ಜೂ.15ರಂದು ಕನ್ನಡ ಸಾಹಿತ್ಯ ಸಮ್ಮೇಳನ
ಕನ್ನಡಪ್ರಭ ವಾರ್ತೆ ರಾಯಚೂರು ಮೇ 23
ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಜೂ.15ರಂದು ನಡೆಯಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಭಗತರಾಜ್ ನಿಜಾಮಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನಕ್ಕಾಗಿ ಅಗತ್ಯ ಸಿದ್ಧತೆ ಜಾರಿಯಲ್ಲಿವೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಶಿವರಾಜ್ ಪಾಟೀಲ್ ತಿಳಿಸಿದರು.
ಅವರು ನಗರದಲ್ಲಿ ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ಸಮ್ಮೇಳನದ ಹಿನ್ನೆಲೆಯಲ್ಲಿ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಚೆಗೆ ನಡೆದ ಸಮಿತಿಯ ಸಭೆಯಲ್ಲಿ ಸಮ್ಮೆಳನದ ಸರ್ವಾಧ್ಯಕ್ಷರನ್ನಾಗಿ ಭಗತರಾಜ್ ನಿಜಾಮಕರ್ ಅವರನ್ನು ಆಯ್ಕೆ ಮಾಡಿದ್ದು, ಅವರಿಗೆ ಅಧಿಕೃತವಾಗಿ ಈ ವಿಷಯ ತಿಳಿಸಿ ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ ಎಂದರು.
ಸಿದ್ಧತೆ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಹಾಂತೇಶ್ ಮಸ್ಕಿ ಮಾತನಾಡಿ, ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಈ ಹಿಂದೆ 2003, 2007ರಲ್ಲಿ ನಡೆದಿತ್ತು. 6 ವರ್ಷಗಳ ಆನಂತರದಲ್ಲಿ ಸಮ್ಮೇಳನ ನಡೆಯುತ್ತಿದ್ದು, ಅದ್ಧೂರಿಯಾಗಿ ಸಾಹಿತ್ಯ ಸಮ್ಮೇಳನ ನಡೆಸಲು ಯೋಜಿಸಲಾಗಿದೆ ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನವನ್ನು ಸಾಹಿತಿ ಚಂದ್ರಶೇಖರ ಪಾಟೀಲ್ ಅವರು ಜೂ.15ರಂದು ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಶಂಭು ಬಳಿಗಾರ್ ವಿಶೇಷ ಉಪನ್ಯಾಸ ನೀಡಲಿದ್ದಾರೆಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಮಾಹಿತಿ ನೀಡಿದ ತಾಲೂಕು ಕಸಾಪ ಅಧ್ಯಕ್ಷ ಚಿದಾನಂದ ಸಾಲಿ, ಸಮ್ಮೇ ಳನದ ಸರ್ವಾಧ್ಯಕ್ಷರ ಮೆರವಣಿಗೆಯನ್ನು ಕೈಬಿಟ್ಟಿಲ್ಲ. ಬದಲಿಗೆ ಸಮ್ಮೇಳನದ ಗೋಷ್ಠಿಗಳಿಗೆ ಸಮಯವಕಾಶದ ಕೊರತೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಮೆರವಣಿಗೆ ಅಂತರವನ್ನು ಕಡಿತಗೊಳಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಒಂದು ದಿನಕ್ಕೆ ನಿಗದಿ: ಸಾಹಿತ್ಯ ಪರಿಷತ್ತಿನ ಕೇಂದ್ರ ಘಟಕವು ತಾಲೂಕು ಮಟ್ಟದ ಸಮ್ಮೇಳನಗಳನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಿದೆ. ಜಿಲ್ಲಾ ಸಮ್ಮೇಳನಗಳನ್ನು ಎರಡು ದಿನಗಳಿಗೆ ಆಯೋಜಿಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಸಮ್ಮೇಳನವನ್ನು ಕೇವಲ ಒಂದು ದಿನಕ್ಕೆ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.
ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ತಾಲೂಕಿನ ರಂಗಭೂಮಿಯ ಕುರಿತು ತಾಯಣ್ಣ ಯರಗೇರಾ ಮಾತನಾಡಲಿದ್ದಾರೆ. ಸಮ್ಮೇಳ ನಾಧ್ಯಕ್ಷರ ಸಾಹಿತ್ಯ ಕುರಿತು ವೀರಹನುಮಾನ್ ವಿಷಯ ಮಂಡಿಸಲಿದ್ದಾರೆ. ಎರಡನೇ ಗೋಷ್ಠಿಯಲ್ಲಿ ವರ್ತಮಾನದ ತಲ್ಲಣಗಳು ಎಂಬ ವಿಷಯದ ಕುರಿತ ಗೋಷ್ಠಿಯಲ್ಲಿ 371ನೇ ಕಲಂ ಜಾರಿ ಬಗ್ಗೆ ರಾಯಚೂರು ತಾಲೂಕಿಗೆ ಸಂಬಂಧಿಸಿ ಆಗುವ ಲಾಭದ ಬಗ್ಗೆ ಡಾ.ರಜಾಕ್ ಉಸ್ತಾದ್ ಮಾತನಾಡಲಿದ್ದಾರೆ. ಅದೇ ರೀತಿ ಜನರ ಆರೋಗ್ಯದ ಸಮಸ್ಯೆಗಳು ಮತ್ತು ಪರಿಹಾರ ಎಂಬ ವಿಷಯದ ಕುರಿತು ಡಾ. ಸುರೇಶ ಸಗರದ್ ವಿಷಯ ಮಂಡಿಸಲಿದ್ದಾರೆಂದು ಹೇಳಿದರು.
ಸಮಸ್ಯೆ ಕುರಿತು ಚರ್ಚೆ: ರಾಯಚೂರು ತಾಲೂಕಿನ ಕೃಷಿ, ನೀರಾವರಿ, ವಿದ್ಯುತ್ ಸಮಸ್ಯೆ ಬಗ್ಗೆ ಪತ್ರಕರ್ತ ಕೆ. ಸತ್ಯನಾರಾಯಣ ವಿಷಯ ಮಂಡಿಸುವರು. ಗೋಷ್ಠಿಯ ಅಧ್ಯಕ್ಷತೆಯನ್ನು ಜನಸಂಗ್ರಾಮ ಪರಿಷತ್ ಮುಖಂಡ ರಾಘವೇಂದ್ರ ಕುಷ್ಟಗಿ ವಹಿಸುವರು. ಕವಿಗೋಷ್ಠಿಯ ಅಧ್ಯಕ್ಷತೆ ಆಂಜನೇಯ ಜಾಲಿಬೆಂಚಿ ವಹಿಸುವರು. ತಾಲೂಕಿನ 20 ಮಂದಿ ಹೊಸ ಕವಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ದೆಹಲಿ ವಿವಿ ಪತ್ರಿಕೋದ್ಯಮ ವಿಭಾಗದ ಪ್ರೊ. ರಮೇಶ್ ಅರೋಲಿ ಆಶಯ ಭಾಷಣ ಮಾಡಲಿದ್ದಾರೆಂದು ಹೇಳಿದರು. ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೃಷಿ ವಿವಿ ಕುಲಪತಿ ಡಾ. ಬಿ.ವಿ. ಪಾಟೀಲ್ ವಹಿಸುವರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಮಾಜಿ ಅಧ್ಯಕ್ಷೆ ತಾರಾ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಡಾ.ಶಿವರಾಜ್ ಪಾಟೀಲ್ ಹಾಗೂ ಕಾರ್ಯಾಧ್ಯಕ್ಷರಾಗಿರುವ ಗ್ರಾಮೀಣ ಶಾಸಕ ತಿಪ್ಪರಾಜ ಹವಲ್ದಾರ್ ಎಲ್ಲ ಸಹಕಾರದ ಭರವಸೆ ಕೊಟ್ಟಿದ್ದಾರೆಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಇಟಗಿ ಭೀಮನಗೌಡ, ವಿ.ಎನ್. ಅಕ್ಕಿ, ಲಕ್ಷ್ಮಿರೆಡ್ಡಿ ಗೋನಾಳ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

