ರಾಯಚೂರು

ಸೌಹಾರ್ದ ಬದುಕಿಗೆ ವಚನ ಪೂರಕ

Published On :

ಲಿಂಗಸ್ಗೂರು: ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸೌಹಾರ್ದಯುತ ಬದುಕು ಸಾಗಿಸಲು ಪೂರಕವಾಗಲಿದೆ ಎಂದು ಡಿವೈಎಸ್ಪಿ ಅನಿತಾ ಹದ್ದಣ್ಣವರ್ ಅಭಿಪ್ರಾಯಪಟ್ಟರು.
ಪಟ್ಟಣದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಸೋಮವಾರ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಾದಿ ಶರಣರು ಸಮಾಜದಲ್ಲಿನ ಅಂಕು- ಡೊಂಕುಗಳನ್ನು ತಿದ್ದುವ ಮೂಲಕ ಸಮಾನತೆ ಸಾರಿದ್ದಾರೆ.
 ಅಂತಹ ಮಹಾನ್ ಪುರುಷರು ರಚಿಸಿದ ವಚನ ಸಾಹಿತ್ಯದ ಅಧ್ಯಯನದಿಂದ ಉತ್ತಮ ಬದುಕು ಸಾಗಿಸಲು ಅನುಕೂಲವಾಗಲಿವೆ ಎಂದು ನುಡಿದರು.
ಶರಣರ ಕೊಡುಗೆ ಅಪಾರ: ಸಾಹಿತಿ ಗಿರಿರಾಜ ಹೊಸಮನಿ ವಿಶೇಷ ಉಪನ್ಯಾಸ ನೀಡಿ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುತವರ್ಜಿವಹಿಸಿ ಮಾತನಾಡುವ ನಾವುಗಳು, 12ನೇ ಶತಮಾನದ ಕಾಲದ ರಾಜಪ್ರಭುತ್ವ ಅವಧಿಯಲ್ಲಿ ಜಾತಿ, ಮತ, ಪಂಥ ಮೀರಿ ಸಮಾನತೆ, ಶಿಕ್ಷಣ, ಸ್ತ್ರೀ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಬಸವಾದಿ ಶರಣರ ಕೊಡುಗೆ ಅಪಾರವಾಗಿದೆ.
ಬಸವಣ್ಣ ಕೇವಲ ಒಬ್ಬ ವ್ಯಕ್ತಿಯಾಗದೆ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದಾರೆ. ಬದುಕಿನುದ್ದಕ್ಕೂ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಿಸ್ವಾರ್ಥ ಸೇವೆ, ಸ್ವಾಭಿಮಾನಿ ಬದುಕು ಸಾಗಿಸುವ ಮೂಲಕ ದಾರ್ಶನಿಕರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಹಾಜನ್, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ವೀರಭದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್. ಪೊಲೀಸ್ ಪಾಟೀಲ್, ಸಿಪಿಐ ಪಂಚಾಕ್ಷರಯ್ಯ, ಪಿಎಸ್‌ಐ ಸಿದ್ದರಾಮಯ್ಯ ಸೇರಿದಂತೆ ಇದ್ದರು. ಶಿಕ್ಷಕಿ ಶಿವಮ್ಮ ಪಟ್ಟದಕಲ್ ಕಾರ್ಯಕ್ರಮ ನಿರೂಪಿಸಿದರು. ಅಪಾರ ಬಸವಣ್ಣ ಅಭಿಮಾನಿಗಳಿದ್ದರು.

