ರಾಯಚೂರು

'ಡಾ. ಮಾಲಕರೆಡ್ಡಿಗೆ ಸಚಿವ ಸ್ಥಾನ ನೀಡಿ'

Published On :

ಯಾದಗಿರಿ: ನೂತನ ಯಾದಗಿರಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಹೈಕ ಭಾಗದ ಹಿರಿಯ ಹಾಗೂ ಮುತ್ಸದ್ದಿ ರಾಜಕಾರಿಣಿಯಾಗಿರುವ ಡಾ.ಎ.ಬಿ.ಮಾಲಕರೆಡ್ಡಿಗೆ ಸಚಿವ ಸ್ಥಾನ ನೀಡುವುದು ಅವಶ್ಯ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಶ್ರೀನಿವಾಸರೆಡ್ಡಿ ಕಂದಕೂರ ಅಭಿಪ್ರಾಯಪಟ್ಟಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ಡಾ.ಮಾಲಕರೆಡ್ಡಿಯವರು ಇಡೀ ಹೈಕ ಭಾಗದ ಒಬ್ಬ ಹಿರಿಯ ಹಾಗೂ ಅಭಿವೃದ್ಧಿ ಚಿಂತಕರಾಗಿದ್ದಾರೆ. ಇಲ್ಲಿನ ಜನತೆಯ ಯಾವುದೇ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದಾರೆ. ಯಾದಗಿರಿ ಮತಕ್ಷೇತ್ರದಿಂದ 5 ಬಾರಿ ಗೆಲವು ಸಾಧಿಸಿ, ಸಚಿವರಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬ್ರಿಜ್ ಕಮ್ ಬ್ಯಾರೆಜ್‌ಗಳನ್ನು ನಿರ್ಮಿಸಿ ನೀರಾವರಿ ಸೌಲಭ್ಯ, ರಾಯಚೂರಿನಲ್ಲಿ ಒಪೆಕ್ ಆಸ್ಪತ್ರೆ ನಿರ್ಮಿಸಿ ಶಾಶ್ವತ ಕಾರ್ಯ ಮಾಡಿದ್ದಾರೆ. ಜಿಲ್ಲೆಯ ಎಲ್ಲ ಕ್ಷೇತ್ರ, ಪ್ರತಿ ಹಳ್ಳಿಗೂ ನೀರಾವರಿ ಸೌಲಭ್ಯ, ಶಾಶ್ವತ ರಸ್ತೆಗಳ ನಿರ್ಮಾಣ ಕಾಮಗಾರಿ ಆಗಬೇಕಿದೆ. ಉನ್ನತ ಶಿಕ್ಷಣಕ್ಕಾಗಿ ಮೆಡಿಕಲ್ ಕಾಲೇಜು, ಎಂಜನಿಯರಿಂಗ್ ಕಾಲೇಜು ಪ್ರಾರಂಭಿಸಿ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಆಗಬೇಕಿದೆ. ಆದ್ದರಿಂದ ಇಲ್ಲಿನ ಜನತೆಯ ನಿರೀಕ್ಷೆಯಂತೆ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕಾಗಿ ಮಾಲಕರೆಡ್ಡಿ ಯೋಗ್ಯ ವ್ಯಕ್ತಿಯಾಗಿದ್ದಾರೆ. ಈ ದೃಷ್ಟಿಯಿಂದ ಪಕ್ಷದ ಹೈಕಮಾಂಡ್ ಮತ್ತು ನೂತನ ಸಿಎಂ ಸಿದ್ದರಾಮಯ್ಯ ಡಾ.ಮಾಲಕರೆಡ್ಡಿಗೆ ಪ್ರಮುಖ ಖಾತೆ ನೀಡಲು ಮನವಿ ಮಾಡಿದ್ದಾರೆ.

