26ರಂದು ಸಮಾನ ಮನಸ್ಕರ ಸಭೆಗೆ ಆಹ್ವಾನ
ಕನ್ನಡಪ್ರಭ ವಾರ್ತೆ ರಾಯಚೂರು ಮೇ 16
ಅಹಿಂದ ಸಂಘಟನೆಯನ್ನು ಜಿಲ್ಲೆಯಲ್ಲಿ ಪುನಾ ಸಂಘಟಿಸುವ ನಿಟ್ಟಿನಲ್ಲಿ ಮೇ 26ರಂದು ನಗರದಲ್ಲಿ ಸಮಾನ ಮನಸ್ಕರ ಸಭೆಯನ್ನು ಕರೆಯಲಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರ ರೆಡ್ಡಿ ತಿಳಿಸಿದರು.
ಅವರು ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿ ಅಹಿಂದ ಸಂಘಟನೆಯು ಸಕ್ರಿಯವಾಗಿರಲಿಲ್ಲ. ಆದರೆ ಸದ್ಯ ಮತ್ತೆ ಸಂಘಟನೆಗೆ ಬಲ ತುಂಬುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈ ಮೊದಲು ಅಹಿಂದ ಸಕ್ರಿಯವಾಗಿದ್ದ ಸಂದರ್ಭದಲ್ಲಿ ಸಂಘಟನೆಯನ್ನು ಬಲಪಡಿಸಲು ಸಾಕಷ್ಟು ಶ್ರಮಿಸಿದ್ದಾಗಿ ತಿಳಿಸಿದ ಅವರು, ಅಹಿಂದ ಸಂಘಟನೆಯು ಆಯೋಜಿಸಿದ್ದ ಸಮಾವೇಶಗಳಲ್ಲಿ ಜಿಲ್ಲೆಯಿಂದ ಈ ಹಿಂದೆ ನೂರಾರು ಜನರು ಪಾಲ್ಗೊಂಡಿದ್ದರು ಎಂದು ತಿಳಿಸಿದರು.
ಕಾರ್ಯತಂತ್ರ: ಸದ್ಯ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅಹಿಂದ ಸಂಘಟನೆಯನ್ನು ಪುನಾ ಬಲಪಡಿಸಲು ನಿರ್ಧರಿಸಿದ್ದು, ಅದರಂತೆ ಮೇ 26ರಂದು ನಗರದಲ್ಲಿ ಸಮಾನ ಮನಸ್ಕರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಅಹಿಂದ ಸಂಘಟನೆಯನ್ನು ಬಲಪಡಿಸುವಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಹೇಳಿದರು.
ಈಗಾಗಲೇ ರಾಜ್ಯಾದ್ಯಂತ ಅಹಿಂದ ಸಂಘಟನೆಗೆ ಮರುಜೀವ ತುಂಬುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅಹಿಂದ ನಾಯಕರು ಈ ಕಾರ್ಯಕ್ರಮದಲ್ಲಿದ್ದಾರೆ. ಅಹಿಂದ ಎಂಬುದು ಕೇವಲ ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತ ವರ್ಗದ ಸಂಘಟನೆಯಲ್ಲ. ಬದಲಿಗೆ ಎಲ್ಲ ಸಮಾಜಗಳಲ್ಲಿ ಹಿಂದುಳಿದವರ ಒಕ್ಕೂಟವಿದು ಎಂದು ಅವರು ವಿವರಿಸಿದರು.
ಪ್ರಗತಿ: ಸಾಮಾಜಿಕವಾಗಿ ಮುಂದುವರಿದ ಅನೇಕ ಜನಾಂಗಗಳಲ್ಲಿ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿದ್ದಾರೆ. ಅಂಥವರು ಅಹಿಂದ ಸಂಘಟನೆಯನ್ನು ಸೇರಬಹುದಾಗಿದೆ. ಹಿಂದುಳಿದ ಎಲ್ಲರೂ ಸಂಘಟನೆಯಲ್ಲಿ ಪಾಲ್ಗೊಳ್ಳಬಹುದು. ಸಮಾಜದಲ್ಲಿ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಕಾಣುವುದು ಆಶಯವಾಗಿದೆ ಎಂದು ಹೇಳಿದರು. ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಹಾಗಾಗಿ ಅಹಿಂದ ಸಂಘಟನೆ ಬಲಪಡಿಸುವುದು ಸಾಧ್ಯವಾಗಿರಲಿಲ್ಲ. ಸದ್ಯ ಅಹಿಂದ ನಾಯಕರಾದ ಸಿದ್ದರಾಮಯ್ಯ ಅವರು ಸಿಎಂ ಆಗಿರುವುದು ಅಹಿಂದಕ್ಕೆ ಪೂರಕ ಪರಿಸರ ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯನ್ನು ಬಲಪಡಿಸಲು ಮುಂದಾಗಿದ್ದಾಗಿ ತಿಳಿಸಿದರು.
ಅಹಿಂದ ಸಂಘಟನೆಯು ರಾಜಕೀಯೇತರ ಶಕ್ತಿಯಾಗಿದ್ದು, ಬಿಜೆಪಿ ಪಕ್ಷ ಸೇರಿದಂತೆ ಯಾವುದೇ ರಾಜಕೀಯ ಪಕ್ಷದಲ್ಲಿನ ನಾಯಕರು ಅಹಿಂದಕ್ಕೆ ಸೇರ್ಪಡೆಗೆ ಆಸಕ್ತಿ ತೋರಿದಲ್ಲಿ ಅಂಥವರಿಗೆ ಮುಕ್ತ ಅವಕಾಶವಿದೆ ಎಂದು ಹೇಳಿ, ಅಹಿಂದ ಸಂಘಟನೆ ಕೇವಲ ಒಂದು ಜಾತಿ, ಧರ್ಮ, ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ಬದಲಿಗೆ ಸಮಾಜದಲ್ಲಿನ ಎಲ್ಲ ಹಿಂದುಳಿದವರ ಶಕ್ತಿಯಾಗಿದೆ ಎಂದು ಹೇಳಿದರು. ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮೇ 26ರಂದು ನಗರದಲ್ಲಿ ಸಮಾನ ಮನಸ್ಕರ ಸಭೆ ಕರೆದಿದ್ದು ಈ ಸಭೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು. ಸಂಘಟನೆಯ ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ರಾಮು, ವೈ.ವಿ.ಪಾಟೀಲ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

