ಹಣದ ಕೊರತೆ: ನೆನೆಗುದಿಗೆ ಕ್ರೀಡಾಂಗಣ ಕಾಮಗಾರಿ
ಕ.ಪ್ರ. ವಾರ್ತೆ, ಲಿಂಗಸ್ಗೂರು, ಮೇ 12
ಪಟ್ಟಣದ ಕರಡಕಲ್ ರಸ್ತೆಯ ಸರ್ಕಾರಿ ತೋಟದ ಜಾಗೆಯಲ್ಲಿ ನಿರ್ಮಿಸಲು ಉದ್ದೇಶಿತ ಕ್ರೀಡಾಂಗಣ ಕಾಮಗಾರಿ ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಇದಕ್ಕೆ ಹಣದ ಕೊರತೆ ಕಾರಣ ಎಂದು ಹೇಳಲಾಗುತ್ತಿದೆ. ತಾಲೂಕಿನ ಕ್ರೀಡಾಪಟುಗಳ ಅನುಕೂಲಕ್ಕಾಗಿ ಸುಮಾರು 1 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲು ಮಂಜೂರಾತಿ ದೊರಕಿತ್ತು. ಭೂ ಸೇನಾ ನಿಗಮಕ್ಕೆ ವಹಿಸಲಾದ ನಿರ್ಮಾಣ ಕಾಮಗಾರಿಗೆ ಮೊದಲ ಕಂತಿನಲ್ಲಿ 50 ಲಕ್ಷ ಬಿಡುಗಡೆಗೊಂಡು ಕ್ರೀಡಾಂಗಣದ ಮುಖಭಾಗ ಮಾತ್ರ ನಿರ್ಮಿಸಿ ಸುಮಾರು ನಾಲ್ಕು ವರ್ಷ ಕಳೆದಿದೆ. ಬಾಕಿ ಉಳಿದ ಅಥ್ಲೆಟಿಕ್ ಕೋರ್ಟ್, ಖೋಖೋ ಕೋರ್ಟ್, ಕಬಡ್ಡಿ ಕೋರ್ಟ್ ಸೇರಿದಂತೆ ಕಾಮಗಾರಿಗಳು ಹಣದ ಕೊರತೆಯಿಂದ ಅರ್ಧಕ್ಕೆ ನಿಲ್ಲಿಸಲಾಗಿದೆ.
ಪಟ್ಟಣದಲ್ಲಿ ಕ್ರೀಡಾಪಟುಗಳಿಗೆ ಕ್ರೀಡಾಂಗಣ ನಿರ್ಮಿಸುವಂತೆ ಶಾಸಕ, ಸಚಿವರಿಗೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಬೇಡಿಕೆ ಸಲ್ಲಿಸಿದ್ದರು. ಬೇಡಿಕೆಯಂತೆ ಶಾಸಕರು ಯುವಜನ ಮತ್ತು ಕ್ರೀಡಾ ಸಚಿವರೊಂದಿಗೆ ಚರ್ಚಿಸಿ ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕ್ರೀಡಾಂಗಣ ಕಾಮಗಾರಿ ಅರ್ಧಕ್ಕೆ ನಿಂತಿರುವುದು ಕ್ರೀಡಾಪಟುಗಳಿಗೆ ಬೇಸರ ಮೂಡಿಸಿದೆ. ಬಾಕಿ ಉಳಿದ ಕ್ರೀಡಾಂಗಣ ಕಾಮಗಾರಿಗೆ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಉಳಿದ ಹಣ ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸುವಲ್ಲಿ ಶಾಸಕರು ಆಸಕ್ತಿ ತೋರಬೇಕೆಂಬುದು ಕ್ರೀಡಾಸಕ್ತರ ಒತ್ತಾಸೆಯಾಗಿದೆ.
ವಿವೇಕಾನಂದ ಶಾಲೆಗೆ ಪ್ರತಿಶತ ಫಲಿತಾಂಶ
ಸುರಪುರ: ಸಮೀಪದ ರಂಗಪೇಟೆಯ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕನ್ಯಾ ಪ್ರೌಢಶಾಲೆಯು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರತಿಶತ ಫಲಿತಾಂಶ ಪಡೆದಿದೆ. 13 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ 6 ವಿದ್ಯಾರ್ಥಿನಿಯರು ಪ್ರಥಮ, ಓರ್ವ ವಿದ್ಯಾರ್ಥಿನಿ ದ್ವಿತೀಯ ಮತ್ತು 6 ವಿದ್ಯಾರ್ಥಿನಿಯರು ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಭೀಮಣ್ಣ ಅವಂಟಿ ಹಾಗೂ ಕಾರ್ಯದರ್ಶಿ ಬಸವರಾಜ ಚೆಟ್ಟಿ ತಿಳಿಸಿದ್ದಾರೆ.
