ಶಾಲಾ- ಕಾಲೇಜು ಮೂಲ ಸೌಲಭ್ಯಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ , ಸಿಂಧನೂರು , ಮೇ 18
ನಗರದಲ್ಲಿರುವ ಸರ್ಕಾರಿ ಶಾಲಾ- ಕಾಲೇಜುಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಈ ಬಗ್ಗೆ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ(ಎಸ್ಐಒ) ಸಂಘಟನೆಯು ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಸಮಸ್ಯೆಗಳ ಪಟ್ಟಿ ಮಾಡಿದ್ದು, ನೂತನ ಶಾಸಕ ಹಂಪನಗೌಡ ಬಾದರ್ಲಿ ಕೂಡಲೇ ಬಗೆಹರಿಸುವಂತೆ ರಾಜ್ಯಾಧ್ಯಕ್ಷ ತೌಸೀಪ್ ಅಹ್ಮದ್ ಎಂ.ವೈ ಆಗ್ರಹಿಸಿದ್ದಾರೆ.
ನಗರದ ಹುದಾ ಮಸೀದಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್, ಕನ್ನಡ, ಇತಿಹಾಸ ಉಪನ್ಯಾಸಕರ ಕೊರತೆ, ಶೌಚಾಲಯದ ಕೊರತೆ, ಕಾಂಪೌಂಡ್, ವಿಜ್ಞಾನ ವಿಭಾಗದ ಸಿಬ್ಬಂದಿಯ ಕೊರತೆ ಮತ್ತು ಪ್ರಯೋಗಾಲಯ ಹಾಗೂ ಕೊಠಡಿಯ ಕೊರತೆ ಇದೆ.
ಅದೇ ರೀತಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ, ಸರ್ಕಾರಿ ಪ್ರೌಢಶಾಲೆ ಸುಕಾಲಪೇಟೆ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ, ಕೊಠಡಿಗಳ ಕೊರತೆ, ಬಾಲಕಿಯರ ಶೌಚಾಲಯ, ಕಾಂಪೌಂಡ್, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕೊಠಡಿಗಳ ಕೊರತೆ, ಸಿಬ್ಬಂದಿ ಕೊರತೆ, ಕುಡಿಯುವ ನೀರಿನ ಕೊರತೆ, ಸಹಾಯಕ ಗ್ರಂಥಪಾಲಕರ ಕೊರತೆ, ರಾತ್ರಿ ಕಾವಲುಗಾರನ ಕೊರತೆ, ಕಾಂಪೌಂಡ್ ಕೊರತೆ ಇದೆ. ಈ ಎಲ್ಲ ಸಮಸ್ಯೆಗಳಿಗೆ ತಾಲೂಕಿನ ಅಭಿವೃದ್ಧಿಗಾಗಿ ಆಯ್ಕೆಯಾಗಿರುವ ಹಂಪನಗೌಡ ಬಾದರ್ಲಿ ಅವರು ಕೂಡಲೇ ಸ್ಪಂದಿಸಬೇಕೆಂದು ಒತ್ತಾಯಿಸಿದರು.
30 ವರ್ಷಗಳಿಂದ ಪ್ರಯತ್ನ: ಕಳೆದ 30 ವರ್ಷಗಳಿಂದ ಎಸ್ಐಒ ಸಂಘಟನೆ ರಾಜ್ಯಾದ್ಯಾಂತ ವಿವಿಧ ಶಾಲಾ ಕಾಲೇಜುಗಳ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಯತ್ನ ಮಾಡುತ್ತಿದೆ. ಪ್ರೌಢಶಾಲೆ ಸಮಸ್ಯೆಗಳ ಕುರಿತು ಅಂದಿನ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಉನ್ನತ ಶಿಕ್ಷಣಕ್ಕೆ ಸಂಬಂದಿಸಿದ ಸಮಸ್ಯೆಗಳ ಕುರಿತು ಸಿ.ಟಿ. ರವಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು.
ವಿಶೇಷವಾಗಿ ಸಿಂಧನೂರಿನಿಂದ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳಿಗೆ ತಾಲೂಕಿನ ಶೈಕ್ಷಣಿಕ ಸಮಸ್ಯೆಗಳ ಕುರಿತು ಮನವಿ ಪತ್ರ ಸಲ್ಲಿಸಿತ್ತು. ಶಾಲಾ- ಕಾಲೇಜುಗಳು ಜೂನ ತಿಂಗಳಲ್ಲಿ ಆರಂಭವಾಗುತ್ತಿದ್ದು ಮೂಲ ಸೌಕರ್ಯಗಳನ್ನು ಒದಗಿಸಬೇಕು. ಡೋನೇಷನ್ ಹಾವಳಿ ತಪ್ಪಿಸಬೇಕು. ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಹಕ್ಕು ಅಧಿನಿಯಮದ ಅಡಿ ಪ್ರವೇಶ ನೀಡಬೇಕು. ಸಿಂಧನೂರು ತಾಲೂಕಿನಲ್ಲಿ ದುದ್ದುಪುಡಿ ಹಾಗೂ ಡೆಫಡಿಲ್ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಅಧಿನಿಯಮದ ಅಡಿ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳುತ್ತಿಲ್ಲ. ಈ ಬಗ್ಗೆ ಶಾಸಕರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸನ್ಮಾನ: ಇದೇ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಪ್ರಹ್ಲಾದ್ ಗುಡಿ ಅವರಿಗೆ ಸಂಘಟನೆವತಿಯಿಂದ ಸನ್ಮಾನಿಸಲಾಯಿತು. ಘಟಕಾಧ್ಯಕ್ಷ ಮಹ್ಮದ್ ಅಲಿ ಮುರ್ತುಜಾ, ಸಾರ್ವಜನಿಕ ಕಾರ್ಯದರ್ಶಿ ವಸೀಮ್ ಅಹ್ಮದ್, ಕ್ಯಾಂಪಸ್ ಕಾರ್ಯದರ್ಶಿ ತನ್ವೀರ್ ಅಹ್ಮದ್, ಸದಸ್ಯರಾದ ಅಮೀರ್ ಹುಸೇನ್, ಜಾಕೀರ್, ಖಾಜಾಮೀಯಾ, ಇಸ್ಮಾಯಿಲ್ ಸೇರಿದಂತೆ ಇನ್ನಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

