ಮಂತ್ರಾಲಯ ಮಠದ ಮಹಾದ್ವಾರ ಸಮರ್ಪಣೆ
ಕ.ಪ್ರ. ವಾರ್ತೆ ರಾಯಚೂರು ಮೇ 16-
ಮಂತ್ರಾಲಯದಲ್ಲಿ ಗುರುವಾರ ಸಂಜೆ ರಾಘವೇಂದ್ರ ಸ್ವಾಮಿಗಳ ಮಠದ ಮುಖಮಂಟಪ(ಮಹಾದ್ವಾರ)ದ ಉದ್ಘಾಟನೆ ನೆರವೇರಿಸಲಾಯಿತು.
ಶ್ರೀಮಠದಲ್ಲಿ ಕಳೆದ ಎರಡು ದಿನಗಳಿಂದ ಮಹಾದ್ವಾರದ ಉದ್ಘಾಟನೆ ಅಂಗವಾಗಿ ಕಲಶ ಸ್ಥಾಪನೆ, ವಿವಿಧ ಹೋಮ- ಹವನಗಳನ್ನು ಆಯೋಜಿಸಲಾಗಿತ್ತು. ಹೋಮಗಳ ಪೂರ್ಣಾಹುತಿಯನ್ನು ವಿದ್ವಾಂಸರು, ಪಂಡಿತರು ಗುರುವಾರ ಬೆಳಗ್ಗೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಹಾದ್ವಾರದ ದಾನಿಗಳಾದ ಹೊಸಪೇಟೆಯ ಉದ್ಯಮಿ ರಂಗನಗೌಡರು ದಂಪತಿ ಮತ್ತು ಕುಟುಂಬದವರು ಹಾಗೂ ಕೊಪ್ಪಳದ ಮಾಜಿ ಸಂಸದ ಎಚ್.ಜಿ. ರಾಮುಲು ಸೇರಿ ಅನೇಕರು ಉಪಸ್ಥಿತರಿದ್ದು ಹೋಮದ ಪೂರ್ಣಾಹುತಿ ನೆರವೇರಿಸಿದರು.
ನಂತರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳಾದ ಶ್ರೀಸುಯತೀಂದ್ರತೀರ್ಥರು ಮಹಾದ್ವಾರವನ್ನು ಉದ್ಘಾಟಿಸಿದರು. ಈ ವೇಳೆ ಶ್ರೀಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್ಯರು, ಪವಮಾನಾಚಾರ್ಯರು, ದಾನಿಗಳಾದ ರಂಗನಗೌಡರು ಮತ್ತು ಕುಟುಂಬ ವರ್ಗದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀಗಳು ದಾನಿಗಳನ್ನು ಹಾಗೂ ಅವರ ಕುಟುಂಬ ವರ್ಗದವರನ್ನು ಶಾಲು ಹೊದಿಸಿ ಗೌರವಿಸಿ ಆಶೀರ್ವದಿಸಿದರು.
22 ಕಾಲೇಜುಗಳ ಕೋರ್ಸ್ಗೆ ಪ್ರವೇಶ ಸ್ಥಗಿತ: ವಿವಿ ಆದೇಶ
ಬಳ್ಳಾರಿ: ಮೂಲ ಸೌಲಭ್ಯ, ಮೌಲ್ಯಾಧಾರಿತ ಶಿಕ್ಷಣ ಹಾಗೂ ಅರ್ಹ ಉಪನ್ಯಾಸಕರಿಲ್ಲದ ಹಿನ್ನೆಲೆಯಲ್ಲಿ ಬಳ್ಳಾರಿ, ಕೊಪ್ಪಳ ಜಿಲ್ಲೆಯ ಬಿಇಡಿ, ಎಂಎಸ್ಡಬ್ಲ್ಯೂ, ಎಂಇಡಿಯ 22 ಕಾಲೇಜುಗಳ ವಿವಿಧ ಕೋರ್ಸ್ಗಳಿಗೆ 2013-14ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶ ಪಡೆಯುವುದನ್ನು ಸ್ಥಗಿತಗೊಳಿಸಿ, ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಆದೇಶ ಹೊರಡಿಸಿದೆ.