ಇಂದು ಸುಭಾಷ ಪುಣ್ಯಸ್ಮರಣೆ
ಶಹಾಪುರ: ಸಗರನಾಡಿನ ವೀರಯೋಧ ಸುಭಾಷ ಮಡಿವಾಳರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮೇ 13ರಂದು ತಾಲೂಕಿನ ಸಗರ ಗ್ರಾಮದ ಯುಕೆಪಿ ಕ್ಯಾಂಪ್ ಆವರಣದಲ್ಲಿ ಬೆಳಗ್ಗೆ 10. 30ಕ್ಕೆ ಆಯೋಜಿಸಲಾಗಿದೆ. ಹುತಾತ್ಮ ಸ್ಮರಣೆ ನಿಮಿತ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನೂತನ ಶಾಸಕ ಗುರುಪಾಟೀಲ ಶಿರವಾಳ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಸಾನ್ನಿಧ್ಯವನ್ನು ಸಗರ ಹಿರೇಮಠದ ಚನ್ನಬಸವದೇವರು ವಹಿಸುವರು. ಅತಿಥಿಗಳಾಗಿ ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ ಪಾಲ್ಗೊಳ್ಳವರು. ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪನಾಯಕ, ಸಾಹಿತಿ ಎ.ಕೆ. ರಾಮೇಶ್ವರ, ಭಾಸ್ಕರಾವ ಮೂಡಬೂಳ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಬಸನಗೌಡ ಸುಬೇದಾರ ವಹಿಸಲಿದ್ದಾರೆ ಎಂದು ಪುಣ್ಯಸ್ಮರಣೆ ಆಚರಣಾ ಸಮಿತಿ ತಿಳಿಸಿದೆ.
ಬಸವೇಶ್ವರ ಜಯಂತಿ ಇಂದು
ಯಾದಗಿರಿ: ವೀರಶೈವ ಸಮಾಜದ ವತಿಯಿಂದ ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವವನ್ನು ಮೇ 13ರಂದು ಸಂಭ್ರದಿಂದ ಆಚರಿಸಲಾಗುತ್ತಿದೆ.ಜಯಂತ್ಯುತ್ಸವದ ಅಂಗವಾಗಿ ಸೋಮವಾರ ಬೆಳಗ್ಗೆ 11 ಗಂಟೆಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಆರಂಭವಾಗಲಿದೆ ಎಂದು ಸಂಘದ ನಗರ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ, ಕಾರ್ಯದರ್ಶಿ ವಿ.ಸಿ. ರೆಡ್ಡಿ, ಯುವ ಅಧ್ಯಕ್ಷ ನೀಲಕಂಠ ಶೀಲವಂತ ತಿಳಿಸಿದ್ದಾರೆ.
ಇಂದು ರಥೋತ್ಸವ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ವಡ್ಡರ ಸಂಘ ಬಡಾವಣೆಯಲ್ಲಿರುವ ಸದ್ಗುರು ಅಡವಿ ತಾತನವರ ರಥೋತ್ಸವ ಹಾಗೂ ಬಸವ ಜಯಂತಿ ನಿಮಿತ್ತ ಭಾವಚಿತ್ರ, ಜೋಡಿ ಎತ್ತುಗಳ ಮೆರವಣಿಗೆಯು ಮೇ 13ರಂದು ನಡೆಯಲಿದೆ ಎಂದು ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷ ಸಂತೋಷಕುಮಾರ ಇಂಗಿನಶೆಟ್ಟಿ ತಿಳಿಸಿದ್ದಾರೆ. ಮಧ್ಯಾಹ್ನ 3.30ಕ್ಕೆ ಅಡವಿ ತಾತ ದೇವಸ್ಥಾನದಿಂದ ಮೆರವಣಿಗೆ ನಡೆಯಲಿದೆ.