ಯರಗೋಳದಲ್ಲಿ ಬಂಡೆಗಲ್ಲು ಶಾಸನ
ಯಾದಗಿರಿ: ತಾಲೂಕಿನ ಯರಗೋಳ ಗ್ರಾಮದಲ್ಲಿ ಬೆಟ್ಟದಲ್ಲಿರುವ ಹಳೆ ಯರಗೋಳ ಅಗಸಿಯ ಮುಂಭಾಗದ ಹನುಮಾನ್ ದೇವಾಲಯದ ಗೋಡೆಯ ಹಿಂದೆ ಬೃಹತ್ ಬಂಡೆಗಲ್ಲು ಶಾಸನವನ್ನು ಸುರಪುರದ ರಂಗಂಪೇಟೆ ಬಿಇಡಿ ಕಾಲೇಜಿನ ಉಪನ್ಯಾಸಕ ಧರ್ಮಣ್ಣ ಬಡಿಗೇರ ಅವರು ಕ್ಷೇತ್ರಕಾರ್ಯ ಕೈಗೊಂಡ ವೇಳೆ ಪತ್ತೆಹಚ್ಚಿದ್ದಾರೆ.ಈ ಶಾಸನವು 16ನೇ ಶತಮಾನಕ್ಕೆ ಸೇರಿದ್ದಾಗಿದೆ ಎಂದು ಅವರು ತಿಳಿಸಿದ್ದಾರೆ. ಯರಗೋಳ ಗ್ರಾಮದ ಪಕ್ಕದ ಕೆರೆಗೆ ಸಂಬಂಧಿಸಿದ್ದಾಗಿದ್ದು, ಖ್ಯಾತ ಇತಿಹಾಸ ಸಂಶೋಧಕ ಡಿ.ಎನ್. ಅಕ್ಕಿಯವರ ಮಾರ್ಗದರ್ಶನದಲ್ಲಿ ಕ್ಷೇತ್ರಕಾರ್ಯ ಕೈಗೊಂಡು ಈ ಶಾಸನವನ್ನು ಅವರು ಪತ್ತೆಹಚ್ಚಿದ್ದಾರೆ. ಯರಗೋಳ ಗ್ರಾಮದಲ್ಲಿ ದೊರಕಿರುವ 3ನೇ ಶಾಸನ ಇದಾಗಿದ್ದು, ಸಂಶೋಧಕರಿಂದ ಸಮಗ್ರ ಮಾಹಿತಿಯನ್ನು ಪಡೆಯಲಾಗುವುದು ಎಂದು ತಿಳಿಸಿದ್ದಾರೆ.ಈ ಸಂಶೋಧನಾ ಕಾರ್ಯದಲ್ಲಿ ಗ್ರಾಮದ ಶಿಕ್ಷಕರಾದ ದೇವಿಂದ್ರಪ್ಪ ಹತ್ತಿಕುಣಿ ಮತ್ತು ವಿದ್ಯಾರ್ಥಿ ಮಲ್ಲಪ್ಪ ಅವರು ಸಹಕರಿಸಿದ್ದಾರೆ. ಯರಗೋಳ ಬೆಟ್ಟದಲ್ಲಿ ಅನೇಕ ಐತಿಹಾಸಿಕ ಕುರುಹುಗಳಿವೆ. ಅವುಗಳ ಕುರಿತು ಸಂಶೋಧನೆ ಮತ್ತು ಉತ್ಖನನ ಕಾರ್ಯಗಳು ಪರಿಣಾಮಕಾರಿಯಾಗಿ ನಡೆಯಬೇಕೆಂದು ಧರ್ಮಣ್ಣ ಕೆ. ಬಡಿಗೇರ ಕಳಕಳಿ ವ್ಯಕ್ತಪಡಿಸಿದ್ದಾರೆ.