ಬಸವಜಯಂತಿ ಆಚರಣೆ ನಿರ್ಲಕ್ಷ್ಯ: ಮುಖ್ಯಾಧಿಕಾರಿಗೆ ತರಾಟೆ
ಮುದಗಲ್: ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆಗೆ ಮುಖ್ಯಾಧಿಕಾರಿ ವಿಜಯಲಕ್ಷ್ಮೀ ನಿರ್ಲಕ್ಷ್ಯ ತೋರಿದ್ದರಿಂದ, ಕಾಟಾಚಾರಕ್ಕೆ ಬಸವ ಜಯಂತಿ ಆಚರಣೆ ಮಾಡಿದ್ದರಿಂದ ಆಕ್ರೋಶಗೊಂಡ ಮುಖಂಡರು ಪ.ಪಂ.ಗೆ ಮುತ್ತಿಗೆ ಹಾಕಿ ಮುಖ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಪಟ್ಟಣ ಪಂಚಾಯಿತಿಯಲ್ಲಿ ಪ್ರತಿ ವರ್ಷ ಬಸವಜಯಂತಿಯನ್ನು  ವೀರಶೈವ, ದಲಿತ  ಮುಖಂಡರನ್ನು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು, ಪ.ಪಂ.ಸದಸ್ಯರನ್ನು ಕರೆದು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿತ್ತು. ಮುಖ್ಯಾಧಿಕಾರಿಗಳು ಈ ವರ್ಷ ಯಾರಿಗೂ ತಿಳಿಸದೆ, ಪ.ಪಂ.ಯಲ್ಲಿ ಚಿಕ್ಕ ಭಾವಚಿತ್ರ ಇಟ್ಟು ಚಿಕ್ಕದೊಂದು ಹೂವಿನ ಹಾರ ಹಾಕಿ ಕಾಟಾಚಾರಕ್ಕೆ ಆಚರಣೆ ಮಾಡಿ ಬಸವಣ್ಣನವರಿಗೆ ಮತ್ತು ವೀರಶೈವ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರಿದರು.
ಕ್ರಮಕ್ಕೆ ಒತ್ತಾಯ: ಪ್ರತಿಭಟನೆ ನೇತೃತ್ವ ವಹಿಸಿದ್ದ ಮುಖಂಡರಾದ ಸುರೇಶಗೌಡ ಪಾಟೀಲ್, ಮಹಾಂತೇಶ ಪಾಟೀಲ್, ರಾಮಣ್ಣ ಹಿರೇಮನಿ ಮುಖ್ಯಾಧಿಕಾರಿಗಳ ವರ್ತನೆಯನ್ನು ಖಂಡಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಲಿಖಿತ ಪತ್ರ ಬರೆಯುವುದಾಗಿ ತಿಳಿಸಿದರು.
 ಮುಖ್ಯಾಧಿಕಾರಿ ವಿಜಯ ಲಕ್ಷ್ಮೀ ಮಾತನಾಡಿ, ನಾನು ಹೊಸಬಳು. ಸಿಬ್ಬಂದಿಯನ್ನು ವಿಚಾರಿಸಿ, ಪ್ರತಿ ವರ್ಷ ಆಚರಣೆ ಮಾಡಿದಂತೆ ಮಾಡಿ ಎಂದು ಸೂಚನೆ ನೀಡಿದ್ದೆ. ಸಿಬ್ಬಂದಿ ತಪ್ಪು ಮಾಹಿತಿ ನೀಡಿದ್ದಾರೆ ಎಂದರು.
 ಮುಖ್ಯಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿದ ಮುಖಂಡರು ಬಸವ ಜಯಂತಿಗೆ ಅವಮಾನ ಮಾಡಿದ ಅಧಿಕಾರಿಗಳ ಮೇಲೆ ಕಾನೂಕು ಕ್ರಮ ಜರುಗಿಸಬೇಕು ಎಂದು ಪ್ರತಿಭಟಿಸಿದರು. ಮುಖಂಡರಾದ ರಾಜು ಮಾಲೀಪಾಟೀಲ್, ಷಣ್ಮುಕಪ್ಪ ಚಲವಾದಿ, ನಿಂಗಪ್ಪ ಹಣಗಿ, ವಿಶ್ವನಾಥ ಹಣಗಿ, ಶಶಿಧರ ಕಂಚಿಮಠ, ಚಂದ್ರಣ್ಣ ಗಂಗಾವತಿ, ನೂರಾರು ವೀರಶೈವ ಮುಖಂಡರು ಭಾಗವಹಿಸಿದ್ದರು.

ಗೌರವ ಸಲ್ಲಿಕೆ
ರಾಯಚೂರು: ನಗರದಲ್ಲಿ ಸೋಮವಾರ ಬಸವ ಜಯಂತಿ ಸಂದರ್ಭ ವಿವಿಧ ಸಂಘಟನೆಗಳ ಪ್ರಮುಖರು ಬಸವೇಶ್ವರರಿಗೆ ಗೌರವ ಸಲ್ಲಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ವೀರಶೈಲ ವಿಕಾಸ ವೇದಿಕೆಯ ಅಧ್ಯಕ್ಷ ನಾಗರಾಜ ತುಪ್ಪದ್ ಬಸವೇಶ್ವರರ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ ಅಮರೇಶ ರಾಯಕೋಟಿ, ಪ್ರಭುಶಾಸ್ತ್ರಿ, ವೀರನಗೌಡ, ರಮೇಶ್ ನಾಡಗೌಡ, ಶಿವುಕುಮಾರ್, ಮಲ್ಲಿಕಾರ್ಜುನ ಹಳ್ಳೂರು ಮತ್ತಿತರರಿದ್ದರು.
ಕರವೇ: ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಅಧ್ಯಕ್ಷ ವಿನೋದರೆಡ್ಡಿ ಸೋಮವಾರ ನಗರದಲ್ಲಿ ಬಸವ ಜಯಂತಿ ಅಂಗವಾಗಿ ಬಸವೇಶ್ವರರ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ವೀರೇಶ ಏಗನೂರು, ಅಶೋಕ ಲೋಧಾ, ಮಹೇಂದ್ರ ರೆಡ್ಡಿ, ಮಹೇಶ ಪಾಟೀಲ್, ಕೊಂಡಪ್ಪ, ವೀರೇಶ ರೆಡ್ಡಿ, ವೀರೇಶ ಮತ್ತಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.