗ್ರೆಸ್ ಪಕ್ಷದ ನಾಲ್ವರು ಜಿಲ್ಲೆಯಿಂದ ವಿಧಾನಸಭೆಗೆ ಆಯ್ಕೆಯಾಗಿದ್ದು, ಅವರಲ್ಲಿಯೇ ಒಬ್ಬರಿಗೆ ಸಚಿವ ಸ್ಥಾನ ಸಿಗುವ ಮೂಲಕ ಜಿಲ್ಲಾ ಉಸ್ತುವಾರಿಯ ಹೊಣೆ ಹೊತ್ತು ಅಭಿವೃದ್ಧಿಯತ್ತ ಮುನ್ನಡೆಸುವರೆಂಬುದು ಮತದಾರರ ನಿರೀಕ್ಷೆ.
ಪುನಾ ಕಾಂಗ್ರೆಸ್ ಭದ್ರಕೋಟೆ: ಜಿಲ್ಲೆಯ ದೇವದುರ್ಗ ಕ್ಷೇತ್ರವು ಮೊದಲಿನಿಂದಲೂ ರಾಜಕೀಯ ಜಿದ್ದಾಜಿದ್ದಿಯ ಕಣ. ಅದರಲ್ಲೂ 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಕಾಂಗ್ರೆಸ್ ಸ್ಥಿತಿ ಹೀನಾಯವಾಗಿತ್ತು. ಆದರೆ ಪ್ರಸಕ್ತ ಚುನಾವಣೆಯ ವೇಳೆಗೆ ಪಕ್ಷವನ್ನು ಪುನಾ ಸಂಘಟಿಸಿ ಬಲಪಡಿಸಿ ಚುನಾವಣೆ ಗೆದ್ದವರು ಮಾಜಿ ಸಂಸದ ಹಾಗೂ ಹಾಲಿ ಶಾಸಕ ವೆಂಕಟೇಶ ನಾಯಕ.
ಮುಂಚೂಣಿಯಲ್ಲಿ ವೆಂಕಟೇಶ ನಾಯಕ: ನಾಲ್ಕು ಬಾರಿ ಸಂಸದರಾಗಿರುವ ಅನುಭವ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹಾಗೂ ಜಿಲ್ಲೆಯಲ್ಲಿಯೇ ಹಿರಿಯ ರಾಜಕಾರಣಿ ಎಂಬ ಹೆಸರಿರುವುದು ಇವರಿಗೆ ಸಚಿವ ಸ್ಥಾನ ದೊರೆಯಲು ಪ್ಲಸ್ ಪಾಯಿಂಟ್. ಕಾಂಗ್ರೆಸ್‌ಗಿರುವ ಇವರ ನಿಷ್ಠೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಹಾಗೆಯೇ ದೇವದುರ್ಗದಿಂದ ಇದುವರೆಗೆ ಬೇರೆ ಬೇರೆ ಪಕ್ಷದಿಂದ ಶಾಸಕರಾದವರು ಸಚಿವ ಸ್ಥಾನ ಪಡೆದಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಇವರೇ ಸಚಿವ ಸ್ಥಾನ ಗಳಿಕೆಯ ಸಂಭಾವ್ಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇದ್ದಾರೆ ಎನ್ನಬಹುದು.
ಹಂಪನಗೌಡರೂ ರೇಸ್‌ನಲ್ಲಿ: ಇನ್ನು ಸಿಂಧನೂರು ಶಾಸಕರಾಗಿರುವ ಬಾದರ್ಲಿ ಹಂಪನಗೌಡರು ಒಟ್ಟು ನಾಲ್ಕು ಬಾರಿ ಶಾಸಕರಾಗಿದ್ದರೂ ಕಾಂಗ್ರೆಸ್ ಪಕ್ಷದಿಂದ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಈ ಮೊದಲು 2 ಬಾರಿ ಜನತಾ ಪರಿವಾರದಿಂದ ಶಾಸಕರಾಗಿದ್ದರು. ಸಿಂಧನೂರು ಕ್ಷೇತ್ರದಲ್ಲಿ ಕಳೆದ ಕೆಲ ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಸಂಘಟನೆಯ ಜತೆಗೆ ವೈಯಕ್ತಿಕವಾಗಿಯೂ ಸಾಕಷ್ಟು ಹೆಸರು ಗಳಿಸಿದ್ದಾರೆ. ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿರುವ ಇವರೂ ಸಚಿವ ಸ್ಥಾನಕ್ಕೆ ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ.