ಇಂದು ಮಡಿವಾಳ ಮಾಚಿದೇವ ಜಯಂತಿ
ರಾಯಚೂರು: ನಗರದಲ್ಲಿ ಮೇ 14ರಂದು ಮಡಿವಾಳ ಶ್ರೀಮಾಚಿದೇವರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ.ಜಯಂತಿ ಕಾರ್ಯಕ್ರಮದ ಅಂಗವಾಗಿ ಅಂದು ಬೆಳಗ್ಗೆ 6ಕ್ಕೆ ನಗರದ ಗದ್ವಾಲ್ ರಸ್ತೆಯ ಝರಿಬೆಟ್ಟದಲ್ಲಿರುವ ಮಡಿವಾಳ ಮಾಚಿದೇವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ, ರುದ್ರಾಭಿಷೇಕ ಸೇರಿ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿವೆ. ಬೆಳಗ್ಗೆ 7ಕ್ಕೆ ನಗರದ ಆರ್ ಟಿಒ ಕಚೇರಿ ಬಳಿಯಿರುವ ಶ್ರೀಮಡಿವಾಳ ಮಾಚಿದೇವರ ಪುತ್ಥಳಿಗೆ ಗೌರವ ಸಲ್ಲಿಕೆ ಕಾರ್ಯಕ್ರಮ ಆಯೋಜಿಸಿದ್ದು, ಬೆಳಗ್ಗೆ 8.30ಕ್ಕೆ ಖಾಸಬಾವಿ ಬಳಿಯ ಮಡಿವಾಳ ಮಾಚಿದೇವ ಸಮಾಜದ ಕಚೇರಿಯಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಸಮಾಜದ ಬಾಂಧವರು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮಡಿವಾಳ ಸಮಾಜದ ಸಂಘಟನೆ ಪ್ರಕಟಣೆಯಲ್ಲಿ ಕೋರಲಾಗಿದೆ.

ನೇಮಕ
ಮಸ್ಕಿ: ಅಖಿಲ ಭಾರತ ವೀರಶೈವ ಮಹಾಸಭಾ ಸಮಿತಿ ಮಸ್ಕಿ ಘಟಕದ ಯುವ ಅಧ್ಯಕ್ಷರಾಗಿ ವಿರೇಶ ಪಾಟೀಲ್‌ನೇಮಕಗೊಂಡಿದ್ದಾರೆ. ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣನವರ ಆದೇಶದ ಮೇರೆಗೆ ಈ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ರವೀಂದ್ರ ಕಾಮರಡ್ಡಿ ಹಾಗೂ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಾಜಶೇಖರ ಪಾಟೀಲ್ ತಿಳಿಸಿದ್ದಾರೆ.

ಪಲ್ಟಿ: ಒಬ್ಬ ಸಾವು
ರಾಯಚೂರು: ಸಿಂಧನೂರು ತಾಲೂಕಿನ ಕೆಂಗಲ್ ಕ್ರಾಸ್ ಬಳಿ ಟೆಂಪೋ ಪಲ್ಟಿಯಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ. ಮೃತನನ್ನು ವೆಂಕಟೇಶ್ ಎಂದು ಗುರುತಿಸಲಾಗಿದೆ. ಈತ ಟೆಂಪೋ ಟ್ರಾವೆಲರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕೆಂಗಲ್ ಕ್ರಾಸ್ ಬಳಿ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ಅದರಲ್ಲಿ ಪ್ರಯಾಣಿಸುತ್ತಿದ್ದ ವೆಂಕಟೇಶ ತೀವ್ರ ಗಾಯಗೊಂಡಿದ್ದು, ಸಿರುಗುಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಡಿಕ್ಕಿ: ಒಬ್ಬನ ಸಾವು
ರಾಯಚೂರು: ಲಿಂಗಸ್ಗೂರು ತಾಲೂಕಿನ ಯರದೊಡ್ಡಿ ಗ್ರಾಮದ ಬಳಿ ಆಟೋಗಳ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ. ಮೃತನನ್ನು ಲಚಮಪ್ಪ ಎಂದು ಗುರ್ತಿಸಲಾಗಿದೆ. ಈತ ಆಟೋದಲ್ಲಿ ಸಾಗುತ್ತಿದ್ದು, ಎದುರಿನಿಂದ ವೇಗವಾಗಿ ಬಂದ ಮತ್ತೊಂದು ಆಟೋ ಡಿಕ್ಕಿ ಹೊಡೆದಿದ್ದರಿಂದ ತೀವ್ರ ಗಾಯಗೊಂಡಿದ್ದ ಲಚಮಪ್ಪನನ್ನು ಬಳ್ಳಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಿಸದೇ ಮೃತನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.