ಜವಳಗೇರಾದಲ್ಲಿ ಬಸವ ಜಯಂತಿ
ಸಿಂಧನೂರು: ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಮೇ 13 ಸೋಮವಾರ ಅಕ್ಷಯ ತೃತಿಯದಂದು ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ ಹಾಗೂ ಉಟಕನೂರು ಬಸವಲಿಂಗ ತಾತನವರ ಜಾತ್ರಾ ಮಹೋತ್ಸವ ಜರುಗಲಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪ.ಪೂ.ಶ್ರೀ ಷ.ಬ್ರ.ಸೋಮನಾಥ ಶಿವಾಚಾರ್ಯ ರಂಭಾಪುರಿ ಖಾಸಾಶಾಖಾ ಮಠ ಕರಿಬಸವನಗರ ಸಿಂಧನೂರು ವಹಿಸಲಿದ್ದಾರೆ. ಮ.ನಿ.ಪ್ರ.ಮಹಾಲಿಂಗ ಮಹಾಸ್ವಾಮಿ ವಿರಕ್ತಮಠ ಸುಕ್ಷೇತ್ರ ಯದ್ದಲದೊಡ್ಡಿ, ಮರಿಬಸವ ರಾಜದೇವರು ಸುಕ್ಷೇತ್ರ ಉಟಕನೂರು, ಪ್ರಭುಸ್ವಾಮಿ, ಸಿಎಸ್ಎಫ್ ಕ್ಯಾಂಪ್, ಜವಳಗೇರಾ ಮತ್ತು ಸೂರ್ಯನಾರಾಯಣ ಸ್ವಾಮಿ, ನಾಗಲಿಂಗ ಮೂಲಮಠ ಜವಳಗೇರಾ ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ 9 ಗಂಟೆಗೆ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಮೆರವಣಿಗೆ, ಮಧ್ಯಾಹ್ನ 12.20ಕ್ಕೆ ಸಾಮೂಹಿಕ ವಿವಾಹಗಳು ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಾಯಂಕಾಲ 5 ಗಂಟೆಗೆ ಬಸವಲಿಂಗ ತಾತನವರ ಉಚ್ಚಾಯ ಕಾರ್ಯಕ್ರಮ ಜರಗುವುದು. ಸಕಲ ಸದ್ಭಕ್ತರು ತನು, ಮನ, ಧನದೊಂದಿಗೆ ಭಾಗವಹಿಸಿ ಬಸವಲಿಂಗ ತಾತನವರ ಕೃಪೆಗೆ ಪಾತ್ರರಾಗಲು ಶರಣಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ವೀರಶೈವ ಯುವಕ ಮಂಡಳಿ ವಿನಂತಿಸಿದ್ದಾರೆ.
ಮನೆ ಕಳವು: ದೂರು
ರಾಯಚೂರು: ಸಿಂಧನೂರು ತಾಲೂಕಿನ ಕೆ.ಬಸ್ಸಾಪುರ ಗ್ರಾಮದ ಮನೆಯೊಂದರಲ್ಲಿ ಕಳವು ಸಂಭವಿಸಿದ್ದು, ಸಂಬಂಧಿಗಳ ವಿರುದ್ಧ ಕಳವಿನ ಆರೋಪಿಸಿ ದೂರು ಸಲ್ಲಿಸಲಾಗಿದೆ. ಗ್ರಾಮದ ಮಹಿಳೆ ದುರುಗಮ್ಮ ಎಂಬಾಕೆ ತೀವ್ರ ಅನಾರೋಗ್ಯದಿಂದ ಬಳಲಿ ಕನ್ನಾರಿ ಗ್ರಾಮದಲ್ಲಿ ಮೃತಳಾಗಿದ್ದಾಳೆ. ಆಕೆ ಮೊದಲು ವಾಸವಾಗಿದ್ದ ಬಸ್ಸಾಪುರ ಗ್ರಾಮದ ಮನೆಯಲ್ಲಿ ಕಳವು ಮಾಡಲಾಗಿದ್ದು, ಮನೆಯಲ್ಲಿದ್ದ 10ತೊಲೆ ಚಿನ್ನಾಭರಣ ಮತ್ತು 15ಸಾವಿರ ನಗದು ದೋಚಲಾಗಿದೆ ಎಂದು ದೂರಲಾಗಿದೆ. ಜಡೆಪ್ಪ, ದುರುಗಪ್ಪ, ಲಚ್ಚಮ್ಮ, ರುದ್ರಮ್ಮ, ಸಗರಮ್ಮ, ಗಂಗಮ್ಮ, ಬಸವರಾಜ್ ಎಂಬುವವರು ಕಳವು ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ತುರುವಿಹಾಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮದ್ಯ ವ್ಯಸನಿ ಸಾವು