ಎರಡು ವರ್ಷಗಳಿಂದ ಎಚ್ಚರಿಕೆ ನೀಡಿದರೂ, ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ವಿವಿ ಇಂಥ ಕ್ರಮಕ್ಕೆ ಮುಂದಾಗಿದೆ. ವಿವಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರಿಸಿದ ವಿವಿ ಕುಲಪತಿ ಮಂಜಪ್ಪ ಡಿ. ಹೊಸಮನಿ, ಬಳ್ಳಾರಿಯ ಸತ್ಯಂ ಕಾಲೇಜ್ ಆಫ್ ಎಂಎಸ್ಡಬ್ಲ್ಯೂ, ಶಶಾಂಕ್ ಇನ್ಸ್ಟಿಟ್ಯೂಟ್ ಆಫ್ ಎಂಎಸ್ಡಬ್ಲ್ಯೂ, ಕೊಟ್ಟೂರಿನ ಎನ್ಬಿ ಎಂಎಸ್ಡಬ್ಲ್ಯೂ ಕಾಲೇಜು, ಕೊಪ್ಪಳದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಎಸ್ಡಬ್ಲ್ಯೂ, ಆರ್ಡಿಟಿಇ ಸಂಸ್ಥೆಯ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸ್ಟಡೀಸ್ ಆ್ಯಂಡ್ ರೀಸರ್ಚ್ನ ಎಂಎಸ್ಡಬ್ಲ್ಯೂನ್ನು ಪ್ರಸಕ್ತ ವರ್ಷ ಸ್ಥಗಿತಗೊಳಿಸಲಾಗಿದೆ ಎಂದರು.
ಪ್ರವೇಶ ಸ್ಥಗಿತ: ಗಂಗಾವತಿಯ ಎಸ್ಕೆಎನ್ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಎಂಎ (ಇತಿಹಾಸ, ಅರ್ಥಶಾಸ್ತ್ರ), ಎಂಎಸ್ಸಿ (ಭೌತಶಾಸ್ತ್ರ), ಬಳ್ಳಾರಿಯ ಸತ್ಯಂ ಬಿ.ಇಡಿ ಹಾಗೂ ಎಂ.ಇಡಿ, ಕೂಡ್ಲಿಗಿಯ ಜ್ಞಾನಭಾರತಿ ಬಿ.ಇಡಿ. ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಬಿ.ಇಡಿ, ಕೊಪ್ಪಳದ ರಾಜೀವಗಾಂಧಿ ರೂರಲ್ ಕಾಲೇಜ್ ಆಫ್ ಎಜುಕೇಷನ್ ಬಿ.ಇಡಿ ಹಾಗೂ ಎಂ.ಇಡಿ, ಯಲಬುರ್ಗಾದ ಎಸ್.ಎ. ನಿಂಗೋಜಿ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ, ಬಳ್ಳಾರಿಯ ರಾಯಲ್ ಶಿಕ್ಷಣ ಮಹಾವಿದ್ಯಾಲಯ ಬಿ.ಇಡಿ, ಕುಷ್ಟಗಿಯ ಶ್ರೀ ವಿಜಯಚಂದ್ರ ಶೇಖರ ಶಿಕ್ಷಣ ಮಹಾವಿದ್ಯಾಲಯ ಬಿ.ಇಡಿ, ಕೊಟ್ಟೂರಿನ ತುಂಗಭದ್ರಾ ಬಿ.ಇಡಿ ಕಾಲೇಜು, ಬಳ್ಳಾರಿಯ ಸೋನಿಯಾಗಾಂಧಿ ಬಿ.ಇಡಿ ಕಾಲೇಜು ಹಾಗೂ ಸಪ್ತಗಿರಿ ಡಿಗ್ರಿ ಕಾಲೇಜಿನಲ್ಲಿ ಬಿ.ಕಾಂ. ಪ್ರವೇಶ ಸ್ಥಗಿತಗೊಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

