ರಾಯಚೂರು

ಶರಣ ಸಾಹಿತ್ಯದ ಕೊಡುಗೆ ಅಪಾರ

Published On :

ಕ.ಪ್ರ. ವಾರ್ತೆ ರಾಯಚೂರು ಮೇ 13
ರಾಯಚೂರು: ವಿಶ್ವಸಾಹಿತ್ಯಕ್ಕೆ ಕರ್ನಾಟಕದ ಬಸವೇಶ್ವರರು ಹಾಗೂ ಇನ್ನಿತರ ಶರಣರು ರಚಿಸಿದ ವಚನ ಸಾಹಿತ್ಯದ ಕೊಡುಗೆ ಅಪಾರ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜ್ಞಾನಪ್ರಕಾಶ್ ಹೇಳಿದರು.
ಅವರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ಬಸವಜಯಂತಿ ಅಂಗವಾಗಿ ಆಯೋಜಿಸಿದ್ದ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ವಚನ ಸಾಹಿತ್ಯದ ಮೂಲಕ ಅಸಮಾನತೆ, ಅಸ್ಪೃಶ್ಯತೆ ಹೋಗಲಾಡಿಸುವ ನಿಟ್ಟಿನಲ್ಲಿ ಬಸವೇಶ್ವರರ ಪರಿಶ್ರಮ ಶ್ಲಾಘನೀಯ ಎಂದರು.
ಇಂದಿಗೂ ಪ್ರಸ್ತುತ: 12ನೇ ಶತಮಾನದಲ್ಲಿಯೇ ಬಸವಣ್ಣನವರು ಮಾನವತತ್ವ, ಮಾನವೀಯ ಮೌಲ್ಯಗಳ ಮಹತ್ವದ ಕುರಿತು ಸಂದೇಶ ನೀಡಿದ್ದರು. ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಬಸವೇಶ್ವರರು ಸಮಾಜದಲ್ಲಿನ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿದ ಮಹಾನ್ ಮಾನವತಾವಾದಿ ಎಂದು ಹೇಳಿದರು.
ಬಸವಣ್ಣ ಹಾಗೂ ಅವರ ಸಮಕಾಲೀನ ಶರಣರ ತತ್ವಗಳು ಸಮಾಜದ ಪ್ರಗತಿಗೆ ಪೂರಕವಾಗಿವೆ. ಸುಭದ್ರ ಹಾಗೂ ಸಮಾಜದ ಸ್ವಾಸ್ಥ್ಯಕ್ಕಗಾಗಿ ಶರಣರ ವಚನಗಳನ್ನು ಅರ್ಥೈಸಿಕೊಂಡು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ. ಮನಸ್ಸಿಗೆ ಶಾಂತಿ ನೆಮ್ಮದಿ ತಂದುಕೊಡುವುದೇ ವಚನ ಸಾಹಿತ್ಯದ ಸಾರವಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಬಿಸನಳ್ಳಿ ಮಾತನಾಡಿ, ಮಾನವನ ಮುನ್ನಡೆಗೆ ಬಸವ ತತ್ವಗಳು ಸಹಕಾರಿಯಾಗಿವೆ.
ಮಾನವತ್ವಕ್ಕೆ ವಚನಗಳು ದಾರಿದೀಪವಾಗಿವೆ. ಸಮಾಜದಲ್ಲಿರುವ ಎಲ್ಲರೂ ಸಮಾನರು ಎಂಬ ಆಶಯ ವಚನಗಳಲ್ಲಿ ಕಾಣಬಹುದು ಎಂದರು.
ಪರಿವರ್ತನೆಯ ಧರ್ಮ: ಉಪನ್ಯಾಸಕ ರಾಮಸ್ವಾಮಿ ನುಲಿ ಮಾತನಾಡಿ, ಸಮಾಜದ ಓರೆಕೋರೆಗಳನ್ನು ತಿದ್ದುವ ಕಾರ್ಯ ಬಸವಣ್ಣ ಮಾಡಿದರು. ಬಸವ ತತ್ವ ಎಂಬುದು ಒಂದು ಧರ್ಮ, ಸಂಸ್ಕೃತಿಯಿದ್ದಂತೆ. ಬಸವ ಧರ್ಮವು ಸಮಾಜದ ಪರಿವರ್ತನೆಯ ಧರ್ಮವಾಗಿದೆ. ಬಸವೇಶ್ವರರು ತಮ್ಮ ವಚನಗಳ ಮೂಲಕ ಸಮಾಜದ ಮೌಢ್ಯ ಹಾಗೂ ಅಜ್ಞಾನವನ್ನು ತೊಲಗಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು. ಈ ವೇಳೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ಮುಖ್ಯಸ್ಥೆ ಸ್ಮಿತಾ ಅಕ್ಕನವರು ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಬಸವರಾಜಪ್ಪ ವಹಿಸಿದ್ದರು. ವೇದಿಕೆಯಲ್ಲಿ ರವೀಂದ್ರ ಕಾಮರೆಡ್ಡಿ, ಡಾ.