ರಾಯಚೂರು: ಲಿಂಗಸ್ಗೂರು ತಾಲೂಕಿನ ಮುದಗಲ್ ಪಟ್ಟಣದ ಹೊರವಲಯದಲ್ಲಿ ಮದ್ಯ ವ್ಯಸನಿಯೊಬ್ಬ ಸಾವಿಗೀಡಾಗಿದ್ದಾನೆ. ಮೃತನನ್ನು ಹನುಮಂತಪ್ಪ ವಡ್ಡರ ಎಂದು ಗುರುತಿಸಲಾಗಿದೆ. ಈತ ಮದ್ಯ ವ್ಯಸನಿಯಾಗಿದ್ದು, ಗುಡಿ ಕೆಲಸಕ್ಕಾಗಿ ಬಾಗಲಕೋಟೆಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿದ್ದು, ಬಾಗಲಕೋಟೆಗೆ ಹೋಗದೆ ಮುದಗಲ್ನಲ್ಲಿಯೇ ಮದ್ಯಸೇವಿಸಿ ಮುದಗಲ್-ಲಿಂಗಸ್ಗೂರು ಮುಖ್ಯ ರಸ್ತೆಯ ಸೇತುವೆಯ ಬಳಿ ಬಿದ್ದು ಸಾವಿಗೀಡಾಗಿದ್ದಾನೆ. ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಹೈಕಶಿ ಶಾಲೆಗೆ ಶೇ. 84 ಫಲಿತಾಂಶ
ಗುಲ್ಬರ್ಗ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಾಲಕರ ಪ್ರೌಢ ಶಾಲೆಗೆ ಶೇ. 84.44ರಷ್ಟು ಫಲಿತಾಂಶ ಲಭಿಸಿದೆ ಎಂದು ಮುಖ್ಯಗುರು ಬಿ.ಎಂ. ಮಹೇಶ ತಿಳಿಸಿದ್ದಾರೆ. ಪರೀಕ್ಷೆಗೆ ಹಾಜರಾದ 45 ವಿದ್ಯಾರ್ಥಿಗಳ ಪೈಕಿ 10 ಪ್ರಥಮ ಶ್ರೇಣಿ, 7 ದ್ವಿತೀಯ ಶ್ರೇಣಿ ಹಾಗೂ 21 ಸಾಮಾನ್ಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಅವರು ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಡಾ. ಲೋಹಿಯಾ ಕಾಲೇಜು ಸಾಧನೆ
ಆಳಂದ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸ್ಥಳೀಯ ಡಾ. ರಾಮಮನೋಹರ್ ಲೋಹಿಯಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಶೇ. 56.6ರಷ್ಟು ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ ಒಟ್ಟು 236 ವಿದ್ಯಾರ್ಥಿಗಳಲ್ಲಿ 7 ಅಗ್ರ ಶ್ರೇಣಿಯಲ್ಲಿ, 72 ಪ್ರಥಮ ಶ್ರೇಣಿಯಲ್ಲಿ ಪಾಸಾದರೆ, ಉಳಿದ 25 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾವಿಭಾಗದಲ್ಲಿ ಧಾನಪ್ಪ ಅಣ್ಣಪ್ಪ ಹಿರೋಳಿ 542 ಅಂಕ, ರಸೂಲ್ ಸೈಫಾನ್ 525, ಯಲ್ಲಾಲಿಂಗ ಮಲ್ಲಿನಾಥ 523, ಲಕ್ಷ್ಮೀಪುತ್ರ ಭೀಮರಾವ 522, ಮೌಲಾಲಿ ಸೈಫನ್ ಸಾಬ್ 515, ವಿಕಾಸ ಶ್ರೀಮಂತ 514 ಹೀಗೆ ಅತಿ ಹೆಚ್ಚು ಅಂಕಪಡೆದಿದ್ದಾರೆ. ವಿಜ್ಞಾನ ವಿಭಾಗಕ್ಕೆ ಸಿದ್ಧಮ್ಮ ಮಲ್ಲಿನಾಥ 524 ಅಂಕದೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ತನ್ನದಾಗಿಸಿದ್ದಾರೆ. ವಿಕಾಸ ಧನಸಿಂಗ್ (469) ಸ್ಮಿತಾ ಸುನೀಲಕುಮಾರ (463) ಸೋನಿಕಾ ಸುರೇಶ ಮಡ್ಡೆ (442)ಮತ್ತು ಮೀನಾಕ್ಷಿ ಹೊದಲೂರ (427) ನಂತರ ಸ್ಥಾನದಲ್ಲಿದ್ದಾರೆಂದು ಪ್ರಾಚಾರ್ಯ ನಾಗಣ್ಣ ಸಲಗರೆ ತಿಳಿಸಿದ್ದಾರೆ.