ಇಬ್ಬರಿಗೆ ಮಂತ್ರಿಗಿರಿ ಅನುಮಾನ: ಮಾನವಿ ಕ್ಷೇತ್ರದ ಶಾಸಕ ಹಂಪಯ್ಯ ನಾಯಕ ಸತತ ಎರಡನೇ ಬಾರಿಗೆ ಶಾಸಕರಾಗಿದ್ದಾರೆ. ಇವರಿಗೆ ಸಚಿವ ಸ್ಥಾನ ನಿರ್ವಹಣೆಗೆ ಅನುಭವದ ಕೊರತೆ ಕಾಡಬಹುದು. ಇನ್ನು ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್ ಸತತ ಎರಡನೇ ಬಾರಿಗೆ ಶಾಸಕರಾಗಿದ್ದರೂ ಅವರು ಕಾಂಗ್ರೆಸ್ ಪಕ್ಷವನ್ನು ಕಳೆದ ಚುನಾವಣೆಯಲ್ಲಷ್ಟೇ ಸೇರ್ಪಡೆಗೊಂಡಿದ್ದಾರೆ.
 ಹೀಗಾಗಿ ಈ ಇಬ್ಬರಿಗೂ ಸಚಿವ ಸ್ಥಾನ ಅನುಮಾನ ಎಂದೇ ಹೇಳಲಾಗುತ್ತಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿ.ಎಂ. ಉದಾಸಿ, ಆನಂದ ಅಸ್ನೋಟಿಕರ್, ಶ್ರೀರಾಮುಲು ಸೇರಿ ಐವರು ಜಿಲ್ಲಾ ಉಸ್ತುವಾರಿ ಸಚಿವರನ್ನು ಜಿಲ್ಲೆ ಕಂಡಿದೆ. ಆದರೆ ಅವರು ಜಿಲ್ಲೆಗೆ ಭೇಟಿ ನೀಡಿದ್ದು ಕಡಿಮೆ. ಧ್ವಜಾರೋಹಣ ಸಮಾರಂಭಗಳಿಗೆ ಹಾಜರಾಗುತ್ತಿದ್ದ ಆಗಿನ ಸಚಿವರು ಆನಂತರದಲ್ಲಿ ಜಿಲ್ಲೆಗೆ ಕಾಲಿಡುತ್ತಿರಲಿಲ್ಲ.
ಇನ್ನಾದರೂ ಅಭಿವೃದ್ಧಿ ಕಂಡೀತೆ?: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜಿಲ್ಲೆಯಿಂದ ನಾಲ್ವರು ಶಾಸಕರು ಕಾಂಗ್ರೆಸ್‌ನಿಂದಲೇ ಆಯ್ಕೆಯಾಗಿದ್ದಾರೆ. ಹೀಗಾಗಿ ಜಿಲ್ಲೆಯವರಿಗೆ ಸಚಿವ ಸ್ಥಾನ ನೀಡಿ ಉಸ್ತುವಾರಿ ವಹಿಸಿ ಜಿಲ್ಲೆಯ ಪ್ರಗತಿಗೆ ಸರ್ಕಾರ ಮನಸು ಮಾಡಬೇಕಿದೆ. ಈ ನಿಟ್ಟಿನಲ್ಲಿ ನಿಯೋಜಿತ ಸಿಎಂ ಸಿದ್ದರಾಮಯ್ಯ ಅವರ ಒಲವು ಜಿಲ್ಲೆಯ ಯಾವ ಶಾಸಕರ ಪರ ಎಂದು ಜನತೆ ಕಾದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.