ಎಸ್. ಬಿ.ಅಮರಖೇಡ್, ಖ್ಯಾತ ಕ್ಲಾರಿಯೋನೆಟ್ ವಾದಕ ಪಂ.ಡಾ.ನರಸಿಂಹಲು ವಡವಾಟಿ ಸೇರಿದಂತೆ ವೀರಶೈವ ಸಮಾಜದ ಪ್ರಮುಖ ಗಣ್ಯರು ಪಾಲ್ಗೊಂಡಿದ್ದರು.
ಈಚೆಗೆ ನಡೆದ ಚುನಾವಣೆಯ ವೇಳೆ ಮತದಾನದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅನೇಕರನ್ನು ಸನ್ಮಾನಿಸಲಾಯಿತು. ವೀರಶೈವ ಸಮಾಜದವರು ಕಾರ್ಯಕ್ರಮದಲ್ಲಿದ್ದರು.
ಗೌರವ ಸಲ್ಲಿಕೆ: ಇದಕ್ಕೂ ಮುನ್ನ ನಗರದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಪುತ್ಥಳಿಗೆ ಜಿಪಂ ಸಿಇಒ ಜ್ಞಾನಪ್ರಕಾಶ್, ಎಸ್ಪಿ ಎಸ್.ಬಿ.ಬಿಸನಳ್ಳಿ, ಹೆಚ್ಚುವರಿ ಡಿಸಿ ತಿಮ್ಮಪ್ಪ, ಬಿಜೆಪಿ ಮುಖಂಡರಾದ ತ್ರಿವಿಕ್ರಮ್ ಜೋಷಿ, ಆರ್. ತಿಮ್ಮಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು, ರಾಜಕೀಯ ಪಕ್ಷಗಳ ನಾಯಕರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಬಸವ ಜಯಂತಿ: ಅದ್ಧೂರಿ ಮೆರವಣಿಗೆ
ಮಸ್ಕಿ: ಪಟ್ಟಣದಲ್ಲಿ ಸೋಮವಾರ ಬಸವ ಜಯಂತಿ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಸಂಭ್ರಮ, ಸಡಗರದ ಮಧ್ಯೆ ಮೆರವಣಿಗೆ ಮಾಡಲಾಯಿತು.
ಭ್ರಮರಾಂಬಾ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಕನಕವೃತ್ತ, ತೇರಬಜಾರ, ಮುಖ್ಯಬಜಾರ, ಮುದಗಲ್ ಕ್ರಾಸ್, ಹಳೆ ಬಸ್ ನಿಲ್ದಾಣ ಸೇರಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.  
ಮಹಾಮನೆ ಸಮಿತಿಯ ಅಧ್ಯಕ್ಷ ಪ್ರಕಾಶ ಧಾರಿವಾಲ, ಬಸವ ಜಯಂತಿ ಆಚರಣೆ ಸಮಿತಿ ಅಧ್ಯಕ್ಷ ಬಸವರಾಜಪ್ಪ ಕಡಿ, ಡಾ. ಶಿವಶರಣಪ್ಪ ಇತ್ಲಿ, ತಿಮ್ಮನಗೌಡ ಗುಡದೂರು, ಅಂದಾನಪ್ಪ ಗುಂಡಳ್ಳಿ, ಮಲ್ಲಪ್ಪ ಕುಡಿತಿನಿ, ಆದಯ್ಯಸ್ವಾಮಿ ಕ್ಯಾತ್ನಟ್ಟಿ, ವೀರಭದ್ರಗೌಡ ಹಳೆಕೋಟಿ, ಮಲ್ಲೇಶಪ್ಪ ಬ್ಯಾಳಿ, ವಿರೇಶ ಹೂವಿನಭಾವಿ, ವಿರೇಶ ಸೌದ್ರಿ, ಸಿದ್ಲಿಂಗಯ್ಯ ಗಚ್ಚಿನಮಠ, ಪಂಪಣ್ಣ ಅಂತರಗಂಗಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.