ಫಿರ್ದೋಷ್ ಬೇಗಂ ಶೇ. 89 ಅಂಕ ಗಳಿಕೆ
ಗುಲ್ಬರ್ಗ: ಇತ್ತೀಚೆಗೆ ನಡೆದ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಅಫಜಲ್ಪುರ ತಾಲೂಕಿನ ಮಹಾಂತಪುರದ ಮಹಾಂತೇಶ್ವರ ಸಂಯುಕ್ತ ಪ.ಪೂ. ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದ್ದು, ಫಿರ್ದೋಷ್ ಬೇಗಂ ತಂದೆ ನವಾಜ್ ಪಾಷಾ ಎಂಬ ವಿದ್ಯಾರ್ಥಿನಿ ಶೇ. 88.66 ಫಲಿತಾಂಶ ಪಡೆದಿದ್ದಾಳೆ. 15 ವಿದ್ಯಾರ್ಥಿಗಳು ಪ್ರಥಮ ದರ್ಜೆ, 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
15ರಂದು ಬಸವ ಕಾವ್ಯ ದರ್ಪಣ ಕಾರ್ಯಕ್ರಮ
ಗುಲ್ಬರ್ಗ: ಬಸವಣ್ಣನವರ ಜಯಂತಿ ನಿಮಿತ್ತವಾಗಿ ಮೇ 15ರಂದು ಸಂಜೆ 5ಕ್ಕೆ ಕನ್ನಡ ಭವನದಲ್ಲಿ ನೀನೊಲಿದರೆ ಬಸವ ಕಾವ್ಯ ದರ್ಪಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಸಹಯೋಗದಲ್ಲಿ ಈ ಕವಿಗೋಷ್ಠಿ ನಡೆಯಲಿದೆ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ ಡಾ. ಈಶ್ವರಯ್ಯ ಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಸಾಪ ಕಾರ್ಯದರ್ಶಿ ಸುರೇಶ ಬಡಿಗೇರ ಮತ್ತು ಬಿ. ಎಚ್. ನಿರಗುಡಿ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶ್ರೀಶೈಲ್ ಘೂಳಿ ತಿಳಿಸಿದ್ದಾರೆ.
ವಿದ್ಯುತ್ ದರ ಏರಿಕೆ ಹಿಂಪಡೆಯಲು ಆಗ್ರಹ
ಗುಲ್ಬರ್ಗ: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಏಕಾಏಕಿ ವಿದ್ಯುತ್ ದರವನ್ನು ಏರಿಕೆ ಮಾಡಿರುವುದನ್ನು ವಾಪಸ್ಸು ಪಡೆಯುವಂತೆ ಮಹಾತ್ಮ ಗಾಂಧೀಜಿ ಗ್ರಾಹಕರ ಹಿತರಕ್ಷಣಾ ವೇದಿಕೆ ಸರ್ಕಾರಕ್ಕೆ ಒತ್ತಾಯಿಸಿದೆ. ಪ್ರತಿ ಯೂನಿಟ್ ವಿದ್ಯುತ್ಗೆ 23 ಪೈಸೆ ದರ ಏರಿಕೆ ಮಾಡಿರುವ ಆದೇಶವನ್ನು ವಿರೋಧಿಸುವುದಾಗಿ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ವೈಜನಾಥ ಝಳಕಿ ತಿಳಿಸಿದ್ದಾರೆ. ಕೂಡಲೇ ವಿದ್ಯುತ್ ದರವನ್ನು ಹಿಂದಕ್ಕೆ ಪಡೆದು ಗ್ರಾಹಕರಿಗೆ ಅನುಕೂಲ ಮಾಡಬೇಕು, ಇಲ್ಲವಾದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
ಇಂದು ಐಸಿಯು ಘಟಕ ಉದ್ಘಾಟನೆ
ಗುಲ್ಬರ್ಗ: ಅಕ್ಷಯ ತೃತಿಯಾ ಬಸವ ಜಯಂತಿಯ ಶುಭ ದಿನ ಮೇ 13ರಂದು ಬೆಳಗ್ಗೆ 10 ಗಂಟೆಗೆ ಬಸವೇಶ್ವರ ಆಸ್ಪತ್ರೆಯಲ್ಲಿ ನೂತನ ನ್ಯೂರೋ ಸರ್ಜರಿ ಐಸಿಯು ಘಟಕದ ಉದ್ಘಾಟನೆಯನ್ನು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ. ನಮೋಶಿ ನೆರವೇರಿಸುವರು.
