ಕಾಂಗ್ರೆಸ್ಸಿಂದ ದಲಿತರಿಗೆ ಅನ್ಯಾಯ
ಯಾದಗಿರಿ: ಮುಖ್ಯಮಂತ್ರಿ ಸ್ಥಾನಕ್ಕೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡದ ಹಿನ್ನೆಲೆಯಲ್ಲಿ ವಿವಿಧ ದಲಿತ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ನಗರದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದವು.
ಈ ಸಂದರ್ಭದಲ್ಲಿ ದಲಿತ ಮುಖಂಡ ನೀಲಕಂಠ ಬಡಿಗೇರ, ಹಲವು ದಶಕಗಳಿಂದ ದಲಿತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ಆದರೂ ಪಕ್ಷ ಮಾತ್ರ ದಲಿತರಿಗೆ ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದಿರುವುದು ನೋವಿನ ಸಂಗತಿಯಾಗಿದೆ ಎಂದರು.
ಸತತ 9 ಬಾರಿ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ನಲ್ಲಿ ಸೋಲಿಲ್ಲದ ಸರದಾರ ಎಂಬ ಬಿರುದಿಗೆ ಪಾತ್ರರಾದ ಖರ್ಗೆ ಅವರಿಗೆ ಈ ಬಾರಿ ರಾಜ್ಯದ ಮುಖ್ಯಮಂತ್ರಿ ಸ್ಥಾನ ನೀಡದೆ ಕಾಂಗ್ರೆಸ್ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯವಾಗಿ ಮೋಸ: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಪಕ್ಷ ಮುಖ್ಯಮಂತ್ರಿ ಸ್ಥಾನವನ್ನು ಖರ್ಗೆ ಅವರಿಗೆ ನೀಡಲಿದೆ ಎಂದು ಇಡೀ ದಲಿತ ಸಮುದಾಯ ಆಶಾಭಾವನೆ ಹೊಂದಿತ್ತು. ಆದರೆ ಅವರಿಗೆ ಸಿಎಂ ಸ್ಥಾನ ನೀಡದೇ ದಲಿತರಿಗೆ ಕಾಂಗ್ರೆಸ್ ರಾಜಕೀಯವಾಗಿ ಮೋಸ ಮಾಡಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಖರ್ಗೆ ಅವರು ಎಲ್ಲ ರೀತಿಯಿಂದಲೂ ಯೋಗ್ಯ ಅಭ್ಯರ್ಥಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದನ್ನು ಕಾಂಗ್ರೆಸ್ ಯಾಕೆ ಮನವರಿಕೆ ಮಾಡಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದ ಅವರು, ರಾಜಕೀಯದಲ್ಲಿ ದಲಿತರಿಗೆ ಪ್ರಾಶಸ್ತ್ಯ ನೀಡಿದೆ ಕಡೆಗಣನೆಯಾಗುತ್ತಿದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ಆರೋಪಿಸಿದರು.
ಮೇಧಾವಿಗೆ ಸಿಗಲಿಲ್ಲ ಸೂಕ್ತ ಸ್ಥಾನಮಾನ: ನಗರಸಭೆ ಸದಸ್ಯ ಮರೆಪ್ಪ ಚೆಟ್ಟೇರಕರ್ ಮಾತನಾಡಿ, ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371(ಜೆ)ನೇ ಕಲಂ ಜಾರಿಗೆ ತರುವಲ್ಲಿ ಖರ್ಗೆ ಅವರು ಮಹತ್ತರ ಪಾತ್ರ ವಹಿಸಿದ್ದಾರೆ. ಈ ಭಾಗವನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸುವ ಕನಸನ್ನು ಹೊತ್ತಿದ್ದ ಖರ್ಗೆ ರಾಜಕೀಯವಾಗಿ ಮೇಧಾವಿ ನಾಯಕ. ಮಾತ್ರವಲ್ಲ, ಕಾಂಗ್ರೆಸ್ ಅಧಿಕಾದಲ್ಲಿದ್ದಾಗ ಹಲವು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ ಅಪಾರ ಅನುಭವ ಹೊಂದಿದ್ದಾರೆ. ಆದರೂ ಕಾಂಗ್ರೆಸ್ ಅವರಿಗೆ ಸೂಕ್ತ ಸ್ಥಾನ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಮರೆಪ್ಪ ಈಟೆ, ಸಾಬಣ್ಣ ಸುಂಗಲಕರ್, ವೀರಭದ್ರಪ್ಪ ಯಡ್ಡಳ್ಳಿ, ಪ್ರಭು ಬೊಮ್ಮನ್, ಅಯ್ಯಪ್ಪ ಸುಂಗಲಕರ್, ಮಲ್ಲಿನಾಥ ಸುಂಗಲಕರ್, ಶ್ರೀಶೈಲ ಹೊಸಮನಿ, ಭೀಮಪ್ಪ ಕಾಗಿ, ಗೋಪಾಲ ತಳಗೇರಾ, ಶರಣಪ್ಪ ಕೂಲೂರ, ಶರಣು ನಾಟೇಕಾರ, ಶಿವು ಗಿರೆಪ್ಪನೋರ್, ಚಂದಪ್ಪ ಮುನೆಪ್ಪನೋರ, ಪ್ರಭು ಬುಕ್ಕಲ್, ಸೈದಪ್ಪ ಕೂಲೂರ, ಶಿವು ಕುರಕುಂಬಳ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

