ರಾಯಚೂರು

ನಂಜುಂಡಪ್ಪ ಅನುದಾನ ಬಳಕೆಯಾಗ್ತಿಲ್ಲ

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ಮೇ 17
ಡಾ. ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿಗೆ ಸರ್ಕಾರದಿಂದ ದೊರೆಯುವ ಅನುದಾನದ ಪೂರ್ಣ ಬಳಕೆ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಸಾಕಷ್ಟು ಶ್ರಮಿಸಬೇಕಿದೆ. ಕ್ರಿಯಾ ಯೋಜನೆಗೆ ಒಪ್ಪಿಗೆ ಪಡೆಯುವ ಪ್ರಕ್ರಿಯೆಯಲ್ಲಿನ ವಿಳಂಬದಿಂದ ಅನುದಾನದ ಪೂರ್ಣ ಬಳಕೆ ಸಾಧ್ಯವಾಗುತ್ತಿಲ್ಲ ಎಂದು ಡಾ.ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿ ಮಾಜಿ ಅಧ್ಯಕ್ಷ ತ್ರಿವಿಕ್ರಮ್ ಜೋಷಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶೇಷ ಘಟಕ ಯೋಜನೆ ಅಡಿ ಡಾ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯಿಂದ ವಿವಿಧ ಜಿಲ್ಲೆಗಳಿಗೆ ಪ್ರತಿ ವರ್ಷ ಕೋಟ್ಯಂತರ ರು. ಬಿಡುಗಡೆಯಾಗುತ್ತಿದೆ. ಆದರೆ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಿ ಸರ್ಕಾರದಿಂದ ಮಂಜೂರಾತಿ ಪಡೆಯವಲ್ಲಿ ತೋರುತ್ತಿರುವ ವಿಳಂಬದಿಂದಾಗಿ ಅನುಷ್ಠಾನದಲ್ಲಿ ತಡವಾಗುತ್ತಿದೆ ಎಂದು ಹೇಳಿದರು.
ಕಳೆದ ವರ್ಷ ಜಿಲ್ಲೆಗೆ 2,330 ಕೋಟಿ: ಕಳೆದ 6 ವರ್ಷಗಳಲ್ಲಿ ಸಮಿತಿಯಿಂದ ರಾಜ್ಯದಲ್ಲಿ ಒಟ್ಟು 11 ಸಾವಿರ ಕೋಟಿ ಅನುದಾನ ಬಿಡುಗಡೆಯಾಗಿದೆ. ಅದೇ ರೀತಿ ರಾಯಚೂರು ಜಿಲ್ಲೆಗೆ 2012- 13ರಲ್ಲಿ ನಿಗದಿತ 2,680 ಕೋಟಿ ಅನುದಾನದ ಪೈಕಿ 2,330 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ ಕ್ರಿಯಾಯೋಜನೆ ಸಲ್ಲಿಕೆಗೆ ಅಧಿಕಾರಿಗಳು ವಿಳಂಬ ತೋರಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆಯಲ್ಲಿ ವಿಶೇಷ ಅಭಿವೃದ್ಧಿ ಅನುದಾನದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಕ್ರಿಯಾಯೋಜನೆಯನ್ನು ಸಾಕಷ್ಟು ಮುಂಚಿತವಾಗಿಯೇ ಸಿದ್ಧಪಡಿಸಿಕೊಳ್ಳಬೇಕು. ಅನುದಾನ ನಿಗದಿಯಾಗುತ್ತಿದ್ದಂತೆಯೇ ಸರ್ಕಾರಕ್ಕೆ ಸಲ್ಲಿಸಿ ಒಪ್ಪಿಗೆ ಪಡೆಯಲು ಅನುಕೂಲವಾಗುತ್ತದೆ.
ಮುಂದಾಲೋಚನೆಯಿಂದ ಕಾರ್ಯನಿರ್ವಹಿಸಿ: ಸದ್ಯ ಕ್ರಿಯಾಯೋಜನೆಗೆ ಒಪ್ಪಿಗೆ ಪಡೆದು ಡಿಸೆಂಬರ್‌ನಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಆದರೆ  ಮುಂದಾಲೋಚನೆಯಿಂದ ಅಧಿಕಾರಿಗಳು ಕಾರ್ಯನಿರ್ವಹಿಸಿದಲ್ಲಿ ಆಗಸ್ಟ್ ವೇಳೆಗೆ ಕಾಮಗಾರಿಗಳಿಗೆ ಚಾಲನೆ ನೀಡಬಹುದಾಗಿದೆ. ಈ ಮೂಲಕ ಅನುದಾನದ ಪೂರ್ಣ ಬಳಕೆ ಸಾಧ್ಯವಾಗಲಿದೆ ಎಂದು ಅವರು ಸಲಹೆ ನೀಡಿದರು.
ತಾವು ಇತ್ತೀಚೆಗೆ ಉನ್ನತಾಧಿಕಾರ ಸಮಿತಿಗೆ ರಾಜಿನಾಮೆ ಸಲ್ಲಿಸಿದ್ದು, ಈ ನಂತರವೂ ಸಮಿತಿಯ ಕಾರ್ಯ ವೈಖರಿ ಮೇಲೆ ನಿಗಾಯಿರಿಸಿ ಅಧಿಕಾರಿಗಳಿಗೆ ಅನುದಾನವನ್ನು ಸೂಕ್ತ ಸಮಯದಲ್ಲಿ ಬಳಕೆ ಮಾಡುವ ರೀತಿಯ ಬಗ್ಗೆ ಪತ್ರ ಬರೆಯುವುದಾಗಿ ತಿಳಿಸಿದ ಅವರು, ನೂತನ ಶಾಸಕರು ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿಯ ಕಾರ್ಯ ನಿರ್ವಹಣೆಯ ಮೇಲೆ ನಿರಂತರ ಗಮನವಿರಿಸಿ ಅಭಿವೃದ್ಧಿ ಅನುದಾನದ ಸಮರ್ಪಕ ಬಳಕೆಯತ್ತ ಕಾಳಜಿ ತೋರುವಂತೆ ಮನವಿ ಮಾಡಿದರು.
ಮತ್ತೆ ನೋಂದಣಿ ಅಭಿಯಾನ: ಬಿಜೆಪಿ ಪಕ್ಷವನ್ನು ಚುನಾವಣೆ ನಂತರದಲ್ಲಿ ಮತ್ತೆ ಸಂಘಟಿಸುವ ಕಾರ್ಯ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ಮೇ 23, 24 ಮತ್ತು 25ರಂದು ಜಿಲ್ಲೆಯಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ಮೇ 21ರಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರು ನಗರಕ್ಕೆ ಆಗಮಿಸಲಿದ್ದು, ಪಕ್ಷದ ಪ್ರಮುಖರ ಹಾಗೂ ಕಾರ್ಯಕರ್ತರ ಸಭೆ ನಡೆಸಲಿದ್ದು, ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಂಡೇಶ ವಲ್ಕಂದಿನ್ನಿ, ನಾರಾಯಣರಾವ್ ಪೂರತಿಪ್ಲಿ, ರಮಾನಂದ ಯಾದವ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.