ಈ ಕಾರ್ಯಕ್ರಮದಲ್ಲಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಆಡಳಿತ ಮಂಡಳಿ ಸದಸ್ಯರು ಪಾಲ್ಗೊಳ್ಳುವರು. ಎಂ.ಆರ್. ಮೆಡಿಕಲ್ ಕಾಲೇಜಿನ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಭಾಗವಹಿಸುವರು ಹಾಗೂ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಲು ಕೊರಲಾಗಿದೆ.
ಮಾದಿಗ ಸಮಾಜ ಪದಾಧಿಕಾರಿಗಳು
ಗುಲ್ಬರ್ಗ: ಅಫಜಲ್ಪುರ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಈಚೇಗೆ ಹಿರಿಯ ಮಾದಿಗ ಸಮಾಜದ ಮುಖಂಡರ ಸಭೆ ನಡೆಸಿ ಡಾ. ಬಾಬು ಜಗಜೀವನರಾಮ ತರುಣ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಸಂಗಣ್ಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ, ಅಧ್ಯಕ್ಷರಾಗಿ ಮೌಲಪ್ಪ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿಯಾಗಿ ಭೀಮಣ್ಣ ಎಸ್. ಕಟ್ಟಿಮನಿ, ಸಹ ಕಾರ್ಯದರ್ಶಿಯಾಗಿ ಮುತ್ತಪ್ಪ ಕಟ್ಟಿಮನಿ, ಖಜಾಂಚಿಯಾಗಿ ಅರ್ಜುನ ಕಟ್ಟಿಮನಿ, ಸದಸ್ಯರಾಗಿ ಮೌಲಪ್ಪ ಮದ್ರಾ ಮತ್ತು ಹಣಮಂತ ಹೊನ್ನಳ್ಳಿ ನೇಮಕಗೊಂಡರು ಎಂದು ಯುವ ಮುಖಂಡ ರಾಜಕುಮಾರ ಕಟ್ಟಿಮನಿ ತಿಳಿಸಿದ್ದಾರೆ.
ಗಂವಾರ: ಇಂದು ಬನ್ನಿ ಬಸವೇಶ್ವರ ರಥೋತ್ಸವ
ಗುಲ್ಬರ್ಗ: ಜೇವರ್ಗಿ ತಾಲೂಕಿನ ಗಂವಾರ ಗ್ರಾಮದಲ್ಲಿ ಮೇ 13ರಂದು ಬನ್ನಿ ಬಸವೇಶ್ವರರ ರಥೋತ್ಸವ ನಡೆಯಲಿದೆ. ಈ ಬಾರಿಯ ರಥೋತ್ಸವವು ನೂತನವಾಗಿ ನಿರ್ಮಾಣ ಮಾಡಲಾಗಿರುವ ರಥದಲ್ಲಿ ಜರುಗಲಿದೆ. ಈ ಜಾತ್ರಾ ಮಹೋತ್ಸವದ ಅಂಗವಾಗಿ ಹತ್ತು ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರಿನ ವಿಶ್ವರಾಧ್ಯ ಮಠದ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ನಡೆಯಲಿವೆ. ಬಸವ ಜಯಂತಿಯ ದಿನದಂದು ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆ 6 ಗಂಟೆಗೆ ಕರ್ತೃ ಗದ್ದುಗೆಗೆ ಮಹಾಪೂಜೆ ನಡೆಯಲಿದೆ. 8 ಗಂಟೆಗೆ ನೂತನ ರಥದ ಪೂಜೆ ಜರುಗಲಿದೆ. ಮಧ್ಯಾಹ್ನ 2ಕ್ಕೆ ಬನ್ನಿ ಬಸವೇಶ್ವರರ ಮೂರ್ತಿಯ ಮೆರವಣಿಗೆ ನಡೆಯಲಿದೆ. ಸಂಜೆ 6ಕ್ಕೆ ರಥೋತ್ಸವ ನಡೆಯಲಿದೆ. ವಿವಿಧ ಮಠಗಳ ಮಠಾಧೀಶರು ಇದರಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಲು ಕೋರಲಾಗಿದೆ.
ಕನ್ಯಾ ಪ್ರೌಢಶಾಲೆಗೆ ಭುವನೇಶ್ವರಿ ಪ್ರಥಮ
ಗುಲ್ಬರ್ಗ: ನಗರದ ನೂತನ ವಿದ್ಯಾಲಯ ಸಂಸ್ಥೆಯ ಕನ್ಯಾ ಪ್ರೌಢ ಶಾಲೆ ವಿದ್ಯಾರ್ಥಿನಿ ಭುವನೇಶ್ವರಿ ಎಸ್. ಬೆಳಮ ಎಸ್ಸೆಸ್ಸೆಲ್ಸಿ ಪರೀಕ್ಷೆ ಕನ್ನಡ ಮಾಧ್ಯಮದಲ್ಲಿ ಶೇ. 94. 88ರಷ್ಟು ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಖಜಾಂಚಿ, ಸರ್ವ ಸದಸ್ಯರು, ಮುಖ್ಯಗುರುಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಮಾಲಿಪಾಟೀಲ್ಗೆ ಪಿಎಚ್ಡಿ ಪದವಿ
ಗುಲ್ಬರ್ಗ: ನಗರದ ಶರಣ ಬಸವೇಶ್ವರ ವಿಜ್ಞಾನ ಕಾಲೇಜಿನ ಪ್ರೊ. ಬಿ.ಡಿ. ಮಾಲಿಪಾಟೀಲ್ ಅವರಿಗೆ ರಾಜಸ್ಥಾನದ ಸಿಂಘಾನಿಯ ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ಪ್ರಕಟಿಸಿದೆ. ಪ್ರೊ. ವಿ.ಬಿ. ಚಿಮಕೊಡ ಅವರ ಮಾರ್ಗದರ್ಶನದಲ್ಲಿ ಗುಲ್ಬರ್ಗ ನಗರದಲ್ಲಿ ಕಸ ಚೆಲ್ಲುವುದರಿಂದ ನೀರು ಮತ್ತು ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳು ಕುರಿತು ಸಂಶೋಧನೆ ನಡೆಸಿ ಮಹಾಪ್ರಬಂಧ ಸಲ್ಲಿಸಿದ್ದರು.
ನಿಂಗದಳ್ಳಿ: 15ರಂದು ಅಡ್ಡಪಲ್ಲಕ್ಕಿ, ಪುರಾಣ
ಆಳಂದ: ತಾಲೂಕಿನ ನಿಂಗದಳ್ಳಿ ಗ್ರಾಮದಲ್ಲಿ ನಂದಿಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾದ ಬಸವ ಪುರಾಣ, ಲಕ್ಷ ದೀಪೋತ್ಸವ ನಡೆಯಲಿದೆ. ಮೇ 15ರಂದು ಬೆಳಗಿನ 8 ಗಂಟೆಗೆ ಶ್ರೀಶೈಲ್ ಪೀಠದ ಡಾ. ಚನ್ನಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮೀಜಿ ಮತ್ತು ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ ನಂತರ 11ಕ್ಕೆ ಧರ್ಮಸಭೆ ಜರುಗಲಿದೆ. ಕಡಗಂಚಿಯ ವೀರಭದ್ರ ಶಿವಾಚಾರ್ಯರು, ಹುಬ್ಬಳ್ಳಿಯ ರಾಜಶೇಖರ ಶಿವಾಚಾರ್ಯರು, ಮಂದ್ರಪದ ರೇಣುಕಚಾರ್ಯ ಶ್ರೀ, ನಾಗಣಸೂರ, ಜಳಕೋಟ, ಜಿಡಗಾ, ನಂದಗಾಂವ, ಮೈಂದರ್ಗಿ, ಅಕ್ಕಲಕೋಟ, ಕೇಸರ ಜವಳಗಾ ಶ್ರೀಗಳು ಮತ್ತು ರಾಜಕೀಯ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ 7ಕ್ಕೆ ಉಭಯ ಜಗದ್ಗುರುಗಳ ಸಮ್ಮುಖದಲ್ಲಿ ಲಕ್ಷದೀಪೋತ್ಸವ ನಡೆಯಲಿದೆ ಎಂದು ಗ್ರಾಮಸ್ಥರ ಪರವಾಗಿ ಶಿವಶರಣಯ್ಯ ಸ್ವಾಮಿ ಅವರು ತಿಳಿಸಿದ್ದಾರೆ.
ಹಿತ್ತಲಶಿರೂರ ಶಾಲೆಗೆ ಶೇ.100 ಫಲಿತಾಂಶ
ಗುಲ್ಬರ್ಗ: ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಆಳಂದ ತಾಲೂಕಿನ ಹಿತ್ತಲಶಿರೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯು ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿದೆ. ಒಟ್ಟು 43 ವಿದ್ಯಾರ್ಥಿಗಳ ಪೈಕಿ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ನಾಗರಾಜ ತಂದೆ ಬಸವರಾಜ ಶೇ. 89.68, ಶ್ರೀಕಾಂತ ತಂದೆ ಶಿವಯೋಗಿ ಶೇ. 88.90, ವಿಜಯಕುಮಾರ ತಂದೆ ಶಾಂತಮಲ್ಲಪ್ಪ ಶೇ. 86.60, ಚಂದ್ರಕಲಾ ತಂದೆ ಶಂಕರ ಶೇ. 84.86, ನಿರ್ಮಲಾ ತಂದೆ ಬಸವರಾಜ ಶೇ. 84.84 ರಷ್ಟು ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯಗುರು, ಎಲ್ಲ ಶಿಕ್ಷಕರು ಮತ್ತು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ನಿಂಬರ್ಗಾ ಶಾಲೆಗೆ
ಶೇ. 100 ಫಲಿತಾಂಶ
ಗುಲ್ಬರ್ಗ: ಏಪ್ರಿಲ್ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಆಳಂದ ತಾಲೂಕಿನ ನಿಂಬರ್ಗಾದ ಸಿದ್ಧಲಿಂಗೇಶ್ವರ ಪ್ರೌಢ ಶಾಲೆಗೆ ಶೇ.100 ರಷ್ಟು ಫಲಿತಾಂಶ ಬಂದಿದೆ. ಒಟ್ಟು 25 ವಿದ್ಯಾರ್ಥಿಗಳ ಪೈಕಿ 13 ಪ್ರಥಮ ಶ್ರೇಣಿಯಲ್ಲಿ, 9 ದ್ವಿತೀಯ ದರ್ಜೆಯಲ್ಲಿ, 3 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಮುಖ್ಯಸ್ಥ ಸಿದ್ರಾಮಪ್ಪ ಗಾಜರೆ, ಬಸವರಾಜ ಅಷ್ಟಗಿ, ಮುಖ್ಯಗುರು ಶಿವಪುತ್ರ ಮದಗುಣಿ, ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಇಂದು ಬಸವ ಜಯಂತಿ
ಗುಲ್ಬರ್ಗ: ನಗರದ ಗೌರಿಶಂಕರ ದೇವಸ್ಥಾನದ ಆವರಣದಲ್ಲಿ ಮೇ 13ರಂದು ಬೆಳಗ್ಗೆ 9ಕ್ಕೆ ವಿಶ್ವಗುರು ಬಸವೇಶ್ವರರ ಜಯಂತಿ ನಡೆಯಲಿದೆ. ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಮಹಾನಗರ ಪಾಲಿಕೆ ಸದಸ್ಯ ಆರ್.ಎಸ್. ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ಬಸವ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ್, ಉಪಾಧ್ಯಕ್ಷ ಪ್ರೊ. ಬಿ.ಎಸ್. ಬಿರಾದಾರ, ಪ್ರಧಾನ ಕಾರ್ಯದರ್ಶಿ ಗೌರಿಶ ಖಾಶಂಪುರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

